ತುರುವೇಕೆರೆ :
ತಾಲೂಕಿನ ಗ್ರಾಮಗಳ ಅಭಿವೃದ್ದಿಗಾಗಿ ನೂತನ ಗ್ರಾಮ ಪಂಚಾಯಿತಿ ಸದಸ್ಯರಿಗೆ ಹೆಚ್ಚಿನ ಸಹಕಾರ ನೀಡಲಾಗುವುದು ಎಂದು ಶಾಸಕ ಮಸಾಲ ಜಯರಾಮ್ ತಿಳಿಸಿದರು.
ತಾಲೂಕಿನ ಚಿಕ್ಕೋನಹಳ್ಳಿ ಬಳಿಯಿರುವ ಶಾಸಕರ ಫಾರಂ ಹೌಸ್‍ನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಮ ಪಂಚಾಯಿತಿಯ ನೂತನ ಸದಸ್ಯರುಗಳನ್ನು ಅಭಿನಂದಿಸಿ ಮಾತನಾಡಿದ ಅವರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಘೋಷಣೆ ಮಾಡಿದ ಕಾರ್ಯಕ್ರಮಗಳನ್ನು ಕಾರ್ಯಗತ ಮಾಡಬೇಕಿದೆ. ತಮ್ಮ ಗ್ರಾಮಗಳಿಗೆ ನೀವೇ ಶಾಸಕರು ನಿಮ್ಮ ಗ್ರಾಮಗಳ ಅಭಿವೃದ್ದಿಗೆ ಶ್ರಮಿಸಬೇಕಿದೆ.
ನಾನು ಸಹ ಹೆಚ್ಚಿನ ಸಹಕಾರ ತಮ್ಮಗಳಿಗೆ ನೀಡಲಿದ್ದು ಹಳ್ಳಿಯಿಂದ ದಿಲ್ಲಿವರೆಗೂ ಬಿಜೆಪಿ ಅಧಿಕಾರದಲ್ಲಿದ್ದು ನಮ್ಮ ಅಧಿಕಾರವನ್ನು ಚಲಾಯಿಸಿ ತಮ್ಮ ಕೆಲಸಗಳನ್ನು ತಾವೇ ಮಾಡಬೇಕು. ನನ್ನ ಅವಧಿಯಲ್ಲಿ ಎಲ್ಲಾ ಸದಸ್ಯರಿಗೂ ಸಮನಾದ ಅಧಿಕಾರ ನೀಡಲಿದ್ದೇನೆ. ಎಲ್ಲರೂ ಗ್ರಾಮದ ಅಭಿವೃದ್ದಿಗೆ ಶ್ರಮಿಸಿ ಎಂದರು.
ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿಗ ಅಭ್ಯರ್ಥಿಗಳು ಅತೀ ಹೆಚ್ಚು ಸ್ಥಾನದಲ್ಲಿ ಗೆಲವು ಸಾಧಿಸಿದ್ದಾರೆ. ಈ ಬಾರಿ 30ಕ್ಕೂ ಹೆಚ್ಚು ಪಂಚಾಯಿತಿಗಳಲ್ಲಿ ಅಧಿಕಾರ ಹಿಡಿಯಲಿದ್ದೇವೆ. ಮುಂದಿನ ದಿನಗಳಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ನಮ್ಮ ಪಕ್ಷ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತದೆ. ಮಾಜಿ ಶಾಸಕರು ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚು ಸ್ಥಾನ ಗೆಲವು ಎಂದು ಸುಳ್ಳು ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ನಮ್ಮ ಬೆಂಬಲಿತ ಸದಸ್ಯರುಗಳನ್ನು ಪೆರೇಡ್ ಮಾಡಲಾಗುವುದು ಅದರಂತೆ ನೀವು ಸಹ ಪೆರೇಡ್ ಮಾಡಿ ತೋರಿಸಿ. ಒಂದು ಸ್ಥಾನ ನಿಮ್ಮ ಪಕ್ಷದಲ್ಲಿ ಹೆಚ್ಚು ಬಂದದ್ದೇಆದಲ್ಲಿ ನಾನು ರಾಜಕೀಯ ನಿವೃತ್ತಿಯಾಗಲಿದ್ದೇನೆ ಎಂದು ಮಾಜಿ ಶಾಸಕರಿಗೆ ಸವಾಲು ಹಾಕಿದರು.
ಈ ಸಂದರ್ಭದಲ್ಲಿ ತಾಲೂಕಿನ 27 ಗ್ರಾಮ ಪಂಚಾಯಿತಿಗಳ ನೂತನ ಸದಸ್ಯರುಗಳಿಗೆ ಕೇಸರಿ ಶಾಲು ಹಾರ ಹಾಕಿ ಸನ್ಮಾನಿಸಿ ಅಭಿನಂದಿಸಿ ಸಿಹಿ ನೀಡಿ ಶುಭಕೋರಿದರು. ತಾಲ್ಲೂಕಿನ ಲೋಕಮ್ಮನಹಳ್ಳಿ ಗ್ರಾ.ಪಂ. ವ್ಯಾಪ್ತಿಯ ನೀರಗುಂದ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ನಿವೃತ್ತ ಅಪರ ಜಿಲ್ಲಾಧಿಕಾರಿ ಆರ್.ಅಲ್ಲಪ್ಪ ಹಾಗೂ ಜೆ.ನಳಿನ ಇವರು ಶಾಸಕರ ಸಮ್ಮುಖದಲ್ಲಿ ಬಿಜೆಪಿ ಗೆ ಸೇರ್ಪಡೆಗೊಂಡರು.
ಕಾರ್ಯಕ್ರಮದಲ್ಲಿ ಬಿಜೆಪಿ ತಾ. ಅಧ್ಯಕ್ಷ ಎಡಗೀಹಳ್ಳಿ ವಿಶ್ವಣ್ಣ, ಬಿಜೆಪಿ ಮುಖಂಡರಾದ ಸಿ.ಎಸ್.ಪುರ ನಾಗರಾಜು, ತಿಮ್ಮರಾಯಪ್ಪ, ಮಲ್ಲೇಶ್, ವಿ.ಟಿ.ವೆಂಕಟರಾಮು, ಮಾಜಿ ಜಿ.ಪಂ.ಸದಸ್ಯ ಶ್ರೀನಿವಾಸ್, ವಕೀಲ ಮುದ್ದೇಗೌಡ, ವೀರೇಂದ್ರ ಪಾಟೀಲ್, ರವಿ, ಮೈನ್ಸ್ ರಾಜು, ಚಂದ್ರಯ್ಯ, ವಿ,ಬಿ.ಸುರೇಶ್, ಕಾಳಂಜೀಹಳ್ಳಿ ಸೋಮು ಸೇರಿದಂತೆ ಅನೇಕ ಮುಖಂಡರುಗಳು ಹಾಗೂ ಗ್ರಾ.ಪಂ.ಸದಸ್ಯರುಗಳು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
