ವಾಮಾಚಾರ: ಮೃತ ಮಹಿಳೆ, ಮಗುವಿನ ಶವ ಹೊರತೆಗೆದ ದುಷ್ಟರು

ಕೋಲಾರ:

     ಆತ್ಮಹತ್ಯೆಗೆ ಶರಣಾಗಿದ್ದ ತಾಯಿ ಮತ್ತು ಮಗುವಿನ ಮೃತದೇಹಗಳನ್ನು ಹೊರ ತೆಗೆದು ಮಗುವಿನ ತಲೆ ಕೂದಲು ಮತ್ತು ಬಟ್ಟೆಯನ್ನು ಕಿತ್ತು ಮರಳಿ ಸಮಾಧಿ ಮಾಡಿದ ಭೀಕರ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಹೆಬ್ಬಟ ಕ್ರಾಸ್ನಲ್ಲಿ ನಡೆದಿದೆ.

    ವಾಮಾಚಾರ ಮಾಡುವುದಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಹೇಳಲಾಗಿದೆ. ಅಚ್ಚರಿಯ ಸಂಗತಿ ಎಂದರೆ, ಇಲ್ಲಿ ಮೃತಪಟ್ಟಿರುವುದು ಮುಸ್ಲಿಂ ಮಹಿಳೆ ಮತ್ತು ಮಗು. ಶವವನ್ನು ಹೊರತೆಗೆಯಲು ಬಂದದ್ದು ಹಿಂದುಗಳು. ಮತ್ತು ಅವರಿಗೆ ಎಲ್ಲ ಸಹಕಾರವನ್ನು ನೀಡಿದ್ದ ಮೃತ ಮಹಿಳೆಯ ಗಂಡ.

    20 ದಿನಗಳ ಹಿಂದೆ ಶ್ರೀನಿವಾಸಪುರದ ಮೆಹದಿ ಎಂಬ ಮಹಿಳೆ ತನ್ನ ಮೂರುವರೆ ವರ್ಷದ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪತಿ ಶೋಯಬ್ನ ವರದಕ್ಷಿಣೆ ಹಿಂಸೆ ತಾಳಲಾರದೆ, ತಾಯಿ ಮಗು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕೆಯ ಪೋಷಕರು ಆರೋಪಿಸಿದ್ದರು.

    ಮೆಹದಿ ಮತ್ತು ಮಗುವಿನ ಅಂತ್ಯಕ್ರಿಯೆಯನ್ನು ಮುಸ್ಲಿಂ ಸಂಪ್ರದಾಯದ ಪ್ರಕಾರ ನಡೆಸಲಾಗಿತ್ತು. ಹೆಬ್ಬಟ ಕ್ರಾಸ್ನಲ್ಲಿರುವ ಖಬರಸ್ತಾನದಲ್ಲಿ ಶವಗಳನ್ನು ದಫನ ಮಾಡಲಾಗಿತ್ತು. ಪೊಲೀಸರು ಪತಿ ಶೋಯೆಬ್ ಮೇಲೆ ಕೇಸು ದಾಖಲಿಸಿಕೊಂಡಿದ್ದರು.

    ಇದೆಲ್ಲ ಆಗಿ ಸುಮಾರು 10 ದಿನಗಳು ಕಳೆದ ಬಳಿಕ ತಾಯಿ ಮತ್ತು ಮಗುವಿನ ಶವವನ್ನು ಗುಂಡಿಯಿಂದ ಮೇಲೆತ್ತಲಾಗಿದೆ ಎಂಬ ಆರೋಪ ಕೇಳಿಬಂದಿದೆ. ನವೆಂಬರ್ 19ರಂದು ದುಷ್ಕರ್ಮಿಗಳು ಮಗುವಿನ ಶವ ಹೊರತೆಗೆದು ಕೂದಲು ಹಾಗು ಮಗು ಧರಿಸಿದ್ದ ಬಟ್ಟೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದರ ಬಗ್ಗೆ ಮೆಹದಿ ಪೋಷಕರು ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

ಮಗುವಿನ ಬಟ್ಟೆ ಸಮಾಧಿಯಿಂದ ಹೊರಗೆ ಪತ್ತೆ

    ಕೆಲವು ದಿನಗಳ ಹಿಂದೆ ಮೆಹದಿ ಮತ್ತು ಮಗುವಿನ ಸಮಾಧಿ ಮಾಡಿದ್ದ ಜಾಗದಲ್ಲಿ ಮಗುವಿನ ಶವದ ಬಟ್ಟೆ ಪತ್ತೆಯಾಗಿತ್ತು. ಇದನ್ನು ನೋಡಿ ಮೆಹದಿ ಮನೆಯವರು ಹೌಹಾರಿದ್ದರು. ಇದು ಹೊರಗೆ ಹೇಗೆ ಬಂತು ಎಂದು ಬೆಚ್ಚಿಬಿದ್ದಿದ್ದರು. ಕೂಡಲೇ ಆ ಭಾಗದ ಸಿಸಿ ಟಿವಿ ಫೂಟೇಜ್ಗಳನ್ನು ನೋಡಿದಾಗ ಕಳೆದ ನವೆಂಬರ್ ರಾತ್ರಿ ಕೆಲವು ವ್ಯಕ್ತಿಗಳು ಆ ಭಾಗದಲ್ಲಿ ಓಡಾಡಿದ್ದು, ಸಮಾಧಿಯನ್ನು ಅಗೆದದ್ದು ಕಂಡುಬಂತು.

    ಸೂಕ್ಷ್ಮವಾಗಿ ಗಮನಿಸಿದಾಗ ಹಾಗೆ ಸಮಾಧಿ ಬಳಿ ಹೋದವರು ಶ್ರೀರಾಮ್ ಮತ್ತು ನಾರಾಯಣ ಸ್ವಾಮಿ ಎಂಬುದು ಪತ್ತೆಯಾಗಿದೆ ಎನ್ನಲಾಗಿದೆ. ಇವರಿಬ್ಬರೂ ವಾಮಾಚಾರಿಗಳಾಗಿ ಈ ಭಾಗದಲ್ಲಿ ಪ್ರಸಿದ್ಧರು. ಹೀಗಾಗಿ ಅವರು ವಾಮಾಚಾರಕ್ಕಾಗಿ ಈ ಕೃತ್ಯ ಎಸಗಿದ್ದಾರೆ ಎಂದು ಭಾವಿಸಲಾಗಿದೆ.

    ಬೆಚ್ಚಿಬೀಳಿಸುವ ಇನ್ನೊಂದು ಸಂಗತಿ ಏನೆಂದರೆ, ಸಿಸಿಟಿವಿ ಫೂಟೇಜ್ಗಳ ಪ್ರಕಾರ, ಸಮಾಧಿಯ ಬಳಿಕ ಶ್ರೀರಾಮ್ ಮತ್ತು ನಾರಾಯಣಸ್ವಾಮಿಯನ್ನು ಕರೆದುಕೊಂಡು ಹೋಗಿದ್ದು ಸ್ವತಃ ಮೆಹದಿಯ ಗಂಡ ಶೋಯೆಬ್!ಈ ಮೂವರು ಸಮಾಧಿ ಬಳಿಗೆ ಹೋಗಿ ತುಂಬಾ ಹೊತ್ತಿನ ಬಳಿಕ ವಾಪಸ್ ಆಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೀಗಾಗಿ ಮೆಹದಿ ಮನೆಯವರು ಅವರ ಮೇಲೆ ದೂರು ದಾಖಲಿಸಿದ್ದಾರೆ.

    ಆರೋಪಿಗಳು ವಾಮಾಚಾರ ಮಾಡಲೆಂದು ಮಗುವಿನ ಮೃತದೇಹ ಹೊರತೆಗೆದು ಅದರ ಕೂದಲು ಮತ್ತು ಬಟ್ಟೆ ತೆಗೆದುಕೊಂಡು ಹೋಗಿದ್ದಾರೆ ಎನ್ನುವುದು ಅವರ ಆರೋಪ. ಅದರ ಜತೆಗೆ ಈಗ ದಫನ ಮಾಡಿರುವ ಜಾಗದಲ್ಲಿ ನಿಜಕ್ಕೂ ಶವಗಳು ಇದೆಯೇ ಇಲ್ಲವೇ ಎನ್ನುವ ಸಂಶಯವನ್ನೂ ಅವರು ವ್ಯಕ್ತಪಡಿಸಿದ್ದಾರೆ.

    ಈ ಕೃತ್ಯದಿಂದ ತಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ಯಾಗಿದೆ ಎಂದು ಪೋಷಕರು ದೂರು ನೀಡಿದ್ದಾರೆ. ಜತೆಗೆ ಶೋಯೆಬ್ ತನ್ನ ಕೃತ್ಯವನ್ನು ಮುಚ್ಚಿ ಹಾಕಿಕೊಳ್ಳಲು ಏನಾದರೂ ಕುತಂತ್ರ ಮಾಡಿರಬಹುದು ಎಂಬ ಶಂಕೆಯೂ ಇದೆ ಎಂದಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap