ವಯಾನಾಡು ಭೂಕುಸಿತದ ಬಗ್ಗೆ ಅಮಿತ್‌ ಷಾ ಹೇಳಿದ್ದೇನು ….?

ನವದೆಹಲಿ: 

   ವಯನಾಡಿನಲ್ಲಿ ಸಂಭವಿಸಬಹುದಾದ ಭೂಕುಸಿತ ಬಗ್ಗೆ ಕೇರಳ ಸರ್ಕಾರಕ್ಕೆ ಜುಲೈ 23ಕ್ಕೆ ಎಚ್ಚರಿಕೆ ನೀಡಲಾಗಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಂಸತ್ತಿನಲ್ಲಿ ಹೇಳಿಕೊಂಡಿದ್ದಾರೆ.ವಯನಾಡ್ ಜಿಲ್ಲೆಯಲ್ಲಿ ಮಂಗಳವಾರ ಸಂಭವಿಸಿದ ಭೀಕರ ಭೂಕುಸಿತದಲ್ಲಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು 200 ಜನರು ಗಾಯಗೊಂಡಿದ್ದಾರೆ. ನಾಪತ್ತೆಯಾಗಿರುವ 180 ಮಂದಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

    ವಯನಾಡಿನಲ್ಲಿ ಭೂಕುಸಿತ ಸಂಭವಿಸುವ ಒಂದು ವಾರದ ಮೊದಲು ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರಕ್ಕೆ ಕೇಂದ್ರವು ಎಚ್ಚರಿಕೆ ನೀಡಿತ್ತು ಎಂದು ಗೃಹ ಸಚಿವರು ಹೇಳಿದ್ದಾರೆ. ದಕ್ಷಿಣ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯ ನಂತರ ಕೇಂದ್ರವು ಒಂಬತ್ತು ಎನ್‌ಡಿಆರ್‌ಎಫ್ ತಂಡಗಳನ್ನು ಕೇರಳಕ್ಕೆ ಕಳುಹಿಸಿದೆ. ಕೇರಳ ಸರ್ಕಾರ ಸಕಾಲದಲ್ಲಿ ಜನರನ್ನು ಸ್ಥಳಾಂತರಿಸಲಿಲ್ಲ ಎಂದು ಅಮಿತ್ ಶಾ ರಾಜ್ಯಸಭೆಯಲ್ಲಿ ಹೇಳಿದ್ದಾರೆ. 

    2016ರಿಂದ ಭಾರೀ ಮಳೆ, ಶಾಖದ ಅಲೆ, ಚಂಡಮಾರುತ ಮತ್ತು ಸಿಡಿಲಿನಂತಹ ವಿಪತ್ತುಗಳಿಗಾಗಿ ದೇಶವು ಅತ್ಯಾಧುನಿಕ ಮುಂಚಿನ ಎಚ್ಚರಿಕೆ ವ್ಯವಸ್ಥೆಯನ್ನು ಹೊಂದಿದೆ ಎಂದು ಶಾ ಹೇಳಿದರು. ಈ ವ್ಯವಸ್ಥೆಯಿಂದ ಬಂದ ಮಾಹಿತಿಯ ಆಧಾರದ ಮೇಲೆ ಒಂದು ವಾರ ಮುಂಚಿತವಾಗಿ ಮುನ್ನೆಚ್ಚರಿಕೆಯನ್ನು ಕಳುಹಿಸಲಾಗುತ್ತದೆ. ಕೇರಳದ ವಿಷಯದಲ್ಲೂ ಮೊದಲು ಜುಲೈ 23ರಂದು ರಾಜ್ಯ ಸರ್ಕಾರಕ್ಕೆ ಮುಂಚಿನ ಎಚ್ಚರಿಕೆಯನ್ನು ಕಳುಹಿಸಲಾಗಿತ್ತು. ನಂತರ ಜುಲೈ 25 ಮತ್ತು 26ರಂದು ಭಾರೀ ಮಳೆ ಮತ್ತು ಭೂಕುಸಿತ ಸಂಭವಿಸಿದೆ. ಈ ಎಚ್ಚರಿಕೆಗಳನ್ನು ಪಾಲಿಸುವ ಮೂಲಕ ಅನೇಕ ರಾಜ್ಯಗಳು ಜೀವ ಮತ್ತು ಆಸ್ತಿ ನಷ್ಟವನ್ನು ಬಹಳವಾಗಿ ಕಡಿಮೆ ಮಾಡಿದೆ ಎಂದು ಅವರು ಹೇಳಿದರು. ಗುಜರಾತ್ ಮತ್ತು ಒಡಿಶಾ ಇದಕ್ಕೆ ಉದಾಹರಣೆ ಎಂದು ಹೇಳಿದರು. ಈ ವ್ಯವಸ್ಥೆಗಾಗಿ ಸರಕಾರ 2000 ಕೋಟಿ ರೂಪಾಯಿ ವ್ಯಯಿಸಿದೆ ಎಂದರು. 

   ನೈಸರ್ಗಿಕ ವಿಕೋಪಗಳ ಬಗ್ಗೆ ಕನಿಷ್ಠ ಏಳು ದಿನಗಳ ಮುಂಚಿತವಾಗಿ ಎಚ್ಚರಿಕೆ ನೀಡಬಲ್ಲ ನಾಲ್ಕು ದೇಶಗಳಲ್ಲಿ ಭಾರತವೂ ಸೇರಿದೆ ಎಂದು ಶಾ ಹೇಳಿದರು. ಎನ್‌ಡಿಆರ್‌ಎಫ್ ತಂಡಗಳು ಬಂದ ನಂತರ ಕೇರಳ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ಭೂಕುಸಿತದಿಂದ ಉಂಟಾಗುವ ಸಾವುನೋವುಗಳನ್ನು ಕಡಿಮೆ ಮಾಡಬಹುದಿತ್ತು ಎಂದು ಅವರು ಹೇಳಿದರು. ವಯನಾಡ್ ದುರಂತವನ್ನು ಎದುರಿಸಲು ನರೇಂದ್ರ ಮೋದಿ ಸರ್ಕಾರವು ಕೇರಳ ಸರ್ಕಾರ ಮತ್ತು ಜನರೊಂದಿಗೆ ಬಂಡೆಯಂತೆ ನಿಂತಿದೆ ಎಂದು ಶಾ ಹೇಳಿದರು.

    ಮಂಗಳವಾರ ರಾತ್ರಿ ವಯನಾಡಿಗೆ ಭೇಟಿ ನೀಡಿದ್ದ ಕೇಂದ್ರ ಸಚಿವ ಜಾರ್ಜ್ ಕುರಿಯನ್, ಪ್ರಧಾನಿ ಮೋದಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಈ ಹಿಂದೆ ಹೇಳಿದ್ದರು. ಕೇಂದ್ರ ಸರ್ಕಾರವು ಪರಿಸ್ಥಿತಿಯನ್ನು ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡುತ್ತಿದೆ. ಪ್ರಧಾನ ಮಂತ್ರಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ನನ್ನನ್ನು ನಿಯೋಜಿಸಿದ್ದಾರೆ. ಗೃಹ ಸಚಿವಾಲಯದ ಎರಡೂ ನಿಯಂತ್ರಣ ಕೊಠಡಿಗಳು 24×7 ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ. ರಾಜ್ಯಕ್ಕೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸುತ್ತಿದೆ ಎಂದರು.

Recent Articles

spot_img

Related Stories

Share via
Copy link
Powered by Social Snap