ಶ್ರೀನಗರ:
ಕಾಶ್ಮೀರದ ಬೋಟಾ ಪತ್ರಿ ಗ್ರಾಮದಲ್ಲಿ ಗುಲ್ಮಾರ್ಗ್‌ನ ಪ್ರವಾಸಿ ರೆಸಾರ್ಟ್ ಬಳಿ ಭಯೋತ್ಪಾದಕರು ಸೇನಾ ವಾಹನದ ಮೇಲೆ ದಾಳಿ ನಡೆಸಿದಾಗ ಇಬ್ಬರು ಸೈನಿಕರು ಮತ್ತು ಇಬ್ಬರು ಸೇನಾ ಪೋರ್ಟರ್‌ಗಳು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೂವರು ಯೋಧರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅವರು ಹೇಳಿದರು.
ದಾಳಿಗೆ ಒಳಗಾದಾಗ ವಾಹನದಲ್ಲಿದ್ದ ಯೋಧರು ಪ್ರತೀಕಾರದ ಗುಂಡಿನ ದಾಳಿ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೇನೆಯ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ X ಪೋಸ್ಟ್‌ನಲ್ಲಿ, “ಭಾರತೀಯ ಸೇನೆ ಮತ್ತು ಭಯೋತ್ಪಾದಕರ ನಡುವೆ ಬಾರಾಮುಲ್ಲಾದಲ್ಲಿ ಪ್ರದೇಶವಾದ ಬೋಟಾ ಪತ್ರಿ ಬಳಿ, ಸಣ್ಣ ಗುಂಡಿನ ಚಕಮಕಿ ನಡೆದಿದೆ” ಎಂದು ಹೇಳಿದೆ.”ವಿವರಗಳನ್ನು ಪರಿಶೀಲಿಸಲಾಗುತ್ತಿದೆ” ಎಂದು ಅದು ಹೇಳಿದೆ.
ಈ ಪ್ರದೇಶವು ಸಂಪೂರ್ಣವಾಗಿ ಸೇನೆಯ ಪ್ರಾಬಲ್ಯದಲ್ಲಿದೆ ಮತ್ತು ಈ ವರ್ಷದ ಬೇಸಿಗೆಯ ಆರಂಭದಲ್ಲಿ ಭಯೋತ್ಪಾದಕರ ಗುಂಪೊಂದು ನುಸುಳಿರುವುದಾಗಿ ಮತ್ತು ಅಫ್ರಾವತ್ ಶ್ರೇಣಿಯ ಎತ್ತರದ ಪ್ರದೇಶಗಳಲ್ಲಿ ಆಶ್ರಯ ಪಡೆದಿದೆ ಎಂದು ಈ ಹಿಂದೆ ವರದಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬೋಟಾ ಪತ್ರಿ ಪ್ರದೇಶವನ್ನು ಇತ್ತೀಚೆಗೆ ಪ್ರವಾಸಿಗರಿಗೆ ತೆರೆಯಲಾಗಿದೆ.
ಅಕ್ಟೋಬರ್ 20 ರಂದು, ಗಂದೇರ್ಬಾಲ್ ಜಿಲ್ಲೆಯ ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಂಗ ನಿರ್ಮಾಣ ಸ್ಥಳದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದಾಗ ವೈದ್ಯರು ಮತ್ತು ಆರು ಕಟ್ಟಡ ಕಾರ್ಮಿಕರು ಸಾವನ್ನಪ್ಪಿದ್ದರು.
