ಯುಪಿಐ ಪಾವತಿ ವೇಳೆಯೂ ಆಗಬಹುದು ಮೋಸ..!

ಯುಪಿಐ:

ಇದಕ್ಕಾಗಿ ನೆನಪಿನಲ್ಲಿಡಿ ಈ ಮುಖ್ಯ ಮಾಹಿತಿ

          ಕಳೆದ ಕೆಲ ವರ್ಷಗಳಲ್ಲಿ ಡಿಜಿಟಲ್​ ಪಾವತಿ ಪ್ರಕ್ರಿಯೆಯನ್ನು ಬಳಕೆ ಮಾಡುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

ಸ್ಮಾರ್ಟ್​ಫೋನ್​ಗಳ ಸಹಾಯದಿಂದ ಯುಪಿಐ ಪೇಮೆಂಟ್​ ಮಾಡೋದು ಇದೀಗ ಅತ್ಯಂತ ಸುಲಭದ ಕೆಲಸವಾಗಿದೆ. ಯುಪಿಐ ಆರ್.​ಬಿ.ಐ.ನಿಂದ ನಿಯಂತ್ರಿಸಲ್ಪಡೋದರಿಂದ ಈ ಪಾವತಿ ಪ್ರಕ್ರಿಯೆಯನ್ನು ಎಲ್ಲರೂ ನಂಬುತ್ತಾರೆ.

ಹೀಗಾಗಿ ಯುಪಿಐ ಮೂಲಕ ಹೆಚ್ಚೆಚ್ಚು ಪಾವತಿ ಪ್ರಕ್ರಿಯೆಯನ್ನು ಮಾಡಲಾಗುತ್ತಿದೆ.

ಆದರೆ ನಾವು ಯುಪಿಐ ಪಾವತಿ ವೇಳೆಯಲ್ಲಿಯೂ ಜಾಗರೂಕರಾಗಿ ಇರುವುದು ಅತ್ಯಂತ ಅವಶ್ಯಕವಾಗಿದೆ. ಏಕೆಂದರೆ ಇಲ್ಲಿ ಕೂಡ ನಿಮಗೆ ವಂಚನೆಯಾಗುವ ಸಾಧ್ಯತೆ ಇದೆ.

ಡಿಜಿಟಲ್​ ಪಾವತಿ ಪ್ರಕ್ರಿಯೆ ಬಳಕೆ ಹೆಚ್ಚಾದಂತೆಲ್ಲ ಸೈಬರ್​ ಕಳ್ಳರು ನಿಮ್ಮ ಹಣವನ್ನು ದೋಚಲು ಹೊಸ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಹೀಗಾಗಿ ನೀವು ಯುಪಿಐ ಪಾವತಿ ವೇಳೆಯಲ್ಲಿಯೂ ಜಾಗರೂಕರಾಗಿ ಇರಬೇಕು.

ಯುಪಿಐ ಪಾವತಿಗಳಲ್ಲಿ ನಿಮ್ಮ ಮೊಬೈಲ್​ ಫೋನ್​ ವರ್ಚುವಲ್​ ವಾಲೆಟ್​ ಆಗಿ ಕಾರ್ಯನಿರ್ವಹಿಸುತ್ತದೆ. ಇಂತಹ ಸಂದರ್ಭದಲ್ಲಿ ನೀವು ಸುಲಭವಾಗಿ ಹಣಕಾಸಿನ ವಂಚನೆಗೆ ಗುರಿಯಾಗುತ್ತೀರಿ.

ಹೀಗಾಗಿ ನೀವು ಹಣಕಾಸು ಸಂಬಂಧಿತ ಆಯಪ್​ಗಳನ್ನು ಬಳಸುವ ವೇಳೆಯಲ್ಲಿ ಜಾಗರೂಕರಾಗಿ ಇರಬೇಕು. ಹಾಗಾದರೆ ಯಾವೆಲ್ಲ ರೀತಿಯಲ್ಲಿ ನೀವು ಎಚ್ಚರ ವಹಿಸಬೇಕು ಎನ್ನುವುದಕ್ಕೆ ಇಲ್ಲಿದೆ ಮಾಹಿತಿ :

1. ನೀವು ಯಾರಿಗಾದರೂ ಯುಪಿಐ ಮೂಲಕ ಹಣ ಪಾವತಿ ಮಾಡುವವರಾಗಿದ್ದರೆ ನೀವು ಮೊಬೈಲ್​ ಸಂಖ್ಯೆ ಇಲ್ಲವೇ ಯುಪಿಐ ಅಡ್ರೆಸ್​ ಮಾತ್ರ ಹಂಚಿಕೊಳ್ಳಿ. ಇದನ್ನು ಹೊರತುಪಡಿಸಿ ನಿಮ್ಮ ಯುಪಿಐ ಅಪ್ಲಿಕೇಶನ್​ ಪ್ರವೇಶಿಸಲು ಯಾರಿಗೂ ಅವಕಾಶ ನೀಡಬೇಡಿ.

ಎಂದಿಗೂ ನಿಮ್ಮ ಫೋನ್​ ಸ್ಕ್ರೀನ್​ ಲಾಕ್​, ಪಾಸ್​ವರ್ಡ್​ ಅಥವಾ ಯುಪಿಐ ಪಿನ್​​ ಅನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

2. ಸ್ಕ್ರೀನ್​ ಶೇರ್​ ಮಾಡುವಂತಹ ಅಪ್ಲಿಕೇಶನ್​ಗಳಿಗೆ ಯುಪಿಐ ಅಪ್ಲಿಕೇಶನ್​ ಪ್ರವೇಶಿಸಲು ಎಂದಿಗೂ ಅನುಮತಿ ನೀಡಬೇಡಿ. ಇಂತಹ ಅಪ್ಲಿಕೇಶನ್​ಗಳು ನಿಮ್ಮ ಡೇಟಾಗಳನ್ನು ಸೋರಿಕೆ ಮಾಡುತ್ತವೆ ಎಂಬುದು ನೆನಪಿನಲ್ಲಿರಲಿ.

ನಿಮ್ಮ ಪಾಸ್​ವರ್ಡ್​ ಹಾಗೂ ಒಟಿಪಿಗಳನ್ನು ಕದ್ದು ನೋಡುವಂತಹ ಸಾಮರ್ಥ್ಯ ಇಂತಹ ಅಪ್ಲಿಕೇಶನ್​ಗಳಿಗೆ ಇರುತ್ತದೆ. ಸೆಟ್ಟಿಂಗ್​​ಗೆ ಹೋಗಿ ಇಂತಹ ಅಪ್ಲಿಕೇಶನ್​ಗಳಿಗೆ ಯುಪಿಐ ಅಪ್ಲಿಕೇಶನ್​ ವೀಕ್ಷಿಸುವ ಅನುಮತಿಯನ್ನು ಆಫ್​ ಮಾಡಿ.

3. ಯುಪಿಐ ಮೂಲಕ ಯಾರಿಗಾದರೂ ಹಣ ಪಾವತಿ ಮಾಡುವ ಮುನ್ನ ಅವರ ವಿವರವನ್ನು ಸಂಪೂರ್ಣವಾಗಿ ಪರಿಶೀಲನೆ ಮಾಡಿ.

ಯುಪಿಐ ಅಪ್ಲಿಕೇಶನ್​ ಕ್ಯೂಆರ್​ ಕೋಡ್​​ ಸ್ಕ್ಯಾನ್​ ಮಾಡಿದ ತಕ್ಷಣ ಅಲ್ಲಿ ಕಾಣುವ ನೋಂದಾಯಿತ ಹೆಸರನ್ನು ಮೊದಲು ಪರಿಶೀಲನೆ ಮಾಡಿ. ಏಕೆಂದರೆ ನೀವು ಪಾವತಿ ಮಾಡಿದ ಹಣ ತಪ್ಪಿ ಬೇರೆಯವರಿಗೆ ಹೋದರೆ ನಿಮಗೆ ಮರಳಿ ಸಿಗೋದಿಲ್ಲ.

4. ಲಿಂಕ್​ಗಳು ಅಥವಾ ವಂಚಕ ಕರೆಗಳ ಬಗ್ಗೆ ಎಚ್ಚರಿಕೆ ಇರಲಿ. ಸೈಬರ್​ ಕಳ್ಳರು ನಿಮ್ಮ ಯುಪಿಐ ಮಾಹಿತಿ ತಿಳಿದುಕೊಳ್ಳಲು ನಿಮಗೆ ಇನ್ಯಾವುದೋ ಅಪ್ಲಿಕೇಶನ್​ ಡೌನ್​ಲೋಡ್​ ಮಾಡಿ ಎಂದು ಹೇಳಬಹುದು. ಆದರೆ ಇಂತಹ ಅಪ್ಲಿಕೇಶನ್​ಗಳು ಅಥವಾ ಲಿಂಕ್​ಗಳನ್ನು ಎಂದಿಗೂ ಓಪನ್​ ಮಾಡಬೇಡಿ.

5.ನೀವು ಎಲ್ಲೋ ದೂರ ಇರುವ ವ್ಯಕ್ತಿಗೆ ಹಣ ಕಳುಹಿಸುವ ಮುನ್ನ ಮೊಬೈಲ್​ ನಂಬರ್​ ಕೇಳುವುದಕ್ಕಿಂತ ಅವರ ಯುಪಿಐ ಐಡಿಯನ್ನು ಕೇಳುವುದು ಉತ್ತಮ.

ಏಕೆಂದರೆ ಮೊಬೈಲ್​ ಸಂಖ್ಯೆ ನಮೂದಿಸುವಾಗ ಕೊಂಚ ಏರುಪೇರಾದರೂ ಸಹ ಹಣ ಇನ್ನೊಬ್ಬರ ಪಾಲಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ದೊಡ್ಡ ಮೊತ್ತದ ಹಣ ಪಾವತಿ ಮಾಡುವಾಗ ಯುಪಿಐ ಐಡಿ ಬಳಕೆ ಉತ್ತಮ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap