ತುರುವೇಕೆರೆ:
ಈ ಬಾರಿ ಸಕಾಲಕ್ಕೆ ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಅಲ್ಲದೆ ಕೃಷಿ ಚಟುವಟಿಕೆಗಳು ಬಿರುಸುಗೊಂಡಿವೆ.
ಮಾರ್ಚ್‍ನಿಂದಲೆ ಮಳೆಯ ಮಾರುತಗಳು ಆರಂಭಗೊಂಡು ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ವಾಡಿಕೆ ಮಳೆಗಿಂತ ಹೆಚ್ಚುವರಿ ಮಳೆಯಾಗಿ ಕೃಷಿಗೆ ಒತ್ತು ನೀಡಿದೆ. ಮೇ ಮಾಸಾಂತ್ಯಕ್ಕೆ 153 ಮಿ.ಮೀ. ಮಳೆಯಾಗಬೇಕಿದ್ದು 30 ಮಿ.ಮೀ. ಅಧಿಕ ಮಳೆಯಾಗಿದೆ. ಜೂನ್ ತಿಂಗಳಲ್ಲೂ 65 ಮಿ.ಮೀ. ಮಳೆಯಾಗಿದೆ.
ಮೃಗಶಿರಾ ಮಳೆಯು ಮುಂಗಾರು ಬಿತ್ತನೆ ಮಾಡಿರುವ ರೈತರನ್ನು ಕೈಹಿಡಿದು ಖುಷಿ ಪಡುವಂತೆ ಮಾಡಿದೆ. ಪ್ರಸ್ತುತ ಸಾಲಿನಲ್ಲಿ ತಾಲ್ಲೂಕಿನಾದ್ಯಂತ ಪೂರ್ವ ಮುಂಗಾರಿನ ಕೃಷಿಗೆ ಉತ್ತೇಜಕವಾಗಿ ಉತ್ತಮ ಮಳೆಯಾಗಿದ್ದು, ಹೆಸರು, ಉದ್ದು, ಸೇರಿದಂತೆ ಎಣ್ಣೆಕಾಳು ಬೆಳೆಗಳ ಉತ್ತಮ ಇಳುವರಿಯಾಗುವ ನೀರಿಕ್ಷೆಯಿದೆ. ತಾಲ್ಲೂಕಿನಾದ್ಯಂತ ಕೃಷಿ ಇಲಾಖೆ ಅನ್ವಯ 3,500 ಹೆಕ್ಟೇರ್ ಬಿತ್ತನೆ ಗುರಿಹೊಂದಿದ್ದು, ಈಗಾಗಲೇ 1,152 ಹೆಕ್ಟೇರ್‍ನಲ್ಲಿ ಹೆಸರು, 536 ಹೆಕ್ಟೇರ್‍ನಲ್ಲಿ ಹಲಸಂದೆ, ಎಳ್ಳು ಹಾಗೂ ಉದ್ದು 100 ಹೆಕ್ಟೇರ್‍ನಲ್ಲಿ ಬಿತ್ತಲಾಗಿದೆ. ಕಾಯಿ, ಈಚು, ಕಾಳುಗಟ್ಟುವ ಹಂತದೊಂದಿಗೆ ಕೃಷಿ ಎಲ್ಲೆಡೆ ಸಂಮೃದ್ದವಾಗಿದೆ. ಉತ್ತಮ ಮಳೆಯಿಂದಾಗಿ ವಾಣಿಜ್ಯ ಬೆಳೆಗಳಾದ ತೆಂಗು, ಅಡಕೆ, ಬಾಳೆ, ಮಾವು, ಅಚ್ಚ ಹಸಿರಿನಿಂದ ಕಂಗೊಳಿಸುವಂತಾಗಿದೆ. ಪ್ರಸ್ತುತ ಸಾಲಿನ ಪೂರ್ವ ಮುಂಗಾರು ಮಳೆ ಬೇಸಿಗೆ ಬೆಳೆಯ ಭತ್ತಕ್ಕೂ ಅನುಕೂಲವಾಗಿದ್ದು, ಭತ್ತದ ಬೆಳೆ ಕಾಳುಗಟ್ಟಿ ಬಲಿಯುವ ಹಂತ ತಲುಪಿದೆ.
ಅಡಿಕೆ ಬೆಳೆಯತ್ತ ರೈತರ ಒಲವು:
ತೆಂಗು ನಾಡಲ್ಲಿ ಅಡಿಕೆ ಬೆಳೆಗೆ ರೈತರು ವಿಶೇಷ ಒತ್ತು ನೀಡುತ್ತಿದ್ದಾರೆ. ತೇಂಗು ಬೆಳೆಗೆ ಸಸಿ ನೆಟ್ಟು ಬೆಳೆಸಲು ಆರೈಕೆಯಿಂದ ಹಿಡಿದು ಅದರ ಗೇಯ್ಮೆ, ನೀರು, ಗೊಬ್ಬರ ನೀಡುವುದರ ಜೊತೆಗೆ ತೆಂಗಿನ ಕಾಯಿ ಕೀಳಿಸುವುದು, ಅದಕ್ಕೆ ಶೆಡ್ಡ್ ಮಾಡಿ ತುಂಬಿಸುವುದು, ಕೊಬ್ಬರಿ ಬಂದ ಸಂದರ್ಭದಲ್ಲಿ ಅದನ್ನು ಸುಲಿಸಿ, ಒಡೆದು, ಚೀಲ ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ ಬಿಡುವವರೆಗೂ ಖರ್ಚಿನ ಜೊತೆಗೆ ರೈತ ಹೈರಾಣಾಗುತ್ತಾನೆ. ಇಷ್ಟೆಲ್ಲಾ ಕಷ್ಟ ಪಟ್ಟರೂ ಸಹಾ ತೆಂಗು ಬೆಳೆಯಲ್ಲಿ ಹೆಚ್ಚಿನ ಲಾಭವನ್ನೇನೂ ನಿರೀಕ್ಷಿಸಲಾರ. ಅದೇ ಅಡಕೆ ಬೆಳೆಗೆ ಬಂಗಾರದ ಬೆಲೆ ಬಂದಿದ್ದು, ಹೆಚ್ಚು ಖರ್ಚಿಲ್ಲದೆ ಸಕಾಲಕ್ಕೆ ನೀರು, ಗೊಬ್ಬರ ಕೊಟ್ಟು ಗೊನೆ ಬಿಟ್ಟ ಸಂದರ್ಭದಲ್ಲಿ ಚೇಣಿಗೆ ನೀಡಿದಲ್ಲಿ ಹೆಚ್ಚು ಲಾಭದ ಜೊತೆಗೆ ಅದನ್ನು ಕಿತ್ತು ಸುಲಿದು ಬೇಯಿಸುವ ಗೋಜಿಲ್ಲದೆ ನೆಮ್ಮದಿಯಾಗಿರಬಹುದೆಂಬ ದೃಷ್ಟಿಯಿಂದ ತಮ್ಮ ಜಮೀನುಗಳಲ್ಲಿ ತೆಂಗು ಬೆಳೆಗೆ ಪರ್ಯಾಯವಾಗಿ ಅಡಿಕೆ ಬೆಳೆಯಿಡಲು ವಿಶೇಷ ಕಾಳಜಿ ವಹಿಸುತ್ತಿರುವುದು ತಾಲ್ಲೂಕಿನ ಎಲ್ಲೆಡೆ ಕಾಣಬರುತ್ತಿದೆ.
ರೋಗ ನಿಯಂತ್ರಣ:
ಪೂರ್ವ ಮುಂಗಾರಿನ ಬೆಳೆಗಳೊಂದಿಗೆ ತಾಲ್ಲೂಕಿನಾದ್ಯಂತ ದ್ವಿದಳದಾನ್ಯ, ಎಣ್ಣೆ ಕಾಳು, ಉತ್ತಮ ಇಳುವರಿಯನ್ನು ನಿರೀಕ್ಷಿಸಲಾಗಿದ್ದು, ಅಸಲಿ ಮುಂಗಾರು ಬಿತ್ತನೆಗೆ ಅನುಕೂಲವಾಗುವಂತೆ ತಾಲ್ಲೂಕಿನ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಎಂಆರ್-6 ರಾಗಿ ತಳಿ 8 ಕ್ವಿಂಟಲ್, ಬಿ.ಆರ್.ಜಿ-5 ತೊಗರಿ 322 ಕ್ವಿಂಟಲ್ ದಾಸ್ತಾನು ಇದ್ದು ಹೋಬಳಿಯ ರೈತಸಂಪರ್ಕ ಕೇಂದ್ರಗಳಲ್ಲಿ ಕೃಷಿಕರು ಬಿತ್ತನೆ ಬೀಜ ಪಡೆದುಕೊಳ್ಳಬಹುದು. ಹೆಸರಿಗೆ ಹಳದಿ ನಂಜಿನ ರೋಗ ಕಾಣಿಸಿಕೊಂಡಲ್ಲಿ ಪ್ರಾರಂಭ ಹಂತದಲ್ಲೇ ಒಂದು-ಎರಡು ಗಿಡಗಳಿದ್ದಲ್ಲಿ ಬೇರುಸಹಿತ ಅವುಗಳನ್ನು ಕಿತ್ತೊಗೆದರೆ ಹತೋಟಿ ಕೈಗೊಳ್ಳಬಹುದು. ರೋಗ ಅಧಿಕವಾಗಿ ಹರಡಿದಲ್ಲಿ 5 ಎಂಎಲ್ ಬೇವಿನ ಎಣ್ಣೆಯನ್ನು ಒಂದು ಲೀಟರ್ ನೀರಿನಲ್ಲಿ ಇಲ್ಲವೆ ಇಮಿಡಾ ಕ್ಲೋಪ್ರೀಡ್ ದ್ರಾವಣವನ್ನು ಒಂದು ಎಂಎಲ್‍ಗೆ 2 ಲೀಟರ್ ನೀರು ಬೆರೆಸಿ ಸಿಂಪಡಿಸಿ ಹತೋಟಿಗೆ ತರಬಹುದೆಂದು ಕೃಷಿ ಸಹಾಯಕ ನಿರ್ದೇಶಕಿ ಕುಮಾರಿ ಪೂಜಾ ತಿಳಿಸಿದ್ದಾರೆ.
ಒಟ್ಟಿನಲ್ಲಿ ಈ ಬಾರಿ ತಾಲ್ಲೂಕಿನಾದ್ಯಂತ ಸಕಾಲಕ್ಕೆ ಉತ್ತಮ ಮಳೆಯಾಗುತ್ತಿರುವುದು ರೈತರಿಗೆ ನೆಮ್ಮದಿ ತಂದಿದ್ದು, ಮುಂದಿನ ದಿನಗಳಲ್ಲಿಯೂ ಸಕಾಲಕ್ಕೆ ಮಳೆಯಾದಲ್ಲಿ ಪೂರ್ಣಪ್ರಮಣದಲ್ಲಿ ಮುಂಗಾರು ಬೆಳೆ ತನ್ನ ಕಣಜ ಸೇರಬಹುದೆಂಬ ನಿರೀಕ್ಷೆ ರೈತನದು.
-ಮಲ್ಲಿಕಾರ್ಜುನ ದುಂಡ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ