ತುರುವೇಕೆರೆ :
ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕುವಲ್ಲಿ ವಿಫಲವಾದ ರಾಜ್ಯ ಹಾಗೂ ಕೇಂದ್ರ ಬಿಜೆಪಿ ಸರ್ಕಾರಗಳಿಗೆ ಆಡಳಿತ ನಡೆಸುವ ಯಾವುದೇ ನೈತಿಕತೆ ಇಲ್ಲ. ಕೂಡಲೇ ಅಧಿಕಾರ ಬಿಟ್ಟು ತೊಲಗಿ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಆಗ್ರಹಿಸಿದರು.
ತಾಲ್ಲೂಕು ಕಾಂಗ್ರೆಸ್ ವತಿಯಿಂದ ಸೋಮವಾರ ಪಟ್ಟಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪೆಟ್ರೋಲ್, ಡಿಸೇಲ್, ಗ್ಯಾಸ್ ಹಾಗು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ತಾಲ್ಲೂಕು ಹಾಗು ಜಿಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರುಗಳು ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆಯಾಗಿದ್ದು, ಜನರ ಬದುಕು ದುಸ್ಥರವಾಗಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೇರಿ ಬಿಜೆಪಿ ಮುಖಂಡರು ಪ್ರತಿಭಟನೆ ಮಾಡಿದ್ದರು. ಈಗ ರಾಜ್ಯ ಹಾಗೂ ಕೇಂದ್ರ ಎರಡರಲ್ಲೂ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆ 100ರ ಗಡಿ ದಾಟಿದ್ದರೂ ಇಳಿಸುವ ಪ್ರಯತ್ನ ಮಾಡುತ್ತಿಲ್ಲ. ಗ್ಯಾಸ್ ಸೇರಿದಂತೆ ಹಲವಾರು ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟಾಗಿದೆ. ಜನ ಸಾಮಾನ್ಯರ ಜೀವನ ನರಕ ಯಾತನೆಯಾಗಿದೆ. ಅಗತ್ಯ ವಸ್ತುಗಳ ಬೆಲೆಗಳು ಇಳಿಕೆಯಾಗುವರೆಗೂ ನಮ್ಮ ಹೋರಾಟ ಮತ್ತು ಪ್ರತಿಭಟನೆ ನಿರಂತರವಾಗಿ ನಡೆಯಲಿವೆ ಎಂದರು.
ಪಕ್ಷದ ಹಿಂದುಳಿದ ವರ್ಗದ ರಾಜ್ಯಾಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ್, ಮುಖಂಡ ಮುರಳೀಧರ ಹಾಲಪ್ಪ, ಚೌದ್ರಿರಂಗಪ್ಪ, ಮಾತನಾಡಿದರು. ನಂತರ ಪಟ್ಟಣದ ಪ್ರವಾಸಿ ಮಂದಿರದಿಂದ ನೂರಾರು ಮುಖಂಡರು ಕಾರ್ಯಕರ್ತರು ಭಿತ್ತಿ ಪತ್ರಗಳನ್ನು ಹಿಡಿದು, ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಪಟ್ಟಣದ ವಿವಿಧ ರಸ್ತೆಗಳಲ್ಲಿ ಸೈಕಲ್ ಜಾಥಾ, ಮೆರವಣಿಗೆ ನಡೆಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ರಾಮಕೃಷ್ಣ, ಸಲೀಂಅಹಮದ್, ಎನ್.ಆರ್.ಜಯರಾಂ, ಬಿ.ಎಸ್.ವಸಂತ್ಕುಮಾರ್, ಸುಬ್ರಮಣಿಶ್ರೀಕಂಠೇಗೌಡ, ಜೋಗಿಪಾಳ್ಯಶಿವರಾಜ್, ಪ್ರಸನ್ನಕುಮಾರ್, ನಾಗೇಶ್, ಬಾಲಕೃಷ್ಣಯಾದವ್, ಗೋಪಿನಾಥ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಮಹಾಲಿಂಗಯ್ಯ, ಭೈರಪ್ಪ, ನಂಜೇಗೌಡ, ಕಿಸಾನ್ ಸಂಘದ ಅಧ್ಯಕ್ಷ ಸ್ವರ್ಣಕುಮಾರ್, ಯುವ ಮುಖಂಡರಾದ ವೇಣುಗೋಪಾಲ್, ಮಲ್ಲಾಘಟ್ಟಪುಟ್ಟ, ಅರಸ್ ಮತ್ತು ಕಾರ್ಯಕರ್ತರುಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ