ನವದೆಹಲಿ:
ರೈಲು ನಿಲ್ದಾಣಕ್ಕೆ ಬರಲು ಕೇವಲ 15 ನಿಮಿಷ ಇದೆ ಎನ್ನುವಾಗ ರೈಲು ಟಿಕೆಟ್ ಬುಕ್ ಮಾಡಬಹುದಾದ ಹೊಸ ವೈಶಿಷ್ಟ್ಯವನ್ನು ಭಾರತೀಯ ರೈಲ್ವೆ ಪರಿಚಯಿಸಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಟಿಕೆಟ್ ಇನ್ನು ಮೊದಲೇ ಬುಕ್ಕಿಂಗ್ ಮಾಡಬೇಕಿಲ್ಲ. ಈ ರೈಲುಗಳು ನಮ್ಮ ಬೋರ್ಡಿಂಗ್ ನಿಲ್ದಾಣಕ್ಕೆ ಬರುವ 15 ನಿಮಿಷಗಳ ಮೊದಲು ಬುಕ್ಕಿಂಗ್ ಗಳನ್ನು ಮಾಡಬಹುದಾಗಿದೆ. ದಕ್ಷಿಣ ರೈಲ್ವೆ ವಲಯದ ಎಂಟು ವಂದೇ ಭಾರತ್ ರೈಲುಗಳಲ್ಲಿ ಈ ಸೌಲಭ್ಯವನ್ನು ಪ್ರಸ್ತುತ ಪರಿಚಯಿಸಲಾಗಿದೆ.
ಈ ಹಿಂದೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ತನ್ನ ಪ್ರಾರಂಭದ ನಿಲ್ದಾಣವನ್ನು ಬಿಟ್ಟ ಅನಂತರ ಅದು ಸಾಗುವ ನಿಲ್ದಾಣಗಳಿಂದ ಯಾವುದೇ ರೀತಿಯ ಟಿಕೆಟ್ ಬುಕ್ಕಿಂಗ್ ಮಾಡುವುದು ಅಸಾಧ್ಯವಾಗಿರುತ್ತಿತ್ತು. ಆದರೆ ಇನ್ನು ಪ್ರಯಾಣಿಕರ ಮೀಸಲಾತಿ ವ್ಯವಸ್ಥೆಯಲ್ಲಿ ಹೊಸ ಬದಲಾವಣೆಗಳನ್ನು ಮಾಡಲಾಗಿದ್ದು, ಇದರಿಂದಾಗಿ ಇನ್ನು ಮುಂದೆ ರೈಲು ನಮ್ಮ ನಿಲ್ದಾಣಕ್ಕೆ ಬರುವ 15 ನಿಮಿಷಗಳ ಮೊದಲು ಖಾಲಿ ಸೀಟುಗಳು ಪ್ರಸ್ತುತ ಬುಕ್ಕಿಂಗ್ ಮಾಡಬಹುದಾಗಿದೆ.
ಕೊನೆಯ ಕ್ಷಣದ ಬುಕ್ಕಿಂಗ್ ಸೇವೆಯು ಈ ಕೆಳಗಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಇದೆ. 20631-ಮಂಗಳೂರು ಸೆಂಟ್ರಲ್ – ತಿರುವನಂತಪುರಂ ಸೆಂಟ್ರಲ್, 20632-ತಿರುವನಂತಪುರಂ ಸೆಂಟ್ರಲ್ – ಮಂಗಳೂರು ಸೆಂಟ್ರಲ್, 20627 ಚೆನ್ನೈ ಎಗ್ಮೋರ್ – ನಾಗರ್‌ಕೋಯಿಲ್, 20628 ನಾಗರ್‌ಕೋಯಿಲ್ – ಚೆನ್ನೈ ಎಗ್ಮೋರ್, 20642 ಕೊಯಮತ್ತೂರು – ಬೆಂಗಳೂರು ಕಂಟೋನ್ಮೆಂಟ್, 20646 ಮಂಗಳೂರು ಸೆಂಟ್ರಲ್ – ಮಡ್ಗಾಂವ್, 20671 ಮಧುರೈ – ಬೆಂಗಳೂರು ಕಂಟೋನ್ಮೆಂಟ್, 20677 ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ – ವಿಜಯವಾಡ.
ಕೊನೆಯ ಕ್ಷಣದ ಯೋಜನೆಗಳು, ರೈಲು ಆಗಮನಕ್ಕೆ ವಿಳಂಬ, ಖಾಲಿ ಇರುವ ಸೀಟುಗಳ ಬಳಕೆಗೆ ಹೆಚ್ಚಿನ ಬೇಡಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ವಂದೇ ಭಾರತ್‌ಗೆ ಕೊನೆಯ ಕ್ಷಣದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡುವ ಅವಕಾಶವನ್ನು ಭಾರತೀಯ ರೈಲ್ವೆ ಈ ಕ್ರಮ ಕೈಗೊಂಡಿದೆ.








