ತುರುವೇಕೆರೆ :
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ತತ್ತರಿಸುತ್ತಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ಆಡಳಿತದ ವಿರುದ್ಧ ಜು.19 ರಂದು ತಾಲೂಕು ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಮೋದಿಯವರ ಬಗ್ಗೆ ಜನರು ಅಪಾರವಾದ ವಿಶ್ವಾಸವನ್ನು ಇಟ್ಟು ಗೆಲ್ಲಿಸಿದ್ದರು. ಆದರೆ ಮೋದಿಯವರು ನೀಡಿದ್ದ ಭರವಸೆಗಳು ಕೆಲವೇ ದಿನಗಳಲ್ಲಿ ಹುಸಿಯಾಗಿವೆ. ಮೋದಿಯವರು ಚುನಾವಣೆಗೆ ಮುನ್ನ ಜನರಿಗೆ ನೀಡಿದ್ದ ಅಚ್ಚೆ ದಿನಗಳ ಭರವಸೆ ಸುಳ್ಳಾಗಿದ್ದು ಈಗ ಜನರಿಗೆ ಮೋದಿಯವರ ಕಡೆಯಿಂದ ಸಂಕಷ್ಟದ ದಿನಗಳು ಮಾತ್ರ ಇವೆ ಎಂದು ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ವ್ಯಂಗ್ಯವಾಡಿದರು.
ಕೊರೋನಾ ಬಂದು ಜನರು ಜೀವನ ನಡೆಸುವುದೆ ದುಸ್ತರವಾಗಿರುವ ಈ ಸಂಧರ್ಭದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 100 ರೂ. ಗಡಿ ದಾಟುತ್ತಿರುವುದು ವಿಷಾದನೀಯ. ಅಡಿಗೆ ಎಣ್ಣೆ ಸಹ 80 ರೂ. ಗಳಿಂದ 200 ರೂ.ಗಳ ಗಡಿ ದಾಟಿರುವುದು ಮೋದಿಯವರು ಹೇಳಿದ್ದ ಅಚ್ಚೆ ದಿನಗಳು ಇವೇನಾ ಎಂದು ಕೇಳುವಂತಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ ನೆಮ್ಮದಿಯ ಸಂಸಾರ ಮಾಡಿಕೊಂಡಿದ್ದ ಕಡುಬಡವರಿಗೆ ಉಚಿತ ಗ್ಯಾಸ್ ಸಿಲೆಂಡರ್ ಕೊಟ್ಟು ಮೋಸ ಮಾಡಿದರು. ಗ್ಯಾಸ್ ಸಿಲೆಂಡರ್ ಬೆಲೆ 900 ರೂಗಳತ್ತ ಸಾಗಿದೆ. ಇನ್ನು ರೈತಾಪಿ ಜನರಿಗೆ ಅತ್ಯಾವಶ್ಯಕವಾಗಿ ಬೇಕಾದ ಗೊಬ್ಬರದ ಬೆಲೆ ಗಗನಕ್ಕೇರಿದೆ. ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡರು ಮಾತ್ರ ಗೊಬ್ಬರಕ್ಕೆ ಸಬ್ಸಿಡಿ ನೀಡಿ ರೈತರ ಪಾಲಿಗೆ ವರವಾಗಿದ್ದರು ಎಂದರು.
ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಘೋಷಿಸಿರುವ ಪ್ಯಾಕೇಜ್ ಕೇವಲ ರಾಜಕೀಯ ಗಿಮಿಕ್. ಅದೊಂದು ಅವೈಜ್ಞಾನಿಕವಾದ ತೀರ್ಮಾನ. ಪ್ರತಿಯೊಬ್ಬರ ಕೂಲಿಯೇ ತಿಂಗಳಿಗೆ ಕನಿಷ್ಠ 18 ಸಾವಿರ ಇದೆ. ಆದರೆ ಕೇವಲ 1-2 ಸಾವಿರ ಘೋಷಣೆ ಮಾಡಿರುವುದು ಸರಿಯಲ್ಲ. ಕೋವಿಡ್ ನಿಂದ ಮೃತಪಟ್ಟಿರುವ ಕುಟುಂಬಕ್ಕೆ ಮುಖ್ಯಮಂತ್ರಿಗಳು ಘೋಷಿಸಿರುವ 1 ಲಕ್ಷ ರೂ.ಗಳ ಪರಿಹಾರ ಕ್ರಮ ಸ್ವಾಗತಾರ್ಹ. ಆದರೇ ಇದನ್ನು 1 ಲಕ್ಷ ರೂ. ನಿಂದ 5 ಲಕ್ಷ ರೂಗೆ ಏರಿಸಬೇಕೆಂದು ಆಗ್ರಹಿಸಿದರು.
ತಾಲೂಕು ಆಡಳಿತ ಸಂಪೂರ್ಣ ಕುಸಿದಿದ್ದು ತಾಲೂಕು ಜೆಡಿಎಸ್ ವತಿಯಿಂದ ಜುಲೈ 19 ರ ಸೋಮವಾರದಂದು ಸಾವಿರಾರು ರೈತರು ಮತ್ತು ಜೆಡಿಎಸ್ ಕಾರ್ಯಕರ್ತರೊಂದಿಗೆ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
ತಾಲೂಕಿಗೆ ರಾಜ್ಯ ಸರ್ಕಾರದಿಂದ ಈ ಸಾಲಿನಲ್ಲಿ ಸುಮಾರು 922 ಕೋಟಿ ರೂ.ಗಳ ಅನುದಾನವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಡುಗಡೆ ಮಾಡಿದ್ದಾರೆ ಎಂದು ಹಲವು ಮಾಧ್ಯಮಗಳಲ್ಲಿ ಬಿತ್ತರವಾಗಿರುವ ಸುದ್ದಿಯು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ. ಆದರೆ 922 ಕೋಟಿ ರೂ.ಗಳಷ್ಟು ಕಾಮಗಾರಿಗಳನ್ನು ಎಲ್ಲೆಲ್ಲಿ ಮಾಡಲಾಗಿದೆ ಹಾಗೂ ಕಾಮಗಾರಿಗಳಿಗೆ ಬಳಸಿರುವ ಹಣ ಎಷ್ಟು ಎಂಬುದರ ಬಗ್ಗೆ ತಾಲೂಕಿನ ಜನರಲ್ಲಿ ಗೊಂದಲ ಉಂಟಾಗಿದೆ ಕೂಡಲೆ ಶಾಸಕ ಮಸಾಲಾ ಜಯರಾಮ್ ಸ್ಪಷ್ಟನೆ ನೀಡಬೇಕು ಎಂದು ರಾಜ್ಯ ಯುವ ಜೆಡಿಎಸ್‍ನ ಪ್ರಧಾನ ಕಾರ್ಯದರ್ಶಿ ದೊಡ್ಡಾಘಟ್ಟ ಚಂದ್ರೇಶ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸ್ವಾಮಿ, ಎಪಿಎಂಸಿ ಸದಸ್ಯ ವಿಜಯಕುಮಾರ್, ತಾಲೂಕು ಪಂಚಾಯ್ತಿ ಮಾಜಿ ಅಧ್ಯಕ್ಷ ಕೋಳಾಲ ಗಂಗಾಧರ್, ಜೆಡಿಎಸ್ ವಕ್ತಾರ ವೆಂಕಟಾಪುರ ಯೋಗೀಶ್, ಜಿ.ಪಂ.ಮಾಜಿ ಸದಸ್ಯ ಕೆ.ಬಿ.ಹನುಮಂತಯ್ಯ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಮಂಗೀಕುಪ್ಪೆ ಬಸವರಾಜು, ಮಧುಸೂಧನ್, ಜೆಡಿಎಸ್ ಯುವ ಅಧ್ಯಕ್ಷ ಬಾಣಸಂದ್ರ ರಮೇಶ್, ಮುಖಂಡ ಭೈತರಹೊಸಳ್ಳಿ ರಾಮಚಂದ್ರು, ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ