ತುಮಕೂರು : ಡಿಸೆಂಬರ್ ಅಂತ್ಯದೊಳಗೆ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಳಿಸಿ – ಶಾಸಕ

ತುಮಕೂರು :

     ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳನ್ನು ಗುಣಮಟ್ಟದೊಂದಿಗೆ ಮುಂಬರುವ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸುವಂತೆ ಶಾಸಕರಾದ ಜಿ.ಬಿ. ಜ್ಯೋತಿಗಣೇಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

      ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸ್ಮಾರ್ಟ್ ಸಿಟಿ ಅಡ್ವೈಸರಿ ಪೆÇೀರಂ ಸಭೆಯಲ್ಲಿ ಮಾತನಾಡಿದ ಅವರು, ಸ್ಮಾರ್ಟ್‍ಸಿಟಿ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸುವಂತೆ ಅವರು ತಿಳಿಸಿದರು. ಚರ್ಚ್ ವೃತ್ತದಿಂದ ಗುಬ್ಬಿ ವೀರಣ್ಣ ಕಲಾಕ್ಷೇತ್ರದವರೆಗಿನ ರಸ್ತೆ, ವಿವೇಕಾನಂದ(ಶಿರಾಣಿ), ಮಂಡಿಪೇಟೆ, ಜೆ.ಸಿ.ರಸ್ತೆ, ಕಾಲ್ ಟೆಕ್ಸ್ ವೃತ್ತ, ಎಂ.ಜಿ. ರಸ್ತೆ ಸೇರಿದಂತೆ ನಗರದ ವಿವಿಧ ರಸ್ತೆಗಳ ಸ್ಮಾರ್ಟ್‍ಸಿಟಿ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಬೇಕು ಎಂದರು.

      ಇದಕ್ಕೆ ಪ್ರತಿಕ್ರಿಯಿಸಿದ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ ಅವರು, ಈಗಾಗಲೇ ಹಲವು ರಸ್ತೆ ಮತ್ತು ಕಟ್ಟಡ ಕಾಮಗಾರಿಗಳು ಪೂರ್ಣಗೊಂಡಿದ್ದು, ಮೇ ತಿಂಗಳ ಅಂತ್ಯಕ್ಕೆ ಎಲ್ಲಾ ರಸ್ತೆ ನಿರ್ಮಾಣ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು. ಸೆಪ್ಟೆಂಬರ್ ಅಂತ್ಯಕ್ಕೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಹೊರತುಪಡಿಸಿ ಎಲ್ಲಾ ಕಟ್ಟಡ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.

      ಸ್ಮಾರ್ಟ್ ಯೋಜನೆಯಡಿ ನಗರ ಗ್ರಂಥಾಲಯ ಕಟ್ಟಡ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ನಿರ್ಮಾಣ ಹಂತದಲ್ಲಿದೆ. ಈ ಕಟ್ಟಡದಲ್ಲಿ ಗ್ರಂಥಾಲಯದ ಜೊತೆಗೆ ಐಎಎಸ್, ಕೆಎಎಸ್ ಸೇರಿದಂತೆ ಸ್ವರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಹಾಗೂ ವಸಂತನರಸಾಪುರ ಕೈಗಾರಿಕಾ ಪ್ರದೇಶಕ್ಕೆ ಅಗತ್ಯವಿರುವ ಕಾರ್ಮಿಕರನ್ನು ಒದಗಿಸಲು ಕೌಶಲ್ಯ ತರಬೇತಿ ನೀಡುವುದಕ್ಕೆ ಅಗತ್ಯ ರೂಪು-ರೇಷೆಯನ್ನು ರೂಪಿಸುವಂತೆ ಶಾಸಕರು ತಿಳಿಸಿದರು.

      ಸಭೆಯಲ್ಲಿ ಮಾತನಾಡಿದ ಸಂಸದರಾದ ಜಿ.ಎಸ್. ಬಸವರಾಜು ಅವರು, ನಗರದ ಎಬಿಡಿ ಪ್ರದೇಶದಲ್ಲಿ ಅಭಿವೃದ್ಧಿ ಪಡಿಸಲು ರೋಡ್ ಶೋಲ್ಡರ್ ಕಾಮಗಾರಿಗಳಿಗೆ ಹೊಂದಿಕೊಂಡಂತಹ ಕೆಲವು ರಸ್ತೆಗಳು 8 ಮೀಟರ್ ಗಿಂತ ಕಡಿಮೆ ವಿಸ್ತೀರ್ಣವಿರುವುದರಿಂದ ಡಿಪಿಆರ್ ತಯಾರಿಸುವ ಸಮಯದಲ್ಲಿ ಪರಿಗಣಿಸದೇ ಅಂದಾಜು ಪಟ್ಟಿ ತಯಾರಿಸಿದ್ದು, ಅಂದಾಜು ಪಟ್ಟಿಯಿಂದ ಬಿಟ್ಟು ಹೋದ 8 ಮೀಟರ್ ಗಿಂತ ಕಡಿಮೆ ಇರುವ ರಸ್ತೆಗಳನ್ನು ಅಭಿವೃದ್ಧಿ ಪಡಿಸಬೇಕು ಹಾಗೂ ನಗರದಲ್ಲಿ ಸಸಿಗಳನ್ನು ಬೆಳೆಸಲು ಕಾರ್ಯಕ್ರಮ ರೂಪಿಸಬೇಕು ಎಂದರು.

       ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಅವರು, ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ನಗರದ ಜನತೆಗೆ ತೊಂದರೆಯಾಗದಂತೆ ಸ್ಮಾರ್ಟ್‍ಸಿಟಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಜ್ಯೂನಿಯರ್ ಕಾಲೇಜು ಮೈದಾನ, ಮಹಾತ್ಮ ಗಾಂಧಿ ಕ್ರೀಡಾಂಗಣ ಅಭಿವೃದ್ಧಿ ಕುರಿತು ಚರ್ಚಿಸಿದರು.

      ದಿಶಾ ಸಮಿತಿ ಸದಸ್ಯರಾದ ಕುಂದರನಹಳ್ಳಿ ರಮೇಶ್ ಮಾತನಾಡಿ, ತುಮಕೂರು ನಗರದಲ್ಲಿ ಪಾರ್ಕ್‍ಗಳನ್ನು ಗುರುತಿಸಿ ಬೇಲಿ ತಂತಿ ಹಾಕುವ ಕೆಲಸ ಆಗಬೇಕು. ಪಾರ್ಕ್‍ಗಳಲ್ಲಿ ಹಾಗೂ ನಗರದಲ್ಲಿ ಸಸಿಗಳನ್ನು ನೆಡುವ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಅವರು ಸಭೆಯಲ್ಲಿ ತಿಳಿಸಿದರು.

      ಸಭೆಯಲ್ಲಿ ಪಾಲಿಕೆ ಮೇಯರ್ ಬಿ.ಜಿ. ಕೃಷ್ಣಪ್ಪ, ಪಾಲಿಕೆ ಆಯುಕ್ತೆ ರೇಣುಕಾ, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸ್ಮಾರ್ಟ್‍ಸಿಟಿ ಅಧಿಕಾರಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ