ಮಾಸ್ಕೋ:
ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದ ಬೆನ್ನಲ್ಲೇ ಅಮೆರಿಕದ ದಿಗ್ಬಂಧನಗಳ ವಿರುದ್ದ ರಷ್ಯಾದ ಬಾಹ್ಯಾಕಾಶ ಸಂಸ್ಥೆ ರೋಸ್ಕೊಸ್ಮೊಸ್ ಮುಖ್ಯಸ್ಥರು ತರಾಟೆಗೆ ತೆಗೆದುಕೊಂಡಿದ್ದಾರೆ.
ಹೊಸ ಯುಎಸ್ ನಿರ್ಬಂಧಗಳು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್)ದಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಘಾಸಿಗೊಳಿಸಬಹುದು ಎಂದು ಅವರು ಎಚ್ಚರಿಸಿದ್ದಾರೆ .
ಒಂದು ವೇಳೆ ಬಾಹ್ಯಾಕಾಶ ನಿಲ್ದಾಣ ನಿಯಂತ್ರಣ ತಪ್ಪಿದಲ್ಲಿ ಅಮೆರಿಕ, ಯುರೋಪ್, ಭಾರತ, ಚೀನಾದಂತಹ ದೇಶಗಳ ಮೇಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ರೋಸ್ಕೊಸ್ಮೊಸ್ ಮುಖ್ಯಸ್ಥರು ಹೇಳಿದ್ದಾರೆ.
ಉಕ್ರೇನ್ ಮೇಲಿನ ಪೂರ್ಣ ಪ್ರಮಾಣದ ದಾಳಿಗಾಗಿ ರಷ್ಯಾವನ್ನು ಶಿಕ್ಷಿಸಲು ಯುಎಸ್ ಅಧ್ಯಕ್ಷ ಜೋ ಬಿಡನ್ ಗುರುವಾರ ಕಠಿಣ ಹೊಸ ನಿರ್ಬಂಧಗಳನ್ನು ಘೋಷಿಸಿದ್ದಾರೆ. ತಾಂತ್ರಿಕ, ರಷ್ಯಾ ಬ್ಯಾಂಕ್ ಗಳು ಏರೋಸ್ಪೇಸ್ ಮತ್ತು ಮಿಲಿಟರಿ ಸಹಕಾರದ ಮೇಲೆ ನಿರ್ಬಂಧಗಳನ್ನು ವಿಧಿಸಿದೆ.
ರೋಸ್ಕೊಸ್ಮೊಸ್ನ ಮಹಾನಿರ್ದೇಶಕ ಡಿಮಿಟ್ರಿ ರೊಗೊಜಿನ್ಸ್ ಯುಎಸ್ ನಿರ್ಬಂಧಗಳಿಗೆ ತಕ್ಷಣವೇ ಪ್ರತಿಕ್ರಿಯಿಸಿದ್ದು, ಇದರ ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ನಮ್ಮ ಸಹಕಾರಕ್ಕೆ ನೀವು ಅಡ್ಡಿಪಡಿಸಿದರೆ, ಐಎಸ್‌ಎಸ್ ತನ್ನ ಕಕ್ಷೆಯಿಂದ ಕೆಳಗೆ ಯುನೈಟೆಡ್ ಸ್ಟೇಟ್ಸ್ ಅಥವಾ ಯುರೋಪ್ ದೇಶಗಳ ಮೇಲೆ ಬಿದ್ದರೆ ಯಾರು ರಕ್ಷಿಸುತ್ತಾರೆ?’ಎಂದು ಪ್ರಶ್ನಿಸಿದ್ದಾರೆ. ಸುಮಾರು 500 ಟನ್ ತೂಕದ ಬಾಹ್ಯಾಕಾಶ ನಿಲ್ದಾಣದ ಭಾಗಗಳು ಭಾರತ ಅಥವಾ ಚೀನಾದ ಮೇಲೆ ಬೀಳಬಹುದು ಎಂದು ಅವರು ಹೇಳಿದ್ದಾರೆ.
ಅಂತಹ ಅವಕಾಶಗಳಿಂದ ನೀವು ಬೆದರಿಕೆ ಹಾಕಲು ಬಯಸುವಿರಾ? ಎಂದು ರೋಸ್ಕೊಸ್ಮೊಸ್ ಮುಖ್ಯಸ್ಥರು ಯುನೈಟೆಡ್ ಸ್ಟೇಟ್ಸ್ ಅನ್ನು ಆಕ್ರೋಶದಿಂದ ಪ್ರಶ್ನಿಸಿದ್ದಾರೆ? ‘ಐಎಸ್ ಎಸ್ ರಷ್ಯಾದ ಮೇಲೆ ಹಾದು ಹೋಗುವುದಿಲ್ಲ,
ಹಾಗಾಗಿ ಅದು ಕುಸಿದರೆ ನಷ್ಟವೆಲ್ಲ ನಿಮಗೇ. ಅದಕ್ಕೆ ನೀವು ಸಿದ್ಧರಿದ್ದೀರಾ?’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಎಚ್ಚರಿಸಿದ್ದಾರೆ. ಹೀಗಾಗಿ ಬೇಜವಾಬ್ದಾರಿಯಿಂದ ವರ್ತಿಸಬಾರದು ಎಂದು ಅಮೆರಿಕಕ್ಕೆ ಸೂಚಿಸಿದ್ದಾರೆ.
ಇದೇ ಸಂದರ್ಭದಲ್ಲಿ ರಷ್ಯಾದ ಮೇಲೆ ವಿಧಿಸಲಾದ ಹೊಸ ನಿರ್ಬಂಧಗಳಿಗೆ ಯುಎಸ್ ಬಾಹ್ಯಾಕಾಶ ಸಂಸ್ಥೆ(ನಾಸಾ) ಪ್ರತಿಕ್ರಿಯಿಸಿದೆ. ಇದು ರಷ್ಯಾದೊಂದಿಗಿನ ಸಂಬಂಧಕ್ಕೆ ಯಾವುದೇ ಬೆದರಿಕೆಯನ್ನು ಉಂಟುಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಸುರಕ್ಷಿತ ಕಾರ್ಯಾಚರಣೆಗಾಗಿ ರಷ್ಯಾ ಮತ್ತು ಅಂತರಾಷ್ಟ್ರೀಯ ಪಾಲುದಾರರೊಂದಿಗೆ ಕೆಲಸ ಮಾಡುತ್ತಿದೆ ಎಂದು ನಾಸಾ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ