ತುರುವೇಕೆರೆ:
ಈ ಬಾರಿ ಉತ್ತಮ ಮಳೆಯಾಗುತ್ತದೆ ಎಂದು ಮುಂಗಾರು ಬಿತ್ತನೆಗೆ ಭೂಮಿ ಹದ ಮಾಡಿಕೊಂಡು ಕನಸು ಕಾಣುತ್ತಿದ್ದ ರೈತರು ಇದೀಗ ಮಳೆಯಿಲ್ಲದೆ ಕಂಗಾಲಾಗಿದ್ದಾರೆ.
ತಾಲ್ಲೂಕಿನ ಮಾಯಸಂದ್ರ ಹೋಬಳಿ ಹೊರತುಪಡಿಸಿ ಉಳಿದ ದಬ್ಬೇಘಟ್ಟ, ಕಸಬಾ ಹಾಗೂ ದಂಡಿನಶಿವರ ಹೋಬಳಿಗಳಲ್ಲಿ ಮುಂಗಾರು ಮಳೆ ಕೈ ಕೊಟ್ಟಿದೆ. ವಾಡಿಕೆ ಮಳೆ ಪ್ರಮಾಣ 81 ಮಿ.ಮೀ. ಆಗಬೇಕಿದ್ದು, ಪ್ರಸಕ್ತ 53 ಮಿ.ಮೀ.ನಷ್ಟು ಮಳೆಯಾಗಿದೆ. ಶೇ.34 ರಷ್ಟು ಮಳೆ ಕೊರತೆಯಾಗಿದೆ.
ಭಿತ್ತನೆ ಪ್ರದೇಶ: ತಾಲ್ಲೂಕಿನಲ್ಲಿ ಸುಮಾರು 5710 ಹೆಕ್ಟೇರು ಬಿತ್ತನೆ ಗುರಿ ಹೊಂದಿದ್ದು 1145 ಹೆಕ್ಟೇರ್ ಪ್ರದೇಶ ಮಾತ್ರ ಮುಂಗಾರು ಬಿತ್ತನೆಯಾಗಿದೆ. ಮಳೆಯಿಲ್ಲದೆ ಬಿತ್ತನೆಯಾಗದ ಪ್ರದೇಶದ ರೈತರು ಈಗಾಗಲೆ ಜಮೀನು ಹದ ಮಾಡಿ ಬಿತ್ತನೆಗೆ ಬೀಜ, ಗೊಬ್ಬರ ಕೊಂಡು ತಂದು ಮನೆಯಲ್ಲಿಟ್ಟು ಮಳೆ ಭೂಮಿಗೆ ಬೀಳುವುದನ್ನೇ ಎದಿರು ನೋಡುತ್ತಿದ್ದಾರೆ. ಮುಂಗಾರು ಬಿತ್ತನೆಗೆ ಹೆಸರು, ಉದ್ದು, ಹಲಸಂದೆ ಕೊಂಡು ತಂದು ಮನೆಯಲ್ಲಿಟ್ಟು ಮಳೆ ಕಾಯುತ್ತಿದ್ದರೆ ಮತ್ತೆ ಕೆಲವರು ಇತ್ತ ಮಳೆ ಬಾರದ್ದರ ಜೊತೆಗೆ ಕರೊನಾ ಲಾಕ್ ಡೌನ್ ನಿಂದ ಬೀಜದ ಕಾಳುಗಳನ್ನು ಅಡುಗೆಗೆ ಬಳಸಿದ್ದರೂ ಆಶ್ಚರ್ಯವಿಲ್ಲ.
ಮುಂಗಾರು ಬಿತ್ತನೆ ಬೀಜಕ್ಕೆ ಪರದಾಟ:
ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಸಿಗಲಿದೆ ಎಂಬ ಮಾಹಿತಿ ಸಿಕ್ಕ ಕೂಡಲೆ ರೈತರು ಲಾಕ್‍ಡೌನ್ ನಡುವೆಯೇ ರೈತ ಸಂಪರ್ಕ ಕೇಂದ್ರಕ್ಕೆ ಲಗ್ಗೆ ಇಟ್ಟು ಹೆಚ್ಚು ಹೆಚ್ಚು ಬೀಜ ಖರೀದಿಸಿದರು. ಹೆಸರು 116.40 ಕ್ವಿಂಟಾಲ್, ಉದ್ದು 1.80 ಕ್ವಿಂ, ಹಲಸಂದೆ 22.80 ಕ್ವಿಂ. ಹಾಗೂ ತೊಗರಿ 10.2 ಕ್ವಿಂಟಾಲ್‍ನಷ್ಟು ಬಿತ್ತನೆ ಬೀಜಗಳನ್ನು ಹಿಂದಿನ ವರ್ಷಕ್ಕಿಂತ ಹೆಚ್ಚು ಈ ಬಾರಿ ರೈತ ಸಂಪರ್ಕ ಕೇಂದ್ರದಿಂದ ನೀಡಲಾಗಿದೆ.
ಆದರೂ ಸಹ ಕೆಲ ರೈತರು ಲಾಕ್‍ಡೌನ್ ಭಯದಿಂದ ಹೊರಬಾರದೆ ಕೊನೆ ಕ್ಷಣದಲ್ಲಿ ಬೀಜ ಕೊಳ್ಳಲು ಮುಂದಾದಾಗ ಆ ವೇಳೆಗಾಗಲೆ ಅಧಿಕ ಪ್ರಮಾಣದಲ್ಲಿ ಬಿತ್ತನೆ ಬೀಜ ನೀಡಲಾಗಿದ್ದರಿಂದ ದಾಸ್ತಾನಿಲ್ಲದೆ ಮತ್ತೆ ಬಿತ್ತನೆ ಬೀಜ ಕೇಂದ್ರದಿಂದ ಸಿಗುವುದಿಲ್ಲ ಎಂಬ ಮಾಹಿತಿ ತಿಳಿದು ಸ್ಥಳೀಯ ಖಾಸಗಿ ಅಂಗಡಿಗಳಲ್ಲಿ ಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿ ಒಂದಕ್ಕೆ ಎರಡು ಪಟ್ಟು ಹಣ ನೀಡಿ ಕೊಂಡು ತಂದು ಮಳೆಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಪ್ರತಿದಿನ ಮೋಡ ಕವಿದ ವಾತಾವರಣವಿದ್ದು, ಇನ್ನೇನು ಆಕಾಶದಿಂದ ಮಳೆ ಬಂದೆ ಬಿಟ್ಟಿತು ಅನ್ನುವಷ್ಟರಲ್ಲಿ ಗಾಳಿ ತುಂತುರು ಮಳೆಯೊಂದಿಗೆ ಮೋಡಗಳು ಹಾಗೆಯೆ ಗಾಳಿಯಲ್ಲಿ ತೇಲಿ ಹೋಗುತ್ತಿರುವುದು ರೈತನ ಆತಂಕಕ್ಕೆಡೆ ಮಾಡಿಕೊಟ್ಟಿದೆ.
ಅಂತರ್ಜಲ ಕುಸಿತ: ಮಳೆ ಬಾರದೆ ತಾಲ್ಲೂಕಿನಲ್ಲಿ ಬಿಸಿಲಿನ ತಾಪಮಾನ ದಿನೆ ದಿನೆ ಏರುತ್ತಿರುವುದರಿಂದ ಈಗಾಗಲೆ ತಾಲ್ಲೂಕಿನ ಕೆಲ ಭಾಗಗಳಲ್ಲಿ ಅಂತರ್ಜಲ ಕಡಿಮೆಯಾಗಿದ್ದು ರೈತರು ಕಂಗಾಲಾಗಿದ್ದಾರೆ. ಕಸಬಾದ ಗಡಿ ಗ್ರಾಮ ಲಕ್ಕಸಂದ್ರ, ದುಂಡ, ಹೆಗ್ಗೆರೆ ಸುತ್ತಮುತ್ತ ಬಿಸಿಲಿನ ಝಳಕ್ಕೆ ಅಂತರ್ಜಲ ಕುಸಿದಿದ್ದು, ಕೆಲ ಬೋರ್‍ಗಳಲ್ಲಿ ಅರ್ಧ ಗಂಟೆ ಮಾತ್ರ ನೀರು ಹೊರ ಬಂದು ಅರ್ಧಕ್ಕೆ ನಿಂತು ಹೋಗುತ್ತಿದೆ. ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ.
ಕೆಲವು ರೈತರ ಬೋರ್‍ಗಳಲ್ಲಿ ನೀರೆ ಬಾರದೆ ಅಡಕೆ, ತೆಂಗು, ಬಾಳೆಯಂತ ವಾಣಿಜ್ಯ ಬೆಳೆಗಳನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಮತ್ತೊಂದು ಬೋರ್ ಕೊರೆಸಬೇಕೆಂದರೆ ಬೋರ್ ಏಜೆನ್ಸಿಗಳು ದುಪ್ಪಟ್ಟು ಹಣ ಕೇಳುತ್ತಾರೆ. ಕಾರಣ ಲಾಕ್ ಡೌನ್ ನಿಂದಾಗಿ ಬೆರಳೆಣಿಕೆಯಷ್ಟು ಮಾತ್ರ ಬೋರ್‍ವೆಲ್ ಲಾರಿಗಳು ಇರುವುದರಿಂದ ಅವರಿಗೆ ಡಿಮ್ಯಾಂಡ್ ಜಾಸ್ತಿಯಾಗಿದೆ. ಕರೊನಾದಿಂದ ಹೊರ ರಾಜ್ಯ ತಮಿಳುನಾಡಿನಿಂದ ಬೋರ್‍ವೆಲ್ ಲಾರಿಗಳನ್ನು ಕರೆಸಲು ತಾಲ್ಲೂಕು ಆಡಳಿತ ಒಪ್ಪುತ್ತಿಲ್ಲ. ಕಾರಣ ತಮಿಳುನಾಡಿನಲ್ಲಿ ಕೊರೋನಾ ಹೆಚ್ಚಿರುವುದರಿಂದ ನಮ್ಮ ರಾಜ್ಯಕ್ಕೆ ಅಲ್ಲಿನ ಜನ ಬರಲು ಅನುಮತಿಯಿಲ್ಲ. ಜಿಲ್ಲೆಯಲ್ಲಿ ಕೆಲವೆ ಬೋರ್‍ಗಳಿದ್ದು ತಕ್ಷಣ ಬೋರ್ ಕೊರೆಸಲು ಸಾಧ್ಯವಾಗುತ್ತಿಲ್ಲ.
ಕೇಳಿದಷ್ಟು ಹಣ ಕೊಡುತ್ತೇವೆಂದರೂ ವಾರಾನುಗಟ್ಟಲೆ ಕಾಯಬೇಕು. ಅಷ್ಟರಲ್ಲಾಗಲೆ ವಾಣಿಜ್ಯ ಬೆಳೆಗಳು ಬಿಸಿಲಿನ ತಾಪಕ್ಕೆ ಬಾಡತೊಡಗಿ ಕಷ್ಟಪಟ್ಟು ಬೆಳೆಸಿದ ಮರಗಳು ತನ್ನ ಕಣ್ಮುಂದೆಯೇ ಒಣಗುವುದನ್ನು ನೋಡಬೇಕಾದ ಪರಿಸ್ಥಿತಿ ರೈತರ ಪಾಲಿಗೆ ಬಂದೊದಗಿದೆ. ಮತ್ತೆ ಹೇಮಾವತಿ ನೀರು ತಾಲ್ಲೂಕಿನಲ್ಲಿ ಹರಿದು ಅಂತರ್ಜಲ ವೃದ್ದಿಯಾಗಲಿದೆ, ಕೆರೆ ಕಟ್ಟೆ ತುಂಬಲಿವೆ ಎಂಬ ಆಸೆ ಹೊತ್ತ ರೈತನಿಗೆ ಇದೀಗ ಹೇಮಾವತಿ ಮರೀಚಿಕೆಯಾದಂತಿದೆ. ಈಗಾಗಲೆ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೂ ತೊಂದರೆಯಾಗುತ್ತಿದೆ ಎಂಬ ಮಾತುಗಳು ಅಲ್ಲಲ್ಲಿ ಕೇಳಿಬರುತ್ತಿದೆ.
ಜಮೀನುಗಳತ್ತ ಮುಖ ಮಾಡಿರುವ ಗ್ರಾಮೀಣ ಪ್ರದೇಶದ ಜನತೆ: ಕೊರೊನಾ ಲಾಕ್ ಡೌನ್ ನಿಂದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯಬೇಕಿದ್ದ ಮದುವೆ, ಜಾತ್ರೆ, ಹಬ್ಬ ಹರಿದಿನಗಳು ರದ್ದಾಗಿ ಇತ್ತ ಪಟ್ಟಣಕ್ಕೂ ಹೋಗಲು ನಿರ್ಬಂಧವಿರುವುದರಿಂದ ವಿಧಿಯಿಲ್ಲದೆ ರೈತರು ತಮ್ಮ ಜಮೀನುಗಳತ್ತ ಮುಖ ಮಾಡಿದ್ದಾರೆ. ಲಾಕ್‍ಡೌನ್‍ಗೂ ಮುಂಚೆ ಪ್ರತಿದಿನ ಊರ ಮುಂದಿನ ಜಗಲಿ ಕಟ್ಟೆ ಮೇಲೆ ಕುಳಿತು ಹರಟೆ ಹೊಡೆಯುತ್ತಿದ್ದ ಅದೆಷ್ಟೋ ಮಂದಿ ಇದೀಗ ಜಮೀನುಗಳತ್ತ ಮುಖ ಮಾಡಿರುವುದರಿಂದ ಗ್ರಾವiಗಳು ಬಿಕೊ ಎನ್ನುತ್ತಿವೆ. ಮಳೆಯೇ ಇಲ್ಲವೆಂದಲ್ಲಿ ರೈತರು ತಾನೆ ಜಮೀನುಗಳಲ್ಲಿ ಎಷ್ಟು ಕೆಲಸ ಮಾಡಲು ಸಾಧ್ಯ? ಲಾಕ್‍ಡೌನ್ ಹಾಗೂ ಮಳೆಯಿಲ್ಲದೆ ದಿನ ಕಳೆಯಲು ರೈತರಿಗೆ ತ್ರಾಸವಾಗುತ್ತಿದೆ. ದಿನದಲ್ಲಿ ಎರಡ್ಮೂರು ಗಂಟೆ ಕರೆಂಟ್ ಕೊಟ್ಟಾಗ ಮಾತ್ರ ಸ್ವಲ್ಪ ಕೆಲಸವಷ್ಟೇ. ಇಂತಹ ಬಿಸಿಲಿನ ಬೇಗೆಯಲ್ಲಿ ಕೆಲಸ ಮಾಡಲು ಸಾಧ್ಯವಾಗದ ಮಾತು.
ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ ಪ್ರಮೋದ್‍ಕುಮಾರ್ ಅವರ ಮಾಹಿತಿಯಂತೆ ತಾಲ್ಲೂಕಿನ ನಾಲ್ಕು ಹೋಬಳಿಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಈ ಬಾರಿ ಹೆಚ್ಚು ಬಿತ್ತನೆ ಬೀಜ ತಾಲ್ಲೂಕಿನ ರೈತರಿಗೆ ವಿತರಿಸಿದ್ದು, ಪ್ರಸಕ್ತ ಯಾವುದೇ ಬಿತ್ತನೆ ಬೀಜಗಳು ಲಭ್ಯವಿರುವುದಿಲ್ಲ. ಜಿಪ್ಸಮ್, ಲಘು ಪೋಷಕಾಂಶಗಳು, ಜಿûಂಕ್ ಸಲ್ಪೇಟ್, ಸ್ಪ್ರೇಯರ್ ಸೇರಿದಂತೆ ಸಾವಯವ ಗೊಬ್ಬರ ಹಾಗೂ ರಾಗಿ ಬಿತ್ತನೆ ಬೀಜ ಮಾತ್ರ ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದ್ದು ಭೂಮಿ ಹದ ಮಾಡಿಕೊಂಡಿರುವ ರೈತರು ಮಳೆ ಬಿದ್ದ ತಕ್ಷಣ ಬಿತ್ತನೆ ಪ್ರಾರಂಭಿಸಬಹುದು ಎಂದು ಅವರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಮಳೆರಾಯನಿಗೂ ಕೊರೋನಾ ಬಿಸಿ ತಟ್ಟಿದೆ ಎಂಬಂತೆ ಇನ್ನು ಎರಡು ವಾರದೊಳಗಾಗಿ ಉತ್ತಮ ಮಳೆ ಬಂದರೇನೋ ಸರಿ. ಇಲ್ಲದಿದ್ದಲ್ಲಿ ಆಕಾಶ ನಂಬಿ ಜೀವನ ಸಾಗಿಸುತ್ತಿರುವ ರೈತ ಕುಟುಂಬಗಳು ಕೊರೋನಾ ಸಂಕಷ್ಟದಿಂದ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆ ಹಾಕಿಕೊಳ್ಳುವಂತ ಗತಿ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ