ಬೆಂಗಳೂರು:
2024ರ ಬೇಸಿಗೆಯಲ್ಲಿ ಕರ್ನಾಟಕದಲ್ಲಿ ವಿದ್ಯುತ್ ಬೇಡಿಕೆಯಲ್ಲಿ ತೀವ್ರ ಏರಿಕೆ ದಾಖಲಾಗಿದೆ. ಇಂಧನ ಇಲಾಖೆ ಅಂಕಿಅಂಶಗಳ ಪ್ರಕಾರ, 2024ರ ಮಾರ್ಚ್ 12 ರಂದು ಅತಿ ಹೆಚ್ಚಿನ ಬೇಡಿಕೆ 17,220 ಮೆಗಾವ್ಯಾಟ್ ಇತ್ತು ಮತ್ತು ಏಪ್ರಿಲ್ 5 ರಂದು ರಾಜ್ಯದಲ್ಲಿ ಗರಿಷ್ಠ ಸರಾಸರಿ ದೈನಂದಿನ ಬಳಕೆಯು 332 ಮೆಗಾ ಯುನಿಟ್‌ಗಳಷ್ಟಿತ್ತು.
ರಾಜ್ಯದಲ್ಲಿ ಮಳೆ ಕೊರತೆಯ ನಡುವೆ ಬರಗಾಲದಿಂದಾಗಿ ವಿದ್ಯುತ್ ಉತ್ಪಾದನೆ ಕಡಿಮೆ ಇರುವ ಕಾರಣ ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಇಂಧನ ಇಲಾಖೆ ವಿದ್ಯುತ್ ಪೂರೈಸುವ ಮೂಲಕ ಕರ್ನಾಟಕವನ್ನು ವಿದ್ಯುತ್ ಕಡಿತದಿಂದ ರಕ್ಷಿಸಿವೆ ಎಂದು ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.
‘ ರಾಜ್ಯದ ಇಂಧನ ಬೇಡಿಕೆಯನ್ನು ಪೂರೈಸಲು, ಸರ್ಕಾರವು ರಾಜ್ಯ ಗ್ರಿಡ್‌ನಲ್ಲಿ ಅಗತ್ಯ ಪ್ರಮಾಣದ ವಿದ್ಯುತ್ ಅನ್ನು ಖಚಿತಪಡಿಸಿಕೊಳ್ಳಲು ಪ್ರಾಮಾಣಿಕ, ಸ್ಥಿರ ಮತ್ತು ನಿರಂತರ ಪ್ರಯತ್ನಗಳನ್ನು ಮಾಡಿದೆ. ನಿರ್ದಿಷ್ಟ ಸಮಯದಲ್ಲಿ ಇತರ ರಾಜ್ಯಗಳೊಂದಿಗೆ ವಿದ್ಯುತ್ ವಿನಿಮಯ ಮಾಡಿಕೊಳ್ಳಲಾಗಿತ್ತು. ವಿದ್ಯುತ್ ಕಾಯ್ದೆಯ ಸೆಕ್ಷನ್ 11 ಜಾರಿಗೊಳಿಸಿ ರಾಜ್ಯದಲ್ಲಿರುವ ಖಾಸಗಿ ವಿದ್ಯುತ್ ಉತ್ಪಾದಕರು ರಾಜ್ಯ ಗ್ರಿಡ್‌ಗೆ ವಿದ್ಯುತ್ ನೀಡುವಂತೆ ನೋಡಿಕೊಳ್ಳಲಾಗಿದೆ’ ಎಂದು ಹೇಳಿಕೆ ತಿಳಿಸಿದೆ.
ಈ ಭಾರಿ ವಿದ್ಯುತ್ ಬೇಡಿಕೆಯನ್ನು ಪೂರೈಸಲು ರಾಜ್ಯದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಗರಿಷ್ಠ ವಿದ್ಯುತ್ ಉತ್ಪಾದನೆ ಮಾಡಲಾಗಿದೆ. ರಾಜ್ಯದ ಮೂರು ಉಷ್ಣ ವಿದ್ಯುತ್ ಸ್ಥಾವರಗಳು ಕಳೆದ ವರ್ಷ ಒಟ್ಟು 22,000 ಮಿಲಿಯನ್ ಯೂನಿಟ್ ವಿದ್ಯುತ್ ಉತ್ಪಾದಿಸಿವೆ ಎಂದು ಇಲಾಖೆ ತಿಳಿಸಿದೆ.
ಕಳೆದ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಕೊರತೆಯಿಂದಾಗಿ ಆಗಸ್ಟ್ ತಿಂಗಳಲ್ಲಿಯೇ ಬೇಸಿಗೆಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಯಾವುದೇ ಕಾರಣಕ್ಕೂ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದರು. ಅದಕ್ಕೆ ತಕ್ಕಂತೆ ನಾವು ವಿದ್ಯುತ್ ಪೂರೈಕೆ ಮಾಡಿದ್ದೇವೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ ಹೇಳಿದರು.