ಉಡುಪಿ
ಭಾರತದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾದ ‘ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್’ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ. ನಾರ್ವೆ ದೇಶಕ್ಕೆ 3800 TDW ಸಾಮರ್ಥ್ಯದ ಬೃಹತ್ ಹಡಗನ್ನು ಪೂರೈಕೆ ಮಾಡುವ ಪ್ರಕ್ರಿಯೆ ಆರಂಭಿಸಿದೆ. ನಾರ್ವೆಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ನಾರ್ವೆಯ ವಿಲ್ಸನ್ ಎಎಸ್ ಕಂಪನಿಯ ಸಿಬ್ಬಂದಿಗಳು ಉಡುಪಿಯ ಮಲ್ಪೆ ಸಮೀಪದ ಬೋಟ್ ಬಿಲ್ಡಿಂಗ್ ಯಾರ್ಡ್ಗೆ ಬಂದು ಖರೀದಿ ಪ್ರಕ್ರಿಯೆಯನ್ನು ಪೂರೈಸಿದರು. ಒಪ್ಪಂದಕ್ಕೆ ಸಹಿ ಹಾಕುವುದರ ಜೊತೆಗೆ ಭಾರತೀಯ ಸಂಸ್ಕೃತಿಯ ಪ್ರಕಾರ ಪೂಜೆ ನೆರವೇರಿಸಲಾಯಿತು. ಹಡಗಿಗೆ ತೆಂಗಿನಕಾಯಿ ಒಡೆದು, ಮಾಲೆ ಹಾಕಿ, ಪ್ರಸಾದ ಹಚ್ಚಿ ಆರತಿ ಎತ್ತಿ ಪೂಜೆ ಮಾಡಲಾಯಿತು.
ಕಾರ್ಗೋ ಹಡಗುಗಳ ನಿರ್ಮಾಣದಲ್ಲಿ ಭಾರತ ಪ್ರಪಂಚದಲ್ಲೇ ಸದ್ಯ 17ನೇ ಸ್ಥಾನದಲ್ಲಿದೆ. 2030ರ ವೇಳೆಗೆ ಟಾಪ್ 10 ಆಗುವ ಗುರಿಯನ್ನು ಹೊಂದಿದೆ. 2047ರ ವೇಳೆಗೆ ಟಾಪ್ 5 ರ ಗುರಿಮುಟ್ಟುವ ಗುರಿಯನ್ನು ಭಾರತ ಸರಕಾರ ಹಾಕಿಕೊಂಡಿದೆ.
ನಾರ್ವೆ ದೇಶದ ವಿಲ್ಸನ್ ಎಎಸ್ ಕಂಪನಿಯು ಒಟ್ಟು 14 ಹಡಗುಗಳನ್ನು ನಿರ್ಮಿಸಿ ಪೂರೈಸುವಂತೆ ‘ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್’ಗೆ ಮನವಿ ಮಾಡಿದ್ದು, ಒಪ್ಪಂದ ಮಾಡಿಕೊಂಡಿದೆ. ಅದರಂತೆ ಮೊದಲ ಹಡಗು ಈಗ ಪೂರೈಕೆಯಾಗುತ್ತಿದೆ.