ತುರುವೇಕೆರೆ :

ವಿದ್ಯಾರ್ಥಿಗಳು ಕೇವಲ ಒಂದೇ ವಿಷಯಕ್ಕೆ ಸೀಮಿತರಾಗದೆ ಬೇರೆ ಬೇರೆ ಮೂಲಗಳಿಂದ ಜ್ಞಾನಾರ್ಜನೆ ವೃದ್ದಿ ಮಾಡಿಕೊಂಡಾಗ ಮಾತ್ರ ನೈಜ ಅರಿವು ಬೆಳೆಯಲಿದೆ ಎಂದು ಶಾಸಕ ಮಸಾಲ ಜಯರಾಮ್ ಮಕ್ಕಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಉಚಿತ ಟ್ಯಾಬ್ಲೆಟ್ ಪಿಸಿ ವಿತರಣಾ ಸಮಾರಂಭ ಹಾಗೂ ಆಂತರಿಕ ಭರವಸಾ ಗುಣಮಟ್ಟ ಕೋಶ ಪ್ರಾಯೋಜಿತ ಐಸಿಟಿ ಸ್ಮಾರ್ಟ್ ತರಗತಿಗಳ ಉದ್ಘಾಟನಾ ಸರಳ ಸಮಾರಂಭದಲ್ಲಿ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಿ ಮಾತನಾಡಿದ ಅವರು ನಮ್ಮಗಳ ಪ್ರಾರಂಭದ ಕಲಿಕೆಯಲ್ಲಿ ಶಿಕ್ಷಕರು ಮಣ್ಣಿನ ಸ್ಲೇಟು, ಬಳಪದ ಮೂಲಕ ಕೈಹಿಡಿದು ಅಕ್ಷರಗಳನ್ನು ತಿದ್ದಿಸುತ್ತಿದ್ದರು. ಆದರೆ ಕಾಲಚಕ್ರ ಉರುಳಿದಂತೆ ವಿಜ್ಞಾನ ಮತ್ತು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವುದರಿಂದ ಅದಕ್ಕೆ ಪೂರಕವಾದ ಜ್ಞಾನ ಬೆಳೆಸಿಕೊಳ್ಳಬೇಕಾಗುತ್ತದೆ. ಸಾಧನೆಗೆ ಅನುಕೂಲಕರ ಸಾಧನಗಳು ಮುಖ್ಯವಾಗಿದ್ದು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಟ್ಯಾಬ್ಲೆಟ್ ವಿತರಣೆ ಮಾಡಲಾಗುತ್ತಿದ್ದು ವಿದ್ಯಾರ್ಥಿಗಳು ಇದನ್ನು ದುರುಪಯೋಗಪಡಿಸಿಕೊಳ್ಳದೆ ಕೇವಲ ಶೈಕ್ಷಣಿಕ ಗುಣಮಟ್ಟಕ್ಕೆ ಮಾತ್ರ ಬಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಪ್ರತಿ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಟ್ಯಾಬ್ಲೆಟ್ ವಿತರಿಸಲಾಯಿತು. ಕಾಲೇಜಿನ ಪ್ರಾಂಶುಪಾಲ ಕುಮಾರ್, ದಂಡಿನಶಿವರ ಹೊನ್ನಾದೇವಿ ಕಾಲೇಜಿನ ಪಾಂಶುಪಾಲ ಎನ್.ಬಿ.ಶಿವಾನಂದಯ್ಯ, ಸಿ.ಎಸ್.ಪುರ ಕಾಲೇಜಿನ ಪ್ರಾಂಶುಪಾಲ ರಾಜರೆಡ್ಡಿ, ತುರುವೇಕೆರೆ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಕೃಷ್ಣಪ್ಪ, ಜಯಕುಮಾರ್ ಸೇರಿದಂತೆ ಶಿಕ್ಷಕರು ಹಾಗೂ ಹಲವು ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








