ಮುಂಬೈ:
ಶಿವಸೇನೆಯ ನಾಯಕಿ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಮುಂಬಾದೇವಿ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಶೈನಾ ಎನ್.ಸಿ. ಅವರನ್ನು ಆಮದು ಮಾಡಿಕೊಂಡಿರುವ ʼಮಾಲ್ʼ (ಸರಕು) ಎಂದು ಕರೆಯುವ ಮೂಲಕ ಶಿವಸೇನೆ ಯುಬಿಟಿ ನಾಯಕ, ಸಂಸದ ಅರವಿಂದ್ ಸಾವಂತ್ ವಿವಾದ ಸೃಷ್ಟಿಸಿದ್ದಾರೆ. ಈ ಹೇಳಿಕೆ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ .
ಕೆಲವು ದಿನಗಳ ಹಿಂದೆ ಚುನಾವಣಾ ಪ್ರಚಾರದ ವೇಳೆ ಮಾಧ್ಯಮ ಸಂವಾದದ ಸಂದರ್ಭದಲ್ಲಿ ಮುಂಬೈ ದಕ್ಷಿಣ ಸಂಸದ, ಶಿವಸೇನೆ ಯುಬಿಟಿ ಬಣದ ನಾಯಕ ಅರವಿಂದ್ ಸಾವಂತ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮುಂಬಾದೇವಿ ವಿಧಾನಸಭಾ ಕ್ಷೇತ್ರದಿಂದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಅಭ್ಯರ್ಥಿಯಾಗಿ ಶೈನಾ ಕಣಕ್ಕಿಳಿದಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಮೂರು ಬಾರಿಯ ಶಾಸಕ ಅಮೀನ್ ಪಟೇಲ್ ಸ್ಪರ್ಧಿಸುತ್ತಿದ್ದಾರೆ. ಹೀಗಾಗಿ ಈ ಕ್ಷೇತ್ರದಲ್ಲಿ ಶೈನಾ ಮತ್ತು ಅಮೀನ್ ಪಟೇಲ್ ಪೈಕಿ ಯಾರು ಜಯ ಗಳಿಸುತ್ತಾರೆ ಎನ್ನುವ ಪ್ರಶ್ನೆ ಕೇಳಲಾಯಿತು.
ಇದಕ್ಕೆ ಉತ್ತರಿಸಿದ ಅರವಿಂದ್ ಸಾವಂತ್, ʼʼವಿದೇಶದಿಂದ ಆಮದಾದ ಮಾಲನ್ನು ಇಲ್ಲಿ ಸ್ವೀಕರಿಸುವುದಿಲ್ಲ. ಮೂಲ ಸರಕುಗಳನ್ನು ಇಲ್ಲಿ ಸ್ವೀಕರಿಸಲಾಗುತ್ತದೆ. ನಮ್ಮ ಬಳಿ ಮೂಲ ಸರಕು (ಅಮೀನ್ ಪಟೇಲ್) ಇದೆʼʼ ಎಂದು ಹೇಳಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು, ಅರವಿಂದ್ ಸಾವಂತ್ ಹೇಳಿಕೆಗೆ ಆಕ್ರೋಶ ವ್ಯಕ್ತವಾಗುತ್ತಿದೆ. ‘ಸೆಕ್ಸಿಸ್ಟ್’ ನಿಂದನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಶೈನಾ ಮುಂಬರುವ ಚುನಾವಣೆಯಲ್ಲಿ ಮತದಾರರು ಇದಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
“ಅವರು ಎಲ್ಲಿದ್ದಾರೆಂದು ಕೇಳಿ. ನಾನು ಮುಂಬೈಯ ಮಗಳು. ಇಲ್ಲಿನ ಜನರಿಗಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಸಾವಂತ್ ಅಥವಾ ಎಸ್ಎಸ್ (ಯುಬಿಟಿ)ನಿಂದ ಪ್ರಮಾಣಪತ್ರದ ಅಗತ್ಯವಿಲ್ಲ” ಎಂದು ಶೈನಾ ತಿರುಗೇಟು ನೀಡಿದ್ದಾರೆ. ʼʼಅರವಿಂದ್ ಸಾವಂತ್ ಹೇಳಿಕೆ ಅವರು ಮತ್ತು ಅವರ ಪಕ್ಷದ ಮನೋಭಾವವನ್ನು ತಿಳಿಸುತ್ತದೆ. ಮುಂಬಾದೇವಿ ಕ್ಷೇತ್ರದ ಪ್ರತಿ ಮಹಿಳೆಯರನ್ನು ಅವರು ಸರಕು ಎಂಬ ದೃಷ್ಟಿಯಲ್ಲಿ ನೋಡುತ್ತಾರಾ? ಮಹಿಳೆಯರ ಬಗ್ಗೆ ಅವರ ಗೌರವ ಹೊಂದಿಲ್ಲ ಎನ್ನುವುದು ಈ ಮಾತಿನಿಂತ ತಿಳಿಯುತ್ತದೆ. ಈಗ, ಮಹಿಳೆಯನ್ನು ‘ಮಾಲ್’ ಎಂದು ಕರೆದಿದ್ದಕ್ಕಾಗಿ ಅವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಾನು ಮುಂದಿನ ಕ್ರಮ ತೆಗೆದುಕೊಳ್ಳಲಿ ಅಥವಾ ಬಿಡಲಿ ಸಾರ್ವಜನಿಕರು ಖಂಡಿತ ಸರಿಯಾದ ಪಾಠ ಕಲಿಸುತ್ತಾರೆʼʼ ಎಂದು ತಿಳಿಸಿದ್ದಾರೆ.ಅರವಿಂದ್ ಸಾವಂತ್ ವಿರುದ್ಧ ಶೈನಾ ನಾಗಪಾಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಅರವಿಂದ್ ಸಾವಂತ್ ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿದ್ದಾರೆ. “ಶೈನಾ ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ನನ್ನ ಹೇಳಿಕೆಯಲ್ಲಿ ಅಂತಹ ಯಾವುದೇ ಉದ್ದೇಶವಿರಲಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.ಬಿಜೆಪಿ ವಕ್ತಾರೆಯಾಗಿದ್ದ ಶೈನಾ ಇತ್ತೀಚೆಗಷ್ಟೇ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಮುಂಬೈಯ ಮುಂಬಾದೇವಿ ವಿಧಾನಸಭಾ ಕ್ಷೇತ್ರದಿಂದ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಅಭ್ಯರ್ಥಿಯಾಗಿ ಮಂಗಳವಾರ (ಅ. 29) ನಾಮಪತ್ರ ಸಲ್ಲಿಸಿದ್ದಾರೆ.