ತುರುವೇಕೆರೆ :
ಮುಂದಿನ ಪೀಳಿಗೆಯು ಉತ್ತಮ ಹಾಗೂ ಆದರ್ಶ ಬದುಕನ್ನು ಕಟ್ಟಿಕೊಳ್ಳಲು ಇಂತಹ ಸಮ್ಮೇಳನಗಳ ಮೂಲಕ ಸಾಹಿತ್ಯಕ ಮೌಲ್ಯಗಳನ್ನು ತಿಳಿಸಿ ಮನನ ಮಾಡಿಸುವುದು ಬಹು ಅವಶ್ಯಕವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪ್ರೊ.ಜಿ.ಬಿ.ಶಿವರಾಜು ಹೇಳಿದರು.
ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದ ಆವರಣದ ಬಿ.ಎಂ.ಶ್ರೀಕಂಠಯ್ಯ ವೇದಿಕೆಯಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಓದು ಸಂಸ್ಕಾರವನ್ನು ಕಲಿಸುತ್ತದೆ. ಮೊದಲು ಮಕ್ಕಳಿಗೆ ಓದುವ ಗೀಳನ್ನು ಹಚ್ಚಿಸುವ ಕೆಲಸವನ್ನು ಶಿಕ್ಷಕರು ಮತ್ತು ಪೋಷಕರು ಮಾಡಬೇಕಿದೆ. ಮಕ್ಕಳಲ್ಲಿ ಕನ್ನಡದ ಅಭಿಮಾನ ಬೆಳೆಸಲು ಮತ್ತು ಸಾಹಿತ್ಯಗಳನ್ನು ಅಧ್ಯಯನ ಮಾಡಲು ಕವಿಪುಂಗವರ ಸಾಹಿತ್ಯಗಳನ್ನು ಮಕ್ಕಳಿಗೆ ನೀಡಿ ಓದಿಸುವುದು ಇಂದಿನ ಅಗತ್ಯವಾಗಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವ ಸ್ಥಿತಿ ಬಂದು ತಲುಪಿದೆ. ಪೋಷಕರಿಗೆ ಭಾಷೆಯ ಆಯ್ಕೆಯ ಹಕ್ಕು ನೀಡಿರುವುದರಿಂದ ಕನ್ನಡಕ್ಕೆ ಹಿನ್ನೆಡೆಯಾಗಿದೆ ಎಂದರು.
ರಾಜ್ಯ ಅಥವಾ ಕೇಂದ್ರ ಸರ್ಕಾರದ ಉದ್ಯೋಗವಾಗಲಿ. ಈ ನಾಡಿನ ಎಲ್ಲಾ ಕಛೇರಿಗಳಲ್ಲಿ ಬಹುಪಾಲು ಕನ್ನಡಿಗರೇ ಉದ್ಯೋಗಸ್ಥರಾಗಿರಬೇಕು ಎಂಬುದು ಕನ್ನಡಿಗರ ಸಾರ್ವತ್ರಿಕ ಬೇಡಿಕೆಯಾಗಬೇಕು. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೇವಲ ಹತ್ತರಷ್ಟು ಮಾತ್ರ ಕನ್ನಡಿಗರು ಕೆಲಸದಲ್ಲಿದ್ದಾರೆ. ಪೋಷಕರಿಗೂ ಸಹ ಕನ್ನಡ ಭಾಷೆಯ ಬಗ್ಗೆ ಆಶಕ್ತಿ ಕಡಿಮೆಯಾಗಿದ್ದು ತಮ್ಮ ಮಕ್ಕಳಿಗೆ ಇತರೆ ಭಾಷಾ ಪ್ರಾವಿಣ್ಯತೆ ಪಡೆಯಲಿ ಎಂಬ ಹಂಬಲದಿಂದಾಗಿ ಕನ್ನಡದ ನೋವನ್ನು ಕೇಳುವವರು ಯಾರೂ ಇಲ್ಲದಂತಾಗಿದೆ ಎಂದು ಶಿವರಾಜು ವಿಷಾದಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ನ ಅಧ್ಯಕ್ಷೆ ಬಾ.ಹ.ರಮಾಕುಮಾರಿ ಮಾತನಾಡಿ, ಜಿಲ್ಲೆಯಲ್ಲಿ ಕನ್ನಡ ಭವನವನ್ನು ನಿರ್ಮಿಸಿರುವ ಹಾಗೂ ಜಿಲ್ಲೆಯಲ್ಲಿ ಕನ್ನಡವನ್ನು ಜಾಗೃತಿಗೊಳಿಸಿದ ಸಂತೃಪ್ತಿ ತಮಗಿದೆ. ಜಿಲ್ಲೆಯ ಹಲವು ತಾಲೂಕು ಕೇಂದ್ರಗಳಲ್ಲಿ ಕನ್ನಡ ಭವನವನ್ನು ನಿರ್ಮಿಸಿ ಅಲ್ಲಿ ಕನ್ನಡದ ಕಾಯಕವಾಗುತ್ತಿರುವುದು ಸಂತಸ ತಂದಿದೆ. ಕನ್ನಡ ಭವನಗಳು ಕನ್ನಡದ ಹೆಗ್ಗುರುತಾಗಿ ಕೆಲಸ ಮಾಡುವಂತಾಗಬೇಕು. ಕನ್ನಡವನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದ್ದು ಅದರಂತೆ ಶಿಕ್ಷಕರು ಮಕ್ಕಳಿಗೆ ಕನ್ನಡದ ಭಾಷಾಭಿಮಾನ ಮೂಡಿಸುವ ಮೂಲಕ ಕನ್ನಡದ ಅಡಿಪಾಯವಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು ಮಾತನಾಡಿ, ಸರ್ಕಾರ ಕನ್ನಡ ಸಾಹಿತ್ಯ ಸಮ್ಮೇಳನದ ಅಚರಣೆಗೆಂದು ವಿಶೇಷ ಪ್ರೋತ್ಸಾಹ ನೀಡುತ್ತಿವೆಯಾದರು ಕನ್ನಡ ಸಾಹಿತ್ಯ ಸಮ್ಮೇಳನಗಳು ನಾಡಿನ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಮನದಾಳಕ್ಕೆ ಮುಟ್ಟಬೇಕು. ಆ ಮೂಲಕ ಪ್ರತಿಯೊಂದು ಮನೆ ಮನಕ್ಕೂ ಸಹ ಕನ್ನಡ ಸಾಹಿತ್ಯ ಸಮ್ಮೇಳನದ ಕಂಪು ಮೂಡುವಂತಾಗುತ್ತದೆ. ಇದೆಲ್ಲಾ ಆಸಾಧ್ಯ ಎನ್ನುವ ಮಾತೆ ಇಲ್ಲ ಎಂದರು.
ನಮ್ಮ ಸಮಾಜ ವೈಜ್ಞಾನಿಕವಾಗಿ ಬದಲಾಗುವ ಅಗತ್ಯವಿದೆ. ಕನ್ನಡ ಭಾಷೆಯ ಅಭಿವೃದ್ದಿ ಅಳಿವು ಉಳಿವುಗಳ ಬಗ್ಗೆ ಚರ್ಚೆಗಳ ಅಗತ್ಯವಿದೆ. ಎಲ್ಲದಕ್ಕೂ ಮೊದಲು ಕನ್ನಡ ಭಾಷೆಯನ್ನು ಪ್ರತಿಯೊಬ್ಬ ಕನ್ನಡಿಗ ತನ್ನಲ್ಲಿ ಅಳವಡಿಸಿಕೊಂಡು ಅಗತ್ಯವಾಗಿ ಬಳಸುವ ಮತ್ತು ಬೆಳೆಸುವ ಇಚ್ಚಾಶಕ್ತಿಯನ್ನು ಹೊಂದಿರಬೇಕು ಎಂದರು.
ಕನ್ನಡ ಸಾಹಿತ್ಯ ಪರಿಷತ್‍ನ ನಿಕಟಪೂರ್ವ ಅಧ್ಯಕ್ಷ ಹುಲಿಕಲ್ ನಟರಾಜು ಮಾತನಾಡಿ, ನಮ್ಮ ಸಮಾಜ ವೈಜ್ಞಾನಿಕವಾಗಿ ಬದಲಾಗುವ ಅಗತ್ಯವಿದೆ. ಇಂದು ದೇಹದ ಮಡಿವಂತಿಕೆಗೆ ಹೆಚ್ಚು ಬೆಲೆ ಕೊಡುತ್ತಿದ್ದೇವೆ ದೇಹದ ಮಡಿವಂತಿಕೆಯೊಂದಿಗೆ ಆಂತರಿಕ ಮಡಿವಂತಿಕೆಗೆ ಗೌರವ ಕೊಡಬೇಕಾಗುತ್ತದೆ. ವಿದ್ಯಾವಂತಿಕೆ ಬುದ್ದಿವಂತಿಕೆಯೊಂದಿಗೆ ಪ್ರಜ್ಞಾವಂತಿಕೆ ಬೆಳೆಸಿಕೊಳ್ಳುವ ಶಿಕ್ಷಣವನ್ನು ನೀಡಬೇಕಾಗುತ್ತದೆ. ಪಂಚಾಂಗ ವನ್ನು ಬದಿಗಿಟ್ಟು ಪಂಚ ಅಂಗಗಳಿಗೆ ಮಾನ್ಯತೆ ನೀಡಬೇಕು. ನಂಬಿ ಆದರೆ ಮೌಢ್ಯಕ್ಕೆ ಬಲಿಯಾಗಬೇಡಿ. ನಮ್ಮದು ಜಾತ್ಯಾತೀತ ರಾಷ್ಟ್ರ ಎಂದು ಹೇಳುತ್ತಲೇ ಮೀಸಲಾತಿಗಾಗಿ ಹಗಲಿರುಳೂ ಪಾದಯಾತ್ರೆಗಳು, ಇದಕ್ಕೆ ಮಠಾಧೀಶರ ಬೆಂಬಲ ದೊರೆಯುತ್ತಿದೆ. ಇವೆಲ್ಲವನ್ನೂ ನೋಡಿದರೆ ನಾವಿನ್ನು ಯಾವ ಯುಗದಲ್ಲಿದ್ದೇವೆ ಎಂಬ ಸಂಶಯ ಮೂಡುತ್ತದೆ ಎಂದರು.
ಮಾಜಿ ಶಾಸಕರುಗಳಾದ ಎಂ.ಟಿ.ಕೃಷ್ಣಪ್ಪ, ಎಂ.ಡಿ.ಲಕ್ಷ್ಮೀನಾರಾಯಣ್ ಹಾಗೂ ಎಸ್.ರುದ್ರಪ್ಪ ಮಾತನಾಡಿ, ನಮ್ಮ ಭಾಷೆ ಪ್ರಜ್ಞಾವಂತಿಕೆಯ ಭಾಷೆಯಾಗಬೇಕು. ಭಾಷೆ ಘೋಷಣೆ ಭಾಷಣಗಳಿಗಿಂತ ಅನ್ನದ ಭಾಷೆಯಾಗಿ ನೆಲೆಗೊಂಡರೆ ಮಾತ್ರ ಭಾಷೆಯ ಅsಸ್ತಿತ್ವ ಉಳಿಯುತ್ತದೆ. ಇಂದು ವೈಜ್ಞಾನಿಕ ಯುಗ ಸಂಪೂರ್ಣವಾಗಿ ಕನ್ನಡ ತಂತ್ರಾಂಶವಾದರೆ ಮಾತ್ರ ತಾತ್ವಿಕತೆಯ ನೆಲೆಗಟ್ಟಿನಲ್ಲಿ ಕನ್ನಡ ಭಾಷೆಯ ಅಸಡ್ಡೆ ನಿವಾರಣೆ ಸಾಧ್ಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ಕನ್ನಡ ನಾಡು ನುಡಿಗಾಗಿ ಹಲವಾರು ಮಹನೀಯರು ಹೋರಾಟ ಮಾಡಿದ್ದಾರೆ. ನಾವುಗಳು ಸಹ ಕನ್ನಡ ಉಳಿಸಿ ಬೆಳೆಸುವ ಜವಬ್ದಾರಿ ನಮ್ಮ ಮೇಲಿದೆ. ಕನ್ನಡದ ಭಾಷಾಭಿಮಾನ ತಾಲೂಕಿನಿಂದಲೇ ಶುರು ಮಾಡುವ ಸಲುವಾಗಿ ಎಲ್ಲಾ ಅಂಗಡಿ ಮುಂಗಟ್ಟುಗಳು, ಕಛೇರಿಗಳು ಸೇರಿದಂತೆ ಎಲ್ಲಾ ವ್ಯಾಪಾರ ವಹಿವಾಟು ಕೇಂದ್ರಗಳ ನಾಮಫಲಕಗಳು ಕನ್ನಡದಲ್ಲೇ ಅಳವಡಿಸುವಂತೆ ಮನವೊಲಿಸಲಾಗುವುದು. ಕಡ್ಡಾಯವಾಗಿ ಕನ್ನಡದ ಫಲಕವೇ ತಾಲೂಕಿನಾದ್ಯಂತ ರಾರಾಜಿಸುವಂತೆ ಮಾಡುವುದಾಗಿ ಸಂಕಲ್ಪತೊಟ್ಟರು. ತಾಲೂಕಿನಲ್ಲಿ 5 ನೇ ಕನ್ನಡ ಸಾಹಿತ್ಯ ಸಮ್ಮೇಳನ ಜರುಗುತ್ತಿದ್ದರೂ ಸಹ ಹಲವಾರು ತಾಲೂಕಿನ ಅಧಿಕಾರಿಗಳು ಸಮ್ಮೇಳನಕ್ಕೆ ಬಾರದಿರುವುದು ಶಾಸಕರ ಬೇಸರಕ್ಕೆ ಕಾರಣವಾಯಿತು. ಕಾರ್ಯಕ್ರಮಕ್ಕೆ ಬಾರದಿರುವ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ತಹಸೀಲ್ದಾರ್ ಅವರಿಗೆ ಶಾಸಕರು ಸೂಚನೆ ನೀಡಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಪಟ್ಟಣದ ಪ್ರವಾಸಿ ಮಂದಿರದಿಂದ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷ ಜಿ.ಬಿ.ಶಿವರಾಜುರವರನ್ನು ಮೆರವಣಿಗೆಯ ಮೂಲಕ ಸಭಾ ವೇದಿಕೆಗೆ ಕರೆತರಲಾಯಿತು.
ವಿಚಾರಗೋಷ್ಟಿ ಹಾಗೂ ಕವಿಗೋಷ್ಟಿಗಳು ನಡೆದು, ಎಸ್‍ಎಸ್‍ಎಲ್‍ಸಿ ಯ ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ತಾಲ್ಲೂಕಿನ ಸಾಧಕರನ್ನು ಗೌರವಿಸಲಾಯಿತು.
ಸಮಾರೋಪ ಸಮಾರಂಭದ ದಿವ್ಯ ಸಾನಿದ್ಯ ವಹಿಸಿದ್ದ ಮಾಯಸಂದ್ರ ಕಲ್ಪತರು ಆಶ್ರಮದ ಶ್ರೀ ಪ್ರಸನ್ನನಾಥ ಸ್ವಾಮೀಜಿ ಮಾತನಾಡಿ, ಇಂದಿನ ತಾಲ್ಲೂಕು ಸಮ್ಮೇಳನ ಜಿಲ್ಲಾ ಸಮ್ಮೇಳನದೋಪಾದಿಯಲ್ಲಿ ಆಚರಿಸಿರುವುದು ನಿಜಕ್ಕೂ ಸಂತಸ ತಂದಿದ್ದು ಇಂತಹ ಸಮ್ಮೇಳನಗಳನ್ನು ತಾಲ್ಲೂಕಿನಲ್ಲಿ ಹಮ್ಮಿಕೊಳ್ಳುವ ಮೂಲಕ ಕನ್ನಡ ನಾಡು ನುಡಿಯ ಬಗ್ಗೆ ಜನರಲ್ಲಿ ಜಾಗೃತಿಗೊಳಿಸೋಣ ಎಂದು ಆಶೀರ್ವಚನ ನೀಡಿದರು.
ತಾ.ಕಸಾಪ ಅಧ್ಯಕ್ಷ ನಂ.ರಾಜು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾಜಿ ಜಿ.ಪಂ.ಸದಸ್ಯ ಚೌದ್ರಿ ರಂಗಪ್ಪ, ತುಮುಲ್ ಅಧ್ಯಕ್ಷ ಸಿ.ವಿ.ಮಹಲಿಂಗಯ್ಯ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಅಂಜನ್‍ಕುಮಾರ್, ಸಾಹಿತಿ ಕೆ.ಭೈರಪ್ಪ, ತಹಸೀಲ್ದಾರ್ ನಯೀಮ್ ಉನ್ನಿಸಾ, ಬಿಇಓ ರಂಗಧಾಮಯ್ಯ, ಮುಖಂಡರಾದ ಕೊಂಡಜ್ಜಿ ವಿಶ್ವಣ್ಣ, ಗುಡ್ಡೇನಹಳ್ಳಿ ಮಂಜುನಾಥ್, ಬಿ.ಗಂಗಣ್ಣ, ವಕೀಲ ಧನಪಾಲ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಚಂದ್ರಯ್ಯ ಸ್ವಾಗತಿಸಿ, ಹಂಸರೇಖಾ ನಿರೂಪಿಸಿ, ಅಶೋಕ್ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ