ತುಮಕೂರು
ವರದಿ:ಆರ್.ಎಸ್.ಅಯ್ಯರ್
ಮೂರೂವರೆ ಲಕ್ಷಕ್ಕೂ ಮೀರಿದ ಜನಸಂಖ್ಯೆ ಹೊಂದಿರುವ ತುಮಕೂರು ನಗರದಲ್ಲಿ ಬಹುಕಾಲದ ಬೇಡಿಕೆಯೊಂದು ಈಡೇರುವ ಕಾಲ ಸನ್ನಿಹಿತವಾಗುತ್ತಿದೆ. ಸುಮಾರು ಒಂದೂವರೆ ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿದ್ಯುತ್ ಚಿತಾಗಾರ ನಿರ್ಮಾಣಗೊಂಡಿದ್ದು, ಚಾಲನೆಗೆ ಸಿದ್ಧವಾಗಿದೆ.
ಬೆಳೆಯುತ್ತಿರುವ ತುಮಕೂರು ನಗರದಲ್ಲಿ ವಿದ್ಯುತ್ ಚಿತಾಗಾರವೊಂದರ ಅವಶ್ಯಕತೆ ಇದೆಯೆಂದು ಅನೇಕ ಜನರು ಬೇಡಿಕೆ ಮುಂದಿಟ್ಟಿದ್ದರು. ಈ ವಿಷಯವು ಹಿಂದಿನ ಮಹಾನಗರ ಪಾಲಿಕೆಯಲ್ಲೂ ಚರ್ಚೆಗೊಂಡಿತ್ತು. ತಾಂತ್ರಿಕವಾಗಿ ಸಾಧಕ-ಬಾಧಕಗಳು ಪರಾಮರ್ಶೆಗೊಂಡಿದ್ದವು.
ಅಂತಿಮವಾಗಿ ವಿದ್ಯುತ್ ಚಿತಾಗಾರ ನಿರ್ಮಿಸಲು ತೀರ್ಮಾನಿಸಲಾಗಿತ್ತು. ಆ ಬಳಿಕ ವಿವಿಧ ಆಡಳಿತಾತ್ಮಕ ಪ್ರಕ್ರಿಯೆಗಳು ನಡೆದು ಇದೀಗ ವಿದ್ಯುತ್ ಚಿತಾಗಾರ ನಿರ್ಮಾಣಗೊಂಡಿದೆ. ಜೂನ್ ಮಾಹೆಯಲ್ಲಿ ಚಾಲನೆಗೊಳ್ಳುವ ನಿರೀಕ್ಷೆ ಇದೆ.
ತುಮಕೂರು ನಗರದ ಈಗಿನ 4 ನೇ ವಾರ್ಡ್ (ಚಿಕ್ಕಪೇಟೆ) ವ್ಯಾಪ್ತಿಯ ತೋಟದ ರಸ್ತೆಯಲ್ಲಿ (ಶ್ರೀ ಶನಿದೇವರ ದೇವಾಲಯದ ರಸ್ತೆ) ಪುರಾತನ ಕಾಲದ ಸಾರ್ವಜನಿಕ ಸ್ಮಶಾನ ಇದೆ. ಶವದಹನ ಮಾಡುವ ಸಂಪ್ರದಾಯದವರು ನೂರಾರು ವರ್ಷಗಳಿಂದ ಈ ಸ್ಮಶಾನವನ್ನೇ ಅವಲಂಬಿಸಿದ್ದಾರೆ. ಮೊದಲಿಗೆ ಇಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಶವದಹನಕ್ಕೆ ಬರುವ ಸಾರ್ವಜನಿಕರು ಹೈರಾಣಾಗುತ್ತಿದ್ದರು.
ಇದನ್ನು ಮನಗಂಡ ಕೆಲವು ಸಹೃದಯರು ಶವದಹನ ಮಾಡಲು ಇಲ್ಲಿ ಸುಸಜ್ಜಿತ ವ್ಯವಸ್ಥೆ ರೂಪಿಸಿದರು. ಶವದಹನಕ್ಕೆ ಸೂಕ್ತ ವೇದಿಕೆಗಳು, ಏಕ ಕಾಲಕ್ಕೆ ನಾಲ್ಕು ಶವಗಳನ್ನು ದಹನ ಮಾಡುವ ಅನುಕೂಲ, ಬಿಸಿಲು-ಮಳೆಯಿಂದ ರಕ್ಷಣೆಗೆ ಸೂಕ್ತ ಶೆಲ್ಟರ್, ಸ್ನಾನಾದಿಗಳಿಗೆ ವ್ಯವಸ್ಥೆ, ಕಾವಲುಗಾರರ ನೇಮಕ -ಹೀಗೆ ಇಲ್ಲಿ ಸೌಲಭ್ಯಗಳನ್ನು ಕಲ್ಪಿಸಲಾಯಿತು. ಸುಮಾರು ಎರಡು ದಶಕಗಳಿಂದ ಈ ಸೌಲಭ್ಯ ಚಾಲ್ತಿಯಲ್ಲಿದೆಯಾದರೂ, ಇದು ಕಟ್ಟಿಗೆಗಳಿಂದ ಶವದಹನ ಮಾಡುವ ಪ್ರಕ್ರಿಯೆಯಾಗಿರುವುದರಿಂದ ಇದಕ್ಕೆ ಬದಲಿಯಾಗಿ ಇಲ್ಲೇ ಆಧುನಿಕ ತಾಂತ್ರಿಕತೆಯ ವಿದ್ಯುತ್ ಚಿತಾಗಾರವನ್ನು ಸಿದ್ಧಗೊಳಿಸಬೇಕೆಂಬ ಅನಿಸಿಕೆ ವ್ಯಕ್ತಗೊಳ್ಳಲಾರಂಭಿಸಿತು. ಅದರ ಫಲವಾಗಿ ಈಗ ಇದು ತಲೆಯೆತ್ತಿನಿಂತಿದೆ.
ತುಮಕೂರು ಮಹಾನಗರ ಪಾಲಿಕೆಯು ವಿದ್ಯುತ್ ಚಿತಾಗಾರಕ್ಕಾಗಿ 2017-18 ನೇ ಸಾಲಿನಲ್ಲಿ ಪ್ರಕ್ರಿಯೆ ಆರಂಭಿಸಿದ್ದು, ಸುಮಾರು ಒಂದೂವರೆ ಕೋಟಿ ರೂ.ಗಳನ್ನು ವಿನಿಯೋಗಿಸಿದೆ. ಕಟ್ಟಡ ಮೊದಲಾದ ಸಿವಿಲ್ ಕಾಮಗಾರಿಗಳಿಗಾಗಿ 98 ಲಕ್ಷ ರೂ. ಹಾಗೂ ಎಲೆಕ್ಟ್ರಿಕಲ್ ಕಾಮಗಾರಿಗಳಿಗಾಗಿ 43 ಲಕ್ಷ ರೂ. ವೆಚ್ಚವಾಗಿದೆ. ಎಸ್.ಕೆ.ಎಸ್. ಇನ್ ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆ ಈ ಕಾಮಗಾರಿಯ ಗುತ್ತಿಗೆ ಪಡೆದಿದ್ದು, ಒಟ್ಟು 2555 ಚದರ ಅಡಿಗಳಷ್ಟು ಪ್ರದೇಶದಲ್ಲಿ ಇದು ನಿರ್ಮಾಣವಾಗಿದೆ.
ತಾಂತ್ರಿಕ ಮಾಹಿತಿ
ತಾಂತ್ರಿಕ ಮಾಹಿತಿಗಳ ಪ್ರಕಾರ, ಈ ಚಿತಾಗಾರದಲ್ಲಿ 57 ಕೆ.ವಿ. ಸಾಮರ್ಥ್ಯದ ಶವದಹನ ಯಂತ್ರೋಪಕರಣವನ್ನು ಅಳವಡಿಸಲಾಗಿದೆ. 150 ಕೆ.ವಿ. ಸಾಮರ್ಥ್ಯದ ಜನರೇಟರ್ ಸೆಟ್ ಹಾಗೂ 250 ಕೆ.ವಿ. ಸಾಮರ್ಥ್ಯದ ಟ್ರಾನ್ಸ್ ಫಾರ್ಮರ್ ವ್ಯವಸ್ಥೆ ಮಾಡಲಾಗಿದೆ. ಶವದಹನ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡರೆ, ತಕ್ಷಣವೇ ಜನರೇಟರ್ ಸೌಲಭ್ಯ ಬಳಸಿಕೊಳ್ಳುವ ಸಂಪರ್ಕಜಾಲವನ್ನು ಕಲ್ಪಿಸಲಾಗಿದೆ. ಒಮ್ಮೆ ಒಂದು ಶವವನ್ನು ಯಂತ್ರದೊಳಕ್ಕೆ ರವಾನಿಸಿದರೆ, ಅದು ದಹನಗೊಳ್ಳಲು ಸುಮಾರು 2 ಅಥವಾ ಎರಡೂವರೆ ಗಂಟೆಗಳ ಕಾಲಾವಧಿ ಬೇಕಾಗುತ್ತದೆಂದು ಅಂದಾಜಿಸಲಾಗಿದೆ.
ಪ್ರಸ್ತುತ ಈಗ ಒಮ್ಮೆ ಒಂದು ಶವದ ದಹನಕ್ಕೆ ಮಾತ್ರ ಅವಕಾಶವಿದೆ. ಮುಂದಿನ ದಿನಗಳಲ್ಲಿ ಇನ್ನೊಂದು ಶವದ ದಹನಕ್ಕೂ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ವಿದ್ಯುತ್ ಚಿತಾಗಾರದ ಯಂತ್ರವನ್ನು ಸದಾ ಸನ್ನದ್ಧ ಸ್ಥಿತಿಯಲ್ಲೇ ಇರಿಸಬೇಕಿದ್ದು, ಪ್ರತಿ ತಿಂಗಳೂ ವಿದ್ಯುತ್ ಬಿಲ್ ಸುಮಾರು ಒಂದೂವರೆ ಲಕ್ಷ ರೂ. ಆಗಬಹುದೆಂದು ಅಂದಾಜು ಮಾಡಲಾಗಿದೆ.
ಈಗ ಇಲ್ಲಿನ ಶವದಹನ ಸ್ಮಶಾನಕ್ಕೆ ಪ್ರತಿನಿತ್ಯ ಒಂದು ಅಥವಾ ಎರಡು ಶವಗಳು ದಹನಕ್ಕಾಗಿ ಬರುತ್ತಿವೆ. ಸದರಿ ಶವಗಳೇ ಇನ್ನು ಮುಂದೆ ಈ ವಿದ್ಯುತ್ ಚಿತಾಗಾರಕ್ಕೆ ಬರಬಹುದು ಎಂದು ನಿರೀಕ್ಷಿಸಲಾಗಿದೆ.
ಪ್ರಾಯೋಗಿಕ ಶವದಹನ
ಪ್ರಾಯೋಗಿಕವಾಗಿ ಈಗಾಗಲೇ ಅನಾಥ ಶವವೊಂದನ್ನು ಇಲ್ಲಿ ದಹನ ಮಾಡಲಾಗಿದ್ದು, ವಿದ್ಯುತ್ ಚಿತಾಗಾರದ ಎಲ್ಲ ಪ್ರಕ್ರಿಯೆಗಳೂ ಸಮರ್ಪಕವಾಗಿದೆಯೆಂಬುದನ್ನು ದೃಢಪಡಿಸಿಕೊಳ್ಳಲಾಗಿದೆ. ಇನ್ನು ಇಲ್ಲಿ ಶವದಹನಕ್ಕೆ ಎಷ್ಟು ಶುಲ್ಕ ಸ್ವೀಕರಿಸಬೇಕೆಂಬುದನ್ನು ಮಾತ್ರ ಮಹಾನಗರ ಪಾಲಿಕೆಯು ತೀರ್ಮಾನಿಸಬೇಕಿರುವುದು ಈಗ ಬಾಕಿ ಉಳಿದಿದೆ.
ನಿರ್ವಹಣೆಗಾಗಿ ಟೆಂಡರ್
ವಿದ್ಯುತ್ ಚಿತಾಗಾರವನ್ನು ಸಮರ್ಪಕವಾಗಿ ನಿರ್ವಹಿಸಲು ಎಲೆಕ್ಟ್ರೀಷಿಯನ್, ಹೆಲ್ಪರ್, ಸೆಕ್ಯೂರಿಟಿ, ತೋಟದ ನಿರ್ವಹಣಾ ಸಿಬ್ಬಂದಿ ಹೀಗೆ ಒಟ್ಟು 7 ಜನ ಸಿಬ್ಬಂದಿಯ ಅಗತ್ಯತೆ ಇದೆಯೆಂದು ಪಾಲಿಕೆಯು ಲೆಕ್ಕಹಾಕಿ, ಈಗಾಗಲೇ ಟೆಂಡರ್ ಆಹ್ವಾನಿಸಿದೆ. ಆ ಪ್ರಕ್ರಿಯೆ ಮುಗಿದರೆ ವಿದ್ಯುತ್ ಚಿತಾಗಾರ ಚಾಲನೆಗೆ ಸಿದ್ಧವಾಗುತ್ತದೆ.
ಜೊತೆಗೆ ಪಾಲಿಕೆಯ ಸಿಬ್ಬಂದಿಯನ್ನೂ ಇಲ್ಲಿ ನಿಯೋಜಿಸಲಾಗುತ್ತದೆ. ಇಲ್ಲಿ ಯಾವುದೇ ಶವವನ್ನು ದಹನ ಮಾಡಬೇಕಾದರೆ, ಸದರಿ ಶವದ ಬಗ್ಗೆ ಎಂ.ಬಿ.ಬಿ.ಎಸ್. ಪದವೀಧರ ವೈದ್ಯರಿಂದ ಪಡೆದ ಮರಣ ಪ್ರಮಾಣ ಪತ್ರವನ್ನು ಸಂಬಂಧಿಸಿದವರು ಹಾಜರು ಪಡಿಸುವುದು ಕಡ್ಡಾಯವಾಗಿರುತ್ತದೆ. ಪಾಲಿಕೆಯು ಶವದಹನಕ್ಕೆ ನಿಗದಿಪಡಿಸುವ ದರವನ್ನು ಇಲ್ಲಿನ ಸಿಬ್ಬಂದಿ ಸ್ವೀಕರಿಸಿ, ಸ್ಥಳದಲ್ಲೇ ರಶೀದಿ ನೀಡುವರು. ಇದು ಇಲ್ಲಿನ ವ್ಯವಸ್ಥೆ ಆಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
