ತುಮಕೂರು : ವ್ಹೀಲಿಂಗ್ ಪ್ರಶ್ನಿಸಿದ್ದಕ್ಕೆ ವಾಹನ ಅಡ್ಡಗಟ್ಟಿ ಹಲ್ಲೆ!!

 ತುಮಕೂರು : 

      ವ್ಹೀಲಿಂಗ್ ಮಾಡಿಕೊಂಡು ಬೈಕ್‍ನಲ್ಲಿ ಬರುತ್ತಿದ್ದವರನ್ನು ಪ್ರಶ್ನಿಸಿದ್ದಕ್ಕೆ ಕಾರು ಅಡ್ಡಗಟ್ಟಿ ಹಲ್ಲೆ ನಡೆಸಿರುವ ಘಟನೆ ನಗರದ ಗುಬ್ಬಿ ಗೇಟ್ ಬಳಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಕೂಡಲೆ ಬಂಧಿಸಿ ಕ್ರಮ ಜರುಗಿಸುವಂತೆ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

      ಭೀಮಸಂದ್ರ ಕಡೆಯಿಂದ ಭಜರಂಗದಳದ ಮಂಜು ಭಾರ್ಗವ್ ಹಾಗೂ ಕಿರಣ್ ಎಂಬುವವರು ಗುಬ್ಬಿ ಗೇಟ್ ಬಳಿ ಬರುತ್ತಿದ್ದಾಗ ದ್ವಿಚಕ್ರ ವಾಹನಗಳಲ್ಲಿ ಕೆಲವರು ವ್ಹೀಲಿಂಗ್ ಮಾಡಿಕೊಂಡು ಬರುತ್ತಿದ್ದರು ಎಂದು ಹೇಳಲಾಗಿದೆ. ದಾರಿಯಲ್ಲಿ ಈ ರೀತಿ ಬರುತ್ತಿರುವುದನ್ನು ಪ್ರಶ್ನಿಸಿದ ಮಂಜು ಭಾರ್ಗವ್ ಮತ್ತು ಕಿರಣ್ ಅವರುಗಳಿದ್ದ ವಾಹನ ತಡೆಗಟ್ಟಿ ಹಲ್ಲೆ ನಡೆಸಿದ್ದಾರೆಂದು ತಿಳಿದುಬಂದಿದೆ. ಐದಾರು ಮಂದಿ ಕಾರು ಅಡ್ಡಗಟ್ಟಿ ರಾಡ್‍ನಿಂದ ಹಲ್ಲೆ ನಡೆಸಿದ್ದಾರೆಂದು ಕಿರಣ್ ದೂರಿದ್ದು, ಮಂಜು ಭಾರ್ಗವ್ ಅವರಿಗೆ ತೀವ್ರ ಹಲ್ಲೆಯಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

      ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಭಜರಂಗ ದಳದ ಮುಖಂಡರಾದ ಬಸವರಾಜು, ಮತ್ತಿತರರು ಕೆಲ ಕಾಲ ಪ್ರತಿಭಟನೆಗೆ ಇಳಿದರು. ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪುರ ವಾಡ್, ಶಾಸಕರಾದ ಜಿ.ಬಿ.ಜ್ಯೋತಿ ಗಣೇಶ್ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಜ್ಯೋತಿಗಣೇಶ್ ಅವರು, ಮಂಜು ಭಾರ್ಗವ್ ಮತ್ತು ಕಿರಣ್ ಅವರ ಮೇಲೆ ಹಲ್ಲೆಯಾಗಿದೆ. ನನ್ನ ಜೊತೆ ಇಲ್ಲಿಗೆ ಎಸ್‍ಪಿ ಅವರು ಸಹ ಆಗಮಿಸಿದ್ದಾರೆ. ಘಟನೆಗೆ ಕಾರಣಕರ್ತರಾದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಪೋಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇಂತಹ ಘಟನೆಗಳು ನಡೆಯಬಾರದು. ಹಲ್ಲೆ ಮಾಡಿರುವ ಆರೋಪಿಗಳ ವಿರುದ್ಧ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಭಜರಂಗ ದಳ ಮುಖಂಡರು ಮಾತನಾಡಿ, ಉದ್ದೇಶಪೂರಿತ ಹಲ್ಲೆ ಇದಾಗಿದ್ದು, ಪೋಲೀಸರು 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ಸಂಸದ ಜಿ.ಎಸ್.ಬಸವರಾಜು ಅವರು, ತೀವ್ರ ತರವಾಗಿ ಹಲ್ಲೆ ಮಾಡಿರುವ ಈ ಕೃತ್ಯ ಖಂಡನೀಯ. ಇಂತಹ ಅಹಿತಕರ ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕು. ಪುಂಡಾಟಗಳ ವಿರುದ್ಧ ಪೋಲೀಸರು ಎಚ್ಚರಿಕೆ ವಹಿಸಬೇಕು. ಇಂತಹ ಘಟನೆಗಳು ನಡೆದಾಗ ಆರೋಪಿಗಳ ವಿರುದ್ಧ ಕ್ರಮಕ್ಕಾಗಿ ಪೋಲೀಸರಿಗೆ ಮಾಹಿತಿ ನೀಡಬೇಕು ಎಂದ ಅವರು, ಶಾಂತಿಯ ಪ್ರದೇಶವಾಗಿರುವ ತುಮಕೂರಿನಲ್ಲಿ ಒಗ್ಗಟ್ಟಾಗಿ ಹೋಗಲು ಪ್ರತಿಯೊಬ್ಬರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap