ಬೆಂಗಳೂರು:
ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ, ನಟಿಸಿರುವ ‘ಯುಐ’ ಸಿನಿಮಾ ಕೊನೆಗೂ ತೆರೆಕಂಡಿದೆ. ಬರೋಬ್ಬರಿ 9 ವರ್ಷಗಳ ಬಲಿಕ ಉಪೇಂದ್ರ ಆ್ಯಕ್ಷನ್ ಕಟ್ ಹೇಳಿರುವ ಕಾರಣಕ್ಕೆ ʼಯುಐʼ ಸಿನಿಮಾ ಸಾಕಷ್ಟು ಕುತೂಹಲ ಕೆರಳಿಸಿತ್ತು. ಸಾಮಾನ್ಯ ಚಿತ್ರಗಳಿಗಿಂತ ಭಿನ್ನವಾಗಿ ಕಥೆ ಹೇಳುವ ಉಪೇಂದ್ರ ಅವರ ಸಿನಿಮಾ ಎಂದರೇನೇ ಹಾಗೆ. ಟೈಟಲ್‌ನಿಂದ ಹಿಡಿದು, ಟೀಸರ್, ಪೋಸ್ಟರ್‌ವರೆಗೆ ಎಲ್ಲವೂ ಭಿನ್ನವಾಗಿರುತ್ತದೆ. ಇದಕ್ಕೆ ‘ಯುಐ’ ಕೂಡ ಹೊರತಾಗಿರಲಿಲ್ಲ. ಈ ಕಾರಣಕ್ಕೆ ಇದು ಮೊದಲಿನಿಂದಲೂ ಪ್ರೇಕ್ಷಕರ ಗಮನ ಸೆಳೆದಿತ್ತು. ಇದೀಗ ಕೊನೆಗೂ ಕುತೂಹಲಕ್ಕೆ ತೆರೆ ಬಿದ್ದಿದೆ. ಹಾಗಾದರೆ ಚಿತ್ರ ಹೇಗಿದೆ? ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕಾಲ್ಪನಿಕ ಕಥೆಯ ಬದಲು ಉಪೇಂದ್ರ ಈ ಚಿತ್ರದ ಮೂಲಕ ಸಮಾಜದ ಜ್ವಲಂತ ಸಮಸ್ಯೆಯತ್ತ ಬೆಳಕು ಚೆಲ್ಲಿದ್ದಾರೆ. ಚಿತ್ರ ನೋಡಿದವರು ಉಪೇಂದ್ರ ಅವರ ನಿರ್ದೇಶನಕ್ಕೆ, ನಟನೆಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಚಿತ್ರದಲ್ಲಿ ಬಳಸಿರುವ ತಂತ್ರಕ್ಕೆ ಮಾರು ಹೋಗಿದ್ದಾರೆ.
ಅಚ್ಚರಿ ಎಂದರೆ ಉಪೇಂದ್ರ ಚಿತ್ರದ ಆರಂಭದಲ್ಲೇ ಪ್ರೇಕ್ಷಕರಿಗೆ ಬಹು ದೊಡ್ಡ ಸರ್‌ಪ್ರೈಸ್ ನೀಡಿದ್ದಾರೆ. ಚಿತ್ರದ ಶುರುವಾಗುವ ಮುನ್ನವೇ ʼ‘ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿʼʼ ಎಂದು ಹೇಳುವ ಮೂಲಕ ಜನರನ್ನು ನೋಡುಗರು ಗೊಂದಲಕ್ಕೆ ದೂಡುತ್ತಾರೆ. ಈ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಇನ್ನು ಚಿತ್ರ ನೋಡಿದ ಬಹುತೇಕರಿಗೆ ಸುಲಭದಲ್ಲಿ ಕಥೆ ಅರ್ಥ ಆಗಿಲ್ಲ. ಬಹುತೇಕರು ಇದನ್ನೇ ಹೇಳಿದ್ದಾರೆ. ಇದಕ್ಕಾಗಿ ಮತ್ತೊಮ್ಮೆ ಸಿನಿಮಾ ವೀಕ್ಷಿಸುವುದಾಗಿ ತಿಳಿಸಿದ್ದಾರೆ. ಉಪೇಂದ್ರ ಈ ಬಾರಿಯೂ ಬಹು ಅಪರೂಪದ ಕಥೆಯನ್ನು ತೆರೆ ಮೇಲೆ ತಂದಿದ್ದಾರೆ ಎಂದು ಹಲವರು ಮೆಚ್ಚುಗೆ ಸೂಚಿಸಿದ್ದಾರೆ.
ಚಿತ್ರ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ʼʼನೀನು ನಾನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕಾದ ಸಿನಿಮಾʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ʼʼಬುದ್ದಿವಂತರಿಗೆ ಮಾತ್ರ, ಬೇಡದೆ ಇರೋ ಸುದ್ದಿ ಬಿಟ್ಟು, ಫೋಕಸ್ ಮಾಡಿ ಸಿನಿಮಾ ನೋಡಿ. ಇಷ್ಟೇ ಹೇಳೋಕೆ ಆಗೋದು. ಟಿಪಿಕಲ್ ಉಪ್ಪಿ ಸಿನಿಮಾʼ ಎಂದು ಇನ್ನೊಬ್ಬರು ತಿಳಿಸಿದ್ದಾರೆ.
ʼʼಯುಐʼ ಮಾಸ್ಟರ್ ಪೀಸ್. ಸ್ಯಾಂಡಲ್‌ವುಡ್‌ಗೆ ಹೊಸ ಮಾದರಿಯ ಚಿತ್ರ ಇದಾಗಲಿದೆ. ಬೋಲ್ಡ್ ಕಥೆ ಇದರಲ್ಲಿದೆ. ಪ್ರಯೋಗಾತ್ಮಕ ಸಿನಿಮಾವಾಗಿರುವ ಇದನ್ನು ಪ್ರತಿಯೊಬ್ಬರೂ ನೋಡಲೇ ಬೇಕುʼʼ ಎಂದು ಮತ್ತೊಬ್ಬರು ತಿಳಿಸಿದ್ದಾರೆ. ʼʼಈ ಸಿನಿಮಾದ ಮೂಲಕ ಗಂಭೀರ ಸಂದೇಶ ನೀಡಲಾಗಿದೆ. ಸಂಶಯವೇ ಬೇಡ, ಇದು ಉಪೇಂದ್ರ ಅವರ ಅತ್ಯುತ್ತಮ ಚಿತ್ರ ಎನಿಸಿಕೊಳ್ಳಲಿದೆ. ಹಲವು ದೃಶ್ಯಗಳು ಚಿಂತನೆಗೆ ಹಚ್ಚುತ್ತವೆ. ಹಿನ್ನೆಲೆಯ ಸಂಗೀತವೂ ಗಮನ ಸೆಳೆಯುತ್ತದೆ. ಈ ಸಿನಿಮಾ ಬುದ್ದಿವಂತರಿಗಲ್ಲ. ನೋಡಲೇಬೇಕಾದ ಚಿತ್ರʼʼ ಎಂದು ಮಗದೊಬ್ಬರು ಹೇಳಿದ್ದಾರೆ.
ʼಯುಐʼ ಸಿನಿಮಾದ ಕಥೆ ನಿರ್ದಿಷ್ಟವಾಗಿ ಹೀಗೆ ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಇದು ಅಸಮಾನತೆ, ಜಾತಿ, ಧರ್ಮ, ದೇವರು, ಭ್ರಷ್ಟಾಚಾರ, ಸರಿ, ತಪ್ಪು, ಬುದ್ಧ, ಬಸವ, ಚುನಾವಣೆ, ಪ್ರಜಾಪ್ರಭುತ್ವ, ಪ್ರಕೃತಿ ನಾಶ, ಜೋತಿಷ್ಯ, ಕಲ್ಕಿ ಅವತಾರ, ಸತ್ಯ ಯುಗ, ಸೋಶಿಯಲ್ ಮೀಡಿಯಾ, ಮಾಫಿಯಾ ಹೀಗೆ ವಿವಿಧ ವಿಚಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಪರಭಾಷಿಕರೂ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ.