ಬೆಂಗಳೂರು:
ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಹುದ್ದೆ ಕೊಡಿಸುವುದಾಗಿ ಪ್ರೊಫೆಸರ್ ಒಬ್ಬರಿಗೆ 35 ಲಕ್ಷ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿವೃತ್ತ ಪ್ರಾಧ್ಯಾಪಕ ಆರ್.ಕೆ.ಸೋಮಶೇಖರ್ (67) ಎಂಬುವವರು ಈ ಸಂಬಂಧ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹೀಗಾಗಿ ಹೊರಮಾವು ನಂದನಂ ಲೇಔಟ್ ನಿವಾಸಿ ಬಿ.ಜಿ.ರವಿಕುಮಾರ್ ಎಂಬುವವರ ವಿರುದ್ಧ ವಂಚನೆ, ನಂಬಿಕೆ ದ್ರೋಹ, ಜೀವ ಬೆದರಿಕೆ ಸೇರಿ ವಿವಿಧ ಆರೋಪದಡಿ ಎಫ್‌ಐಆರ್ ದಾಖಲಾಗಿದೆ ಎಂದು ತಿಳಿದುಬಂದಿದೆ.
ದೂರುದಾರ ಆರ್.ಕೆ.ಸೋಮಶೇಖರ್ 1983ರಿಂದ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್‌ನ ಪರಿಸರ ವಿಜ್ಞಾನ ವಿಭಾಗದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡಿ, 2019ರಲ್ಲಿ ನಿವೃತ್ತರಾಗಿದ್ದರು. ಈ ನಡುವೆ 2010ರಲ್ಲಿ ಸ್ನೇಹಿತರ ಮೂಲಕ ಆರೋಪಿ ಬಿ.ಜಿ.ರವಿಕುಮಾರ್ ಪರಿಚಯವಾಗಿ ಬಳಿಕ ಸ್ನೇಹಿತರಾಗಿದ್ದರು. 2015ರಲ್ಲಿ ರವಿಕುಮಾರ್ ತನಗೆ ಪ್ರಭಾವಿ ರಾಜಕಾರಣಿಗಳ ಪರಿಚಯವಿದೆ, ನಿಮಗೆ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ರಿಜಿಸ್ಟ್ರಾರ್ ಹುದ್ದೆ ಕೊಡಿಸುತ್ತೇನೆ ಎಂದು ಹೇಳಿ ನಂಬಿಸಿದ್ದ.
ಬಳಿಕ ರಿಜಿಸ್ಟ್ರಾರ್ ಹುದ್ದೆಗೆ 50 ಲಕ್ಷ ರೂ. ಖರ್ಚಾಗಲಿದೆ ಎಂದು ರವಿಕುಮಾರ್ ಹೇಳಿದ್ದಾರೆ. ನಂತರ ಇಬ್ಬರೂ ಮಾತುಕತೆ ನಡೆಸಿ 35 ಲಕ್ಷ ರೂ.ಗೆ ತೀರ್ಮಾನಿಸಲಾಗಿತ್ತು. ಕೆಲಸ ಆಗದಿದ್ದಲ್ಲಿ ಹಣ ವಾಪಸ್ ಕೊಡುವುದಾಗಿಯೂ ರವಿಕುಮಾರ್ ಹೇಳಿದ್ದ ಎಂದು ಸೋಮಶೇಖರ್ ದೂರಿನಲ್ಲಿ ಆರೋಪಿಸಿದ್ದಾರೆ.