ಉಡುಪಿ:

ಫೆಬ್ರವರಿ 22: ಕರ್ನಾಟಕದ ಉಡುಪಿಯ ವಿದ್ಯಾರ್ಥಿನಿ ಮತ್ತು ಹಿಜಾಬ್ ಪ್ರಕರಣದ ಅರ್ಜಿದಾರರಲ್ಲಿ ಒಬ್ಬರಾದ ಹಜ್ರಾ ಶಿಫಾ, ತನ್ನ ಸಹೋದರನ ಮೇಲೆ ಬಲಪಂಥೀಯ ಬೆಂಬಲಿಗರ ಗುಂಪೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಹಿಜಾಬ್ ಧರಿಸುವುದನ್ನು ಮುಂದುವರಿಸುವ ತನ್ನ ನಿರ್ಧಾರಕ್ಕೆ ಹಿಂಸಾಚಾರದ ಸಂಬಂಧವಿದೆ ಎಂದಿದ್ದಾರೆ.
ಸೋಮವಾರ ರಾತ್ರಿ 9 ಗಂಟೆ ಸುಮಾರಿಗೆ ಉಡುಪಿ ಜಿಲ್ಲೆ ಮಲ್ಪೆಯ ಬಂದರಿನಲ್ಲಿರುವ ಬಿಸ್ಮಿಲ್ಲಾ ಹೋಟೆಲ್‌ನಲ್ಲಿ ಆಕೆಯ ಸಹೋದರ ಸೈಫ್ ಮೇಲೆ ಹಲ್ಲೆ ನಡೆದಿದೆ.
“ನನ್ನ ಸಹೋದರನ ಮೇಲೆ ಗುಂಪೊಂದು ಅಮಾನುಷವಾಗಿ ಹಲ್ಲೆ ನಡೆಸಿದೆ. ನಾನು ನನ್ನ ಹಕ್ಕಾಗಿರುವ ಹಿಜಾಬ್‌ಗಾಗಿ ನಿಂತಿದ್ದೇನೆ ಎಂಬ ಕಾರಣಕ್ಕಾಗಿ ನಮ್ಮ ಆಸ್ತಿಯನ್ನು ಹಾಳುಮಾಡಿದ್ದಾರೆ ಏಕೆ? ನನ್ನ ಹಕ್ಕನ್ನು ನಾನು ಕೇಳಬಾರದೇ? ಅವರ ಮುಂದಿನ ಬಲಿಪಶು ಯಾರು? ಸಂಘ ಪರಿವಾರದ ಗೂಂಡಾಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ,” ಎಂದು ಸೋಮವಾರ ಮಧ್ಯರಾತ್ರಿ ಟ್ವೀಟ್ ಮಾಡಿ ಉಡುಪಿ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.
ಶಿಫಾ ತಂದೆಯ ರೆಸ್ಟೊರೆಂಟ್‌ಗೆ ಕಲ್ಲು ತೂರಾಟ
ಅಲ್ಲದೇ ಹಜ್ರಾ ಶಿಫಾ ತಂದೆಯ ಒಡೆತನದ ಉಡುಪಿಯ ಮಲ್ಪೆಯಲ್ಲಿರುವ ರೆಸ್ಟೊರೆಂಟ್‌ಗೆ ಜನರ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಫೆಬ್ರವರಿ 21ರಂದು ರಾತ್ರಿ ಉಡುಪಿಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹಜ್ರಾ ಶಿಫಾ ಅವರ ತಂದೆ ಹೈದರ್ ಅಲಿ ಅವರ ಬಿಸ್ಮಿಲ್ಲಾ ಹೋಟೆಲ್ ಮೇಲೆ ಗುಂಪು ಕಲ್ಲು ತೂರಾಟ ನಡೆಸಿದೆ.
ಕಿಟಕಿಯ ಗಾಜುಗೆ ಹಾನಿಯಾಗಿದೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಎನ್.ವಿಷ್ಣುವರ್ಧನ್ ಅವರು ‘ದಿ ಹಿಂದೂ’ಗೆ ತಿಳಿಸಿದ್ದು, ರಾತ್ರಿ 9.30ರ ಸುಮಾರಿಗೆ ಹಿಜಾಬ್ ವಿವಾದದ ಬಗ್ಗೆ ವಾಗ್ವಾದಕ್ಕಿಳಿದ ನಂತರ ಗುಂಪಿನ ಸದಸ್ಯರೊಬ್ಬರು ಹೈದರ್ ಅಲಿ ಅವರ ಪುತ್ರ ಸೈಫ್‌ಗೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಮಲ್ಪೆ ಪೊಲೀಸರು ಸ್ಥಳಕ್ಕೆ ಧಾವಿಸಿ ಗುಂಪು ಚದುರಿಸಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಭೆಯಡಿ ಪ್ರಕರಣ ದಾಖಲಾಗಿದೆ.
ಕರ್ನಾಟಕದಲ್ಲಿ ಹಿಜಾಬ್‌ಗಳ ವಿರುದ್ಧದ ಪ್ರತಿಭಟನೆಗಳು ಕಳೆದ ಡಿಸೆಂಬರ್ ಕೊನೆಯಲ್ಲಿ ಪ್ರಾರಂಭವಾದಾಗ ಶಾಲಾ ವಿದ್ಯಾರ್ಥಿಗಳು ಅದನ್ನು ಧರಿಸದಂತೆ ತಡೆಯಲಾಯಿತು. ಅಂದಿನಿಂದ ಇದು ಕೇಸರಿ- ಹಿಜಾಬ್‌ಗಳನ್ನು ಒಳಗೊಂಡ ಪ್ರತಿಭಟನೆ ಮತ್ತು ಪ್ರತಿ-ಪ್ರದರ್ಶನಗಳನ್ನು ಹುಟ್ಟುಹಾಕಿದೆ. ಅಲ್ಲದೆ ಇತರ ರಾಜ್ಯಗಳಿಗೂ ಹರಡಿದೆ.
ಹಿಜಾಬ್- ಕೇಸರಿ ಉದ್ವಿಗ್ನತೆಯನ್ನು ಶಾಂತಗೊಳಿಸುವ ಪ್ರಯತ್ನದಲ್ಲಿ, ಕರ್ನಾಟಕದ ರಾಜ್ಯ ಸರ್ಕಾರವು ತಾತ್ಕಾಲಿಕವಾಗಿ ಶಾಲೆಗಳನ್ನು ಮುಚ್ಚಿತ್ತು ಆದರೆ ನಂತರ ಅವು ಕ್ರಮೇಣ ತೆರೆದಿವೆ.
ಕರ್ನಾಟಕ ಹೈಕೋರ್ಟ್ ತನ್ನ ಮಧ್ಯಂತರ ಆದೇಶದ ಮೂಲಕ ಶಿರಸ್ತ್ರಾಣ (ಸ್ಕಾರ್ಫ್) ನಿಷೇಧವನ್ನು ಪರಿಗಣಿಸುವಾಗ ಶಾಲೆಗಳಲ್ಲಿ ಎಲ್ಲಾ ಧಾರ್ಮಿಕ ಚಿಹ್ನೆಗಳನ್ನು ಧರಿಸುವುದನ್ನು ತಾತ್ಕಾಲಿಕವಾಗಿ ನಿಷೇಧಿಸಿದೆ.
ತರಗತಿ ಕೊಠಡಿಗಳಲ್ಲಿ ಶಿರಸ್ತ್ರಾಣ(ಸ್ಕಾರ್ಫ್) ವನ್ನು ನಿಷೇಧಿಸುವ ತನ್ನ ಆದೇಶವನ್ನು ಸಮರ್ಥಿಸಿಕೊಂಡ ರಾಜ್ಯ ಸರ್ಕಾರ, ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಮತ್ತು ಅದನ್ನು ತಡೆಯುವುದು ಧಾರ್ಮಿಕ ಸ್ವಾತಂತ್ರ್ಯದ ಸಾಂವಿಧಾನಿಕ ಖಾತರಿಯನ್ನು ಉಲ್ಲಂಘಿಸುವುದಿಲ್ಲ ಎಂದು ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.
“ಹಿಜಾಬ್ ಧರಿಸುವುದು ಇಸ್ಲಾಂನ ಅತ್ಯಗತ್ಯ ಧಾರ್ಮಿಕ ಆಚರಣೆ ಎಂಬುದಕ್ಕೆ ಅರ್ಜಿದಾರರು ಯಾವುದೇ ಪುರಾವೆ ನೀಡಿಲ್ಲ,” ಎಂದು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಹೈಕೋರ್ಟ್‌ನಲ್ಲಿ ಸೋಮವಾರ ಪ್ರಬಲ ವಾದ ಮಂಡಿಸಿದರು.
ಸಮವಸ್ತ್ರದ ಜತೆ ಹಿಜಾಬ್‌ಗೆ ಅನುಮತಿ ಕೋರಿ ಸಲ್ಲಿಸಿರುವ ಅರ್ಜಿಗಳ ಕುರಿತು ಸಿಜೆ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾ.ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ಪೂರ್ಣ ಪೀಠ ಸುಮಾರು ಎರಡು ಗಂಟೆಗಳ ವಾದ ಆಲಿಸಿದ ಬಳಿಕ ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನಕ್ಕೆ ಮುಂದೂಡಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








