ತುಮುಲ್ ಚುನಾವಣೆಯ ಭರಾಟೆ : ಎಲ್ಲಾ ಚುನಾವಣೆಯನ್ನು ನಾಚಿಸುವಂತಹ ಬಿರುಸು…

ಕೊರಟಗೆರೆ :-

 ವಿಶೇಷ ವರದಿ:ರಂಗಧಾಮಯ್ಯ, ಕೊರಟಗೆರೆ

   ತುಮಕೂರು ಹಾಲು ಒಕ್ಕೂಟಕ್ಕೆ ನಡೆಯುತ್ತಿರುವ ನಿರ್ದೇಶಕರ ಚುನಾವಣೆ ಕೊರಟಗೆರೆ ತಾಲೂಕಿನಲ್ಲಿ ಬಹಳ ಬಿರುಸಿನಿಂದ ಕೂಡಿದ್ದು, ಕಾಂಗ್ರೆಸ್ ಹಾಗೂ ಎನ್ ಡಿ ಎ ಅಭ್ಯರ್ಥಿಗಳ ನಡುವೆ ರಾಜಕೀಯ ರಣತಂತ್ರ ಏರ್ಪಟ್ಟಿರುವುದು ಒಂದೆಡೆಯಾದರೆ ವಕ್ಕಲಿಗ ಅಭ್ಯರ್ಥಿಗಳ ನಡುವೆ ಜಂಗಿ ಕುಸ್ತಿ ಏರುಪಟ್ಟು, ಅಭ್ಯರ್ಥಿಗಳು ಹಗಲು ರಾತ್ರಿ ಎನ್ನದೆ ಕೊರೆಯುವ ಚಳಿ ನಡುವೆ ಬೆವರು ಇಳಿಸಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.

   ಕೊರಟಗೆರೆ ತಾಲೂಕಿನಲ್ಲಿ ಒಟ್ಟು 129 ಹಾಲು ಉತ್ಪಾದಕ ಸಹಕಾರ ಸಂಘಗಳು ಇದ್ದು, ಇದರಲ್ಲಿ121 ಸಂಘಕ್ಕೆ ಮತ ಚಲಾಯಿಸುವ ಅಧಿಕಾರ ನೀಡಲಾಗಿದ್ದು, ಈ ಹಿಂದೆ 115 ಸಂಘಗಳ ಮತ ಚಲಾವಣೆಗೆ ಅವಕಾಶ ನೀಡಲಾಗಿದ್ದಾದರೂ ಕೋರ್ಟ್ ಮೆಟ್ಟಿಲೇರಿ ಮತ್ತೆ 6 ಸಂಘಗಳಿಗೆ ಮತ ಹಾಕುವಂತ ಹಕ್ಕು ಪಡೆಯಲಾಗಿದ್ದು ಒಟ್ಟು 121 ಮತ ಚಲಾವಣೆಯಾಗಲಿದ್ದು, ರೈತರ ಪರ ಕೆಲಸ ಮಾಡಬೇಕಾಗಿರುವ ಹಾಲು ಉತ್ಪಾದಕ ಸಹಕಾರ ಸಂಘದ ಜಿಲ್ಲಾ ನಿರ್ದೇಶಕರ ಆಯ್ಕೆಗೆ ಬಹಳ ಜಿದ್ದಾಜಿದ್ದಿ ಮೂಡಿದ್ದು, ಪಕ್ಷ, ಜಾತಿ ಹಣ ತೋಳ್ಬಲ ಎಲ್ಲ ಸೇರಿ ಈ ಚುನಾವಣೆ ಎಂಪಿ, ಎಂ ಎಲ್ ಎ, ಎಂಎಲ್ಸಿ ಸೇರಿದಂತೆ ಎಲ್ಲಾ ಚುನಾವಣೆಗಳನ್ನು ನಾಚಿಸುವಂತಹ ಬಿರುಸು ಪಡೆದಿರುವುದು ಕಂಡು ಬರುತ್ತಿದೆ.

 ಜಿಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಕ್ಕೆ ಇದೇ ತಿಂಗಳು ನಾಳೆ ಅಂದರೆ ಡಿಸೆಂಬರ್ 10 ಭಾನುವಾರ ತುಮಕೂರು ಎಂಪ್ರೆಸ್ ಶಾಲೆಯ ಬಳಿ ಚುನಾವಣೆ ನಡೆಯಲಿದ್ದು, ಇಡೀ ಜಿಲ್ಲೆಯ ಹಾಲು ಉತ್ಪಾದಕ ಸಹಕಾರ ಸಂಘದ ಚುನಾವಣಾ ಕಾವು ಬಹಳಷ್ಟು ರಂಗೇರಿದ್ದು, ಪ್ರತಿ ತಾಲೂಕಿನಲ್ಲೂ ನಿರ್ದೇಶಕರ ಹುದ್ದೆಗೆ ಜಿದ್ದಾಜಿದ್ದಿ ಮೂಡಿದ್ದು, ಅದರಲ್ಲೂ ವಿಶೇಷವಾಗಿ ಕೊರಟಗೆರೆಯಲ್ಲಿ ಎಲ್ಲಾ ಚುನಾವಣೆಯನ್ನೂ ಮೀರಿಸುವಂತಹ ರಾಜಕೀಯ ತಂತ್ರಗಾರಿಕೆ ಎರಡೂ ಪಕ್ಷದಿಂದಲೂ ಕಂಡು ಬರುತ್ತಿದ್ದು, ಪಕ್ಷಗಳ ಜೊತೆಗೆ ವ್ಯಕ್ತಿಗತವಾಗಿ ಈ ಚುನಾವಣೆ ನಡೆಯುತ್ತಿದ್ದು, ವ್ಯಕ್ತಿ ಜಾತಿ, ಹಣ, ಪಕ್ಷ, ಸಂಘಟನೆಯ ಜೊತೆಯಲ್ಲಿ ಚುನಾವಣೆ ನಡೆಯುತ್ತಿದ್ದು, ಕೊರಟಗೆರೆ ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕರ ಚುನಾವಣೆ ಬಹಳ ಕುತೂಹಲ ಮೂಡಿಸಿದ್ದು, ಯಾರೋ ನಿರೀಕ್ಷೆ ಮಾಡದ ,ಊಹೆಗೂ ಮೀರಿದ ಪರಿಸ್ಥಿತಿ ಇದ್ದು ‌ ಗೆಲುವಿನ ಲೆಕ್ಕಾಚಾರದಲ್ಲಿ ಪ್ರತಿ ಪಕ್ಷಗಳು ಮತ ಬೇಟೆಗೆ‌ ಅರಸಾಹಸ ಪಡುತ್ತಿರುವುದು ಕಂಡುಬರುತ್ತದೆ.

   ಕೊರಟಗೆರೆ ತಾಲ್ಲೂಕಿನಲ್ಲಿ 121 ಮತಗಳಿದ್ದು, ಇದರಲ್ಲಿ ಜಾತಿವಾರು ಲೆಕ್ಕಾಚಾರ ನೋಡುವುದಾದರೆ, ಹೊಳವನಹಳ್ಳಿ ಹೋಬಳಿಯಲ್ಲಿ 39ಮತಗಳು, ಕಸಬಾ ಹೋಬಳಿಯಲ್ಲಿ 18, ಕೋಳಾಲ ಹೋಬಳಿಯಲ್ಲಿ 43, ಸಿಎನ್ ದುರ್ಗಾ ಹೋಬಳಿಯಲ್ಲಿ 17 ಮತಗಳಿದ್ದು ಇದರಲ್ಲಿ ಅರ್ಧದಷ್ಟು ಒಕ್ಕಲಿಗ ಸಮುದಾಯದ ಮತಗಳಿದ್ದು ಅಂದರೆ 55 ಒಕ್ಕಲಿಗ ಮತಗಳಿದ್ದರೆ ಬಲಿಜಿಗ 3, ಕುರುಬ 7, ಎಸ್ಸಿ 5, ಲಿಂಗಾಯಿತ 17, ನಾಯಕ 6, ಸಾಧರು 5, ಗೊಲ್ಲ 7, ತಿಗಳ 1, ಕುಂಬಾರ 1, ಮಡಿವಾಳ 1 ಇತರೆ 10 ಮತಗಳಿದ್ದು, ಒಕ್ಕಲಿಗ ಸಮುದಾಯದ ಮತಗಳೆ ನಿರ್ಣಾಯಕವಾಗಿದ್ದು, ಇಬ್ಬರೂ ಕಾಂಗ್ರೆಸ್ ಹಾಗೂ ಎನ್ ಡಿ ಎ ಅಭ್ಯರ್ಥಿ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದರು ಯಾರು ಹೆಚ್ಚು ಮತ ಸೆಳೆಯಲಿದ್ದಾರೋ ಅವರಿಗೆ ಜಯಮಾಲೆ ದೊರಕಲಿದೆ ಎನ್ನಲಾಗಿದೆ.

   ಕೊರಟಗೆರೆ ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಈಶ್ವರಯ್ಯ ವಿ ಸ್ಪರ್ಧಿಸಿದ್ದರೆ ಬಿಜೆಪಿ ಹಾಗೂ ಜೆಡಿಎಸ್ ನ ಎನ್ ಡಿ ಎ ಅಭ್ಯರ್ಥಿಯಾಗಿ ಎರಡು ಪಕ್ಷದ ಒಕ್ಕೋರಲಿನ ಅಭ್ಯರ್ಥಿಯಾಗಿ ಸಿದ್ದಗಂಗಯ್ಯ ಕಣದಲ್ಲಿದ್ದಾರೆ , ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದ ಈ ಹಿಂದೆ ಹಾಲು ಉತ್ಪಾದಕ ಸಹಕಾರ ಸಂಘದ ತಾಲೂಕ್ ಶಾಖೆಯಲ್ಲಿ ಅರೆ ಕಾಲಿಕ ನೌಕರರಾಗಿ (ಸೂಪರ್ವೈಸರ್) ಕೆಲಸ ಮಾಡುತ್ತಿದ್ದ ಟಿ ಎನ್ ಅರುಣ್ ಕುಮಾರ್ ಸಹ ಕಣದಲ್ಲಿದ್ದು, ಮೂರು ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರೂ ಅಂತಿಮವಾಗಿ ಕಾಂಗ್ರೆಸ್ ನ ಬೆಂಬಲಿತ ಅಭ್ಯರ್ಥಿ ಈಶ್ವರಯ್ಯ ಹಾಗೂ ಎನ್ ಡಿ ಎ ಬೆಂಬಲಿತ ಅಭ್ಯರ್ಥಿ ಸಿದ್ದಗಂಗಯ್ಯ ನಡುವೆ ನೇರ ಹಣ ಹಣೆ ಏರ್ಪಟ್ಟಿರುವುದು ಕಂಡುಬರುತ್ತದೆ.

   ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಈಶ್ವರಯ್ಯ ಕಳೆದ ಎರಡು ಬಾರಿಯಿಂದಲೂ ಗೆಲುವು ಸಾಧಿಸಿ ನಿರ್ದೇಶಕರಾಗಿದ್ದು ಈ ಬಾರಿಯೂ ಮತ್ತೆ ಚುನಾವಣಾ ಕಣದಲ್ಲಿದ್ದು ಮತ್ತೆ ಗೆಲುವಿನ ಹ್ಯಾಟ್ರಿಕ್ ಭರವಸೆಯಲ್ಲಿದ್ದರೆ, ಎನ್ ಡಿ ಎ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸಿದ್ದಗಂಗಯ್ಯ ನಿವೃತ್ತ ಶಿಕ್ಷಕರಾಗಿದ್ದು, ಅವರು ಸಹ ಗೆಲುವಿನ ಲೆಕ್ಕಾಚಾರಕ್ಕೆ ಬಿಜೆಪಿ ಹಾಗೂ ಜೆಡಿಎಸ್ ನ ಎರಡು ಪಕ್ಷದ ಮುಖಂಡರನ್ನು ಬಳಸಿಕೊಂಡು ಮತದಾರರ ಬಳಿ ತೆರಳುತ್ತಿದ್ದು, ಇಬ್ಬರೂ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳಾಗಿದ್ದು, ಅತಿ ಹೆಚ್ಚು ಮತ ವಿರುವ ಒಕ್ಕಲಿಗ ಸಮುದಾಯದ ಬುಟ್ಟಿಗೆ ಇಬ್ಬರೂ ಕೈ ಹಾಕುತ್ತಿರುವುದು ಒಂದೆಡೆಯಾದರೆ, ಸ್ವತಂತ್ರವಾಗಿ ಒಂಟಿಯಾಗಿ ಅರುಣ್ ಕುಮಾರ್ ಮತದಾರರ ಒಲೈಕೆಗೆ ಮುಂದಾಗಿರುವುದು ಕಂಡುಬರುತ್ತದೆ.

   ಕೊರಟಗೆರೆ ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ಅಭ್ಯರ್ಥಿಯಾದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಈಶ್ವರಯ್ಯ ಗೆ ಚುನಾವಣಾ ಇಲಾಖೆಯಿಂದ ಸೀಲಿಂಗ್ ಫ್ಯಾನ್ ಗುರುತು ಲಭಿಸಿದ್ದು, ಎನ್‌ಡಿಎ ಅಭ್ಯರ್ಥಿ ಸಿದ್ದಗಂಗಯ್ಯ ಗೆ ಆಟೋ ಗುರುತು ನೀಡಿದರೆ ಅರುಣ್ ಕುಮಾರ್ ಕೊಳಾಯಿ ಗುರುತು ನೀಡಲಾಗಿದ್ದು, ಡಿಸೆಂಬರ್ 10 ‌ ಭಾನುವಾರ ನಡೆಯಲಿರುವ ನಿರ್ದೇಶಕರ ಚುನಾವಣೆಗೆ ಮೂರು ಜನ ಅಭ್ಯರ್ಥಿಗಳು ಗೆಲುವಿಗಾಗಿ ಹರಸಾಹಸ ಪಡುತ್ತಿದ್ದರೆ, ಅಂತಿಮವಾಗಿ ಮೇಲ್ನೋಟಕ್ಕೆ ಕಾಂಗ್ರೆಸ್‌ನ ಈಶ್ವರಯ್ಯ ಬಿಜೆಪಿ ಹಾಗೂ ಜೆಡಿಎಸ್ ನ ಎನ್ ಡಿ ಎ ಅಭ್ಯರ್ಥಿ ಸಿದ್ದಗಂಗಯ್ಯ ನಡುವೆ ನೇರ ಹಣಾಹಣಿ ಕಂಡುಬರುತ್ತಿದ್ದು, ಇಬ್ಬರೂ ಅಭ್ಯರ್ಥಿಗಳು ತಮ್ಮ ತಮ್ಮ ಗೆಲುವಿಗಾಗಿ ಪಕ್ಷೇತರ ಮುಖಂಡರುಗಳೊಂದಿಗೆ ಮತದಾರರ ಮನೆ ಬಾಗಿಲುಗೆ ತೆರಳುತ್ತಿರುವುದು ಕಂಡುಬರುತ್ತದೆ.

   ಕೊರಟಗೆರೆ ತಾಲೂಕಿನ ತುಮುಲ್ ನಿರ್ದೇಶಕರ ಆಯ್ಕೆಗೆ ಪ್ರಮುಖ ಪಕ್ಷಗಳ ನಡುವೆ ನೇರ ಪ್ರತಿಷ್ಪರ್ಧೆ ಕಂಡು ಬರುತ್ತಿದ್ದು ಕಾಂಗ್ರೆಸ್ ನ ಪ್ರತಿಷ್ಠಿತ ರಾಜಕಾರಣಿ ಹೈಕಮಾಂಡ್ ನೊಂದಿಗೆ ನಿಕಟ ಸಂಪರ್ಕ ಹೊಂದಿರುವ ಜಿಲ್ಲಾ ಉಸ್ತುವಾರಿ ಹಾಗೂ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಈಶ್ವರಯ್ಯ ನವರ ಗೆಲುವು ಅನಿವಾರ್ಯವಾಗಿದ್ದು, ಅವರನ್ನ ಗೆಲ್ಲಿಸಿಕೊಂಡು ಬರುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸೇರಿದಂತೆ ಮುಖಂಡರುಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದ್ದು, ಪ್ರತಿ ಹೋಬಳಿವಾರು ಕಾಂಗ್ರೆಸ್ ಮುಖಂಡರುಗಳು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಈಶ್ವರಯ್ಯ ಗೆಲುವಿಗಾಗಿ ಹಗಲಿರುಳು ಸುತ್ತುತ್ತಿರುವುದು ಕಂಡುಬರುತ್ತದೆ.

    ಉಳಿದಂತೆ ಬಿಜೆಪಿ ಹಾಗೂ ಜೆಡಿಎಸ್ ನ ಬೆಂಬಲಿತ ಎನ್ ಡಿ ಎ ಅಭ್ಯರ್ಥಿಯಾದ ಸಿದ್ದಗಂಗಯ್ಯ ಮಾಜಿ ಶಾಸಕ ಪಿಆರ್ ಸುಧಾಕರ್ ಲಾಲ್ ಹಾಗೂ ಬಿಜೆಪಿಯ ಮುಖಂಡ ಬಿ ಎಚ್ ಅನಿಲ್ ಕುಮಾರ್ ಅವರ ಮಾರ್ಗದರ್ಶನದಂತೆ ಮತದಾರರ ಓಲೈಕೆಗೆ ಹಗಲು ಇರುಳು ಎನ್ನದೆ ಶ್ರಮಿಸುತ್ತಿದ್ದು ಬಿಜೆಪಿ ಹಾಗೂ ಜೆಡಿಎಸ್ ನ ಮುಖಂಡರೊಂದಿಗೆ ಮತದಾರರ ಬಳಿ ಸಾಗುತ್ತಿರುವುದು ಕಂಡು ಬರುತ್ತಿದೆ.

   ಉಳಿದಂತೆ ಯಾವುದೇ ಪಕ್ಷದ ಬೆಂಬಲವಿಲ್ಲದೆ ಸ್ವತಂತ್ರವಾಗಿ ಅಭ್ಯರ್ಥಿಯಾಗಿರುವಂತಹ ಅರುಣ್ ಕುಮಾರ್ ಈ ಹಿಂದೆ ಇದೆ ಹಾಲು ಒಕ್ಕೂಟದ ಅರೆಕಾಲಿಕ ನೌಕರನಾಗಿ ಸೂಪರ್ವೈಸರ್ ಆಗಿ ಕಾರ್ಯನಿರ್ವಹಿಸಿರುವ ಅನುಭವದ ಮೇಲೆ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದು, ಒಬ್ಬಂಟಿಯಾಗಿ ದ್ವಿಚಕ್ರವಾಹನದ ಮೂಲಕ ಮತದಾರರ ಬಳಿ ಕೈಮುಗಿದು ಮತ ಕೇಳುತ್ತಿರುವುದು ಕಂಡು ಬರುತ್ತಿದೆ.

ಹ್ಯಾಟ್ರಿಕ್ ನತ್ತ ಈಶ್ವರಯ್ಯ

   ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಈಶ್ವರಯ್ಯ ಎರಡು ಬಾರಿ ಗೆಲುವು ಸಾಧಿಸಿ ಮೂರನೇ ಬಾರಿಯ ಗೆಲುವಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಒಕ್ಕಲಿಗ ಸಮುದಾಯದ ಬಹುತೇಕ ಮತಗಳು ಸೇರಿದಂತೆ ಹಿಂದುಳಿದ ವರ್ಗಗಳ ಮತಗಳು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರ ಸ್ವಕ್ಷೇತ್ರವಾಗಿರುವುದರಿಂದ ಪರಮೇಶ್ವರವರ ಹಣತೆಯಂತೆ ಬಹಳಷ್ಟು ಹಿಂಬಾಲಕರು ಸೇರಿದಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ ನಾರಾಯಣ್, ಮಾಜಿ ಜಿಲ್ಲಾ ಪಂಚಾಯಿತ ಸದಸ್ಯರಾದ ದ್ರಾಕ್ಷಾಯಿಣಿ ರಾಜಣ್ಣ, ಪ್ರೇಮಾ ಮಾಲಿಂಗಯ್ಯ ಕಾಂಗ್ರೆಸ್ ಮುಖಂಡರಾದ ಬಲರಾಮಯ್ಯ ಸೇರಿದಂತೆ ಹಲವು ಮುಖಂಡರುಗಳು ಸತತ ಮತದಾರರ ಬಳಿ ತೆರಳಿ ಮತಯಾಚನೆ ಮಾಡುತ್ತಿರುವುದರಿಂದ ಜೊತೆಗೆ ಈಶ್ವರಯ್ಯ ನವರ ವರ್ಚಸ್ ಜೊತೆಗೆ ಕಾಂಗ್ರೆಸ್ ನ ಬೆಂಬಲಿತ ಮತಗಳು ಈಶ್ವರಯ್ಯ ಅವರಿಗೆ ವರ್ಕೌಟ್ ಆದರೆ ಹ್ಯಾಟ್ರಿಕ್ ಖಚಿತ.

ಎನ್‌ಡಿಎ ಅಭ್ಯರ್ಥಿ ಸಿದ್ದಲಿಂಗಯ್ಯ ಗೆಲುವಿನ ಉರುಪು

   ಬಿಜೆಪಿ ಹಾಗೂ ಜೆಡಿಎಸ್ ಎನ್.ಡಿ.ಎ ಬೆಂಬಲಿತ ಅಭ್ಯರ್ಥಿಯಾಗಿರುವ ಸಿದ್ದಲಿಂಗಯ್ಯ ಮಾಜಿ ಶಾಸಕ ಪಿ ಆರ್ ಸುಧಾಕರ್ ಲಾಲ್, ಬಿಜೆಪಿ ಮುಖಂಡ ಬಿ ಎಚ್ ಅನಿಲ್ ಕುಮಾರ್, ಕೋಳಾಲ ಜಿಲ್ಲಾ ಪಂಚಾಯಿತಿ ಸದಸ್ಯ ಶಿವರಾಮಯ್ಯ,ಜೆಡಿಎಸ್ ನ ಕಾರ್ಯಾಧ್ಯಕ್ಷ ನರಸಿಂಹರಾಜು, ಬಿಜೆಪಿ ತಾಲೂಕ ಅಧ್ಯಕ್ಷ ದರ್ಶನ್ ಸೇರಿದಂತೆ ಬಹಳಷ್ಟು ಜನ ಸಿದ್ದಲಿಂಗಯ್ಯ ನವರ ಗೆಲುವಿಗೆ ಶ್ರಮ ಪಡುತ್ತಿರುವುದು ಕಂಡುಬರುತ್ತದೆ.

ಪ್ರತಿ ಅಭ್ಯರ್ಥಿ 75 ಲಕ್ಷ ಖರ್ಚು

    ತುಮಲ್ ಚುನಾವಣೆ ಈ ಬಾರಿ ಪ್ರತಿ ಬಾರಿಗಿಂತಲೂ ವಿಭಿನ್ನವಾಗಿದ್ದು , ಪ್ರತಿ ತಾಲೂಕಿನಲ್ಲೂ ಜಿದ್ದಾಜಿದ್ದಿ ಮೂಡಿ ಯಾರು ನಿರೀಕ್ಷಿಸದ ರೀತಿಯಲ್ಲಿ ಚುನಾವಣೆ ನಡೆಯುತ್ತಿದ್ದು, ಪ್ರತಿಕ್ಷೇತ್ರದ ಸಚಿವರು ಶಾಸಕರು, ಮಾಜಿ ಶಾಸಕರು ಸೇರಿದಂತೆ ಸ್ಥಳೀಯ ಮುಖಂಡರುಗಳ ವರ್ಚಸ್ ಮೂಲಕ ಜೊತೆಗೆ ವ್ಯಕ್ತಿಗತವಾಗಿ ಚುನಾವಣೆ ನಡೆಯುತ್ತಿದ್ದು ಪ್ರತಿ ತಾಲೂಕಿನಲ್ಲೂ ಒಬ್ಬೊಬ್ಬ ಅಭ್ಯರ್ಥಿ 75 ಲಕ್ಷದಿಂದ 1 ಕೋಟಿಗೂ ಹೆಚ್ಚು ಖರ್ಚು ಮಾಡುವ ಅನಿವಾರ್ಯತೆ ಒದಗಿದ್ದು, ಪ್ರತಿ ಡೆಲಿಗೇಟ್ಸ್ 50 ಸಾವಿರದಿಂದ 75‌ ಸಾವಿರ ಹಣ ನೀಡಿ ಮತ ಕೇಳುವ ಅಂತಕ್ಕೆ ಅಭ್ಯರ್ಥಿಗಳು ಬಂದಿದ್ದು, ಸರಿಸುಮಾರು ಪ್ರತಿ ತಾಲೂಕಿನಲ್ಲೂ ಒಂದು ಕೋಟಿಗೂ ಹೆಚ್ಚು ಪ್ರತಿ ಅಭ್ಯರ್ಥಿ ಖರ್ಚು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಚುನಾವಣೆ ದಿನವೇ ಫಲಿತಾಂಶ ಆದರೆ ಈ ಬಾರಿ ಸ್ವಲ್ಪ ಡೌಟ್.. 26ಕ್ಕೆ ಹೋಗುವ ಸಾಧ್ಯತೆ*

    ತುಮಲ್ ಚುನಾವಣೆ ಈ ಬಾರಿ ಬಹಳ ಕೌತುಕ ಮೂಡಿಸುತ್ತಿದ್ದು, ಜಿದ್ದಾಜಿದ್ದಿಗೆ ಬಿದ್ದ ಅಭ್ಯರ್ಥಿಗಳು ಚುನಾವಣಾ ತಂತ್ರಗಾರಿಕೆ ಮೂಲಕ ಮತಸೆಳೆಯುವುದು ಒಂದೆಡೆಯಾದರೆ, ಹಾಲು ಉತ್ಪಾದಕ ಸಹಕಾರ ಸಂಘದ ನಿಯಮಾನುಸಾರ ಒಳ ಒಪ್ಪಂದದ ಕೆಲವೊಂದು ಸಂಘಗಳಿಗೆ‌ ಮತದಾನದ ಹಕ್ಕನ್ನು ಕಸಿಯಲಾಗಿತ್ತು ಆದರೆ ಈಗ ಕೋರ್ಟ್ ಮೂಲಕ ಮತಚಲಾಯಿಸುವ ಹಕ್ಕು ಪಡೆಯಲಾದ ಬಹಳಷ್ಟು ಸಂಘಗಳು ಈಗ ಅತಂತ್ರಕ್ಕೆ ಸಿಲುಕಿದ್ದು,

   ಮಧುಗಿರಿ ಕ್ಷೇತ್ರದ ಸಹಕಾರ ಸಚಿವರ ಆಪ್ತ ವಲಯದ ಅಭ್ಯರ್ಥಿಯಾದ ನಾಗೇಶ್ ಬಾಬು ಅವರ ಕೋರ್ಟ್ ತೀರ್ಮಾನ 26ಕ್ಕೆ ಮುಂದೂಡಿದ ಕಾರಣ, ನಾಗೇಶ್ ಬಾಬು ಪರ ನ್ಯಾಯಾಲಯದಲ್ಲಿ ಆದೇಶ ಬಂದರೆ ಕೋರ್ಟ್ ನಿಂದ ನೀಡಲಾದ ಮತಗಳು ಪರಿಗಣನೆ ಯಾಗುತ್ತದೆ, ಇಲ್ಲವಾದರೆ ಇತ್ತೀಚಿಗೆ ಹೊಸದಾಗಿ ಕೋರ್ಟಿಂದ ಆದೇಶಿಸಲಾದ ಮತಗಳು ಅಂದು ಕೋರ್ಟ್ ಅಲ್ಲಿ ನಾಗೇಶ್ ವಿರುದ್ಧವಾದಂತಹ ತೀರ್ಪು ಬಂದರೆ ಈ ಮತಗಳು ಅಮಾನ್ಯಗೊಳ್ಳಲಿದ್ದು, ಈ ಕಾರಣದಿಂದ ಚುನಾವಣೆ ನಡೆದ ದಿನವೇ ಫಲಿತಾಂಶವನ್ನು ಅನಿವಾರ್ಯ ಕಾರಣಗಳಿಂದ ನವೆಂಬರ್ 26ಕ್ಕೆ ಮುಂದೂಡುವ ಸಾಧ್ಯತೆ ದಟ್ಟವಾಗಿದೆ.

   ಒಟ್ಟಾರೆ ಕೊರಟಗೆರೆ ತಾಲೂಕಿನಲ್ಲಿ ಹಾಲು ಉತ್ಪಾದಕ ಸಹಕಾರ ಸಂಘದ ಚುನಾವಣೆ ಜಾತಿಬಲ ,ಹಣಬಲ ,ತೋಳ್ಬಲದಿಂದ ನಡೆಯುತ್ತಿದ್ದು, ಪ್ರತಿಯೊಂದು ಮತಕ್ಕೂ 50ರಿಂದ 75 ಸಾವಿರ ಹಣ ನೀಡುತ್ತಿದ್ದಾರೆ ಎಂಬ ವದಂತಿ ಕೇಳಿ ಬರುತ್ತಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಪರಮೇಶ್ವರ್ ಅವರ ಆಶೀರ್ವಾದ ಜೊತೆಗೆ ಸ್ವಂತ ವರ್ಚಸ್ಸು ಸೇರಿದಂತೆ ಎರಡು ಬಾರಿಯ ಚುನಾವಣಾ ಚತುರತೆ ಮೂಲಕ ಈಶ್ವರಯ್ಯ ಚುನಾವಣೆ ನಡೆಸುತ್ತಿದ್ದರೆ ಬಿಜೆಪಿ ಹಾಗೂ ಜೆಡಿಎಸ್ ನ ನಾಯಕರುಗಳ ಹೆಸರೇಳಿ ಕೊಂಡು ಜೊತೆಗೆ ಸ್ವಂತ ಬಲದಿಂದ ಸಿದ್ದಲಿಂಗಯ್ಯ ಮತ ಸೆಳೆಯುತ್ತಿದ್ದರೆ ಅರುಣ್ ಕುಮಾರ್ ಏಕಾಂಗಿಯಾಗಿ ಮತ ಕೇಳುತ್ತಿರುವುದು ಕಂಡುಬರುತ್ತದೆ, ಇವೆಲ್ಲವರ ನಡುವೆ ಈ ಬಾರಿಯ ಚುನಾವಣೆ ಕೊರಟಗೆರೆ ಕ್ಷೇತ್ರದಲ್ಲಿ ಊಹೆಗೋ ಮೀರಿ ಚುನಾವಣೆ ನಡೆಯುತ್ತಿದ್ದು ಯಾರು ಗೆಲುವು ಸಾಧಿಸಲಿದ್ದಾರೆ ಎಂದು ಹೇಳುವುದೇ ಕಷ್ಟಕರವಾಗಿದ್ದು ಕಾಂಗ್ರೆಸ್ ಹಾಗೂ ಎನ್ಡಿಎ ಅಭ್ಯರ್ಥಿಯ ನಡುವೆ ನೇರ ಹಣಾಹಣೆ ಕಂಡುಬರುತ್ತಿದ್ದು, ಯಾರು ಹೆಚ್ಚು ಚಾಣಾಕ್ಷತೆಯಿಂದ ಚುನಾವಣೆ ನಡೆಸುತ್ತಾರೋ ಅವರಿಗೆ ಗೆಲುವಿನ ಮಾಲೆ ಬೀಳಲಿದೆ ಎನ್ನಲಾಗುತ್ತದೆ

Recent Articles

spot_img

Related Stories

Share via
Copy link