ತುರುವೇಕೆರೆ :

ನನ್ನ ಮಗನ ಮೇಲಿನ ಹಲ್ಲೆ ಸಂಚಿನ ಹಿಂದೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಕೈವಾಡವಿದ್ದು ನನಗೆ ನನ್ನ ಕುಟುಂಬಕ್ಕೆ ಹಾಗೂ ನನ್ನ ಕಾರ್ಯಕರ್ತರ ಮೇಲೆ ಹಲ್ಲೆ, ದೌರ್ಜನ್ಯ, ಹತ್ಯೆ ಸಂಚುಗಳೇನಾದರೂ ಮುಂದೆ ನಡೆದಲ್ಲಿ ಎಂ.ಟಿ.ಕೃಷ್ಣಪ್ಪನವರೇ ನೇರ ಹೊಣೆಗಾರರು ಎಂದು ಶಾಸಕ ಮಸಾಲ ಜಯರಾಮ್ ಆರೋಪ ಮಾಡಿದ್ದಾರೆ.
ಪಟ್ಟಣದ ಸಮೀಪದ ತಮ್ಮ ಫಾರ್ಮ್ ಹೌಸ್ ನಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ಅವರು ಮಾಜಿ ಶಾಸಕರ ದುರಾಡಳಿತ ರಾಜಕಾರಣದಿಂದ ಬೇಸತ್ತ ಜನತೆ ನಿಮ್ಮ ರಾಜಕೀಯ ಭವಿಷ್ಯತ್ತಿಗೆ ನಾಂದಿ ಹಾಡಿದ್ದು ಇದೀಗ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿ ದೃಷ್ಟಿಯಿಂದ ನನ್ನನ್ನು ಆಶೀರ್ವದಿಸಿದ್ದಾರೆ. ನಿಮ್ಮ ಅಧಿಕಾರದ ಅವಧಿ ಮುಗಿದು 3ವರ್ಷಗಳು ಸಂದರೂ ಇನ್ನೂ ನನ್ನ ಅನುಧಾನ ಎಂದು ಹೇಳಿಕೊಳ್ಳಲು ನಾಚಿಕೆಯಾಗುವುದಿಲ್ಲವೆ. ಹಿಂಬಾಗಿಲ ಮೂಲಕ ರಾಜಕಾರಣ ಮಾಡುವುದನ್ನು ಬಿಟ್ಟು ತಾಕತ್ತಿದ್ದರೆ ನನ್ನ ಎದುರಿಗೆ ನಿಂತು ಹೋರಾಟಮಾಡಿ ಎಂದು ಮಾಜಿ ಶಾಸಕರಿಗೆ ಸವಾಲೆಸೆದರು.
ನೂತನ ಬಸ್ ನಿಲ್ದಾಣಕ್ಕೆ ಕತ್ತೆ ನುಗ್ಗಿಸಿದ ಪ್ರಕರಣ, ಎಸಿ ಬಸವರಾಜೇಂದ್ರ ಅವರ ಮೇಲೆ ಕೈಮಾಡಿದ್ದು, ಸಿಪಿಐ ರಾಮಚಂದ್ರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು, ಬ್ಯಾಲಹಳ್ಳಿ ಪ್ರಕರಣ, ರಮೇಶ್‍ಗೌಡರ ಎಡೆಮಟ್ಟೆ ಪ್ರಕರಣ ಹೀಗೆ ಒಂದಲ್ಲಾ ಎರಡಲ್ಲಾ ಹಲವಾರು ಕ್ರಿಮಿನಲ್ ಪ್ರಕರಣಗಳು ಎಂ.ಟಿ.ಕೃಷ್ಣಪ್ಪನವರ ಮೇಲೆ ಠಾಣೆಯಲ್ಲಿ ದಾಖಲಾಗಿವೆ. ಅದೇ ನನ್ನ ಒಂದೇ ಒಂದು ಪ್ರಕರಣ ಯಾವುದೇ ಠಾಣೆಯಲ್ಲಿ ದಾಖಲಾಗಿದ್ದರೆ ತೋರಿಸಲಿ.
ನನ್ನ ಪುತ್ರನ ಹಲ್ಲೆಗೆ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪನವರ ಕೈವಾಡವಿದ್ದು ನನ್ನ ಪುತ್ರನೇನು ರಾಜಕೀಯ ಮಾಡುತ್ತಿದ್ದಾನೆಯೇ?, ಎಂ.ಟಿ.ಕೃಷ್ಣಪ್ಪನವರಿಗೆ ನನ್ನ ಮಗ ಪ್ರತಿಸ್ಪರ್ಧಿಯೇ? ಯಾವ ತಪ್ಪೂ ಮಾಡದ ನನ್ನ ಮಗನ ಮೇಲೇಕೆ ಇಷ್ಟು ದ್ವೇಷ. ನಿಮಗೂ ಮಕ್ಕಳಿದ್ದು ಅವರ ಮೇಲೂ ಇಂತಹ ಕೃತ್ಯ ನಡೆದಿದ್ದರೆ ಆ ಸಂಧರ್ಭದಲ್ಲಿ ನಿಮಗೆ ಹೇಗಾಗಬಹುದೆಂದು ಒಮ್ಮೆ ಯೋಚಿಸಿದ್ದೀರಾ ಎಂಬ ಮಾತುಗಳನ್ನಾಡುವಾಗ ಹಲ್ಲೆ ಸಂದರ್ಭ ನೆನಪಾಗಿ ಒಂದು ಕ್ಷಣ ಭಾವುಕರಾದರು.
ನಾನು ನಿಮಗೆ ಪ್ರತಿಸ್ಪರ್ಧಿಯಾಗಿದ್ದು ತಾಕತ್ತಿದ್ದರೆ ನನ್ನೆದುರಿಗೆ ನಿಂತು ಹೋರಾಟ ಮಾಡಿ. ನೇಗಿಲು ಹಿಡಿದು ಬೇಸಾಯ ಮಾಡಿದ ಕುಟುಂಬ ನಮ್ಮದು. ಹೊಡಿಬಡಿ ಸಂಸ್ಕತಿ ನಮ್ಮದಲ್ಲ. ಮತ್ತೊಮ್ಮೆ ನನಗೆ, ನನ್ನ ಕುಟುಂಬ ಹಾಗೂ ನನ್ನ ಕಾರ್ಯಕರ್ತರಿಗೆ ಯಾವುದೇ ತೊಂದರೆಯಾದರೂ ಎಂ.ಟಿ.ಕೃಷ್ಣಪ್ಪನವರೇ ನೇರ ಹೊಣೆಗಾರರು ಎಂದು ಈಗಾಗಲೇ ಪೋಲೀಸ್ ವರಿಷ್ಟಾಧಿಕಾರಿಗಳಿಗೆ ತಿಳಿಸಿದ್ದು ಅದರಂತೆ ನನ್ನ ಪುತ್ರನ ಮೇಲಿನ ಹಲ್ಲೆಗೆ ಸಂಬಂದಿಸಿದವರ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ಅವರು ನೀಡಿದ್ದಾರೆ.
ರಾಜಕೀಯವಾಗಿ ಮತ್ತೆ ತಲೆ ಎತ್ತಲು ಬಿಡುವುದಿಲ್ಲ:
ಈಗಾಗಲೇ ಕ್ಷೇತ್ರದ ಜನತೆ ನಿಮಗೆ ರಾಜಕೀಯವಾಗಿ ಅಂತಿಮ ತೀರ್ಪು ನೀಡಿದ್ದು ಯಾವುದೇ ಕಾರಣಕ್ಕೂ ನಿಮ್ಮನ್ನು ರಾಜಕೀಯವಾಗಿ ಮತ್ತೆ ತಲೆಯೆತ್ತಲು ಬಿಡುವುದಿಲ್ಲ. ಮುಂಬರುವ ಜಿ.ಪಂ., ತಾ.ಪಂ. ಸೇರಿದಂತೆ ಯಾವುದೇ ಚುನಾವಣೆಗಳಲ್ಲಿ ನಿಮ್ಮನ್ನು ಸೋಲಿಸಲು ಯಾರೊಂದಿಗಾದರೂ ಹೊಂದಾಣಿಕೆ ಮಾಡಿಕೊಳ್ಳಲು ಸಿದ್ದನಿದ್ದು ನಿಮ್ಮ ರಾಜಕಾರಣ ಅಂತ್ಯಗೊಳಿಸುವುದೇ ನನ್ನ ಏಕೈಕ ಗುರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಂದೆ ನನ್ನ ಮಗನಿಗೇನಾದರೂ ತೊಂದರೆಯಾದಲ್ಲಿ ನನ್ನ ಪ್ರಾಣವನ್ನು ಲೆಕ್ಕಿಸದೆ ಅಂತಹವರ ವಿರುದ್ದ ಹೋರಾಟ ನಡೆಸಿ ತಕ್ಕ ಬುದ್ದಿ ಕಲಿಸುವುದಾಗಿ ಶಪಥ ಮಾಡಿದರು.
ಈ ಸಂಧರ್ಬದಲ್ಲಿ ಮುನಿಯೂರು ಗ್ರಾ.ಪಂ.ಸದಸ್ಯ ಕಾಳಂಜಿಹಳ್ಳಿ ಸೋಮಶೇಖರ್, ಮಾಜಿ ಅಧ್ಯಕ್ಷ ಲಿಂಗರಾಜು, ಮುಖಂಡರಾದ ವೀರೇಂದ್ರ ಪಾಟೀಲ್, ವಿ.ಬಿ.ಸುರೇಶ್, ನಾಗಲಾಪುರ ಮಂಜುನಾಥ್, ಗಣೇಶ್, ಉಮೇಶ್, ನಾಗೇಶ್ ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








