ಭಟ್ಕಳ:
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ಗುಡ್ಡದಲ್ಲಿ ಜಾನುವಾರುಗಳ ರಾಶಿ ರಾಶಿ ಮೂಳೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಮಗ್ಗಂ ಕಾಲೋನಿ ನಿವಾಸಿ ಮೊಹಮ್ಮದ್ ಸಮಾನ್ ಹಾಗೂ ಚೌಥನಿ ನಿವಾಸಿ ಮೊಹಮ್ಮದ್ ರಾಹೀನ್ ಬಂಧಿತರು. ಇವರು ವಿವಿಧ ಕಡೆಗಳಿಂದ ಕದ್ದ ಗೋವುಗಳನ್ನು ಭಟ್ಕಳಕ್ಕೆ ತಂದು ಮಾಂಸಕ್ಕಾಗಿ ಕಡಿದ ನಂತರ ಉಳಿದ ಮೂಳೆಗಳನ್ನು ಅರಣ್ಯದಲ್ಲಿ ಹಾಕಿ ಪರಾರಿಯಾಗುತ್ತಿದ್ದರು ಎನ್ನುವುದು ತನಿಖೆ ವೇಳೆ ಬಹಿರಂಗವಾಗಿದೆ . ಇತರ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಭಟ್ಕಳ ನಗರದ ಮುಗ್ಗುಂ ಕಾಲೋನಿಯಲ್ಲಿನ ಗುಡ್ಡದ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಡಿದು, ಚರ್ಮ-ಎಲುಬು ಸೇರಿದಂತೆ ಮೂಳೆಗಳನ್ನು ರಾಶಿ ಹಾಕಿದ ಪ್ರಕರಣ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಸೆಪ್ಟೆಂಬರ್ 11ರಂದು ಉಪವಲಯ ಅರಣ್ಯಾಧಿಕಾರಿ ಮಾರುತಿ ಸೊರಗಾಂವಿ ನೀಡಿದ ದೂರಿನ ಮೇರೆಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೊ ಹಳೆಯದು ಎನ್ನುವ ವಾದ ಆಗ ಕೇಳಿ ಬಂದಿತ್ತು. ಇದೀಗ ಈ ವಾದ ಸುಳ್ಳು ಎನ್ನುವುದು ಸಾಬೀತಾಗಿದೆ.
ಕರ್ನಾಟಕ ಗೋಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ-2020ರ ಕಲಂ 4, 12 ಸೇರಿದಂತೆ ಹಲವು ವಿಧಿಗಳಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸೆಪ್ಟೆಂಬರ್ 17ರಂದು ಡಿವೈಎಸ್ಪಿ ಮಹೇಶ್ ಮಾರ್ಗದರ್ಶನದಲ್ಲಿ, ಪಿಐ ದಿವಾಕರ ಪಿ.ಎಂ. ನೇತೃತ್ವದ ತಂಡವು ಆರೋಪಿಗಳಾದ ಮೊಹಮ್ಮದ್ ಸಮಾನ್ ಹಾಗೂ ಮೊಹಮ್ಮದ್ ರಾಹೀನ್‌ನನ್ನು ಬಂಧಿಸಿದ್ದು ಕೃತ್ಯಕ್ಕೆ ಬಳಸಿದ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪಿಎಸ್‌ಐ ನವೀನ್ ನಾಯ್ಕ, ಪಿಎಸ್‌ಐ ತಿಮ್ಮಪ್ಪ ಎಸ್. ಮತ್ತಿತರರು ಪಾಲ್ಗೊಂಡಿದ್ದರು.
ರಾಶಿ ರಾಶಿ ಜಾನುವಾರು ಮೂಳೆ ಪತ್ತೆಯಾದ ಹಿನ್ನೆಲೆಯಲ್ಲಿ ಹಿಂದೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಸೂಕ್ತ ಕ್ರಮಕ್ಕೆ ಅಗ್ರಹಿಸಿದ್ದರು. ʼʼಈ ಹಿಂದೆ ದನ ಕೊಂದವರನ್ನು ಕಂಡಲ್ಲಿ ಗುಂಡಿಕ್ಕುವುದಾಗಿ ಹೇಳಿದ್ದ ಸಚಿವ ಮಂಕಾಳು ವೈದ್ಯ ಕ್ಷೇತ್ರದಲ್ಲೇ ರಾಶಿ ಮೂಳೆ ಪತ್ತೆಯಾಗಿದೆʼʼ ಎಂದು ಹಿಂದೂ ಸಂಘಟನೆಯ ನಾಯಕರು ದೂರಿದ್ದರು.
