ನವದೆಹಲಿ
ಭಾರತದ ಅತ್ಯಂತ ಜನಪ್ರಿಯ ಪಾವತಿ ಸಿಸ್ಟಂ ಆದ ಯುಪಿಐನ ನಿಯಮಗಳಲ್ಲಿ ಮತ್ತೆ ಬದಲಾವಣೆ ಆಗಿದೆ. ಕೆಲ ವಿಭಾಗಗಳ ಪಾವತಿಗೆ ಟ್ರಾನ್ಸಾಕ್ಷನ್ ಮಿತಿಯನ್ನು ಹೆಚ್ಚಿಸಲಾಗಿದೆ. ಐದು ಲಕ್ಷ ರೂನಿಂದ ಹಿಡಿದು 10 ಲಕ್ಷ ರೂವರೆಗೆ ಒಂದು ದಿನದ ವಹಿವಾಟು ಮಿತಿಯನ್ನು ಏರಿಸಲಾಗಿದೆ. 2025ರ ಸೆಪ್ಟೆಂಬರ್ 15ರಿಂದ ಈ ಹೊಸ ನಿಯಮ ಜಾರಿಗೆ ಬರುತ್ತದೆ. ಇನ್ಷೂರೆನ್ಸ್, ಕ್ರೆಡಿಟ್ ಕಾರ್ಡ್ ಬಿಲ್ ಇತ್ಯಾದಿ ಸರ್ವಿಸ್ಗಳಿಗೆ ಹಣ ಪಾವತಿಸಲು ಇದ್ದ ಮಿತಿಯನ್ನು ಏರಿಸಲಾಗಿದೆ.
ಈ ಮಿತಿ ಹೆಚ್ಚಳದೊಂದಿಗೆ ಯುಪಿಐನ ಉಪಯುಕ್ತತೆ ಮತ್ತಷ್ಟು ಹೆಚ್ಚಲಿದೆ. ದೊಡ್ಡ ಮೊತ್ತದ ಹಣ ಪಾವತಿ ಯುಪಿಐ ಮೂಲಕ ಸಾಧ್ಯವಾಗುತ್ತಿರಲಿಲ್ಲ. ಈಗ ಜನರು ಫೋನ್ ಪೇ, ಪೇಟಿಎಂ, ಗೂಗಲ್ ಪೇ ಇತ್ಯಾದಿ ಬಳಸಿ ದೊಡ್ಡ ಮೊತ್ತದ ಹಣವನ್ನು ಪಾವತಿಸಲು ಸಾಧ್ಯವಾಗುತ್ತದೆ.
ಈಗ ಹೆಚ್ಚು ಮೊತ್ತದ ಇನ್ಷೂರೆನ್ಸ್ ಪ್ರೀಮಿಯಮ್, ಸಾಲದ ಇಎಂಐ ಪಾವತಿಸಬಹುದು. ಒಮ್ಮೆಗೇ 5,00,000 ರೂವರೆಗೆ ಹಣ ಪಾವತಿಸಬಹುದು. ಒಂದು ದಿನದಲ್ಲಿ 10 ಲಕ್ಷ ರೂವರೆಗೆ ಇನ್ಷೂರೆನ್ಸ್ ಪ್ರೀಮಿಯಮ್, ಇಎಂಐಗಳನ್ನು ಕಟ್ಟಬಹುದು. ಈ ಮೊದಲಾದರೆ ಐದು ಲಕ್ಷ ರೂ ಪಾವತಿಸಬೇಕಾದರೆ ಹಲವು ಬಾರಿ ಸಣ್ಣ ಸಣ್ಣ ಮೊತ್ತಗಳನ್ನು ಪಾವತಿಸಬೇಕಿತ್ತು. ಷೇರು ಮಾರುಕಟ್ಟೆಯಲ್ಲೂ ಹೂಡಿಕೆದಾರರು ಒಮ್ಮೆಗೇ ಐದು ಲಕ್ಷ ರೂ ಹಣ ಪಾವತಿಸಬಹುದು. ಇಲ್ಲಿಯೂ ಕೂಡ ದಿನಕ್ಕೆ 10 ಲಕ್ಷ ರೂವರೆಗೆ ಪಾವತಿಸಲು ಅವಕಾಶ ಇದೆ.
ಕ್ರೆಡಿಟ್ ಕಾರ್ಡ್ ಬಿಲ್ ಮೊತ್ತ 5 ಲಕ್ಷ ರೂ ಇದ್ದರೆ ಅದನ್ನು ಒಮ್ಮೆಲೇ ಪಾವತಿಸಬಹುದು. ಒಂದು ದಿನದಲ್ಲಿ ಆರು ಲಕ್ಷ ರೂವರೆಗೆ ಪಾವತಿಸಲು ಮಿತಿ ಇರುತ್ತದೆ.
ಪ್ರಯಾಣಕ್ಕೆ ಸಂಬಂಧಿಸಿದ ಬುಕಿಂಗ್ ಮತ್ತು ವೆಚ್ಚಗಳಿಗೂ ಒಂದೇ ಬಾರಿಗೆ 5,00,000 ರೂವರೆಗೆ ಪಾವತಿಸಲು ಅವಕಾಶ ಇದೆ. ಇಲ್ಲಿ ದಿನದ ಮಿತಿ 10 ಲಕ್ಷ ರೂ ಇದೆ. ಒಡವೆಗಳನ್ನು ಖರೀದಿಸುವಾಗ ಒಮ್ಮೆಗೇ ಐದು ಲಕ್ಷ ರೂ ಪಾವತಿಸಬಹುದು. ಇದರಲ್ಲಿ ದಿನಕ್ಕೆ 6,00,000 ರೂ ಮಿತಿ ಇದೆ.ವರ್ತಕರಿಗೆ ಒಂದೇ ವಹಿವಾಟಿನಲ್ಲಿ ಐದು ಲಕ್ಷ ರೂ ಪಾವತಿಸಬಹುದು. ಇಲ್ಲಿ ದಿನದ ಮಿತಿ ನಿಗದಿ ಮಾಡಲಾಗಿಲ್ಲ. ವ್ಯಕ್ತಿಯಿಂದ ವ್ಯಕ್ತಿಗೆ ಈ ಮೊದಲು 1 ಲಕ್ಷ ರೂ ಪಾವತಿಸಬಹುದಾಗಿತ್ತು. ಈಗ ಅದೇ ನಿಯಮ ಮುಂದುವರಿಸಲಾಗಿದೆ.
