ಯು-ಟರ್ನ್‌ ಹೊಡುದ್ರಾ ಡಿಸಿಎಂ …!

ಬೆಂಗಳೂರು

    ಶಕ್ತಿ ಯೋಜನೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಆಡಿದ ಮಾತುಗಳು ಭಾರೀ ಸಂಚಲನ ಮುಡಿಸಿದ್ದು, ಇದೀಗ ಎಲ್ಲಾ ಗೊಂದಲಗಳಿಗೆ ತೆರೆಬಿದ್ದಿದೆ. ಡಿಕೆ ಶಿವಕುಮಾರ್ ಮಹಿಳೆಯ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆಯನ್ನು ಪರಿಷ್ಕರಣೆ ಮಾಡುವ ಸುಳಿವು ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೆರಳಿದ್ದಾರೆ. ಬಜೆಟ್​ನಲ್ಲಿ ಏನಿದೆ ಅದರಂತೆ ಗ್ಯಾರಂಟಿ ಯೋಜನೆ ಕೊಡಿ ಎಂದು ಸಿಎಂ, ಡಿಸಿಎಂಗೆ ಖಡಕ್​ ಆಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಡಿಕೆ ಶಿವಕುಮಾರ್, ಗ್ಯಾರಂಟಿ ಯೋಜನೆ ಪರಿಷ್ಕರಣೆ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆ ಇರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

   ಇಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ನಡೆದ ವಲ್ಲಭಭಾಯಿ ಪಟೇಲ್ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಶಕ್ತಿ ಯೋಜನೆ ಪರಿಷ್ಕರಣೆ ಬಗ್ಗೆ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆ ಬಗ್ಗೆ ಪ್ರಸ್ತಾಪಿಸಿದ ಮಲ್ಲಿಕಾರ್ಜುನ ಖರ್ಗೆ, ಡಿಕೆ ನೋಡಿ ಗ್ಯಾರಂಟಿ ಬಗ್ಗೆ ನೀನೇನೋ‌ ಹೇಳಿದ್ಯಲ್ಲಪ್ಪ ಎಂದು ಕೇಳಿದ್ದಾರೆ. ಇದಕ್ಕೆ ಡಿಕೆ ಶಿವಕುಮಾರ್, ನಾನು ಏನೂ‌ ಹೇಳಿಲ್ಲ ಎಂದು ಕೈಸನ್ನೆ ಮಾಡಿದರು. ನೀನು ಪೇಪರ್ ನೋಡಿಲ್ಲಪ್ಪ, ನಾನು ನೋಡುತ್ತೇನೆ. ಪೇಪರ್​ನಲ್ಲಿ ನೀನು ಹೇಳಿದ್ದೀಯಾ ಎಂದು ಬಂದಿದೆ ಎಂದು ಖರ್ಗೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಎಂ, ಇಲ್ಲ ಪರಿಷ್ಕರಣೆ ಅಂತ ಬಂದಿದೆ ಎಂದರು. 

   ಬಳಿಕ ಮಾತನಾಡಿದ ಖರ್ಗೆ, ಅದನ್ನೇ ಹೇಳ್ತಿರೋದು ನಾನು. ಬಜೆಟ್​ನಲ್ಲಿ ಏನಿದೆ ಅದರಂತೆ ಗ್ಯಾರಂಟಿ ಯೋಜನೆ ಕೊಡಿ ಎಂದು ಸಿಎಂ, ಡಿಸಿಎಂಗೆ ಖಡಕ್​ ಸೂಚನೆ ನೀಡಿದರು. ಖರ್ಗೆ ಖಡಕ್​ ಸೂಚನೆ ಬಳಿಕ ಡಿಕೆ ಶಿವಕುಮಾರ್ ತಮ್ಮ ವರಸೆಯನ್ನೇ ಬದಲಿಸಿದ್ದಾರೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ. ಗ್ಯಾರಂಟಿ ಯೋಜನೆ ಪರಿಷ್ಕರಣೆ ಪ್ರಶ್ನೆಯೇ ಇಲ್ಲ. ನಮ್ಮ ಸರ್ಕಾರ ಇರುವವರೆಗೂ ಗ್ಯಾರಂಟಿ ಯೋಜನೆ ಇರುತ್ತದೆ. ರಾಜ್ಯದಲ್ಲಿ ಮುಂದಿನ ಬಾರಿಯೂ ನಮ್ಮ ಸರ್ಕಾರವೇ ಬರಲಿದೆ. ಹಾಗಾಗಿ ಇನ್ನೂ ಎಂಟೂವರೆ ವರ್ಷ ಗ್ಯಾರಂಟಿ ಯೋಜನೆ ಇರುತ್ತೆ ಎಂದು ಹೇಳಿದರು. ಈ ಮೂಲಕ ಶಕ್ತಿ ಯೋಜನೆ ಪರಿಷ್ಕರಣೆ ತಾವೇ ಹುಟ್ಟುಹಾಕಿದ್ದ ಚರ್ಚೆಗೆ ಈಗ ಅವರೇ ಬ್ರೇಕ್ ಹಾಕಿದ್ದಾರೆ. 

   ಶಕ್ತಿ ಯೋಜನೆ ಬಗ್ಗೆ ಮರುಚಿಂತನೆ ನಡೆಸುವಂತೆ ಸ್ತ್ರೀಯರಿಂದಲೇ ಒತ್ತಡವಿದೆ. ಅನೇಕ ಹೆಣ್ಣುಮಕ್ಕಳು ನಮಗೆ ಟಿಕೆಟ್ ತೆಗೆದುಕೊಳ್ಳುವಂತಹ ಶಕ್ತಿಯಿದೆ. ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ನಮಗೆ ಉಚಿತ ಪ್ರಯಾಣ ಬೇಡವೆಂದಿದ್ದಾರೆ. ಅನುಕೂಲ ಸ್ಥಿತಿಯಲ್ಲಿರುವ ಶೇಕಡಾ 5-10ರಷ್ಟು ಹೆಣ್ಣುಮಕ್ಕಳು ಹೇಳುತ್ತಿದ್ದಾರೆ. ನಾವು ಹಣ ನೀಡಿ ಟಿಕೆಟ್ ಪಡೆಯಲು ಮುಂದಾದರೂ ತೆಗೆದುಕೊಳ್ಳುತ್ತಿಲ್ಲ. ಸಾರಿಗೆ ಸಂಸ್ಥೆ ಬಸ್​ಗಳಲ್ಲಿ ನಿರ್ವಾಹಕರು ಹಣ ಪಡೆದು ಟಿಕೆಟ್ ನೀಡುತ್ತಿಲ್ಲ ಅಂತ ಮಹಿಳೆಯರು ನಮಗೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶಕ್ತಿ ಯೋಜನೆ ಮರುಪರಿಶೀಲನೆ ಬಗ್ಗೆ ಚರ್ಚೆ ಮಾಡುತ್ತೇವೆ. ​ಇದರ ಬಗ್ಗೆ ಶೀಘ್ರದಲ್ಲೇ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆ ಸಭೆ ಮಾಡತ್ತೇವೆ. ಪ್ರತ್ಯೇಕವಾಗಿ ಸಭೆ ನಡೆಸಿ ಶಕ್ತಿ ಯೋಜನೆ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದಿದ್ದರು.

   ಈ ಹೇಳಿಕೆ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಶಕ್ತಿ ಯೋಜನೆಗೆ ಸರ್ಕಾರ ಬ್ರೇಕ್ ಹಾಕುತ್ತಾ, ಅಥವಾ ಶಕ್ತಿ ಯೋಜನೆಯನ್ನ ಪರಿಷ್ಕರಣೆ ಮಾಡುತ್ತಾ, ಉಳ್ಳವರಿಗೆ ಟಿಕೆಟ್ ಕೊಟ್ಟು, ಇಲ್ಲದವ್ರಿಗೆ ಮಾತ್ರ ಉಚಿತ ಬಸ್ ಪ್ರಯಾಣಕ್ಕೆ ಅವಕಾಶ ಮಾಡಿಕೊಡುತ್ತಾ ಅನ್ನೋ ಪ್ರಶ್ನೆ ಮೂಡಿತ್ತು. ಇದೀಗ ಖರ್ಗೆ ಖಡಕ್ ಮಾತಿನಿಂದ ಎಲ್ಲಾ ಚರ್ಚೆ, ಗೊಂದಲಗಳಿಗೆ ಡಿಕೆ ಶಿವಕುಮಾರ್​ ಸ್ಪಷ್ಟನೆ ನೀಡಿದ್ದಾರೆ.

   ಶಕ್ತಿ ಯೋಜನೆ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಐದು ಗ್ಯಾರಂಟಿಗಳಲ್ಲೇ ಎರಡನೇ ಅತಿ ದೊಡ್ಡ ಗ್ಯಾರಂಟಿ ಯೋಜನೆ. ಶಕ್ತಿ ಯೋಜನೆ ಮೂಲಕ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಗ್ಯಾರಂಟಿಯನ್ನ ಜಾರಿಗೆ ತರಲಾಗಿದೆ. ಅದೆಷ್ಟೋ ಬಡ ಹೆಣ್ಣುಮಕ್ಕಳಿಗೆ ಈ ಶಕ್ತಿ ಯೋಜನೆಯಿಂದ ಆರ್ಥಿಕ ಉಳಿತಾಯ ವಾಗುತ್ತಿದೆ. ಶಕ್ತಿ ಯೋಜನೆ ಜಾರಿ ಬಳಿಕ ಮಹಿಳೆಯರ ಬಸ್​ ಪ್ರಮಾಣ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ.

 

Recent Articles

spot_img

Related Stories

Share via
Copy link