ಹೆಸರಿಗಷ್ಟೇ ತುಮಕೂರು ವಿವಿ, ರಾಜಧಾನಿಗರಿಗೆ ಮಣೆ!

ತುಮಕೂರು : 

     ತುಮಕೂರು ವಿವಿ ವಿದ್ಯಾ ವಿದಾಯಕ ಪರಿಷತ್‍ಗೆ ಬೆಂಗಳೂರಿನ ಐದು ಮಂದಿಯನ್ನು ನಾಮ ನಿರ್ದೇಶನ ಮಾಡಿರುವ ಬಗ್ಗೆ ಜಿಲ್ಲೆಯ ಪ್ರಜ್ಞಾವಂತ ನಾಗರಿಕರು, ಶೈಕ್ಷಣಿಕ ವಲಯದಲ್ಲಿ ತೀವ್ರ ಆಕ್ಷೇಪ ಕೇಳಿಬಂದಿದೆ.

      ವಿದ್ಯಾ ವಿದಾಯಕ ಪರಿಷತ್ ಅರ್ಥಾತ್ ಅಕಾಡೆಮಿಕ್ ಕೌನ್ಸಿಲ್‍ಗ್‍ಗೆ ಸರಕಾರ ನಾಮನಿರ್ದೇಶನ ಗೊಳಿಸಿರುವ 6ಮಂದಿಯ ಪೈಕಿ 5 ಮಂದಿ ಬೆಂಗಳೂರಿನವರಾಗಿದ್ದು, ಒಬ್ಬರು ಮಾತ್ರ ತುಮಕೂರಿನವರಾಗಿದ್ದಾರೆ. ಶೈಕ್ಷಣಿಕ ಕ್ಷೇತ್ರದಲ್ಲಿ ಗುರುತರವಾಗಿ ಸೇವೆ ಸಲ್ಲಿಸಿದವರು, ವಿವಿ ವ್ಯಾಪ್ತಿಯಲ್ಲಿರುವವರನ್ನು ಆಕಾಡೆಮಿಕ್ ಕೌನ್ಸಿಲ್‍ಗೆ ನಾಮ ನಿರ್ದೇಶನ ಮಾಡುವುದನ್ನು ಹಿಂದಿನಿಂದಲೂ ಪರಿಪಾಠ ಬೆಳೆಸಿಕೊಂಡಿದ್ದು, ಹೊರಗಿನವರು ಒಬ್ಬರು ಇಬ್ಬರೋ ಈವರೆಗೆ ನೇಮಕವಾಗುತ್ತಿದ್ದರು. ಆದರೆ ಈ ಬಾರಿ ಬರೋಬ್ಬರಿ ಐವರು ರಾಜಧಾನಿಯವರು ನೇಮಕಗೊಂಡಿರುವ ಹಿಂದೆ ರಾಜಕೀಯ ಒತ್ತಡಗಳು ಮೇಲ್ನೋಟಕ್ಕೆ ಗೋಚರವಾಗತೊಡಗಿದೆ. ತುಮಕೂರು ಜಿಲ್ಲೆಯಲ್ಲಿ ಆಕಾಡೆಮಿಕ್ ಕೌನ್ಸಿಲ್‍ಗೆ ನೇಮಕವಾಗುವಂತಹ ಶಿಕ್ಷಣ ತಜ್ಞರು ಯಾರು ಇಲ್ಲವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.

      ಸದ್ಯ ಅಕಾಡೆಮಿಕ್ ಕೌನ್ಸಿಲ್‍ಗೆ ನೇಮಕಗೊಂಡವರಲ್ಲಿಬನಶಂಕರಿಯ ನಿವೃತ್ತ ಪ್ರಾಧ್ಯಾಪಕ ಕೆ.ವಿ.ನಾಗೇಂದ್ರರಾವ್, ಬನಗಿರಿನಗರದ ಆರ್.ಡಿ.ಸತೀಶ್, ಯಶವಂತಪುರದ ಪ್ರೀತಿ, ಎಚ್.ಆರ್‍ಬಿ.ಆರ್ ಲೇಔಟ್‍ನ ಧೀರಜ್ ಯಾದವ್, ಎಸ್.ಪಿ.ಬಡಾವಣೆಯ ಡಿ.ಎಂ.ಗಾಯತ್ರಿ ಈ ಐವರು ಬೆಂಗಳೂರು ವಾಸಿಗಳಾಗಿದ್ದು, ಆದರ್ಶನಗರ ವಾಸಿ ರೇಖಾ ಎಸ್ ಒಬ್ಬರು ಮಾತ್ರ ತುಮಕೂರಿನವರಾಗಿದ್ದಾರೆ. ನೇಮಕ ಮಾಡಿ ಹತ್ತು ದಿನಗಳೇ ಕಳೆದಿದ್ದು, ಸ್ಥಳೀಯ ಆಡಳಿತಾರೂಢ ಜನಪ್ರತಿನಿಧಿಗಳಿಗೆ ಈ ಬಗ್ಗೆ ತಿಳಿದಿರಲಿಲ್ಲವೇ? ಎಂಬ ಅನುಮಾನಕ್ಕೂ ಎಡೆ ಮಾಡಿದೆ. ತುಮಕೂರಿನ ಶಿಕ್ಷಣ ತಜ್ಞಪ್ರೊ.ಸಿ.ಎನ್.ನರಸಿಂಹಮೂರ್ತಿ ಅವರಿಗೆ ವಿದ್ಯಾವಿದಾಯಕ ಪರಿಷತ್ ಸಭೆಗೆ ನೋಟಿಸ್ ಕಳುಹಿಸಿ ನಂತರ ನಿಮ್ಮನ್ನು ಕೈ ಬಿಡಲಾಗಿದೆ ಎಂದು ವಿವಿ ಅಧಿಕಾರಿಯೊಬ್ಬರು ಕರೆ ಮಾಡಿ ಮೌಖಿಕವಾಗಿ ಹೇಳಿರುವುದು ನಾನಾ ರಾಜಕೀಯ ಅನುಮಾನಗಳಿಗೆ ಎಡೆಮಾಡಿದೆ. ಉನ್ನತ ಶಿಕ್ಷಣ ಸಚಿವರು ಬೆಂಗಳೂರಿನವರೆಂಬ ಕಾರಣಕ್ಕೆ ಈ ನೇಮಕವಾಗಿದೆಯೇ ಅಥವಾ ಬೇರೆ ಲಾಭಿಗಳು ತನ್ನ ಕೈ ಚಳಕ ತೋರಿವೆಯೇ ಎಂಬ ಪ್ರಶ್ನೆಗಳು ವಿವಿ ವಲಯದಲ್ಲಿ ಚರ್ಚೆಗೆ ಗ್ರಾಸವೊದಗಿಸಿವೆ.

      ಸಭೆಗೆ ನೋಟಿಸ್ ಕೊಟ್ಟು ನೇಮಕ ರದ್ದು ಎಂದರು…!

      ಈ ಕುರಿತು ಪ್ರಜಾಪ್ರಗತಿಗೆ ಪ್ರತಿಕ್ರಿಯಿಸಿದ ಶಿಕ್ಷಣ ತಜ್ಞ ಹಾಗೂ ತುಮಕೂರು ವಿವಿ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ ಪ್ರೊ.ಸಿ.ಎನ್.ನರಸಿಂಹಮೂರ್ತಿ ಅವರು ನನಗೆ ಮಾ.1ರಂದು ವಿದ್ಯಾ ವಿದಾಯಕ ಪರಿಷತ್ ಸಭೆಗೆ ಬನ್ನಿ ಎಂದು ವಿವಿಯವರು ಸಭಾ ನೋಟಿಸ್ ಕಳುಹಿಸಿ ಮತ್ತೆ ಕರೆ ಮಾಡಿ ಅನಿವಾರ್ಯ ಕಾರಣಗಳಿಂದ ನಿಮ್ಮ ಬದಲಾಗಿ ಬೇರೆಯವರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು. ಇದು ನನಗೆ ಬೇಸರ ತರಿಸಿದೆ. ನನ್ನನ್ನು ನೇಮಕ ಮಾಡಿ ಅಂಥಾ ನಾನು ಅರ್ಜಿ ಹಾಕಿದ್ದೆನಾ. ನನ್ನ ನೇಮಕಾತಿ ಕೈ ಬಿಟ್ಟಿರುವ ಯಾವುದನ್ನೂ ಲಿಖಿತ ರೂಪದಲ್ಲಿ ಯಾವುದೇ ಪತ್ರ ನೀಡದ ವಿವಿ ಮಾ.1ರ ಸಭಾ ನೋಟಿಸ್ ಕಳುಹಿಸಿ ಮತ್ತೆ ಮೌಖಿಕವಾಗಿ ಸಭೆಗೆ ಹಾಜರಾಗದಂತೆ ಕರೆ ಮಾಡಿ ಹೇಳಿದ್ದು ಮಾತ್ರ ವಿಪರ್ಯಾಸ. ಈ ಆಕ್ಷೇಪದ ಮೂಲಕ ನನ್ನನ್ನು ಪರಿಷತ್‍ಗೆ ನೇಮಿಸಿ ಎಂದು ಬೇಡಿಕೆ ಈಡುತ್ತಿಲ್ಲ. ಅವರ ಕೊಟ್ಟರೂ ನನಗೆ ಬೇಡ. ಹೊರಗಿನವರಿಗೆ ಮಣೆಹಾಕುವುದನ್ನು ಬಿಟ್ಟುತುಮಕೂರು ಜಿಲ್ಲೆಯವರಿಗೆ ಪ್ರಾತಿನಿಧ್ಯ ಕೊಡಿ ಎಂಬುದಷ್ಟೇ ನನ್ನ ಆಗ್ರಹ. ಹೊರಗಿನಿಂದ ಬರೀ ಸಭೆಗೆ ಹೊರಗಿನಿಂದ ಬಂದು ಹೋಗುವವರಿಂದ ಎಷ್ಟರ ಮಟ್ಟಿನ ಲಾಭ ವಿಶ್ವವಿದ್ಯಾಲಯಕ್ಕೆ ಆಗುತ್ತದೆ ಎಂಬುದನ್ನು ಸರಕಾರ ಹಾಗೂ ವಿವಿ ಆಡಳಿತ ಗಮನಹರಿಸಬೇಕಿದೆ ಎಂದು ಒತ್ತಾಯಿಸಿದರು.

      ಸ್ಥಳೀಯ ಜನಪ್ರತಿನಿಧಿಗಳು ಅಕಾಡೆಮಿಕ್ ಕೌನ್ಸಿಲ್‍ನಲ್ಲಿಲ್ಲ: ಹಿಂದೆ ಅಕಾಡೆಮಿಕ್ ಕೌನ್ಸಿಲ್ ಅನ್ನು ಜಿಲ್ಲೆಯ ವಿಧಾನಸಭಾ ಸದಸ್ಯರು, ಪರಿಷತ್ ಸದಸ್ಯರು ಪ್ರತಿನಿಧಿಸುತ್ತಿದ್ದರು. ಕುಣಿಗಲ್ ಶಾಸಕರಾಗಿದ್ದ ಎಚ್.ನಿಂಗಪ್ಪ, ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಸದಸ್ಯರಾಗಿದ್ದ ಡಾ.ಎಂ.ಆರ್.ಹುಲಿನಾಯ್ಕರ್ ಸಹ ಜನಪ್ರತಿನಿಧಿಗಳ ಪರವಾಗಿ ಅಕಾಡೆಮಿಕ್ ಕೌನ್ಸಿಲ್ ಪ್ರತಿನಿಧಿಸಿದ್ದರು. ಅವರ ನಿವೃತ್ತಿಯ ನಂತರ ಜಿಲ್ಲೆಯವರಿಗೆ ಅವಕಾಶಸಿಕ್ಕಿರುವುದು ಕಡಿಮೆಯೇ. ಪ್ರಸಕ್ತ ವಿಧಾನಪರಿಷತ್ ಸಭಾಪತಿಯಿಂದ ಇಬ್ಬರು ಸದಸ್ಯರು ವಿವಿ ವಿದ್ಯಾ ವಿದಾಯಕ ಪರಿಷತ್‍ಗೆನಾಮನಿರ್ದೇಶನಗೊಂಡಿದ್ದು, ಅವರು ಸಹ ಬೆಂಗಳೂರು ಮೂಲದ ಪರಿಷತ್ ಸದಸ್ಯರಾದ ಕೆ.ಎ.ಗೋವಿಂದರಾಜು, ಅ.ದೇವೇಗೌಡ ಅವರಾಗಿದ್ದಾರೆ. ಪರಿಷತ್ ಸದಸ್ಯರನ್ನೇ ನಾಮಕರಣ ಮಾಡುವದಿದ್ದರೆ ಜಿಲ್ಲೆಯನ್ನು ಪ್ರತಿನಿಧಿಸುವ ಪದವೀಧರ ಕ್ಷೇತ್ರದ ಚಿದಾನಂದ ಎಂ.ಗೌಡ, ಶಿಕ್ಷಕರ ಕ್ಷೇತ್ರದ ವೈ.ಎ.ನಾರಾಯಣಸ್ವಾಮಿ, ಸ್ಥಳೀಯ ಸಂಸ್ಥೆಗಳನ್ನು ಪ್ರತಿನಿಧಿಸುವ ಕಾಂತರಾಜು ಅವರುಗಳ ವಿವಿ ಗಮನಕ್ಕೆ ಬಾರಲಿಲ್ಲವೇ. ಅವರುಗಳನ್ನು ಹೆಸರನ್ನು ಪರಿಷತ್ ಸಭಾಪತಿಗಳಿಗೆ ಶಿಫಾರಸ್ಸು ಮಾಡಬಹುದಿತ್ತಲ್ಲವೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

 
ತುಮಕೂರಿಗರ ಹೋರಾಟದಿಂದ ಉಳಿದ ವಿಶ್ವವಿದ್ಯಾಲಯ

      ತುಮಕೂರು ವಿವಿ ಜಿಲ್ಲಾ ವ್ಯಾಪ್ತಿಯ ರಾಜ್ಯದ ಮೊದಲ ವಿಶ್ವವಿದ್ಯಾಲಯವೆಂಬ ಹೆಗ್ಗಳಿಕೆಯೊಂದಿಗೆ ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ.ಜಿ.ಪರಮೇಶ್ವರ ಅವರು 2004ರಲ್ಲಿ ಸ್ಥಾಪಿಸಿದ ವಿಶ್ವವಿದ್ಯಾಲಯ. ನಂತರ ಬದಲಾದ ಸರಕಾರದಲ್ಲಿ ವಿಶ್ವವಿದ್ಯಾಲಯ ಜಿಲ್ಲೆಯಿಂದ ಕೈ ಬಿಡುವ ಸಂದರ್ಭ ಎದುರಾದಾಗ ತುಮಕೂರಿನ ಪ್ರಗತಿಪರ ಚಿಂತಕರು, ಸಾಹಿತಿಗಳು, ನಿವೃತ್ತ ಪ್ರಾಧ್ಯಾಪಕರು, ಶಿಕ್ಷಣ ತಜ್ಞರು, ಸಾಹಿತಿಗಳು ಸೇರಿ ಹೋರಾಟ ಸಮಿತಿ ರೂಪಿಸಿಕೊಂಡು ತುಮಕೂರು ಬಂದ್‍ಗೆ ಕರೆಕೊಟ್ಟು ವಿಶ್ವವಿದ್ಯಾಲಯ ಜಿಲ್ಲೆಯಲ್ಲಿ ನೆಲೆಯೂರುವಂತೆ ಮಾಡಿದರು. ಜಿಲ್ಲೆಯ ಜನರ ಹೋರಾಟ, ಒತ್ತಾಸೆಯಿಂದ ಸ್ಥಾಪಿತವಾದ ತುಮಕೂರು ವಿವಿ ಜಿಲ್ಲೆಯೇತರರನ್ನೇ ಆಕಾಡೆಮಿಕ್ ಕೌನ್ಸಿಲ್, ಸಿಂಡಿಕೇಟ್‍ಗಳಿಗೆ ಹೆಚ್ಚಾಗಿ ಪರಿಗಣಿಸುವುದು ಎಷ್ಟರ ಮಟ್ಟಿಗೆ ಸರಿ. ಶೈಕ್ಷಣಿಕ ನಾಡು ಎಂದು ಕರೆಯಲ್ಪಡುವ ತುಮಕೂರು ಜಿಲ್ಲೆಯಲ್ಲಿ ಪ್ರಬುದ್ಧ ಶಿಕ್ಷಣ ತಜ್ಞರಿಗೆ ಕೊರತೆಯಿದೆಯೇ? ಧೀರ್ಘಾವಧಿ ಸೇವೆ ಛಾಪು ಮೂಡಿಸದಂತಹ ನಿವೃತ್ತ ಪ್ರಾಧ್ಯಾಪಕರು, ಸಂಶೋಧಕರು ತುಮಕೂರಿನಲ್ಲಿ ಬಹಳ ಮಂದಿ ಇದ್ದಾರೆ. ಅವರೆಲ್ಲರನ್ನು ಬಿಟ್ಟು ರಾಜಕೀಯ ಕಾರಣಗಳಿಗೆ ನೇಮಕ ಮಾಡುವುದು ತುಮಕೂರು ವಿವಿ ಸ್ಥಾಪನೆಯ ಉದ್ದೇಶಗಳಿಗೆ ಇಟ್ಟ ತಿಲಾಂಜಲಿಯಾಗಿದೆ. ಇಂತಹ ಅನ್ಯಾಯಗಳ ಬಗ್ಗೆ ಆಡಳಿತ, ವಿಪಕ್ಷಗಳವರು ಗಮನಹರಿಸುತ್ತಿಲ್ಲವೇಕೆ ಎಂಬುದು ಸಹ ಪ್ರಶ್ನಾರ್ಹವಾಗಿದೆ.

      ವಿವಿ ನೇಮಕ ಪದ್ದತಿಗಳಿಗೆ ತೀಲಾಂಜಲಿಯಿಟ್ಟು ಆಗುತ್ತಿರುವ ಇಂತಹ ನೇಮಕಗಳು ರಾಜಕೀಯ ಪ್ರೇರಿತವೆಂಬುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ತುಮಕೂರು ಜಿಲ್ಲೆಗೆ ಅನ್ಯಾಯವಾಗುತ್ತಿರುವುದು ಇದೇ ಮೊದಲಲ್ಲ. ಜಿಲ್ಲೆಯ ಸಂಕೇತವಾಗಿದ್ದ ವಿವಿ ಲಾಂಛನವನ್ನೇ ಹಿಂದೆ ಬದಲಾವಣೆ ಮಾಡಲಾಯಿತು. ನಂತರದಲ್ಲಿ ಹೋರಾಟ ಮಾಡಿ ಹಳೆ ಲಾಂಛನ ಮತ್ತೆ ಮರು ಸ್ಥಾಪಿಸಬೇಕಾಯಿತು. ಇದೀಗ ಆಕಾಡೆಮಿಕ್ ಕೌನ್ಸಿಲ್‍ಗೂ ರಾಜಕೀಯ ಒತ್ತಡದ ನೇಮಕಗಳು ಮಾಡಲಾಗುತ್ತಿರುವುದು ವಿವಿ ಬೆಳವಣಿಗೆಯ ದೃಷ್ಟಿಯಿಂದ ಒಳ್ಳೆಯದಲ್ಲ. ವಿವಿಯ ಸಂಸ್ಥಾಪಕ ಕುಲಪತಿಯಾದ ನನಗೆ ಮಾ.5ರಂದು ನಡೆದ ಘಟಿಕೋತ್ಸವಕ್ಕೆ ಕನಿಷ್ಠ ಆಹ್ವಾನ ಪತ್ರಿಕೆಯನ್ನು ಕಳುಹಿಸಿಲ್ಲವೆಂದರೆ ವಿವಿ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ವೇದ್ಯವಾಗುತ್ತದೆ.

-ಪ್ರೊ.ಓ ಅನಂತರಾಮಯ್ಯ ಸಂಸ್ಥಾಪಕ ಕುಲಪತಿ, ತುಮಕೂರು ವಿವಿ.

Recent Articles

spot_img

Related Stories

Share via
Copy link