ನವದೆಹಲಿ:
ಕೇಂದ್ರ ಸರ್ಕಾರ ಜನರಿಗೆ ಗುಡ್ ನ್ಯೂಸ್ ನೀಡಿದೆ. ಉಜ್ವಲ ಯೋಜನೆಗೆ 12 ಸಾವಿರ ಕೋಟಿ ರೂ . ನಿಗದಿ ಮಾಡಿದ್ದು, ಗೃಹಬಳಕೆ LPG ಸಿಲಿಂಡರ್‌ಗೆ 300 ರೂ. ಸಬ್ಸಿಡಿ ನೀಡುವ ಗುರಿ ಹೊಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ನಿಯಂತ್ರಿತ ದರದಲ್ಲಿಅಡುಗೆ ಅನಿಲ ಪೂರೈಸುತ್ತಿರುವ ಸಾರ್ವಜನಿಕ ವಲಯದ ತೈಲ ಕಂಪನಿಗಳಿಗೆ ನಷ್ಟ ಸರಿದೂಗಿಸಲು 30 ಸಾವಿರ ಕೋಟಿ ರೂ. ಸಬ್ಸಿಡಿ ಘೋಷಿಸಲಾಗಿದೆ. ನಿನ್ನೆ ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದೆ. ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 12,060 ಕೋಟಿ ರೂ. ಮೌಲ್ಯದ ಸಿಲಿಂಡರ್ ಸಬ್ಸಿಡಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
2025-26ರ ಹಣಕಾಸು ವರ್ಷಕ್ಕೆ ಈ ಯೋಜನೆಗೆ 12,000 ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ. ದೇಶಾದ್ಯಂತ 10.33 ಕೋಟಿ ಕುಟುಂಬಗಳು PMUY ಯಿಂದ ಪ್ರಯೋಜನ ಪಡೆಯಲಿವೆ. ದೇಶದ ಬಡ ಮಹಿಳೆಯರಿಗೆ LPG ಸಂಪರ್ಕಗಳನ್ನು ಒದಗಿಸಲು ಈ ಯೋಜನೆಯನ್ನು ಮೇ 2016 ರಲ್ಲಿ ಪ್ರಾರಂಭಿಸಲಾಗಿತ್ತು. ಶುಕ್ರವಾರ ಬಿಡುಗಡೆಯಾದ ಅಧಿಕೃತ ಪ್ರಕಟಣೆಯ ಪ್ರಕಾರ, ವರ್ಷಕ್ಕೆ ಒಂಬತ್ತು ರೀಫಿಲ್ಸ್ ಗೃಹ ಬಳಕೆ ಸಿಲಿಂಡರ್‌ಗೆ 300 ರೂ. ನಷ್ಟು ಸಬ್ಸಿಡಿ ನೀಡುವ ಗುರಿಯನ್ನು ಹೊಂದಿದೆ.
ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್‌ಪಿಸಿಎಲ್ ಕಂಪನಿಗಳಿಗೆ ಈ ಸಬ್ಸಿಡಿ ಪ್ಯಾಕೇಜ್ ದೊರೆಯಲಿದ್ದು, 12 ಕಂತುಗಳಲ್ಲಿ ಪರಿಹಾರದ ಹಣ ಜಮೆ ಆಗಲಿದೆ. 2022ರ ಅಕ್ಟೋಬರ್‌ನಲ್ಲಿ 22,000 ಕೋಟಿ ರೂ. ಅನುದಾನ ನೀಡಿದ ನಂತರ ಕೇಂದ್ರ ಸರ್ಕಾರ ಒದಗಿಸಿದ ಎರಡನೇ ಪ್ರಮುಖ ಪರಿಹಾರ ಇದಾಗಿದೆ. ಸಂಪುಟ ಸಭೆಯ ವಿವರಗಳನ್ನು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅಶ್ವಿನಿ ವೈಷ್ಣವ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಷ್ಟೇ ಅಲ್ಲದೆ ತಾಂತ್ರಿಕ ಶಿಕ್ಷಣದಲ್ಲಿ ಬಹುಶಿಸ್ತೀಯ ಶಿಕ್ಷಣ ಮತ್ತು ಸಂಶೋಧನಾ ಸುಧಾರಣೆಗೆ 4,200 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಮತ್ತು ಅನುದಾನಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ನೆರವು ನೀಡಲಾಗುವುದು. ಕೌಶಲ್ಯ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಈ ಯೋಜನೆಯ ಪ್ರಮುಖ ಉದ್ದೇಶವು ದೇಶಾದ್ಯಂತ 7.5 ಲಕ್ಷ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುವ ನಿರೀಕ್ಷೆಯಿದೆ. ಇದರ ಜೊತೆಗೆ, ಅಸ್ಸಾಂ ಮತ್ತು ತ್ರಿಪುರಾಕ್ಕೆ 4,250 ಕೋಟಿ ರೂ.ಗಳ ವಿಶೇಷ ಅಭಿವೃದ್ಧಿ ಪ್ಯಾಕೇಜ್ ಘೋಷಿಸಲಾಗಿದೆ.
