ತುಮಕೂರು : ಹುಣಸೆ ಹಣ್ಣಿನ ಸುಗ್ಗಿ ಶುರು : ಭರ್ಜರಿ ವಹಿವಾಟು ನಿರೀಕ್ಷೆ

 ತುಮಕೂರು :

     ತುಮಕೂರು ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಬೆಳೆಯುವ ಹುಣಸೆ ಹಣ್ಣಿಗೆ ವಿಶ್ವಮಟ್ಟದಲ್ಲಿ ಬೇಡಿಕೆ ಇದೆ. ದಪ್ಪ ತೊಳೆ, ದಟ್ಟ ತಿರುಳು, ಗಾಢ ಹುಳಿ ಹೊಂದಿರುವ ಕಾರಣಕ್ಕೆ ಈ ಹುಣಿಸೆ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ. ಇಂತಹ ಹಣ್ಣು ಬೆಳೆಯಲು ಈ ಭಾಗದ ಮಣ್ಣಿನ ಗುಣವೇ ಕಾರಣ ಎನ್ನಲಾಗಿದೆ.

      ದಕ್ಷಿಣ ಭಾರತದಲ್ಲಿ ತುಮಕೂರು ಹಾಗೂ ಹಿಂದೂಪುರ ಮಾರುಕಟ್ಟೆ ಈ ಮಾದರಿ ಹುಣಸೆ ಹಣ್ಣಿಗೆ ಪ್ರಸಿದ್ಧಿ. ವರ್ಷಕ್ಕೊಮ್ಮೆ ಬರುವ ಹುಣಸೆ ಬೆಳೆಯ ಸೀಜನ್ ಆರಂಭವಾಗುತ್ತಿದೆ. ಸೋಮವಾರ(ಜ.18) ತುಮಕೂರು ಎಪಿಎಂಸಿ ಯಾರ್ಡಿನಲ್ಲಿರುವ ಅಲ್ಲಿನ ಪಶುಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಹುಣಸೆಹಣ್ಣಿನ ವ್ಯಾಪಾರಿಗಳು, ಹುಣಿಸೆ ಹಣ್ಣಿನ ವ್ಯಾಪಾರವಹಿವಾಟಿನ ಅಧಿಕೃತ ಆರಂಭ ಮಾಡಿದರು. ಹುಣಿಸೆ ಬೆಳೆಗಾರರಿಗೆ, ವರ್ತಕರಿಗೆ ಹುಣಿಸೆ ಹಣ್ಣಿನ ವ್ಯವಹಾರದಲ್ಲಿ ಲಾಭ ದೊರೆಯಲಿ ಎಂದು ಪ್ರಾರ್ಥಿಸಿದರು.

      ವರ್ತಕರ ಸಂಘದ ಅಧ್ಯಕ್ಷ ಜಿ.ಹೆಚ್.ಪರಮಶಿವಯ್ಯ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಪೂಜೆ ನೆರವೇರಿತು. ಸಂಕ್ರಾಂತಿ ನಂತರದಿಂದ ಆರಂಭವಾಗಿ ಏಪ್ರಿಲ್‍ವರೆಗೂ ಹುಣಸೆ ಹಣ್ಣಿನ ಫಸಲು ಮಾರುಕಟ್ಟೆಗೆ ಬರುತ್ತದೆ. ಈ ವರ್ಷ ಹುಣಸೆ ಉತ್ತಮ ಫಸಲು ಬಂದಿದೆ. ರೈತರಿಗೂ ಹೆಚ್ಚು ಲಾಭ ಸಿಗಲಿದೆ. ತುಮಕೂರು ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿಗೆ ಉತ್ತಮ ಬೆಲೆ ದೊರೆಯುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಜೊತೆಗೆ ಮಾರಿದ ನಂತರ ತಡಮಾಡದೆ ವರ್ತಕರು ಹಣ ನೀಡುತ್ತಾರೆ. ಇದು ಬಹಳ ವರ್ಷಗಳಿಂದ ನಡೆದುಬಂದಿಗೆ ಈ ಬಾರಿಯೂ ತುಮಕೂರು ಮಾರುಕಟ್ಟೆಯಲ್ಲಿ ಹುಣಿಸೆ ಹಣ್ಣಿನ ಭರ್ಜರಿ ವಹಿವಾಟು ನಿರೀಕ್ಷಿಸಲಾಗಿದೆ ಎಂದು ವರ್ತಕರ ಸಂಘದ ಅಧ್ಯಕ್ಷ ಜಿ.ಹೆಚ್.ಪರಮಶಿವಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.

      ತುಮಕೂರು ತಾಲ್ಲೂಕಿನ ಹಳ್ಳಿಗಳು, ಗುಬ್ಬಿ, ಚಿಕ್ಕನಾಯಕನಹಳ್ಳಿ, ತಿಪಟೂರು, ಕೊರಟಗೆರೆ, ಮಧುಗಿರಿ, ಶಿರಾ, ಪಾವಗಡ ತಾಲ್ಲೂಕು ಭಾಗದಿಂದ ಹೆಚ್ಚಿನ ಪ್ರಮಾಣದ ಹುಣಸೆ ಹಣ್ಣು ತುಮಕೂರು ಮಾರುಕಟ್ಟೆಗೆ ಬರುತ್ತದೆ. ಸೀಜನ್‍ನಲ್ಲಿ ದಿನಕ್ಕೆ 600ರಿಂದ 700 ಲಾರಿ ಲೋಡು ಹುಣಸೆ ಹಣ್ಣು ಮಾರುಕಟ್ಟೆಗೆ ಬರುತ್ತದೆ. ಇಲ್ಲಿ ಖರೀದಿಸಿದ ಹುಣಸೆ ಹಣ್ಣು ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಕ್ಕೆ ರವಾನೆಯಾಗಿ ಅಲ್ಲಿಂದ ವಿದೇಶಿ ಮಾರುಕಟ್ಟೆಗಳಿಗೆ ರಫ್ತಾಗುತ್ತದೆ. ಈ ವಿಶಿಷ್ಟ ಹುಣಸೆ ಹಣ್ಣಿಗೆ ಜಗತ್ತಿನಾದ್ಯಂತ ಬೇಡಿಕೆ ಇದೆ. ಈ ಹಣ್ಣಿನಲ್ಲಿ ಹುಳಿ ಪ್ರಮಾಣ, ಆಸಿಡ್ ಪ್ರಮಾಣ ಹೆಚ್ಚಾಗಿರುತ್ತದೆ. ತೊಳೆ ಚೆನ್ನಾಗಿರುವ ಕಾರಣಕ್ಕೆ ಉತ್ತಮ ಗುಣಮಟ್ಟದ ಹುಣಿಸೆ ಹಣ್ಣು ಎಂದು ಗುರುತಿಸಲಾಗಿದೆ. ಅಡಿಗೆ, ಆಹಾರ ಪದಾರ್ಥಗಳ ತಯಾರಿಕೆಗೆ, ಔಷಧಿ ಉತ್ಪನ್ನಗಳಿಗೆ ಈ ಹುಣಸೆಹಣ್ಣು ಬಳಸಲಾಗುತ್ತದೆ ಎಂದು ಎಪಿಎಂಸಿಯ ನಿರಂಜನ್ ಅಂಡ್ ಕೋ ಮಳಿಗೆಯ ಹುಣಿಸೆ ಹಣ್ಣಿನ ವ್ಯಾಪಾರಿ ಟಿ.ಆರ್.ಶರತ್‍ಕುಮಾರ್ ಹೇಳುತ್ತಾರೆ.

      ಮಾರುಕಟ್ಟೆಗೆ ಬರುವ ಹುಣಿಸೆ ಹಣ್ಣನ್ನು ಮೂರು ರೂಪದಲ್ಲಿ ಗುರುತಿಸಿ ಬೆಲೆ ನಿಗಧಿ ಮಾಡಲಾಗುತ್ತದೆ. ಉತ್ತಮ ಗುಣಮಟ್ಟದ ಕರಿಪುಳಿ, ಹೂವು ಹಣ್ಣು(ಫ್ಲವರ್) ಹಾಗೂ ಬೋಟು(ಬೀಜ ತೆಗೆಯದ ಹುಣಿಸೆಹಣ್ಣು) ಎಂದು ವಿಂಗಡಿಸಲಾಗುತ್ತದೆ. ಪ್ರಸ್ತುತ ತುಮಕೂರು ಮಾರುಕಟ್ಟೆಯಲ್ಲಿ ಕರಿಪುಳಿ ಹುಣಿಸೆ ಹಣ್ಣಿಗೆ ಕ್ವಿಂಟಾಲ್‍ಗೆ 15 ಸಾವಿರದಿಂದ 25 ಸಾವಿರ ರೂ. ವರೆಗೂ ಬೆಲೆ ಇದೆ. ಕ್ವಿಂಟಾಲ್ ಹೂಹಣ್ಣು ಹುಣಿಸೆಗೆ 10ರಿಂದ 12 ಸಾವಿರ ರೂ., ಬೋಟು ಕ್ವಿಂಟಾಲ್‍ಗೆ 2ರಿಂದ 3 ಸಾವಿರ ರೂ ಬೆಲೆ ದೊರೆಯುತ್ತದೆ.

     ಹುಣಸೆ ಹಣ್ಣು ಮಾತ್ರವಲ್ಲದೆ, ಹುಣಿಸೆ ಬೀಜಕ್ಕೂ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಒಂದು ಕ್ವಿಂಟಾಲ್ ಹುಣಸೆ ಬೀಜಕ್ಕೆ 1600ರಿಂದ 1800 ರೂ. ವರೆಗೆ ದರ ದೊರೆಯುತ್ತದೆ. ಹುಣಸೆ ಬೀಜವು ಗಮ್ ತಯಾರಿಕೆ, ಔಷಧಿ ಉತ್ನನ್ನಗಳಿಗೆ ಬಳಕೆಯಾಗುತ್ತದೆ.
ಬಯಲುಸೀಮೆ ಪ್ರದೇಶದಲ್ಲಿ ಹುಣಸೆ ಸೂಕ್ತ ಆರ್ಥಿಕ ಬೆಳೆ. ಗಿಡ ಮರವಾಗಿ ಫಸಲು ಶುರುವಾದ ನಂತರ ಯಾವುದೇ ನಿರ್ವಹಣೆಯ ಖರ್ಚಿಲ್ಲದೆ ಹುಣಸೆ ಲಾಭ ತಂದುಕೊಡುವ ವಾರ್ಷಿಕ ಬೆಳೆ. ರೈತರು ತಮ್ಮ ಜಮೀನಿನ ಖಾಲಿ ಜಾಗದಲ್ಲಿ, ಬದುಗಳಲ್ಲಿ ಹುಣಿಸೆ ಮರ ಬೆಳೆಸಿದರೆ ಬೇಸಾಯದ ಖರ್ಚಿಲ್ಲದೆ ನಿರಂತರ ಆದಾಯ ಗಳಿಸಬಹುದು.

     ತುಮಕೂರು ಮಾರುಕಟ್ಟೆಯಲ್ಲಿ ಹುಣಸೆ ಹಣ್ಣಿಗೆ ಉತ್ತಮ ಬೆಲೆ ದೊರೆಯುತ್ತದೆ ಎಂಬ ನಂಬಿಕೆ ರೈತರಲ್ಲಿದೆ. ಈ ವರ್ಷ ಹುಣಸೆ ಫಸಲು ಉತ್ತಮವಾಗಿದೆ. ಈ ಬಾರಿಯೂ ತುಮಕೂರು ಮಾರುಕಟ್ಟೆಯಲ್ಲಿ ಹುಣಿಸೆ ಹಣ್ಣಿನ ಭರ್ಜರಿ ವಹಿವಾಟು ನಿರೀಕ್ಷಿಸಲಾಗಿದೆ.

-ಜಿ.ಹೆಚ್.ಪರಮಶಿವಯ್ಯ, ಅಧ್ಯಕ್ಷರು, ವರ್ತಕರ ಸಂಘ.

      ಈ ಭಾಗದ ಹುಣಸೆ ಹಣ್ಣಿಗೆ ಜಗತ್ತಿನಾದ್ಯಂತ ಬೇಡಿಕೆ ಇದೆ. ಈ ಹಣ್ಣಿನಲ್ಲಿ ಹುಳಿ ಪ್ರಮಾಣ, ಆಸಿಡ್ ಪ್ರಮಾಣ ಹೆಚ್ಚಾಗಿರುತ್ತದೆ. ತೊಳೆ ಚೆನ್ನಾಗಿರುವ ಕಾರಣಕ್ಕೆ ಉತ್ತಮ ಗುಣಮಟ್ಟದ ಹುಣಿಸೆ ಹಣ್ಣು ಎಂದು ಗುರುತಿಸಲಾಗಿದೆ. ಹೊರ ದೇಶಗಳಿಗೆ ರಫ್ತಾಗುತ್ತದೆ.

-ಟಿ.ಆರ್.ಶರತ್‍ಕುಮಾರ್, ಹುಣಸೆ ಹಣ್ಣಿನ ವ್ಯಾಪಾರಿ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap