ಹುಳಿಯಾರು :
ಬೋರನಕಣಿವೆ ಕೋಡಿ ಹಳ್ಳದ ಜಲ ಮೂಲಕ್ಕೆ ಅಡ್ಡಲಾಗಿ ಲಕ್ಕೇನಹಳ್ಳಿ ಬಳಿ ಪಕ್ಕದ ತೋಟದ ಮಾಲೀಕರು ಸುರಿದಿರುವ ಮಣ್ಣು ತೆರವು ಮಾಡಿ ನೈಸರ್ಗಿಕವಾಗಿ ನೀರು ಹರಿಯುವಂತೆ ಮಾಡಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಗಂಟೆನಹಳ್ಳಿಯಿಂದ ಬರುವ ಹಳ್ಳವು ಬೋರನಕಣಿವೆಯ ಕೋಡಿಹಳ್ಳ ಹಾಗೂ ಲಕ್ಕೇನಹಳ್ಳಿ ಬಳಿ ಇತ್ತೀಚೆಗೆ 1 ಕೋಟಿ ರೂ. ವೆಚ್ಚದಲ್ಲಿ ಕಟ್ಟಿರುವ ಪಿಕಪ್ ಮೂಲಕ ನೈಸರ್ಗಿಕವಾಗಿ ಹರಿಯುತ್ತದೆ. ಆದರೆ ಕೋಡಿಹಳ್ಳಕ್ಕೆ ಹೋಗುವ ಮಾರ್ಗದಲ್ಲಿ ಅಡ್ಡಲಾಗಿ ತೋಟದ ಮಾಲೀಕರು ಓಡಾಡಲು ಮಣ್ಣು ಹಾಕಿ ರಸ್ತೆ ಮಾಡಿದ್ದಾರೆ.
ಕೋಡಿಹಳ್ಳಕ್ಕೆ ನೀರು ಹರಿದರೆ ಸರಿ ಸುಮಾರು 1 ಕಿಮೀ ದೂರದಷ್ಟು ನೀರು ನಿಂತು ಈ ಭಾಗದ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ. ಆದರೆ ರಸ್ತೆ ಮಾಡಲು ನೂರಾರು ಲೋಡ್ ಮಣ್ಣು ಸುರಿದಿರುವುದರಿಂದ ಸರಾಗವಾಗಿ ನೀರು ಹರಿಯಲು ತಡೆಯಾಗಿದೆ. ಪರಿಣಾಮ ಇಲ್ಲಿನ ಸಾವಿರಾರು ಎಕರೆ ಭೂ ಪ್ರದೇಶದ ಕೃಷಿ ಚಟುವಟಿಕೆಗೆ ತೊಡಕಾಗಿದೆ.
ಕಳೆದ 3-4 ದಿನಗಳಿಂದ ಉತ್ತಮ ಮಳೆಯಾಗುತ್ತಿರುವುದರಿಂದ ಗಂಟೆನಹಳ್ಳಿ ಕೆರೆ ತುಂಬಿ ಬಡಕೆಗುಡ್ಲು ಬಳಿಯ ಮುನಿಯಪ್ಪನ ಒಡ್ಡಿಗೆ ಬರುತ್ತಿದೆ. ಸೋಮವಾರವೂ ಸಹ ಉತ್ತಮ ಮಳೆಯಾದರೆ ಒಡ್ಡೂ ಸಹ ತುಂಬಿ ಹರಿಯುತ್ತದೆ. ಹಾಗಾಗಿ ನೀರಾವರಿ ಇಲಾಖೆಯವರು ತಕ್ಷಣ ಹಳ್ಳಕ್ಕೆ ಅಡ್ಡಲಾಗಿ ಹಾಕಿರುವ ಮಣ್ಣು ತೆರವು ಮಾಡಿ ನೀರು ಬೋರನಕಣಿವೆ ಕೋಡಿಹಳ್ಳಕ್ಕೆ ಸರಾಗವಾಗಿ ಹರಿಯುವಂತೆ ಮಾಡಲು ಮನವಿ ಮಾಡಿದ್ದಾರೆ.
ನೀರಾವರಿ ಇಲಾಖೆ ವ್ಯಾಪ್ತಿಗೆ ಬರಲ್ಲ :
ಕೆರೆ ಮತ್ತು ಜಲಾಶಯದ ಜಲ ಮೂಲದ ಹಳ್ಳಕ್ಕೆ ಅಡ್ಡಲಾಗಿ ಮಣ್ಣು ಹಾಕಿದ್ದರೆ ಮಾತ್ರ ಇಲಾಖಾ ವ್ಯಾಪ್ತಿಯಲ್ಲಿ ಬರುತ್ತದೆ. ಆಗ ನಾವೇ ಖುದ್ದು ತೆರಳಿ ತೆರವು ಮಾಡಿಸುತ್ತೇವೆ. ಆದರೆ ಜಲಾಶಯದ ಕೋಡಿಹಳ್ಳ ನಮ್ಮ ವ್ಯಾಪ್ತಿಯಲ್ಲಿ ಬರೋದಿಲ್ಲ. ಕೋಡಿಹಳ್ಳಕ್ಕೆ ನೀರು ಹರಿಯುವುದರಿಂದ ಅನುಕೂಲವಾಗುವ ರೈತರೆಲ್ಲರೂ ಒಂದಾಗಿ ಮಣ್ಣು ಹಾಕಿದವರನ್ನು ಮನವೊಲಿಸಿ ತೆರವು ಮಾಡಿಸಲು ಮುಂದಾಗಬೇಕು ಅಥವಾ ನೀರು ಹರಿಯಲು ಅನುಕೂಲ ಆಗುವಂತೆ ಸಿಸಿ ಪೈಪ್‍ಗಳನ್ನು ಹಾಕಿ ರಸ್ತೆ ಮಾಡಿಕೊಳ್ಳಿ ಎಂದು ತಿಳಿ ಹೇಳಬೇಕು.
-ಪ್ರಭಾಕರ್, ಎಂಜಿನಿಯರ್, ಸಣ್ಣ ನೀರಾವರಿ ಇಲಾಖೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
