ಲಸಿಕೆಗಾಗಿ ನಾಳೆ ಬಾ, ನಾಳೆ ಬಾ.., ತಪ್ಪುವುದೆಂದು?

ತುಮಕೂರು : 

      ಕೋವಿಡ್ ನಿಯಂತ್ರಣಕ್ಕೆ ಲಸಿಕೆಯೊಂದೇ ಪರಿಹಾರ, ಎಲ್ಲರೂ ಕಡ್ಡಾಯ ವ್ಯಾಕ್ಸಿನ್ ಪಡೆದುಕೊಳ್ಳಿ ಎಂದು ಪ್ರಚಾರ ಮಾಡುತ್ತಿರುವ ಸರಕಾರ ಲಸಿಕಾ ವಿತರಣಾ ವ್ಯವಸ್ಥೆಯಲ್ಲಿ ಮಾತ್ರ ದಿನವಹಿ ಸಮಾನ ಸ್ಥಿತಿ ಕಾಯ್ದುಕೊಳ್ಳದಿರುವುದು ಕೋವಿಡ್ ಲಸಿಕಾ ಅಭಿಯಾನಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ.

      ಲಸಿಕೆ ಇಂದು ಸಿಗುತ್ತದೋ ಇಲ್ಲವೋ ಎಂಬ ಅನುಮಾನದ ನಡುವೆಯೇ ವ್ಯಾಕ್ಸಿನ್ ಕೇಂದ್ರಗಳಿಗೆ ಎಡತಾಕುತ್ತಿರುವ 18 ವರ್ಷ ಮೇಲ್ಪಟ್ಟ ಯುವಜನರು, ವಯಸ್ಕರು, ಮಹಿಳೆಯರು, 2ನೇ ಡೋಜ್ ಪಡೆಯಬೇಕಾದವರು, ಲಸಿಕಾ ಕೇಂದ್ರಕ್ಕೆ ನಿತ್ಯ ಎಡತಾಕುತ್ತಾ ಸಿಕ್ಕರೆ ಅದೃಷ್ಟವೆಂಬಂತೆ ಹಾಕಿಸಿಕೊಳ್ಳುವ ಸ್ಥಿತಿ ತಲುಪಿದ್ದಾರೆ. ಮೊದಲ ಡೋಜ್ ಪಡೆದು ಎರಡನೇ ಡೋಜ್ ಲಸಿಕೆ ಪಡೆಯಬೇಕಾದವರು ಸಹ ತಮಗೆ ನಿಗದಿತ ದಿನದಂದು ಲಸಿಕೆ ದೊರೆಯದಿರುವುದಕ್ಕೆ ಅಸಮಾಧಾನ ಹೊರಹಾಕುತ್ತಿದ್ದಾರೆ.

      ವ್ಯಾಕ್ಸಿನ್ ಕೇಂದ್ರಕ್ಕೆ ತೆರಳಿದ ಮೇಲೆ ಈ ದಿನ ಲಸಿಕೆ ಲಭ್ಯವಿಲ್ಲ ಎನ್ನುವ ಅಂಶ ಜನರಿಗೆ ತಿಳಿಯುತ್ತಿದ್ದು, ಸಿಬ್ಬಂದಿಗೂ ಸಹ ಮುಂಚೆಯೇ ಮಾಹಿತಿ ಅಲಭ್ಯವಾಗಿದೆ. ಲಸಿಕೆಗಾಗಿ ನಾಳೆ ಬಾ, ನಾಳೆ ಬಾ ಎನ್ನುವ ಸಿದ್ಧ ಉತ್ತರ ವ್ಯಾಕ್ಸಿನ್ ಸೆಂಟರ್‍ಗಳಲ್ಲಿ ಲಭ್ಯವಾಗುತ್ತಿದ್ದು, ಮೂರ್ನಾಲ್ಕು ದಿನ ಅಲೆದಾಡಿ ರೋಸಿ ಹೋದವರು ಈ ಅಲೆದಾಟ ಸಾಕಪ್ಪ ಲಸಿಕೆಯೂ ಬೇಡ, ಯಾವುದು ಬೇಡ ಎನ್ನುವ ಮನೋಸ್ಥಿತಿಗೆ ಜಾರುತ್ತಿದ್ದಾರೆ. ಕೋವಿಡ್ ಕಾಲಘಟ್ಟದಲ್ಲಿ ಓಡಾಡುವುದೇ ದುಸ್ತರವೆನಿಸಿದೆ. ಇಂತಹ ಸಂದರ್ಭದಲ್ಲಿ ದುಬಾರಿ ತೈಲಬೆಲೆÉ ತೆತ್ತು ಲಸಿಕೆಗಾಗಿ ಐದಾರು ಬಾರಿ ವ್ಯಾಕ್ಸಿನ್ ಸೆಂಟರ್‍ಗಳಿಗೆ ವಾಹನದಲ್ಲಿ ಅಲೆದಾಡುವ ಪ್ರಮೇಯ ಉದ್ಬವವಾಗಿದೆ ಎಂಬುದು ತುಮಕೂರು ನಗರದ ಎಂಪ್ರೆಸ್ ವ್ಯಾಕ್ಸಿನ್ ಸೆಂಟರ್‍ಗೆ ಶನಿವಾರ ಮೊದಲ ಡೋಜ್ ಲಸಿಕೆ ಹಾಕಿಸಿಕೊಳ್ಳಲು ಬಂದು ಲಸಿಕೆ ಸಿಗದೆ ಅಸಮಾಧಾನಗೊಂಡವರ ಮಾತು.

     ದುಡ್ಡುಕೊಟ್ರೆ ಲಸಿಕೆ ಹಾಕ್ತಾರ ಹೇಳಿ:

      ಸಮರ್ಪಕವಾಗಿ ಲಸಿಕೆ ಲಭ್ಯವಾಗದೆ ಕಂಗೆಟ್ಟಿರುವ ಜನರು ವ್ಯಾಕ್ಸಿನ್ ಹಾಕಲು ದುಡ್ಡು ಏನಾದ್ರೂ ಇದ್ರೆ ಹೇಳಿ ಎಂದು ತಮಗೆ ಪರಿಚಯಸ್ಥ ಅಧಿಕಾರಿಗಳು, ರಾಜಕೀಯ ಮುಖಂಡರು, ಆರೋಗ್ಯ ಇಲಾಖೆ ಸಿಬ್ಬಂದಿಯನ್ನೇ ಕೇಳುತ್ತಿರುವುದು ಕಂಡುಬಂದಿದೆ.

      ಸಾರ್ವಜನಿಕರ ಸಿಟ್ಟಿಗೆ ಗುರಿಯಾಗುತ್ತಿದ್ದಾರೆ ಸಿಬ್ಬಂದಿ :

    ಪ್ರಸ್ತುತ ಜಿಲ್ಲೆಗೆ ಎರಡು-ಮೂರು ದಿನಕ್ಕೊಮ್ಮೆ ಲಸಿಕೆ ಪೂರೈಕೆಯಾಗುತ್ತಿದ್ದು, ಲಸಿಕೆ ಬಂದ ದಿನವೇ ವ್ಯಾಕ್ಸಿನ್ ಸೆಂಟರ್‍ಗಳಿಗೆ ಹಂಚಿಕೆ ಮಾಡಿ ಹೆಚ್ಚು ಬಾಕಿ ಉಳಿಯದಂತೆ ವ್ಯಾಕ್ಸಿನ್ ಹಾಕಲಾಗುತ್ತಿದೆ. ಆದರೆ ಎಷ್ಟೋ ಜನರಿಗೆ ಈ ಮಾಹಿತಿ ತಲುಪದೇ ನಾಳೆ ಹಾಕಿಸಿಕೊಳ್ಳೋಣವೆಂದು ಆದಿನ ಬಿಟ್ಟು ಮರುದಿನ ಹೋದರೆ ನಿನ್ನೆ ಬರಬೇಕಿತ್ತು. ಇನ್ನೂ ಸ್ಟಾಕ್ ಬಂದಿಲ್ಲ ಎಂಬ ಉತ್ತರ ಕೇಳಿ ಜನರು ಸಿಡಿಮಿಡಿಗೊಳ್ಳುತ್ತಿದ್ದಾರೆ. ಸರಕಾರದ ವಿರುದ್ಧದ ಆಕ್ರೋಶವನ್ನು ಸಿಬ್ಬಂದಿ ಎದುರು ಲಸಿಕೆ ಸಿಗದವರು ಪ್ರದರ್ಶಿಸುತ್ತಿದ್ದು, ಅಪ್ಪ-ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು ಎಂಬಂತಾಗಿದೆ ನಮ್ಮ ಸ್ಥಿತಿ ಎನ್ನುತ್ತಾರೆ ವ್ಯಾಕ್ಸಿನ್ ಸೆಂಟರ್ ಸಿಬ್ಬಂದಿ.

ಖಾಸಗಿ ಖರೀದಿಗೆ ಸಿಗುತ್ತಿದೆ ಸರಕಾರಕ್ಕೆ ಸಿಗುತ್ತಿಲ್ಲವೇ?:

      ಮಲ್ಲೇಶ್ವರಂ, ದಾವಣಗೆರೆ ವಿಧಾನಸಭಾ ಕ್ಷೇತ್ರ ಸೇರಿ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಕ್ಷೇತ್ರದ ಶಾಸಕರೇ ದಾನಿಗಳು, ವೈಯಕ್ತಿಕವಾಗಿ ಲಸಿಕೆಯನ್ನು ಖರೀದಿಸಿ ಶಾಸಕರಿಗೆ ವಿತರಿಸುವ ಕಾರ್ಯ ಮಾಡುತ್ತಿದ್ದು, ರಿಲಯನ್ಸ್‍ನಂತಹ ದೊಡ್ಡ ಉದ್ಯಮಸಂಸ್ಥೆಗಳು ತಾವೇ ಲಸಿಕೆ ಖರೀದಿಸಿ ತಮ್ಮ ಸಿಬ್ಬಂದಿಗೆ ವಿತರಿಸುವ ಕಾರ್ಯ ಮಾಡುತ್ತಿವೆ. ಇದನ್ನು ನೋಡಿದ ಜನಸಾಮಾನ್ಯರು ಶಾಸಕರಿಗೆ ಖಾಸಗಿ ಖರೀದಿಗೆ ಸಿಗುತ್ತಿದೆ ಸರಕಾರಕ್ಕೆ ಸಿಗುತ್ತಿಲ್ಲವೇ ಎಂದು ಪ್ರಶ್ನಿಸುವಂತೆ ಮಾಡಿದೆ. ಅಲ್ಲದೇ ಆ ಕ್ಷೇತ್ರದಶಾಸಕ, ಸಂಸದರಿಗೆ ಅವರ ಜನರ ಬಗ್ಗೆ ಎಷ್ಟು ಕಾಳಜಿ ಇದೆ ನೋಡಿ, ಅವರೇ ಲಸಿಕೆ ಖರೀದಿಸಿ ನೀಡುತ್ತಿದ್ದಾರೆ, ನಮ್ಮವರು ಈ ಕೆಲಸ ಮಾಡಬಹುದಲ್ಲವೇ ಎಂದು ತುಲನೆ ಮಾಡಿ ಟೀಕಿಸುವ ಸನ್ನಿವೇಶ ತಂದೊಡ್ಡಿದೆ.

ನಿಂತಲ್ಲೇ ನಿಂತಿದೆ ಲಸಿಕೆ ಅಭಿಯಾನ: ಸಿದ್ದರಾಮಯ್ಯ 

      ಕೊರೊನಾದಿಂದ ಪಾರಾಗಲು ಲಸಿಕೆ ಹಾಕಿಸಿಕೊಳ್ಳುವುದೊಂದೇ ಮಾರ್ಗ. ಆದರೆ, ಲಸಿಕೆ ನೀಡುವ ಕಾರ್ಯ ಮಂದಗತಿಯಲ್ಲಿ ಸಾಗುತ್ತಿದೆ. ಡಿಸೆಂಬರ್ ವೇಳೆಗೆ ಎಲ್ಲರಿಗೂ ಲಸಿಕೆ ನೀಡುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಕೆಲ ಜಿಲ್ಲೆಗಳಲ್ಲಿ ಲಸಿಕೆ ಸಿಗದೆ ಜನ ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಆರಂಭಿಸಿದ ಲಸಿಕೆ ಅಭಿಯಾನ ನಿಂತಲ್ಲೇ ಇದೆ. ಆದರೆ, ನಮ್ಮ ಪಕ್ಷದ ಹಲವಾರು ಶಾಸಕರು ಜನರಿಗೆ ಉಚಿತವಾಗಿ ಲಸಿಕೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಮೂರನೇ ಹಂತವೇ ಬರಲಿ ಅಥವಾ ಡೆಲ್ಟಾ ಪ್ಲಸ್ ವೈರಾಣು ಎದುರಾಗಲಿ. ಎಲ್ಲದಕ್ಕೂ ಲಸಿಕೆಯೊಂದೇ ಪರಿಹಾರ, ಮೈಮರೆಯುವುದು ಬೇಡ ಎಂದು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಎಲ್ಲಾ ದಿನವೂ ನಿಗದಿತ ಸಂಖ್ಯೆಯಲ್ಲಿ ಲಸಿಕೆ ಹಾಕುವುದು ಉತ್ತಮ :

      ಲಸಿಕೆ ಬಂದ ದಿನವೇ ಪೂರೈಕೆಯಾದ ಅಷ್ಟು ಲಸಿಕೆಯನ್ನು ಹಾಕಿ ಮರು ದಿನ ಲಸಿಕೆ ಲಭ್ಯವಿಲ್ಲ ಎಂದು ಜನರನ್ನು ವಾಪಸ್ ಕಳುಹಿಸದೆ ಪ್ರತೀ ವ್ಯಾಕ್ಸಿನ್ ಸೆಂಟರ್‍ನಲ್ಲಿ ಒಂದು ದಿನಕ್ಕೆ ನಿರ್ಧಿಷ್ಟ ಪ್ರಮಾಣದ ಲಸಿಕೆ ಹಾಕುವುದನ್ನು ನಿಗದಿ ಮಾಡಿ ಹಾಕುವ ಕ್ರಮ ಆಗಬೇಕಿದೆ. ತುಮಕೂರು ಜಿಲ್ಲೆಯ ಅಂಕಿ-ಅಂಶವನ್ನೇ ಉದಾಹರಿಸುವುದಾದರೆ ಜೂ.21ರಂದು 51,719 ಮಂದಿಗೆ ಒಂದೇ ದಿನ ಲಸಿಕೆ ಹಾಕಲಾಯಿತು.ಮರು ದಿನ 3638 ಮಂದಿಗೆ ಲಸಿಕೆ ಹಾಕಲಾಯಿತು. ಇದೇ ರೀತಿ ಜೂ.25ರಂದು 20 ಸಾವಿರಕ್ಕೂ ಅಧಿಕಮಂದಿಗೆ ಜಿಲ್ಲೆಯಲ್ಲಿ ಲಸಿಕೆ ಹಾಕಿದ್ದು, ಜೂ.26ರಂದು 862 ಮಂದಿಗೆ ಮಾತ್ರ ಲಸಿಕೆ ಹಾಕಲಾಗಿದೆ. ರಾಜ್ಯದ ಇತರೆಡೆಯೂ ಇದೇ ರೀತಿ ದಿನದಿಂದ ದಿನಕ್ಕೆ ಲಸಿಕೆ ವಿತರಣೆಯಲ್ಲಿ ಭಾರೀ ಇರಿಳಿಕೆಯಿದ್ದು, ಹೋಬಳಿ ಗ್ರಾಮ ಕೇಂದ್ರಗಳಿಗೆ ಲಸಿಕೆಯೇ ತಲುಪುತ್ತಿಲ್ಲ ಎಂಬ ದೂರುಗಳು ವ್ಯಾಪಕವಾಗಿವೆ. ಲಸಿಕೆ ಅಭಾವಗಳು ಕಾಳಸಂತೆಯಲ್ಲಿ ಮಾರಾಟಕ್ಕೆ ಆಸ್ಪದ ನೀಡುತ್ತಿವೆ.

ಪದವಿ ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿಗೆ ಲಸಿಕೆ :

      ವಿದ್ಯಾರ್ಥಿಗಳಿಗೆ , ಸಿಬ್ಬಂದಿಗೆ ಲಸಿಕೆ ನೀಡಿದ ಮೇಲೆಯೆ ಪದವಿ ತರಗತಿಗಳನ್ನು ಆರಂಭಿಸಬೇಕೆಂಬ ತಜ್ಞರ ಸಮಿತಿ ವರದಿ ಹಿನ್ನೆಲೆಯಲ್ಲಿ ಭಾನುವಾರದಿಂದಲೇ ಕಾಲೇಜು ವಿದ್ಯಾರ್ಥಿಗಳಿಗೂ, ಬೋಧಕ-ಬೋಧಕೇತರ ಸಿಬ್ಬಂದಿಗೂ ಲಸಿಕೆ ಹಾಕಲು ಸರಕಾರ ಮುಂದಾಗಿದ್ದು, ಜಿಲ್ಲೆಗೆ 5200 ಲಸಿಕೆ ಈ ವರ್ಗದವರಿಗಾಗಿ ಲಭ್ಯವಾಗಿದೆ. ಉಳಿದಂತೆ ಸಾರ್ವಜನಿಕರಿಗೆ ಲಸಿಕೆ ಹಾಕಲು 8000 ಡೋಸೆಜ್ ವ್ಯಾಕ್ಸಿನ್ ಬಂದಿದೆ ಎಂದು ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಕೇಶವರಾಜು ಮಾಹಿತಿ ನೀಡಿದ್ದಾರೆ.

      ಸರಕಾರದಿಂದ ಲಸಿಕೆ ಲಭ್ಯತೆ ಆಧಾರದಲ್ಲಿ ವಿತರಣೆ ಮಾಡುತ್ತಿದ್ದೇವೆ. ಯಾವುದೇ ಹೆಚ್ಚಿನ ಸ್ಟಾಕ್ ಉಳಿಸಿಕೊಳ್ಳುತ್ತಿಲ್ಲ ಜಿಲ್ಲೆಯಲ್ಲಿ ಜೂ.26ರವೇಳೆಗೆ ಮುಂಚೂಣಿ ಕಾರ್ಯಕರ್ತರು, ಜನಸಾಮಾನ್ಯರು ಸೇರಿ 8,55419 ಮಂದಿಗೆ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap