ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಮಲ್ಲಾಘಟ್ಟ ಕೆರೆ

ತುರುವೇಕೆರೆ : 

     ಇತ್ತೀಚೆಗೆ ಧಾರಾಕಾರವಾಗಿ ಸುರಿದ ಮಳೆ ಹಾಗು ಹೇಮಾವತಿ ನೀರಿನಿಂದ ತುಂಬಿ ಹರಿಯುತ್ತಿರುವ ಮಲ್ಲಾಘಟ್ಟ ಕೆರೆ ಪ್ರತಿವರ್ಷದಂತೆ ಈ ವರ್ಷವೂ ಸಹಾ ಪ್ರವಾಸಿಗರನ್ನು ಆಕರ್ಷಿಸಿದೆ.

      ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿರುವ ತಾಲ್ಲೂಕಿನ ಮಲ್ಲಾಘಟ್ಟ ಕೆರೆ ಇತಿಹಾಸ ಪ್ರಸಿದ್ಧ ಪುಣ್ಯ ಕ್ಷೇತ್ರವಾಗಿದೆ. ತುರುವೇಕೆರೆ ಪಟ್ಟಣಕ್ಕೆ ಕೇವಲ 5 ಕಿ.ಮೀ ಅಂತರದಲ್ಲಿದ್ದು ಪಟ್ಟಣಕ್ಕೆ ಕುಡಿಯುವ ನೀರು ಒದಗಿಸುವ ಜೊತೆಗೆ ತಾಲ್ಲೂಕಿನ ಜೀವನಾಡಿಯಾಗಿದ್ದು ದೊಡ್ಡ ಕೆರೆ ಇದಾಗಿದೆ. ಹೇಮಾವತಿ ಹಾಗೂ ಮಳೆ ನೀರಿನಿಂದ ಈ ಬಾರಿ ಕೆರೆ ತುಂಬಿ ಕೋಡಿ ಬಿದ್ದಿರುವುದರಿಂದ ಕೆರೆ ಕೋಡಿಯಿಂದ ಹೊರ ಬರುವ ನೀರು ಬಿಳಿ ನೊರೆಯಿಂದ ಹಾಲಿನೋಪಾದಿಯಲ್ಲಿ ಬಹಳ ಆಕರ್ಷಣೀಯವಾಗಿದೆ. ಸೂರ್ಯಾಸ್ತಮಯದ ವೇಳೆ ಸೂರ್ಯ ಮುಳುಗುವ ರಮಣೀಯ ದೃಶ್ಯವನ್ನು ಕಣ್ತುಂಬಿಸಿಕೊಳ್ಳಲು ಹಾಗು ನೀರಲ್ಲಿ ಆಟವಾಡಿ, ಈಜಾಡಿ ಕುಣಿದು ಕುಪ್ಪಳಿಸಲು ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಹಬ್ಬಹರಿದಿನಗಳು ಹಾಗೂ ಭಾನುವಾರದಂದು ಪ್ರವಾಸಿಗರು ಹಾಗೂ ಪೋಷಕರು ತಮ್ಮ ಮಕ್ಕಳು ಹಾಗೂ ಸಂಬಂಭಿಕರ ಜೊತೆ ಬಂದು ಇಲ್ಲಿ ಮಕ್ಕಳು ಅನುಭವಿಸುವ ಖುಷಿ, ಉತ್ಸಾಹಕ್ಕೆ ಪೋಷಕರ ಆನಂದ ಹೇಳತೀರದು.

 ರಮಣೀಯ ಸೂರ್ಯಸ್ತಮಯ :

     ಮಲ್ಲಾಘಟ್ಟಕೆರೆ ಕೋಡಿ ಬಿದ್ದ ಸಂದರ್ಭದಲ್ಲಿ ಸಂಜೆ ಸೂರ್ಯಾಸ್ತಮಯವನ್ನು ನೋಡುವುದೆಂದರೆ ಎಲ್ಲಿಲ್ಲದ ಆನಂದ. ಸಂಜೆಯಾಗುತ್ತಿದ್ದಂತೆ ಸೂರ್ಯ ಮುಳುಗುವ ಸಮಯದಲ್ಲಿ ಕೆಂಪು ಬೆಂಕಿಯುಂಡೆಯೋಪಾದಿಯಲ್ಲಿ ನೀರಿನೊಳಕ್ಕೆ ಇಳಿದಂತೆ ಭಾಸವಾಗಿ ಪ್ರವಾಸಿಗರನ್ನು ಮಂತ್ರಮುಗ್ದರನ್ನಾಗಿಸುತ್ತದೆ. ಈ ಸಂದರ್ಭದಲ್ಲಿ ನೂರಾರು ಜನ ಆ ದೃಶ್ಯವನ್ನು ತಮ್ಮ ಮೊಬೈಲ್‍ಗಳಲ್ಲಿ ಕ್ಲಿಕ್ಕಿಸಿಕೊಳ್ಳುತ್ತಾರೆ.

ಕೆರೆ ಇತಿಹಾಸ:

      ಮಲ್ಲಾಘಟ್ಟ ಕೆರೆ ಸುಮಾರು 250 ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು ಒಂದು ಬಾರಿ ಕೆರೆ ತುಂಬಿತೆಂದರೆ ಸುಮಾರು 580 ಎಂಸಿಎಫ್‍ಟಿ ನೀರು ಸಂಗ್ರಹವಾಗುತ್ತದೆ. ಇದರ ವ್ಯಾಪ್ತಿ 57 ಕಿಮೀ ಒಳಗೊಂಡಿದೆ. ಇತ್ತೀಚೆಗಷ್ಟೇ ಕೋಡಿ ಕಾಮಗಾರಿ ನವೀಕರಿಸಲಾಗಿದೆ. ಈ ಕೆರೆಯ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಗಂಗಧರೇಶ್ವರ ದೇವಾಲಯಗಳಿವೆ. ದಕ್ಷಿಣ ಭಾಗದ ಕೋಡಿಯಲ್ಲಿರುವ ಶ್ರೀ ಗಂಗಾಧರೇಶ್ವರ ಸ್ವಾಮಿಯ ದೇವಾಲಯ ಹಲವಾರು ವರ್ಷಗಳ ಹಿಂದೆ ಕೇವಲ ಬಂಡೆಯ ಮೇಲೆ ಕಲ್ಲಿನಿಂದ ಈ ದೇವಸ್ಥಾನದ ಕಟ್ಟಡವನ್ನು ಅಡಿಪಾಯವಿಲ್ಲದೇ ಬಂಡೆಯ ಮೇಲೆಯೇ ಕಟ್ಟಲಾಗಿದೆ, ದೇವರ ಗರ್ಭಗುಡಿಯ ಮುಖ್ಯ ದ್ವಾರದ ಬಲಭಾಗದ ಗೋಡೆಯಲ್ಲಿ ಕಿರುಬೆರಳಿನಾಕಾರದ ಕಿಂಡಿಯಿದ್ದು ಗರ್ಭಗುಡಿಯ ಹಿಂಭಾಗದ ಗೋಡೆಯಲ್ಲೂ ಸಮಾನಾಂತರವಾಗಿ ಮತ್ತೊಂದು ಕಿಂಡಿಯಿದ್ದು ಮುಂದಿನ ಕಿಂಡಿಯಿಂದ ನೋಡಿದರೆ ಸುಮಾರು 8 ಕಿ.ಮೀ. ಅಂತರದಲ್ಲಿ ಬೆಟ್ಟದ ಮೇಲಿರುವ ಶ್ರೀ ಕಂಚೀರಾಯಸ್ವಾಮಿ ದೇವಾಲಯದ ಶಿಖರ ಕಾಣುತ್ತಿತ್ತಂತೆ. ಆದರೆ ಇಂದು ಮರಗಿಡಗಳು ದೊಡ್ಡವಾಗಿ ಬೆಳೆದಿರುವುದರಿಂದ ಕೇವಲ ಕೆಲವೇ ದೂರದಲ್ಲಿರುವ ಮಂಟಪ ಮಾತ್ರ ಇಂದು ಕಾಣುತ್ತಿದೆ. ಇಲ್ಲಿ ಪ್ರತಿ ದಿನ ಗಂಗಾಧರೇಶ್ವರನಿಗೆ ಪೂಜೆ ನಡೆಯುತ್ತಿದೆ. ತಾಲ್ಲೂಕಿನಾದ್ಯಂತ ಮಹಿಳೆಯರಾದಿಯಾಗಿ ನೂರಾರು ಜನ ಭಕ್ತರು ಪ್ರತಿದಿನ ಈ ಕ್ಷೇತ್ರಕ್ಕೆ ಭೇಟಿ ನೀಡಿ ಈ ಕೆರೆಯಲ್ಲಿ ಗಂಗಾ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸುವರು. ತಾಲ್ಲೂಕಿನ ವಿವಿಧ ಗ್ರಾಮಗಳ ದೇವರುಗಳ ಮಡಿವಂತಿಕೆಗೆ ಭಂಗಬಂದ ಸಂದರ್ಭದಲ್ಲಿ ದೇವರ ವಿಗ್ರಹ ಹಾಗು ದೇವರುಗಳ ವಸ್ತ್ರಗಳನ್ನು ಸ್ವಚ್ಛಗೊಳಿಸಿ ಪುಣ್ಯೇವು ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಪ್ರತಿದಿನ ಇಲ್ಲಿ ನಡೆಯುತ್ತಿರುತ್ತವೆ.

      ಕೆರೆಯ ದಕ್ಷಿಣ ಭಾಗದಲ್ಲಿ ಹಲವಾರು ವರ್ಷಗಳ ಹಿಂದೆ ಮತ್ತೊಂದು ಗಂಗಾಧರೇಶ್ವರನ ದೇವಸ್ಥಾನ ನಿರ್ಮಾಣ ಮಾಡಿದ್ದು ನೋಡಲು ಅತ್ಯದ್ಬುತವಾಗಿದೆ. ಬೃಹದಾಕಾರದ ಈಶ್ವರನ ವಿಗ್ರಹ ನಿರ್ಮಾಣ ಮಾಡಲಾಗಿದ್ದು ನೋಡುಗರ ಕಣ್ಮನ ತಣಿಸುತ್ತಿದೆ. ಇಲ್ಲಿ ಸಮುದಾಯ ಭವನವಿದ್ದು ದೇವಸ್ಥಾನದ ಹಿಂಭಾಗದ ಸ್ಥಳದಲ್ಲಿ ದೋಣಿ ವಿಹಾರಕ್ಕೆ ಸೂಕ್ತ ಸ್ಥಳವಾಗಿದೆ. ವಿಶಾಲ ಮೈದಾನ ಹೊಂದಿದ್ದು ಮರಗಿಡಗಳಿಂದ ಶೋಭಿಸುತ್ತಿದ್ದು ಪ್ರವಾಸೋದ್ಯಮಕ್ಕೆ ಈ ಸ್ಥಳ ಹೇಳಿಮಾಡಿಸಿದಂತಿದೆ. ಶಿಂಷಾನದಿ ಮೂಲ ಈ ಸ್ಥಳದಿಂದಲೇ ಪ್ರಾರಂಭವಾಗಿ ಕುಣಿಗಲ್ ತಾಲ್ಲೂಕಿಗೆ ಹೋದಂತೆ ದೊಡ್ಡ ನದಿಯಾಗಿ ಹರಿದು ಮಾರ್ಕೋನಹಳ್ಳಿ ಡ್ಯಾಂ ಮೂಲಕ ಸಮುದ್ರ ಸೇರಲಿದೆ.

      ಮಂಗಳವಾರ ಇಲ್ಲವೆ ಶುಕ್ರವಾರ ಮಾತ್ರ ಈ ಕೆರೆ ಕೋಡಿ ಬೀಳುವುದು ವಿಶೇಷ. ಈ ಬಾರಿಯೂ ಸಹಾ ಮಂಗಳವಾರ ಕೋಡಿ ಬಿದ್ದಿದ್ದು, ಕೆರೆ ತುಂಬಿ ಕೋಡಿ ಬಿದ್ದ ಸಂದರ್ಭದಲ್ಲಿ ಸ್ಥಳೀಯ ಶಾಸಕರು, ಚುನಾಯಿತ ಪ್ರತಿನಿಧಿಗಳು, ಪಟ್ಟಣ ಪಂಚಾಯಿತಿ ಸದಸ್ಯರುಗಳು, ಮಲ್ಲಾಘಟ್ಟ ಕೆರೆ ಆಜುಬಾಜು ರೈತರು, ಮುಖಂಡರುಗಳು ಸೇರಿದಂತೆ ಅಪಾರ ಭಕ್ತರೊಡಗೂಡಿ ಶಾಸ್ತ್ರೋಕ್ತವಾಗಿ ಕೆರೆಗೆ ಬಾಗಿನ ಅರ್ಪಿಸುವುದು ಇಲ್ಲಿನ ಪದ್ದತಿ.

      ಮೂಲಭೂತ ಸೌಕರ್ಯದ ಕೊರತೆ:

      ಮಲ್ಲಾಘಟ್ಟ ಕೆರೆ ನೋಡಲು ಎಷ್ಟು ಆಕರ್ಷಣೀಯವಾಗಿದೆಯೋ ಅಷ್ಟೇ ಮೂಲಭೂತ ಸೌಕರ್ಯದ ಕೊರತೆಯೂ ಎದ್ದು ಕಾಣುತ್ತಿದೆ. ಮುಖ್ಯವಾಗಿ ಕೆರೆ ಕೋಡಿ ಬಿದ್ದ ಸಂಧರ್ಬದಲ್ಲಿ ಪ್ರತಿದಿನ ಸಾವಿರಾರು ಪ್ರವಾಸಿಗರು ತಮ್ಮ ಕುಟುಂಬದವರೊಂದಿಗೆ ಬೆಳಗಿನಿಂದ ಸಂಜೆವರೆಗೆ ನೀರಿನಲ್ಲೇ ಕಲಕಳೆಯುತ್ತಾರೆ. ಇಲ್ಲಿ ಮುಖ್ಯವಾಗಿ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಶೌಚಾಲಯಗಳಿಲ್ಲ, ಸ್ನಾನದ ಗೃಹಗಳಿಲ್ಲ. ಬಟ್ಟೆ ಬದಲಾಯಿಸುವ ಕೊಠಡಿಗಳಿಲ್ಲ. ಕೆರೆಯಲ್ಲಿ ಮಿಂದೆದ್ದ ಮಹಿಳೆಯರು ಮಕ್ಕಳು ಬಟ್ಟೆ ಬದಲಾಯಿಸಬೇಕೆಂದರೆ ಗಿಡಮರಗಳ ಆಶ್ರಯ ಪಡೆಯಬೇಕಾಗಿದೆ, ಕೆರೆಯಲ್ಲಿ ಕೆಲವೆಡೆ ಬಂಡೆಕಲ್ಲುಗಳಿಂದ ಕೂಡಿರುವುದಲ್ಲದೆ ಕೆಲವೆಡೆ ಸುಳಿಯಿದೆ ಎಂಬ ಮಾತುಗಳು ಸ್ಥಳೀಯರಿಂದ ಕೇಳಿಬರುತ್ತಿದ್ದು ಪ್ರತಿ ವರ್ಷ ಕೆರೆ ತುಂಬಿದ ಸಂಧರ್ಭದಲ್ಲಿ ಈಜಾಡಲು ಬಂದ ಒಬ್ಬಿಬ್ಬರು ಪ್ರಾಣ ತೆರುತ್ತಿದ್ದು ವಾರದಿಂದಾಚೆಯಷ್ಟೇ ಈಜು ಬಲ್ಲ ಯುವಕನೋರ್ವ ಈಜಾಡುವ ಸಂಧರ್ಭದಲ್ಲಿ ಕಾಲಿಗೆ ಬಟ್ಟೆ ಸುತ್ತಿಕೊಂಡು ಮೇಲೇಳಲಾರದೆ ಅಸು ನೀಗಿದ್ದು, ಮುಖ್ಯವಾಗಿ ಈ ಸ್ಥಳದಲ್ಲಿ ಅಪಾಯದ ಸೂಚನಾ ಫಲಕ ಅಳವಡಿಸಬೇಕು ಹಾಗೂ ಒಬ್ಬ ಕಾವಲುಗಾರನನ್ನು ನೇಮಿಸಬೇಕು. ದೇವರುಗಳನ್ನು ಮಡಿ (ಶುಚಿ)ಗೆ ತಂದ ಸಂಧರ್ಭದಲ್ಲಿ ಅವನ್ನು ಶುಚಿ ಮಾಡಿದ ನಂತರ ಬಾಡಿದ ಹೂವು, ಹಳೆಯ ಹಾಗೂ ಹರಿದ ದೇವರ ಸೀರೆಗಳನ್ನು ನೀರಿಗೆ ಎಸೆಯುವುದರಿಂದ ಹಾಗೂ ಮಹಿಳೆಯರು ಗಂಗಾ ಪೂಜೆ ಸಂಧರ್ಬದಲ್ಲಿ ಎಲೆ, ಹೂವು ಹೊಂಬಾಳೆ ಇತ್ಯಾದಿ ವಸ್ತುಗಳನ್ನು ನೀರಿಗೆ ಬಿಡುವುದರಿಂದ ಕೆರೆನೀರು ಮಲಿನವಾಗುವುದಲ್ಲದೆ ಈಜಾಡುವವರ ಕಾಲಿಗೆ ಸುತ್ತಿಕೊಂಡು ಅಪಾಯ ತಂದೊಡ್ಡುವ ಸಂಭವವಿದೆ. ಇನ್ನು ಸುಗ್ಗಿ ಕಾಲದಲ್ಲಿ ರಾಗಿ ಕೊಯ್ಲಾದಾಗ ಅನೇಕ ರೈತರು ಕೋಡಿ ಬದಿಯ ರಸ್ತೆಯಲ್ಲಿಯೇ ರಾಗಿ ಹುಲ್ಲು ಹೆಕ್ಕುವುದರಿಂದ ಬಂದ ಧೂಳಿನಿಂದ ನೀರು ಕಲ್ಮಷವಾಗುತ್ತದೆ. ಇದರಿಂದ ಪಟ್ಟಣಕ್ಕೆ ಪೂರೈಕೆಯಾಗುವ ಈ ನೀರು ನಾಗರೀಕರ ಅನಾರೋಗ್ಯಕ್ಕೂ ಕಾರಣವಾಗಬಹುದು. ಸಂಜೆ ವೇಳೆ ಮಸ್ತು ಮೋಜಿಗಂತ ಕೆಲ ತುಂಡೈಕ್ಲುಗಳು ಇಲ್ಲಿನ ಬಂಡೆಗಳ ಮೇಲೆ ಕುಣಿದು ಕುಪ್ಪಳಿಸುವುದಕ್ಕೆ ಬರುವುದಕ್ಕೆ ಕಡಿವಾಣ ಹಾಕಬೇಕು ಹಾಗೂ ಈ ಸ್ಥಳದಲ್ಲಿ ಬೆಳಕಿನ ವ್ಯವಸ್ಥೆಯಾಗಬೇಕು.

      ತುರುವೇಕೆರೆ ಪಟ್ಟಣಕ್ಕೆ ಕುಡಿಯುವ ನೀರೊದಗಿಸುವ ಮತ್ತು ತಾಲ್ಲೋಕಿನಲ್ಲೇ ಪ್ರಸಿದ್ದ ದೊಡ್ಡ ಕೆರೆಯೆಂದು ಹೆಸರುವಾಸಿಯಾಗಿದ್ದು ಪ್ರವಾಸೋದ್ಯಮ ತಾಣವಾದ ಇಂತಹ ಕೆರೆಯನ್ನು ಮೂಲಭೂತ ಸೌಕರ್ಯಗಳ ಜೊತೆ ಜೊತೆಗೆ ಇಂತಹ ಪುಣ್ಯಕ್ಷೇತ್ರವನ್ನು ಸಂರಕ್ಷಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಶಾಸಕರು ದಿಟ್ಟ ಕ್ರಮ ಕೈಗೊಳ್ಳಬೇಕಿದೆ. ಜೊತೆ ಜೊತೆಗೆ ಇಂತಹ ಕೆರೆಯನ್ನು ಸಂರಕ್ಷಿಸುವ ಹೊಣೆ ನಮ್ಮಗಳ ಜವಾಬ್ದಾರಿಯೂ ಸಹಾ ಆಗಿದ್ದು ಇಂತ ಸಂಧರ್ಭಗಳು ಎದುರಾದಾಗ ಹೇಗೆ ಅದರ ಸಂರಕ್ಷಣೆ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಶಾಸಕರು ಈ ಕೆರೆಗೆ ಯಾವ ರೂಪ ನೀಡಲಿದ್ದಾರೆ ಎಂಬುದನ್ನು ಕಾದುನೋಡಬೇಕಾಗಿದೆ ಎಂಬುದು ಸ್ಥಳೀಯರ ಆಶಯವಾಗಿದೆ.

ವಿ.ಸೂ:   ತುರುವೇಕೆರೆಯಿಂದ ತಿಪಟೂರು ರಸ್ತೆಯಲ್ಲಿ ಸಾಗಿ 2 ಕಿ.ಮೀ ದೂರದ ಕಲ್ಕೆರೆ ಗೇಟ್‍ನಲ್ಲಿ ಬಲಬಾಗಕ್ಕೆ ತಿರುಗಿ 2 ಕಿ.ಮೀ ದೂರದಲ್ಲಿ ಮಲ್ಲಾಘಟ್ಟ ಕೆರೆಯಿದ್ದು ತುರುವೇಕೆರೆಯಿಂದ ಆಟೋ ಹಾಗೂ ವಾಹನ ಸೌಕರ್ಯವಿದೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link