ಪ್ರಗತಿವಾಹಿನಿಯಿಂದ ವಿಧಾನಪರಿಷತ್ ನೂತನ ಸದಸ್ಯ ಚಿದಾನಂದಗೌಡ ಸಂದರ್ಶನ!

 ತುಮಕೂರು : 

      ನಿರುದ್ಯೋಗಿ ಪದವೀಧರರಿಗೆ ಕೌಶಲ ತರಬೇತಿಯೊಂದಿಗೆ ಉದ್ಯೋಗ ಕಲ್ಪಿಸಿಕೊಡಲು ಶೀಘ್ರ ಕ್ರಮ ವಹಿಸಲಾಗುವುದು ಎಂದು ವಿಧಾನಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ನೂತನ ಸದಸ್ಯ ಎಂ.ಚಿದಾನಂದಗೌಡ ತಿಳಿಸಿದರು.

     ಪ್ರಜಾಪ್ರಗತಿ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ವಿಶೇಷ ಸಂದರ್ಶನದಲ್ಲಿ ತಮ್ಮ ಮುಂದಿನ ಕಾರ್ಯತಂತ್ರಗಳನ್ನು ಹಂಚಿಕೊಂಡಅವರು ಚುನಾವಣೆ ಸಂದರ್ಭದಲ್ಲಿ ಪ್ರಣಾಳಿಕೆಯಲ್ಲಿ ಘೋಷಿಸಿದ ಹಲವು ಬೇಡಿಕೆಗಳ ಈಡೇರಿಕೆಗೆ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಕಾರ್ಯೋನ್ಮುಖವಾಗುವೆ. ಕ್ಷೇತ್ರದಲ್ಲಿ ನನಗೆ ಪ್ರಾಶಸ್ತ್ಯ ಮತ ನೀಡಿ ಆಶೀರ್ವದಿಸಿದ ಪದವೀಧರರು, ನಿರುದ್ಯೋಗಿ ಪದವೀಧರರು, ಶಿಕ್ಷಕರು, ಸರಕಾರಿ, ಖಾಸಗಿ ನೌಕರರು ಹೀಗೆ ಎಲ್ಲಾ ವರ್ಗದವರ ಹಿತ ಕಾಯುವುದು ನನ್ನ ಜವಾಬ್ದಾರಿಯಾಗಿದೆ. ಅವರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಇನ್ನೂ ಹದಿನೈದು ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದರು.

 ಸಂಘಟನಾತ್ಮಕ ಹೋರಾಟದ ಕ್ಷೇತ್ರದಲ್ಲಿ ಬಿಜೆಪಿ ಗೆಲುವು :

      ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಸಂಘಟನಾತ್ಮಕ ಹೋರಾಟದಿಂದ ಈ ಗೆಲುವು ಸಾಧ್ಯವಾಗಿದೆ. ಬಿಜೆಪಿ ಅವಿಭಕ್ತ ಕುಟುಂಬವಿದ್ದಂತೆ. ಮನೆ ಮಗನ ರೀತಿ ನನ್ನನ್ನು ನಡೆಸಿಕೊಂಡು ಟಿಕೆಟ್ ನೀಡಿ ಗೆಲ್ಲಿಸಿಕೊಂಡಿದ್ದಾರೆ. ತಳಮಟ್ಟದಿಂದ ಕಾರ್ಯಕರ್ತರಿಂದ ಹಿಡಿದು ಸಿಎಂ, ರಾಜ್ಯಾಧ್ಯಕ್ಷರವರೆಗೆ ಶಾಸಕರು, ಜಿಲ್ಲಾಧ್ಯಕ್ಷರು, ವಿವಿಧ ಹಂತದ ಪ್ರತಿನಿಧಿಗಳು, ಪಕ್ಷದ ಮುಖಂಡರು ಎಲ್ಲರೂ ತಮಗೆ ವಹಿಸಿದ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸಿದ್ದು, ಅಭ್ಯರ್ಥಿಯೇ ತಾನೆಂದು ಕೆಲಸ ಮಾಡಿದ್ದಾರೆ. ಇದರೊಂದಿಗೆ ಕ್ಷೇತ್ರದ ಪದವೀಧರರು ಶಿಕ್ಷಕರು ತಮಗೆ ಯೋಗ್ಯ ಪ್ರತಿನಿಧಿಯಾಗಬಲ್ಲ ಎಂಬ ಭರವಸೆಯಿಂದ ಮತ ನೀಡಿ ಆಶೀರ್ವದಿಸಿದ್ದು, ನನ್ನ 30 ವರ್ಷದಿಂದ ಶೈಕ್ಷಣಿಕ ಅನುಭವವೂ ಗೆಲುವಿಗೆ ಪೂರಕವಾಯಿತು.

ಹಳೇ ಪಿಂಚಣಿ ವ್ಯವಸ್ಥೆ ಮರುಸ್ಥಾಪನೆಗೆ ಯತ್ನಿಸುವೆ 

     ಸರಕಾರಿ ನೌಕರರು, ಶಿಕ್ಷಕ ವರ್ಗದವರಿಗೆ ಹಳೇ ಪಿಂಚಣಿ ವ್ಯವಸ್ಥೆ ಮರುಜಾರಿಯಾಗಬೇಕೆಂಬ ಬಗ್ಗೆ ಬಹಳದೊಡ್ಡ ಹೋರಾಟ ನಡೆದಿದೆ. ಸರಕಾರಕ್ಕೆ, ಮುಖ್ಯಮಂತ್ರಿಗಳಿಗೆ ಅದರ ಅರಿವಿದೆ. ಈ ನಿಟ್ಟಿನಲ್ಲಿ ಪರಿಷತ್ ಪ್ರತಿನಿಧಿಯಾಗಿ ಹಳೇ ಪಿಂಚಣಿ ವ್ಯವಸ್ಥೆ ಮರು ಜಾರಿಗೆ ಪ್ರಬಲ ಯತ್ನ ಹಾಕುವೆ.

ಅತಿಥಿ ಉಪನ್ಯಾಸಕರ ನೇಮಕಾತಿಗೂ ಶೀಘ್ರ ಕ್ರಮ

      ಅತಿಥಿ ಉಪನ್ಯಾಸಕರ ಬಾಕಿ ವೇತನ ಬಿಡುಗಡೆ ಸಮಸ್ಯೆ ಬಗೆಹರಿದಿದ್ದು, ಕೋವಿಡ್, ಚುನಾವಣೆ ನೀತಿ ಸಂಹಿತೆ ಕಾರಣ ಶಾಲಾ-ಕಾಲೇಜು ತೆರೆಯದೇ ಈ ಶೈಕ್ಷಣಿಕ ಸಾಲಿಗೆ ಮರು ನಿಯೋಜನೆ ಪ್ರಕ್ರಿಯೆಯಲ್ಲಿ ವಿಳಂಬವಾಗಿತ್ತು. ಶೀಘ್ರ ಕಾಲೇಜುಗಳು ತೆರೆಯಲಿದ್ದು, ಅತಿಥಿ ಉಪನ್ಯಾಸಕರಿಗೆ ಕೆಲಸ ದೊರೆಯಲಿದೆ. ಅಂತೆಯೇ ವಯೋಮಿತಿ ಮೀರುತ್ತಿರುವ ಉಪನ್ಯಾಸಕರ ನೇಮಕಾತಿಗೂ ಶೀಘ್ರ ಕ್ರಮವಾಗಲಿದ್ದು, ಈ ಸಂಬಂಧ ಈಗಾಗಲೇ ಉಪಮುಖ್ಯಮಂತ್ರಿಗಳೂ ಆದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರೊಡನೆ ಚರ್ಚಿಸಿರುವೆ.

ಐದು ಜಿಲ್ಲೆಗಳಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಒತ್ತು 

      ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಪ್ರಕ್ರಿಯೆ ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಆರಂಭಗೊಂಡಿದ್ದು, ತುಮಕೂರಿನಲ್ಲಿ ಕಾರ್ಯಾರಂಭಗೊಳ್ಳದಿರುವ ವೈದ್ಯಕೀಯ ಕಾಲೇಜನ್ನು ಆರಂಭಿಸುವ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರ ಜೊತೆಯಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು. ಚಿತ್ರದುರ್ಗದಲ್ಲಿ ಕಾಲೇಜಿಗೆ ಗುರುವಾರವಷ್ಟೇ ಮಂಜೂರಾತಿ ದೊರೆತಿದ್ದು, ಕ್ಷೇತ್ರ ವ್ಯಾಪ್ತಿಯ ಐದು ಜಿಲ್ಲೆಗಳಲ್ಲಿ ಕಾಲೇಜು ಸ್ಥಾಪನೆಗೆ ಒತ್ತು ನೀಡಲಾಗುವುದು.

ವಿವಿ ಪದವಿಗಳು ಸ್ವಾವಲಂಬಿ ಜೀವನಕ್ಕೆ ಪೂರಕವಾಗಿಲ್ಲ

     ಸದ್ಯ ವಿವಿಗಳಲ್ಲಿ ದೊರೆಯುತ್ತಿರುವ ಪದವಿ ಶಿಕ್ಷಣ ಸ್ವಾವಲಂಬಿ ಜೀವನಕ್ಕೆ ಪೂರಕವಾಗಿಲ್ಲ ಎಂದ ಚಿದಾನಂದಗೌಡ ಅವರು ಈ ಕೊರತೆಯನ್ನು ನೀಗಿಸಲು ಕೇಂದ್ರದ ನೂತನ ಶಿಕ್ಷಣ ನೀತಿ ಪೂರಕವಾಗಿದ್ದು, ವೃತ್ತಿಗೆ ಪೂರಕವಾದ ಅರ್ಹತೆಯನ್ನು ಗಳಿಸಿಕೊಡುವುದು ಇಂದಿನ ಶಿಕ್ಷಣದ ಆದ್ಯತೆಯಾಗಬೇಕಿದೆ. ಈ ನಿಟ್ಟಿನಲ್ಲಿ ಏನು ಮಾಡಬೇಕೆಂಬುದನ್ನು ಕಾರ್ಯಯೋಜನೆ ತಯಾರಿಸಿ ಸಂಬಂಧಪಟ್ಟ ಸಚಿವರಗಳನ್ನು ಭೇಟಿ ಮಾಡಿ ಅನುಷ್ಟಾನಕ್ಕೆ ಕ್ರಮವಹಿಸುವುದಾಗಿ ತಿಳಿಸಿದರು.

ಆನ್‍ಲೈನ್ ಶಿಕ್ಷಣ ಪರಿಹಾರವಲ್ಲ, ತಾತ್ಕಾಲಿಕವಷ್ಟೇ

      ವಿವಿಮಟ್ಟದಲ್ಲಿ ಪಿಯುಸಿ ಡಿಗ್ರಿ ಹಂತದಲ್ಲಿ ಆನ್‍ಲೈನ್ ಆಫ್‍ಲೈನ್ ಯಾವುದಾದರೂ ತರಗತಿ ಮಾಡಬಹುದು. ಆದರೆ ಪ್ರಾಥಮಿಕ, ಮಾಧ್ಯಮಿಕ ಶಾಲಾ ಹಂತದಲ್ಲಿ ಆನ್‍ಲೈನ್‍ನಿಂದ ಪರಿಪೂರ್ಣ ಶಿಕ್ಷಣ ಆಗೋಲ್ಲ. ‘ಸಮ್‍ಥಿಂಗ್ ಇಸ್ ಬೆಟರ್‍ದೆನ್ ನಥಿಂಗ್’ ಎನ್ನುವ ಮಾತಿನಂತೆ ಆನ್‍ಲೈನ್ ಶಿಕ್ಷಣ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆ ಪರಿಚಯಿಸಿದೆ. ಆದರೆ ಇದು ತಾತ್ಕಾಲಿಕವಷ್ಟೇ. ಕೋವಿಡ್ ಕಡಿಮೆಯಾಗುತ್ತಿದ್ದು, ಶಾಲಾ ಮಕ್ಕಳನ್ನು ಮುಖ್ಯವಾಹಿನಿಯಲ್ಲೇ ಕರೆತಂದು ಶಿಕ್ಷಣ ಕೊಡಲು ಸರಕಾರವೂ ಉತ್ಸುಕವಾಗಿದೆ. ಇನ್ನೂ ಕೋವಿಡ್ ಕಾರಣಕ್ಕೆ ಶಿಕ್ಷಕರಾದಿಯಾಗಿ, ಪದವೀಧರರು ನೌಕರರು ಹಲವರು ಮೃತಪಟ್ಟಿದ್ದು, ಅವರೆಲ್ಲರ ಬಗ್ಗೆ ಸರಕಾರಕ್ಕೆ ಕಾಳಜಿ ಇದ್ದು, ಯೋಜನೆಗಳನ್ನು ಘೋಷಿಸಿದೆ.

ಸರಕಾರಿ ಶಾಲೆಗಳನ್ನು ಪಂಚಾಯಿತಿ ಕೇಂದ್ರಕ್ಕೆ ತರಲು ಯತ್ನ

      ವಿದ್ಯಾರ್ಥಿಗಳ ಕೊರತೆಯಿಂದ ಆತಂಕದ ಸ್ಥಿತಿ ಎದುರಿಸುತ್ತಿರುವ ಸರಕಾರಿ ಶಾಲೆಗಳ ಬಲವರ್ದನೆಗೆ ಗ್ರಾಮಪಂಚಾಯ್ತಿ ಕೇಂದ್ರ ಸ್ಥಾನಕ್ಕೆ ಸರಕಾರಿ ಶಾಲೆಗಳನ್ನು ತಂದು ಅಭಿವೃದ್ಧಿಪಡಿಸಬೇಕೆಂಬ ಇರಾದೆ ಇದೆ. 6ನೇ ತರಗತಿಯಿಂದ 12ನೇ ತರಗತಿಯವರೆಗೆ ಒಂದೇ ಸೂರಿನಡಿ ಶಾಲೆ ಆರಂಭವಾದರೆ ಬಹಳಷ್ಟು ಅನುಕೂಲವಾಗಲಿದೆ. ಎಲ್‍ಕೆಜಿಯಿಂದ 5ನೇತರಗತಿಯವರೆಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬುದು ನೂತನ ಶಿಕ್ಷಣ ನೀತಿ ನಿಯಮವಾಗಿದ್ದು, ಅದಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಶೀಘ್ರದಲ್ಲೇ ತುಮಕೂರು ವಿವಿ ಕ್ಯಾಂಪಸ್ ಪೂರ್ಣಕ್ಕೂ ಗಮನಹರಿಸುವೆ.

-ಸಂದರ್ಶನ: ಎಸ್. ಹರೀಶ್‍ಆಚಾರ್ಯ.


7,126 ಮತಗಳ ಅಂತರದ ದಾಖಲೆ ಗೆಲುವು

     ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ. ಗೌಡ ಅವರು 7,126 ಅಂತರದ ಮುನ್ನಡೆ ಪಡೆದುಕೊಂದು ಗೆಲುವು ದಾಖಲಿಸಿದ್ದು ಗಮನಾರ್ಹವೆನಿಸಿದೆ.

     ತ್ರೀವ್ರ ಹಣಾಹಣಿಯ ನಡುವೆಯೂ ಪ್ರಥಮ ಪ್ರಾಶಸ್ತ್ಯ ಎಣಿಕೆಯಲ್ಲೇ 24217 ಮತ ಪಡೆದು 5971 ಅಂತರದ ಮುನ್ನಡೆ ಸಾಧಿಸಿದ್ದ ಅವರು ಎರಡನೇ ಪ್ರಾಶಸ್ತ್ಯದ ಮತ ಎಣಿಕೆಯ ನಂತರ ಮತ್ತೆ 1,155 ಮತಗಳ ಮುನ್ನಡೆ ಪಡೆದು ಒಟ್ಟಯು 7,126 ಅಂತರದೊಂದಿಗೆ ವಿಜಯಿಯಾಗಿದ್ದು, ದಾಖಲೆಯೆನಿಸಿದೆ. ಇವರಿಗೆ ಲಭ್ಯವಾಗಿದ್ದ ಪ್ರಥಮ ಪ್ರಾಶಸ್ತ್ಯ ಮತಗಳಲ್ಲೇ ಮೂರು ಸಾವಿರಕ್ಕೂ ಅಧಿಕ ಮತಗಳು ತಿರಸ್ಕೃತವಾಗಿದ್ದು, ಅವು ಸರಿಯಾಗಿ ಚಲಾವಣೆಯಾಗಿದ್ದಾರೆ. ದಾಖಲೆಯ ಅಂತರ ಹತ್ತುಸಾವಿರ ದಾಟುತ್ತಿತ್ತು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link