ಉನ್ನಾವೊ ಅತ್ಯಾಚಾರ ಪ್ರಕರಣ: ಕುಲದೀಪ್ ಸೆಂಗರ್ ಜೈಲು ಶಿಕ್ಷೆ ಅಮಾನತು ಪ್ರಶ್ನಿಸಿ ಸುಪ್ರೀಂನಲ್ಲಿ ಸಿಬಿಐ ಅರ್ಜಿ

ನವದೆಹಲಿ

     2017 ರ ಉನ್ನಾವೋ ಅತ್ಯಾಚಾರ  ಪ್ರಕರಣದ ಅಪರಾಧಿ, ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ ಗೆ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ, ಷರತ್ತುಬದ್ಧ ಜಾಮೀನು ನೀಡಿರುವ ದೆಹಲಿ ಹೈಕೋರ್ಟ್‌ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ. ಉನ್ನಾವೊ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ ತೀರ್ಪನ್ನು ಅಧ್ಯಯನ ಮಾಡಿದ ನಂತರ ಮೇಲ್ಮನವಿ(ಎಸ್‌ಎಲ್‌ಪಿ) ಸಲ್ಲಿಸಲಾಗಿದೆ ಎಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.

    ಉನ್ನಾವೊ ಅತ್ಯಾಚಾರ ಪ್ರಕರಣ ಸಂಬಂಧ 2019ರಲ್ಲಿ ದೆಹಲಿಯ ವಿಚಾರಣಾ ನ್ಯಾಯಾಲಯ ಸೆಂಗರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅದನ್ನು ಪ್ರಶ್ನಿಸಿ ಸೆಂಗರ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಇತ್ಯರ್ಥ ಆಗುವರೆಗೆ ಶಿಕ್ಷೆಯನ್ನು ಅಮಾನತಿನಲ್ಲಿರಿಸಿ ದೆಹಲಿ ಹೈಕೋರ್ಟ್‌ ಮಂಗಳವಾರ ತೀರ್ಪು ನೀಡಿ, ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.

   ಸೆಂಗರ್‌ಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿರುವುದನ್ನು ಖಂಡಿಸಿ ಸಂತ್ರಸ್ತೆ, ಅವರ ತಾಯಿ ಮತ್ತು ಮಹಿಳಾ ಪರ ಹೋರಾಟಗಾರರು ದೆಹಲಿ ಹೈಕೋರ್ಟ್‌ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದ್ದರು.

   ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಂತ್ರಸ್ತೆಯ ತಾಯಿ, ನನ್ನ ಮಗಳು ತುಂಬಾ ಕಷ್ಟ ಅನುಭವಿಸಿದ್ದರಿಂದ ಪ್ರತಿಭಟಿಸಲು ಉಚ್ಚ ನ್ಯಾಯಾಲಯಕ್ಕೆ ಬಂದಿದ್ದೇನೆ ಎಂದು ಹೇಳಿದರು. ‘‘ನಾನು ಇಡೀ ಉಚ್ಚ ನ್ಯಾಯಾಲಯವನ್ನು ದೂಷಿಸುತ್ತಿಲ್ಲ. ನಮ್ಮ ನಂಬಿಕೆಯನ್ನು ನುಚ್ಚು ನೂರು ಮಾಡಿದ ಆದೇಶ ನೀಡಿದ ಇಬ್ಬರು ನ್ಯಾಯಾಧೀಶರನ್ನು ಮಾತ್ರ ದೂಷಿಸುತ್ತೇನೆ’’ ಎಂದು ಹೇಳಿದರು.

   ಈ ಪ್ರಕರಣದ ಶಿಕ್ಷೆ ಅಮಾನತುಗೊಂಡಿದ್ದರೂ ಸಂತ್ರಸ್ತೆ ತಂದೆಯ ಕಸ್ಟಡಿ ಸಾವು ಪ್ರಕರಣದಲ್ಲಿ ಸೆಂಗರ್‌ಗೆ 10 ವರ್ಷಗಳ ಶಿಕ್ಷೆಯಾಗಿದೆ. ಹೀಗಾಗಿ ಅವರು ಜೈಲಿನಲ್ಲಿಯೇ ಇರುತ್ತಾರೆ ಎಂದೂ ನ್ಯಾಯಾಲಯ ಹೇಳಿದೆ.

   2017ರ ಜೂನ್ 4ರಂದು ಕೆಲಸ ಹುಡುಕಿಕೊಂಡು ಬಂದ ಹದಿನೇಳು ವರ್ಷದ ಯುವತಿಯ ಮೇಲೆ ಸೆಂಗರ್ ಅತ್ಯಾಚಾರ ಎಸಗಿದ್ದ ಅದಾದ ಒಂದು ವಾರದ ನಂತರ ಆತನ ಸಹವರ್ತಿಗಳು ಆಕೆಯನ್ನು ಹೊತ್ತೊಯ್ದು ಬಂಧನದಲ್ಲಿಟ್ಟು, ಸಾಮೂಹಿಕ ಅತ್ಯಾಚಾರ ಮಾಡಿದ್ದರು. 2018ರ ಏಪ್ರಿಲ್ 3ರಂದು, ಸಂತ್ರಸ್ತೆಯ ತಂದೆ ಮೇಲೆ ಆರೋಪಿಯ ಬೆಂಬಲಿಗರು ಹಲ್ಲೆ ನಡೆಸಿದರು. ಆಗಲೂ ಆರೋಪಿಯನ್ನು ವಶಕ್ಕೆ ಪಡೆಯುವ ಬದಲು, ಸಂತ್ರಸ್ತೆಯ ತಂದೆಯನ್ನೇ ಪೊಲೀಸರು ಬಂಧಿಸಿದ್ದರು. 2019ರ ಡಿಸೆಂಬರ್ 16ರಂದು, ಸೆಂಗರ್ ತಪ್ಪಿತಸ್ಥ ಎಂದು ನ್ಯಾಯಾಲಯ ನಿರ್ಣಯ ನೀಡಿತು. ಡಿಸೆಂಬರ್ 20ರಂದು ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು.

Recent Articles

spot_img

Related Stories

Share via
Copy link