![]()
ಐಐಟಿ ಮದ್ರಾಸ್ ನಡೆಸಿದ ಇತ್ತೀಚಿನ ಅಂತಾರಾಷ್ಟ್ರೀಯ ಸಂಶೋಧನೆಯು ಉತ್ತರ ಭಾರತವನ್ನು ಕಾಡುತ್ತಿರುವ ದಟ್ಟ ಮಂಜಿನ ಸಮಸ್ಯೆಯ ಹಿಂದೆ ಜಾಗತಿಕ ತಾಪಮಾನ ಏರಿಕೆಗಿಂತ ಹೆಚ್ಚಾಗಿ ಸ್ಥಳೀಯ ವಾಯು ಮಾಲಿನ್ಯದ ಕೈವಾಡವಿದೆ ಎಂಬ ಸ್ಫೋಟಕ ಸತ್ಯವನ್ನು ಹೊರಹಾಕಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಉತ್ತರ ಭಾರತದ ವಾಯು ಗುಣಮಟ್ಟ ಕುಸಿಯುವುದು ಮತ್ತು ಮಧ್ಯಾಹ್ನದವರೆಗೂ ದಟ್ಟ ಮಂಜು ಕವಿದಿರುವುದು ಸಾಮಾನ್ಯ ಪ್ರಕ್ರಿಯೆಯೆಂದು ಭಾವಿಸಲಾಗಿತ್ತು. ಆದರೆ ಸೈನ್ಸ್ ಅಡ್ವಾನ್ಸಸ್ ಮತ್ತು ಜಿಯೋಫಿಸಿಕಲ್ ರಿಸರ್ಚ್ ಲೆಟರ್ಸ್ ನಿಯತಕಾಲಿಕೆಗಳಲ್ಲಿ ಪ್ರಕಟವಾದ ಈ ವರದಿಯು, ಮಾಲಿನ್ಯಕಾರಕ ಕಣಗಳು ಹೇಗೆ ಮಂಜಿನ ಸ್ವರೂಪವನ್ನು ಬದಲಿಸುತ್ತಿವೆ ಎಂಬುದನ್ನು ಸಾಕ್ಷ್ಯಾಧಾರಗಳೊಂದಿಗೆ ವಿವರಿಸಿದೆ.
ಐಐಟಿ ಮದ್ರಾಸ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಚಂದನ್ ಸಾರಂಗಿ ಮತ್ತು ಸಂಶೋಧನಾ ವಿದ್ಯಾರ್ಥಿ ಎನ್. ಅರುಣ್ ನೇತೃತ್ವದ ತಂಡವು ಈ ಅಧ್ಯಯನ ನಡೆಸಿದ್ದು, ಚಳಿಗಾಲದ ಶಾಂತ ರಾತ್ರಿಗಳಲ್ಲಿ ಭೂಮಿಯ ಸಮೀಪ ಶೇಖರಣೆಯಾಗುವ ಮಾಲಿನ್ಯಕಾರಕ ಕಣಗಳ ಮೇಲೆ ವಾತಾವರಣದ ತೇವಾಂಶವು ಸಾಂದ್ರೀಕೃತಗೊಂಡು ಮಂಜಿನ ಹನಿಗಳಾಗಿ ಬದಲಾಗುತ್ತವೆ ಎಂದು ಪತ್ತೆಹಚ್ಚಿದೆ. ಈ ಪ್ರಕ್ರಿಯೆಯಿಂದಾಗಿ ಸೃಷ್ಟಿಯಾಗುವ ದಟ್ಟ ಮಂಜಿನ ಪದರವು ಸುಮಾರು 600 ರಿಂದ 800 ಮೀಟರ್ ಎತ್ತರದವರೆಗೆ ವ್ಯಾಪಿಸಿ, ಸೂರ್ಯನ ಕಿರಣಗಳು ಭೂಮಿಯನ್ನು ತಲುಪದಂತೆ ಅಡ್ಡಿಪಡಿಸುತ್ತದೆ. ನೈಸರ್ಗಿಕ ಶಾಖದ ಕೊರತೆಯಿಂದಾಗಿ ಮಂಜು ಬೇಗನೆ ಕರಗದೆ ದೀರ್ಘಕಾಲ ವಾತಾವರಣದಲ್ಲಿ ಉಳಿಯುವಂತಾಗಿದೆ.
ಈ ಸಂಶೋಧನೆಯು ಹಳೆಯ ನಂಬಿಕೆಗಳನ್ನು ಸುಳ್ಳಾಗಿಸಿದ್ದು, ಮಂಜು ಹೆಚ್ಚಾಗಲು ಕೇವಲ ಹವಾಮಾನ ವೈಪರೀತ್ಯ ಕಾರಣವಲ್ಲ, ಬದಲಿಗೆ ಮನುಷ್ಯ ನಿರ್ಮಿತ ವಾಯು ಮಾಲಿನ್ಯವೇ ಪ್ರಮುಖ ಕಾರಣ ಎಂದು ಸ್ಪಷ್ಟಪಡಿಸಿದೆ. ದಟ್ಟವಾದ ಈ ಮಂಜಿನಿಂದಾಗಿ ವಿಮಾನ, ರೈಲು ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಯಾಗುವುದಲ್ಲದೆ, ಸರಣಿ ಅಪಘಾತಗಳ ಅಪಾಯವೂ ಹೆಚ್ಚಿದೆ. ಈ ಹೊಸ ತಾಂತ್ರಿಕ ಅರಿವಿನಿಂದಾಗಿ ವಿಮಾನ ನಿಲ್ದಾಣದ ಅಧಿಕಾರಿಗಳು ಮತ್ತು ಪೈಲಟ್‌ಗಳಿಗೆ ಮಂಜಿನ ಮುನ್ಸೂಚನೆಯನ್ನು ಹೆಚ್ಚು ನಿಖರವಾಗಿ ನೀಡಲು ಸಾಧ್ಯವಾಗಲಿದೆ. ವಾಯು ಮಾಲಿನ್ಯವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವುದೊಂದೇ ಉತ್ತರ ಭಾರತದ ಈ ಮಂಜಿನ ಬಿಕ್ಕಟ್ಟಿಗೆ ಇರುವ ಶಾಶ್ವತ ಪರಿಹಾರ ಎಂದು ಸಂಶೋಧಕರು ಪ್ರತಿಪಾದಿಸಿದ್ದಾರೆ.







