ಚೆನ್ನೈ :
ತಮಿಳು ನಟಿ ವನಿತಾ ವಿಜಯ್ಕುಮಾರ್ ಅವರಿಗೆ ಇಂದು ಜನ್ಮದಿನ. ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಅವರು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿದ್ದು ಮದುವೆ ವಿಚಾರಕ್ಕೆ. ಈಗಾಗಲೇ ಮೂರು ಬಾರಿ ಸಂಸಾರದಲ್ಲಿ ವೈಫಲ್ಯ ಕಂಡಿದ್ದಾರೆ. ನಾಲ್ಕನೇ ಮದುವೆಯನ್ನು ಅವರು ತಮ್ಮ ಬರ್ತ್ಡೇ ದಿನವೇ ಆಗುತ್ತಿದ್ದಾರಂತೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಅವರಿಗೆ ಒಂದೇ ದಿನ ಎರಡು ಕಾರಣಕ್ಕೆ ವಿಶ್ ಮಾಡಲಾಗುತ್ತಿದೆ.
ವನಿತಾ ಅವರು ಇತ್ತೀಚೆಗೆ ಮದುವೆ ಬಗ್ಗೆ ಘೋಷಣೆ ಮಾಡಿದ್ದರು. ‘ದಿನವನ್ನು ಸೇವ್ ಮಾಡಿಕೊಳ್ಳಿ. ಅಕ್ಟೋಬರ್ 5’ ಎಂದು ಅವರು ಬರೆದುಕೊಂಡಿದ್ದರು. ಅಕ್ಟೋಬರ್ 5 ಅವರ ಜನ್ಮದಿನ. ಈ ದಿನವೇ ಅವರ ವಿವಾಹವು ಕೊರಿಯೋಗ್ರಾಫರ್ ರಾಬರ್ಟ್ ಜೊತೆ ನಡೆಯುತ್ತಿದೆ. ಈ ವಿಚಾರ ಅವರ ಫ್ಯಾನ್ಸ್ಗೆ ಅಚ್ಚರಿ ಮೂಡಿಸಿದೆ.
ಎರಡನೇ ಮದುವೆ ಎಂದಾಗಲೇ ಕೆಲವರು ಗುಟ್ಟು ಕಾಪಾಡಿಕೊಳ್ಳುತ್ತಾರೆ. ಯಾವುದೇ ಆಡಂಬರ ಇಲ್ಲದೆ ವಿವಾಹ ಆಗೋಣ ಎಂದು ಭಾವಿಸುತ್ತಾರೆ. ಆದರೆ, ವನಿತಾಗೆ ಇದು ನಾಲ್ಕನೇ ವಿವಾಹ. ಮೊದಲ ಮದುವೆಗೆ ತೋರಿದ್ದ ಉತ್ಸಾಹವನ್ನೇ ಅವರು ಈಗಲೂ ತೋರಿಸುತ್ತಿದ್ದಾರೆ ಅನ್ನೋದು ವಿಶೇಷ. ಬ್ರೇಕಪ್ ಬಳಿಕ ಪ್ಯಾಚಪ್ ಮಾಡಿಕೊಂಡು ಮದುವೆ ಆಗುತ್ತಿದ್ದಾರೆ.
ರಾಬರ್ಟ್ ಹಾಗೂ ವನಿತಾ ಡೇಟಿಂಗ್ ಆರಂಭಿಸಿದ್ದು 11 ವರ್ಷಗಳ ಹಿಂದೆ. 2013ರಲ್ಲಿ ಇವರು ಭೇಟಿ ಆಗಿದ್ದರು. 2015ರಲ್ಲಿ ‘ಎಂಜಿಆರ್ ಶಿವಾಜಿ ರಜಿನಿ ಕಮಲ್’ ಹೆಸರಿನ ಸಿನಿಮಾನ ವನಿತಾ ನಿರ್ಮಾಣ ಮಾಡಿದರೆ, ರಾಬರ್ಟ್ ಅವರು ಈ ಚಿತ್ರ ನಿರ್ದೇಶನ ಮಾಡಿ, ನಟಿಸಿದ್ದರು ಕೂಡ. 2017ರಲ್ಲಿ ಇವರು ಬೇರೆ ಆಗಿದ್ದರು. ಈಗ ಮತ್ತೆ ಒಂದಾಗಿದ್ದು, ಮದುವೆ ಕೂಡ ಆಗುತ್ತಿದ್ದಾರೆ.








