ತುಮಕೂರು :
ಬಯಲು ಸೀಮೆ ಪ್ರದೇಶವಾಗಿರುವ ಶಿರಾ ಕ್ಷೇತ್ರಕ್ಕೆ ಸಂಪೂರ್ಣ ನೀರಾವರಿ ಕಲ್ಪಿಸುವುದು ನನ್ನ ಮೊದಲ ಆದ್ಯತೆ ಆಗಿದ್ದು ಉಳಿದಂತೆ ರಸ್ತೆ ಅಭಿವೃದ್ಧಿ, ಒಳಚರಂಡಿ ಯೋಜನೆ, ಮೊದಲಾದ ಸಮಸ್ಯೆಗಳನ್ನು ವಿವಿಧ ಯೋಜನೆಗಳಲ್ಲಿ ಸೇರಿಸಿಕೊಂಡು ಉಳಿದ ಒಂದೂವರೆ ವರ್ಷದಲ್ಲಿ ಬಗೆಹರಿಸಲಾಗುವುದು ಎಂದು ಶಿರಾ ಕ್ಷೇತ್ರದ ಶಾಸಕ ಡಾ.ಸಿ.ಎಂ.ರಾಜೇಶ್‍ಗೌಡ ತಿಳಿಸಿದರು.
ಪ್ರಜಾಪ್ರಗತಿ-ಪ್ರಗತಿ ವಾಹಿನಿಯಿಂದ ಗುರುವಾರ ನಡೆದ ನೇರ ಫೋನ್-ಇನ್ ಕಾರ್ಯಕ್ರಮದಲ್ಲಿ ಶಿರಾ ಕ್ಷೇತ್ರದ ಮತದಾರರ ಕುಂದು-ಕೊರತೆಗಳನ್ನು ಸಮಾಧಾನ ಚಿತ್ತದಿಂದ ಆಲಿಸಿದ ಅವರು ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತವಾಗಿ ಸ್ಪಂದಿಸಿ ಆದಷ್ಟೂ ಬೇಗ ಪರಿಹಾರ ಕ್ರಮ ಕೈಗೊಳ್ಳುವುದು, ಕೋವಿಡ್‍ನಿಂದಾಗಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದ್ದು ಈಗ ಸೋಂಕು ನಿಯಂತ್ರಣಕ್ಕೆ ಬರುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸಲಾಗುವುದು ಎಂದರು.
ಮದಲೂರು ಕೆರೆಗೆ ನೀರು ಹರಿಸಲಾಗಿದೆ :
ಉಪ ಚುನಾವಣೆ ಸಂದರ್ಭದಲ್ಲಿ ಮುಖ್ಯ ಮಂತ್ರಿಗಳು ಮದಲೂರು ಕೆರೆಗೆ ಭದ್ರಾ ಮೇಲ್ದಂಡೆ ಯೋಜನೆ ಮೂಲಕ ನೀರು ಹರಿಸುವುದಾಗಿ ವಾಗ್ದಾನ ಮಾಡಿದ್ದರು. ಅದರಂತೆ ಕೆರೆಗೆ ನೀರು ಹರಿದಿದೆ. 282 ಎಂಸಿಎಫ್‍ಟಿ ಗಾತ್ರದಷ್ಟು ನೀರು ಹಿಡಿಯುವ ಈ ಕೆರೆಯು ಶೇ 80 ರಷ್ಟು ಮರಳು ಮಿಶ್ರಿತ ಲೇಕ್‍ಬೆಡ್ ಹೊಂದಿದ್ದು ಎಷ್ಟೇ ನೀರು ಬಿಟ್ಟರೂ ಸಹ ಕೂಡಲೇ ಇಂಗಿಸಿಕೊಳ್ಳುವ ಗುಣ ಹೊಂದಿದ್ದು ಕೆರೆಯ ಸುತ್ತಮುತ್ತಲಿನ ಸುಮಾರು 30-35 ಹಳ್ಳಿಗಳ ವ್ಯಾಪ್ತಿಯಲ್ಲಿ ಅಂತರ್ಜಲ ಅಭಿವೃದ್ಧಿ ಆಗಿದೆ. ಮದಲೂರು ಕೆರೆಗೆ ಈಗಾಗಲೇ ನೀರನ್ನು ಬಿಡಲಾಗಿದೆ. ಈ ವರ್ಷವೂ ನೀರು ಹರಿಸಲಾಗುವುದು. ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ 35 ಕೆರೆಗೆ ನೀರು ನಿಗದಿಪಡಿಸಿದ್ದು, ಮದಲೂರು ಕೆರೆಗೂ ಸಹ ನೀರು ನಿಗದಿಪಡಿಸಲಾಗಿದೆ ಎಂದರು.
ಹೇಮಾವತಿ ಯೋಜನೆಯಲ್ಲಿ ಹೆಚ್ಚು ನೀರು ಬರಲಿ :
ಪ್ರೊ.ಕೆ.ಚಂದ್ರಣ್ಣ ಎಂಬುವವರು ಕರೆಮಾಡಿ ತಾಲ್ಲೂಕಿಗೆ ಹೇಮಾವತಿ ಯೋಜನೆಯಲ್ಲಿ 450 ಕ್ಯೂಸೆಕ್ಸ್ ನೀರು ನಿಗದಿ ಪಡಿಸಲಾಗಿದೆ ಆದರೇ ಸದ್ಯ 250 ಕ್ಯೂಸೆಕ್ಸ್ ನೀರು ಬಿಡಲಾಗುತ್ತಿದೆ. ಈ ನೀರು ಮುಂದೆ ಮದಲೂರು ಕೆರೆ ತನಕ ಹೋಗುವುದಿಲ್ಲ, ಕಳ್ಳಂಬೆಳ್ಳ ಕೆರೆ ತುಂಬುವಷ್ಟರಲ್ಲಿ ಮುಗಿದು ಹೋಗುತ್ತದೆ ಹಾಗಾಗಿ ಶಾಸಕರು ಮುಖ್ಯಮಂತ್ರಿಗಳ ಮನವೊಲಿಸಿ ತಾಲ್ಲೂಕಿಗೆ ಹೇಮಾವತಿ ಯೋಜನೆಯಲ್ಲಿ ಹೆಚ್ಚು ನೀರು ಹರಿಸಲು ಕ್ರಮಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಇದಕ್ಕೆ ಉತ್ತರಿಸಿದ ಶಾಸಕರು ಹೇಮಾವತಿ ನಾಲೆ ಆಧುನೀಕರಣ ಆಗಿಸುವ ನಿಟ್ಟಿನಲ್ಲಿ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕರ ಜೊತೆ ಈ ಕುರಿತು ಮನವಿ ಮಾಡಲಾಗಿದೆ. ಅಲ್ಲದೆ ಹೇಮಾವತಿ ನಾಲೆ ಸಾಗುವ ಮಾರ್ಗದಲ್ಲಿ ಹೆಚ್ಚು ಚೆಕ್ ಡ್ಯಾಂಗಳಿರುವ ಕಾರಣ ನೀರು ನಿಂತು ನಿಂತು ಮುಂದಕ್ಕೆ ಹರಿಯುವುದರಿಂದ ನಿರೀಕ್ಷಿಸಿದಷ್ಟು ನೀರು ಕಳ್ಳಂಬೆಳ್ಳ ಕೆರೆಗೆ ಸೇರುತ್ತಿಲ್ಲ, ಅದಕ್ಕೆ ಪರಿಹಾರವಾಗಿ ಸಂಪೂರ್ಣವಾಗಿ ನಾಲೆಯನ್ನು ಆಧುನೀಕರಣಗೊಳಿಸಲು ರೂಪುರೇಷೆ ಹಾಕಿಕೊಳ್ಳಬೇಕು ಎಂದು ತೀರ್ಮಾನವಾಗಿದೆ.
ಪಟ್ಟನಾಯಕನಹಳ್ಳಿಯಿಂದ ಕಳಂಬೆಳ್ಳ ಮಾರ್ಗದ ನಾಲೆ ಆಧುನೀಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೂ ಸಹ ಸಹಮತ ವ್ಯಕ್ತಪಡಿಸಿದ್ದಾರೆ ಎಂದರು. ತಾಲ್ಲೂಕಿಗೆ ಹೇಮಾವತಿ ಯೋಜನೆಯಲ್ಲಿ 0.8 ಟಿಎಂಸಿ ನೀರನ್ನು ಕಾಯ್ದಿರಿಸಲಾಗಿದೆ. ಈ ನೀರು ಕಳ್ಳಂಬೆಳ್ಳ ಮತ್ತು ಶಿರಾ ಕೆರೆಗೆ ಮಾತ್ರ ಮೀಸಲಾಗಿದ್ದು, ಮುಖ್ಯಮಂತ್ರಿಗಳು ಭರವಸೆ ಕೊಟ್ಟ ಕಾರಣದಿಂದ ಹೆಚ್ಚು ನೀರು ಬಿಟ್ಟು ಮದಲೂರು ಕೆರೆಗೆ ನೀರು ಬಿಡಲಾಗಿದೆ ಆದರೇ ಸರ್ಕಾರದ ಮಟ್ಟದಲ್ಲಿ ಮದಲೂರು ಕೆರೆಗೆ ನೀರು ನಿಗದಿಪಡಿಸಿಲ್ಲ, ಅನಗತ್ಯವಾಗಿ ಸಮುದ್ರ ಸೇರುವ ಹೆಚ್ಚುವರಿ ನೀರನ್ನು ಉಳಿಸಿಕೊಂಡು ಮದಲೂರು ಕೆರೆಗೆ ನೀರು ಬಿಡಲು ಅವಕಾಶವಿದೆ. ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ 35 ಕೆರೆಗೆ ನೀರು ನಿಗದಿಪಡಿಸಿದ್ದು, ಮದಲೂರು ಕೆರೆಗೂ ಸಹ ನೀರು ನಿಗದಿಪಡಿಸಲಾಗಿದೆ ಎಂದರು.
ರಸ್ತೆಗಳ ಅಭಿವೃದ್ಧಿಗೆ ಮನವಿ :
ಕ್ಷೇತ್ರದ ಗೋವಿಂದರಾಜು, ಸಿದ್ದಗಂಗಮ್ಮ, ನಂದನ್ ಎಂಬುವವರು ಕರೆ ಮಾಡಿ ಚಿಕ್ಕನಕೋಟೆ, ಚಿಕ್ಕನಕೋಟೆ ಗೊಲ್ಲರಹಟ್ಟಿ, ವೀರಬೊಮ್ಮನಹಳ್ಳಿ ರಸ್ತೆ, ಶಿರಾ ನಗರದ ಸೂಪರ್ ಮಾರ್ಕೆಟ್ ರಸ್ತೆ ಸಮಸ್ಯೆ ಬಗ್ಗೆ ಶಾಸಕರಲ್ಲಿ ತಮ್ಮ ಅಹವಾಲು ಹೇಳಿಕೊಂಡರು. ಆಗ ಸಮಸ್ಯೆಗೆ ಸ್ಪಂದಿಸಿದ ಶಾಸಕರು ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಈಗಾಗಲೇ ಪಿಡ್ಬ್ಲೂಡಿ ಇಲಾಖೆಯಿಂದ ಈಗಾಗಲೇ 2.50 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ಯೋಜನಾ ವರದಿ ತಯಾರಿಸಲಾಗಿದ್ದು, ನವೆಂಬರ್ ವೇಳೆಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸುವ ಭರವಸೆ ನೀಡಿದರು. ಅದೇ ರೀತಿ ನಗರದ ಸೂಪರ್ ಮಾರ್ಕೆಟ್ ರಸ್ತೆಯು ಖಾಸಗಿಯವರಿಗೆ ಸೇರಿದ್ದು ಅವರು ರಸ್ತೆಯನ್ನು ನಗರಸಭೆಗೆ ಹಸ್ತಾಂತರಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಭದ್ರಾ ಮೇಲ್ದಂಡೆ ಯೋಜನೆ, ಹೇಮಾವತಿ, ಎತ್ತಿನ ಹೊಳೆ, ಪಿಡಬ್ಲೂಡಿ ಮತ್ತು ಪಿಆರ್‍ಡಿ ಇವಿಷ್ಟು ಯೋಜನೆ ಮತ್ತು ಇಲಾಖೆಗಳ ಮೂಲಕ ರಸ್ತೆ ಅಭಿವೃದ್ಧಿ ಪಡಿಸುವ ಅವಕಾಶವಿದೆ ಎಂದರು.
ಬಸ್, ತಂಗುದಾಣ ಸಮಸ್ಯೆ ಹೇಳಿಕೊಂಡ ಗ್ರಾಮೀಣ ಜನ :
ತಾಲ್ಲೂಕಿನ ಸಿದ್ದಗಂಗಮ್ಮ, ಮುದ್ದರಂಗನಹಳ್ಳಿಯ ತಿಪ್ಪೆಸ್ವಾಮಿ ಎಂಬುವವರು ಕರೆಮಾಡಿ ತಮ್ಮ ಗ್ರಾಮಗಳಿಗೆ ಯಾವುದೇ ಸರ್ಕಾರಿ ಅಥವಾ ಖಾಸಗಿ ಬಸ್ ವ್ಯವಸ್ಥೆ ಇರುವುದಿಲ್ಲವೆಂದು ಹಾಗೂ ಬಸ್ ನಿಲ್ದಾಣ ಸಮಸ್ಯೆ ಬಗ್ಗೆ ಶಾಸಕರ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಕೋವಿಡ್ ಕಾರಣದಿಂದ ಸ್ಥಗಿತಗೊಂಡಿದ್ದ ಬಸ್ ಸಂಚಾರವು ಈಗ ಮತ್ತೆ ಆರಂಭವಾಗಿದ್ದು, ಕೆಲವು ಕಡೆ ಇನ್ನೂ ಸಂಚಾರ ಆರಂಭವಾಗಿಲ್ಲ. ಈ ಕುರಿತು ಹಾಗೂ ಇದುವರೆಗೂ ಬಸ್ ಸೌಕರ್ಯವನ್ನೆ ಕಾಣದ ಗ್ರಾಮಗಳ ಸಮಸ್ಯೆಗಳ ಬಗ್ಗೆ ಕೆಎಸ್ಸಾರ್ಟಿಸಿ ಡಿಪೋ ಮ್ಯಾನೇಜರ್ ಅವರ ಬಳಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಬಸ್ ನಿಲ್ದಾಣ ಸಮಸ್ಯೆ ಹೇಳಿಕೊಂಡ ಮತದಾರರಿಗೂ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ನಿಲ್ದಾಣ ನಿರ್ಮಿಸಿಕೊಡುವುದಾಗಿ ಹೇಳಿದರು.
ಸ್ಮಶಾನ ಸಮಸ್ಯೆ ಹೇಳಿಕೊಂಡ ಮತದಾರರು :
ತಾವರೆಕೆರೆಯಿಂದ ಗ್ರಾಪಂ ಸದಸ್ಯ ಶಿವಕುಮಾರ್‍ನಾಯ್ಕ್ ಅವರು ಕರೆ ಮಾಡಿ ತಮ್ಮ ಊರಿಗೆ ಸ್ಮಶಾನ ಮಂಜೂರಾಗಿದ್ದು ಸ್ಥಳ ದುರಸ್ಥಿ ಮಾಡಿಸಿಕೊಡುವಂತೆ ಮನವಿ ಮಾಡಿದರು. ಈ ಸಮಸ್ಯೆಗೆ ಪ್ರತಿಕ್ರಿಯಿಸಿದ ಶಾಸಕರು ಈ ಕುರಿತು ತಹಶೀಲ್ದಾರ್ ಅವರಿಗೆ ಸೂಚಿಸಲಾಗಿದೆ ಎಂದರು. ಅದೇ ರೀತಿ ಶಿರಾ ನಗರದ ಥಾಮಸ್ ಅವರು ಕರೆ ಮಾಡಿ ತಾಲ್ಲೂಕಿನಲ್ಲಿ ಕ್ರೈಸ್ತ ಬಾಂಧವರ ಸ್ಮಶಾನಕ್ಕೆ ಬಲಾಢ್ಯರು ಅಡ್ಡಿಪಡಿಸುತ್ತಿದ್ದಾರೆ ಎಂದು ಶಾಸಕರಲ್ಲಿ ಅಹವಾಲು ಹೇಳಿಕೊಂಡರು ಆಗ ಈ ಕುರಿತು ವಿಚಾರಿಸಿದ ಶಾಸಕರು ತಹಶೀಲ್ದಾರ್ ಅವರಿಗೆ ಈ ಕುರಿತು ಅರ್ಜಿ ಸಲ್ಲಿಸಲು ಸಲಹೆ ನೀಡಿದರಲ್ಲದೆ ಸಮಸ್ಯೆಯನ್ನು ಕೂಲಂಕುಷವಾಗಿ ಪರಿಶೀಲಿಸಿ ಶೀಘ್ರ ಇತ್ಯರ್ಥಪಡಿಸಲಾಗುವುದು ಎಂದರು.
ಪ್ರವಾಸಿತಾಣಗಳ ಅಭಿವೃದ್ಧಿಗೆ ಆದ್ಯತೆ : ತಾಲ್ಲೂಕಿನ ಪ್ರವಾಸಿತಾಣಗಳಾದ ಕಗ್ಗಲ್ಲಡು ಪಕ್ಷಿಧಾಮ, ಮಲ್ಲಿಕ್ ರೆಹಮಾನ್ ದರ್ಗಾ, ಕಸ್ತೂರಿ ರಂಗಪ್ಪ ನಾಯಕನ ಕೋಟೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ ತಾಲ್ಲೂಕನ್ನು ಪ್ರವಾಸಿ ತಾಣವಾಗಿಸಲು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಶಿರಾ ನಗರದಲ್ಲಿ ನಗರ ನಿರ್ಮಾತೃ ಕಸ್ತೂರಿ ರಂಗಪ್ಪ ನಾಯಕರ ಪ್ರತಿಮೆಯನ್ನು ಮುಂದಿನ ದಿನಗಳಲ್ಲಿ ಸ್ಥಾಪಿಸಲಾಗುವುದು ಎಂದರು.
ವಿವಿಧ ಸಮಸ್ಯೆ ಹೇಳಿಕೊಂಡ ಮತದಾರರು :
ಶ್ರವಣದೋಷದ ಆರೋಗ್ಯ ಸಮಸ್ಯೆ ಹೇಳಿಕೊಂಡು ಶಿರಾದ ಮಹಿಳೆಯೊಬ್ಬರು ಕರೆ ಮಾಡಿದರು. ಅವರಿಗೆ ಪರೀಕ್ಷೆ ಮಾಡಿಸಿ, ಶ್ರವಣಸಾಧನ ಯಂತ್ರ ಕೊಡಿಸುವುದಾಗಿ ತಿಳಿಸಿದರು. ಕುರುಬರಹಳ್ಳಿಯ ಲೋಕೇಶ್ ಅವರು ಕರೆ ಮಾಡಿ ಹಾಲ್ದೊಡ್ಡೆರಿ ಕೆರೆಯ ಹೂಳು ತೆಗೆಸುವಂತೆ ಮನವಿ ಮಾಡಿದರು ಇದಕ್ಕೆ ಸ್ಪಂದಿಸಿದ ಶಾಸಕರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸಿ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು.
ಭದ್ರಾ ಮೇಲ್ದಂಡೆ ಯೋಜನೆಗೆ ಆಗಸ್ಟ್ ನಲ್ಲಿ ಚಾಲನೆ :
ಇದು ಕ್ಷೇತ್ರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಪ್ರಪ್ರಥಮ ಬಾರಿಗೆ ದೊಡ್ಡ ನೀರಾವರಿ ಯೋಜನೆಯೊಂದು ಶಿರಾ ಕ್ಷೇತ್ರದಲ್ಲಿ ಅನುಷ್ಠಾನವಾಗುತ್ತಿದೆ. ಆಗಸ್ಟ್‍ನಿಂದ ಕಾಮಗಾರಿ ಆರಂಭವಾಗುತ್ತಿದ್ದು ಮುಖ್ಯಮಂತ್ರಿಗಳು ಬಂದು ಕಾಮಗಾರಿಗೆ ಚಾಲನೆ ನೀಡುತ್ತಿದ್ದು, ಒಂದು ಒಂದು ಕಾಲುವರೆ ವರ್ಷದಲ್ಲಿ ಕಾಮಗಾರಿ ಸಂಪೂರ್ಣವಾಗಿ ಮುಗಿಯುವ ವಿಶ್ವಾಸವಿದೆ ಈ ಕಾರ್ಯಕ್ಕೆ ಪೂರಕವಾಗಿ ನಾನು ಶ್ರಮಿಸುತ್ತಿದ್ದು, ಈ ಭಾಗದ ಸಂಸತ್ ಸದಸ್ಯರೂ, ನೂತನ ಕೇಂದ್ರ ಸಚಿವರೂ ಆದ ನಾರಾಯಣ ಸ್ವಾಮಿಯವರು ಕೂಡ ಈ ಕಾರ್ಯದಲ್ಲಿ ಸಕ್ರೀಯರಾಗಿದ್ದಾರೆ.
ಯೋಜನೆ ಮೂಲಕ ಕ್ಷೇತ್ರದ 65 ನಿಗದಿತ ಕೆರೆಗಳಿಗೆ ನೀರು ಹರಿಸಬೇಕೆಂದು ಈಗಾಗಲೇ ತೀರ್ಮಾನ ಆಗಿದ್ದು, ಗುರುತ್ವಾಕರ್ಷಣೆ ಬಲದ ಮೂಲಕ ಪೈಪ್‍ಲೈನ್ ಮಾರ್ಗವಾಗಿ ಕೆರೆಗಳಿಗೆ ನೀರು ಹರಿಸುವ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ನೀರು ಹರಿಯುವ ಗ್ರಾಮಗಳ ಕೆರೆಗಳ ಅಕ್ಕಪಕ್ಕದ ಗ್ರಾಮಗಳ ಜನರು ಭದ್ರಾ ಮೇಲ್ದಂಡೆ ಯೋಜನೆ ಇಷ್ಟು ಸಮೀಪ ಹೋಗುತ್ತಿದ್ದರೂ ನಮ್ಮ ಗ್ರಾಮಗಳ ಕೆರೆಗಳನ್ನು ಯೋಜನೆ ವ್ಯಾಪ್ತಿಗೆ ಏಕೆ ತಂದಿಲ್ಲ ತಂದು ಎಂದು ಪ್ರಶ್ನಿಸುತ್ತಿದ್ದಾರೆ. ಅವರಿಗೆ ತಿಳಿಯ ಪಡಿಸುವುದೇನೆಂದರೆ ಇದಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ಈ ಯೋಜನೆಯಲ್ಲಿ ನೀರನ್ನು ಪಂಪ್ ಮಾಡುವ ಮೂಲಕ ಬಿಡುವುದಿಲ್ಲ. ಗುರುತ್ವಾಕರ್ಷಣೆ ಬಲದಿಂದ ಪೈಪ್‍ಲೈನ್ ಮೂಲಕ ನೀರನ್ನು ಕೆರೆಗಳಿಗೆ ಹರಿಸಲಾಗುತ್ತದೆ. ಆದರೂ ಯೋಜನೆ ಸಾಗುವ ಮಾರ್ಗದಲ್ಲಿ ಸಮೀಪದಲ್ಲಿರುವ ಕೆರೆಗಳಿಗೂ ನೀರು ಹರಿಸಬೇಕೆಂದು ವಿಶ್ವೇಶ್ವರಯ್ಯ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಮೊದಲು ನಿಗದಿತ ಕೆರೆಗಳಿಗೆ ನೀರು ಹರಿಸಿ ನಂತರ ಅಕ್ಕಪಕ್ಕದ ಕೆರೆಗಳಿಗೆ ನೀರು ಹರಿಸಲಾಗುವುದು ಎಂಬ ಭರವಸೆ ಸಿಕ್ಕಿದೆ.
ಪೈಪ್ ಲೈನ್ ಮೂಲಕ ಕೆರೆಗಳಿಗೆ ನೀರು ಹರಿಸುವುದಷ್ಟೆ ಅಲ್ಲದೆ ಎರಡನೇ ಹಂತದಲ್ಲಿ ಸಣ್ಣ ನೀರಾವರಿ ಯೋಜನೆಯ ಮೂಲಕ ದೊಡ್ಡ ಹೊಂಡಗಳಿಗೆ ನೀರು ಬಿಟ್ಟು ಆ ಮೂಲಕ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ಬಿಡುವ ಯೋಜನೆಯನ್ನು ಸಹ ಭದ್ರಾ ಮೇಲ್ದಂಡೆ ಯೋಜನೆ ಒಳಗೊಂಡಿದೆ ಎಂದರು.
ಅಕ್ರಮ ಮದ್ಯ ಮಾರಾಟ ನಿಲ್ಲಿಸಲು ಮನವಿ :
ತಮ್ಮ ಊರು-ಹೆಸರು ಹೇಳಲು ಇಚ್ಛಿಸದ ಮಹಿಳೆಯೊಬ್ಬರು ಫೋನ್-ಇನ್ ಕಾರ್ಯಕ್ರಮಕ್ಕೆ ಕರೆ ಮಾಡಿ ತಾಲ್ಲೂಕಿನ ಹಳ್ಳಿ-ಹಳ್ಳಿಗಳಲ್ಲಿಯೂ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಸಣ್ಣ ಸಣ್ಣ ಹುಡುಗರೆಲ್ಲಾ ಎಣ್ಣೆ ಕುಡಿಯುವುದನ್ನು ಕಲಿತು ಹಾಳಾಗಿದ್ದಾರೆ. ಅಧಿಕಾರಿಗಳು ಎಷ್ಟೆಕ್ರಮ ಕೈಗೊಂಡರು ಅಕ್ರಮ ಮದ್ಯ ಮಾರಾಟ ನಿಲ್ಲಿಸಲಾಗುತ್ತಿಲ್ಲ, ಈ ಕುರಿತು ಕ್ರಮ ಕೈಗೊಳ್ಳಿ ಎಂದು ಶಾಸಕರಲ್ಲಿ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಅಕ್ರಮ ಮದ್ಯ ಮಾರಾಟ ನಿಲ್ಲಿಸುವಲ್ಲಿ ಸಾರ್ವಜನಿಕರ ಪಾತ್ರವೂ ಅತಿಮುಖ್ಯ. ಗ್ರಾಮಗಳಿಗೆ ಅಬಕಾರಿ ಅಧಿಕಾರಿಗಳು ಬಂದಾಗ ಗ್ರಾಮಸ್ಥರೇ ಅಕ್ರಮ ಮದ್ಯ ಮಾರಾಟ ಮಾಡುವವರಿಗೆ ಮಾಹಿತಿ ನೀಡುತ್ತಾರೆ ಇದರಿಂದ ಸಂಪೂರ್ಣವಾಗಿ ಅಕ್ರಮ ಮದ್ಯ ಮಾರಾಟ ತಡೆಗಟ್ಟುವ ಕಾರ್ಯಕ್ಕೆ ಹಿನ್ನೆಡೆ ಉಂಟಾಗಿದೆ. ಈ ಕುರಿತು ಅಬಕಾರಿ ಅಧಿಕಾರಿಗಳಿಗ ಬಳಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಗೊಲ್ಲರಹಟ್ಟಿಗಳಿಗೆ ಮೂಲಭೂತ ಸೌಕರ್ಯ :
ಉಪಚುನಾವಣೆಯಲ್ಲಿ ಭರವಸೆ ಕೊಟ್ಟಂತೆ ಸರ್ಕಾರವು ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದ್ದು, ಅಧ್ಯಕ್ಷರ ನೇಮಕಾತಿ ಬಾಕಿ ಇದೆ. ಗೊಲ್ಲರನ್ನು ಸೇರಿಸಿ ಕಾಡುಗೊಲ್ಲ-ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸುವಂತೆ ಸರ್ಕಾರಕ್ಕೆ ಸಲಹೆಗಳು ಬಂದಿವೆ. ಹಾಗಾಗಿ ಈ ಕುರಿತು ಪ್ರಕ್ರಿಯೆ ನಿಧಾನವಾಗಿದ್ದು ಶೀಘ್ರದಲ್ಲಿಯೇ ಸರ್ಕಾರ ಇದನ್ನೆಲ್ಲಾ ಸರಿಪಡಿಸಿ ನಿಗಮಕ್ಕೆ ಅಧ್ಯಕ್ಷರ ನೇಮಕ ಮತ್ತು ಅನುದಾನ ಬಿಡುಗಡೆ ಮಾಡಲಾಗುವುದು. ಕ್ಷೇತ್ರದಲ್ಲಿ ಸುಮಾರು 79 ಗೊಲ್ಲರಹಟ್ಟಿಗಳನ್ನು ಪಟ್ಟಿ ಮಾಡಲಾಗಿದ್ದು, 16 ಕೋಟಿ ರೂ.ವೆಚ್ಚದಲ್ಲಿ ಗೊಲ್ಲರಹಟ್ಟಿಗಳನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು. ನಮ್ಮ ಭಾಗದ ಸಂಸದರಾದ ಎ.ನಾರಾಯಣಸ್ವಾಮಿ ಅವರು ಕೇಂದ್ರದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿರುವುದು ಸಹ ಕ್ಷೇತ್ರದ ಗೊಲ್ಲರಹಟ್ಟಿಗಳ ಅಭಿವೃದ್ಧಿಗೆ ಹೆಚ್ಚು ಅನುಕೂಲವಾಗಲಿದೆ ಎಂದರು.
ಶಾಸಕರ ಕಾರ್ಯಕ್ಕೆ ಶ್ಲಾಘನೆ :
ಲಿಂಗದಹಳ್ಳಿಯ ಮನೋಜ್‍ಬಾಲಕೃಷ್ಣ, ಕುರುಬರಹಳ್ಳಿಯ ಲೋಕೇಶ್, ಮುಂತಾದವರು ಕರೆಮಾಡಿ ಶಾಸಕರು ಕೋವಿಡ್ ಬಂತಂಹ ಸಂದರ್ಭದಲ್ಲಿ ಕೈಗೊಂಡ ಚಟುವಟಿಕೆಗಳು ಹಾಗೂ ಕ್ಷೇತ್ರದಲ್ಲಿ ಇದುವರೆಗೆ ಕೈಗೊಂಡಿರುವ ಕೆಲಸಗಳ ಬಗ್ಗೆ ಪ್ರಶಂಶೆ ವ್ಯಕ್ತಪಡಿಸಿ ಶಾಸಕರ ಒಟ್ಟಾರೇ ಕಾರ್ಯಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ