ಸರ್ಕಾರದ ವಿರುದ್ಧ ಹರಿಹಾಯ್ದ ಉಪೇಂದ್ರ…!

ಬೆಂಗಳೂರು :

     ಕರ್ನಾಟಕ ಬಂದ್‌ಗೆ ಸ್ಯಾಂಡಲ್‌ವುಡ್‌ ತಾರೆಯರು ಬೆಂಬಲ ನೀಡಿದ್ದಾರೆ. ನಟ ಡಾ. ಶಿವರಾಜಕುಮಾರ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದೆ. ಈ ವೇಳೆ ನಟ ಉಪೇಂದ್ರ ಕಾವೇರಿ ವಿಚಾರವಾಗಿ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

    ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿವಾದ ಸಂಬಂಧ ವಿವಿಧ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‌ಗೆ ಸ್ಯಾಂಡಲ್‌ವುಡ್‌ ಬೆಂಬಲ ಸೂಚಿಸಿದೆ. ಪ್ರತಿಭಟನೆ ವೇಳೆ ಮಾತನಾಡಿದ ಉಪೇಂದ್ರ ಇದು ನನ್ನ 25ನೇ ಹೋರಾಟ ಎಂದರು.

    ರಾಜಕಾರಣಿಗಳು ಈ ಕುರಿತು ಯೋಚನೆ ಮಾಡಿದಾಗ, ಈ ಸಮಸ್ಯೆಗೆ ಪರಿಹಾರ ಸಿಗುತ್ತೆ. ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ಈ ಸಮಸ್ಯೆ ಇದೆ. ಪರಿಹಾರ ಆಗದೇ ಇರೋ ಸಮಸ್ಯೆ ಇದು ತಮಿಳುನಾಡಿಗೆ ನೀರನ್ನು ಬಿಡಬೇಡಿ ಅಂತ ಹೋರಾಟ ಮಾಡುತ್ತಿರೋದು ನನಗೆ ಆಶ್ಚರ್ಯ ಉಂಟುಮಾಡಿದೆ. ನಮ್ಮ ಮೆನೆಯ ಸೆಕ್ಯೂರಿಟಿ ಪಕ್ಕದ ಮನೆಗೆ ನೀರು ಬಿಡುತ್ತಿದ್ದಾನೆ. ಹೀಗಾಗಿ ಪೊಲೀಸರಿಗೆ ದೂರು ನೀಡಲು ಬಂದಿದ್ದೇನೆ ಎಂದು ನಟ, ರಾಜಕಾರಣಿ ಉಪೇಂದ್ರ ವ್ಯಂಗ್ಯವಾಗಿ ಹೇಳಿದರು.

    ಇನ್ನು ಎಂಎಲ್ ಸಿ, ಹಿರಿಯ ನಟಿ ಉಮಾಶ್ರೀ ಮಾತನಾಡಿ, ರೈತರ ಪರವಾದ ಬೆಂಬಲಕ್ಕೆ ವಾಣಿಜ್ಯ ಮಂಡಳಿಯ ಎಲ್ಲಾ ವಿಭಾಗಗಳು ಮುಂದಾಗಿದೆ, ನಮ್ಮೆಲರಿಗೂ ಅಣ್ಣಾವ್ರ ಜೊತೆ ಹೋರಾಡಿದ ಪ್ರಸಂಗ ನೆನಪಾಗುತ್ತೆ, ಹೋರಾಟಕ್ಕೆ ಹೋದಾಗ ಹೆಣ್ಣು ಮಕ್ಕಳು‌ ರಕ್ಷಿಸಿಕೊಳ್ಳೋಕೂ ಕಷ್ಟ, ನಮಗೆ ತಿಳುವಳಿಕೆ ಇಲ್ಲದಿದ್ದಾಗಲೂ ಅಣ್ಣಾವ್ರು ಮಾತನಾಡಿಸುತ್ತಿದ್ರು ಎಂದು ಹೇಳಿದರು.

    ಕಲಾವಿದರು, ಕಲಾ ಸಂಸ್ಥೆಯ, ನೆಲ ಜಲದ ವಿಚಾರವನ್ನ ಅಣ್ಣಾವ್ರು ಯಾವತ್ತೂ ಬಿಟ್ಟುಕೊಟ್ಟಿರಲಿಲ್ಲ. ಅಣ್ಣವ್ರಾ ಕುಟುಂಬ ಜೊತೆಗಿದ್ದಿದ್ದು ದೊಡ್ಡ ಶಕ್ತಿ ಕೊಟ್ಟಿದೆ. ನಾಯಕರು ಬರೋವರೆಗೂ ಮಾತಾಡೋದು ಬೇಡ ಅಂತಿದ್ದೆ, ಶಿವಣ್ಣ ಕೊಟ್ಟ ಶಕ್ತಿ ಬಹಳ ದೊಡ್ಡದ್ದು, ಅವರ ಹಿಂದೆ ನಾವು ಇರುತ್ತೇವೆ, ಆಗಲೇ ಈ ಹೋರಾಟಕ್ಕೆ ಘನತೆ ಎಂದು ಉಮಾಶ್ರೀ ಮಾತನಾಡಿದರು.

    ನಟಿ ಶ್ರುತಿ ಮಾತನಾಡಿ, ಈ ಪ್ರತಿಭಟನೆ ಪ್ರದರ್ಶನ ಮಾಡೋಕೆ ಅಲ್ಲ, ಒಗ್ಗಟ್ಟು ಪ್ರದರ್ಶನಕ್ಕಾಗಿ ಈ ಹೋರಾಟ. ಪ್ರತಿಭಟನೆ, ಬಂದ್‌ಗೆ ದೊಡ್ಡ ಶಕ್ತಿ ಇದೆ, ಗೋಕಾಕ್ ಚಳುವಳಿಗೆ ಡಾ.ರಾಜ್ ಕುಮಾರ್ ಬಂದ್ಮೇಲೆ ಅದಕ್ಕೆ ಬಂದ ಘನತೆಯೇ ಬೇರೆ, ನಾನು ಯಾವುದೇ ಪಕ್ಷ ಪರ, ವಿರೋಧವಾಗಿ ಬಂದಿಲ್ಲ, ಒಬ್ಬ ಕನ್ನಡತಿಯಾಗಿ ಬಂದಿದ್ದೇನೆ. ನಮಗೇ ಕುಡಿಯೋಕೆ ನೀರಿಲ್ಲ, ತಮಿಳುನಾಡಿಗೆ ಮೂರನೇ ಬೆಳೆಗೆ ನೀರು ಬೇಕಂತೆ, ಕಾವೇರಿ ನಮ್ಮವಳು ನಮ್ಮ‌ ರೈತರಿಗೆ ನೀರು ಬೇಕು ನಮಗೆ ಕುಡಿಯಲು ನೀರು ಬೇಕು ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ