ಹಾವೇರಿ:
ಜಿಲ್ಲೆಯಲ್ಲಿ ಕಳೆದ ದಿನಗಳ ಹಿಂದಷ್ಟೇ ಆತ್ಮಹತ್ಯೆಗೆ ಶರಣಾಗಿದ್ದ ಬಾಲಕಿಯ ಸಾವಿನ ಕೇಸ್ ಗೆ ಟ್ವಿಸ್ಟ್ ಸಿಕ್ಕಿದ್ದು, ಸಾವಿಗೆ ಶರಣಾಗುವ ಮುನ್ನ ವಿದ್ಯಾರ್ಥಿನಿ ಬರೆದಿದ್ದಾಳೆ ಎನ್ನಲಾದ ಡೆತ್ ನೋಟ್ ನಲ್ಲಿ ಸಾವಿನ ರಹಸ್ಯ ಬಯಲಾಗಿದೆ.
ಮೃತ ವಿದ್ಯಾರ್ಥಿನಿಯನ್ನು 16 ವರ್ಷದ ಅರ್ಚನಾ ಎಂದು ಗುರುತಿಸಲಾಗಿದೆ. ಹಾವೇರಿ ಜಿಲ್ಲೆಯ ಹಿರೇಕೇರೂರು ತಾಲೂಕಿನ ಆಲದಕಟ್ಟಿ ಗ್ರಾಮದ ಅರ್ಚನಾ ಗೌಡಣ್ಣನವರ (16) ಎಂಬ ವಿದ್ಯಾರ್ಥಿನಿ ಒಂದು ವಾರದ ಹಿಂದಷ್ಟೇ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಮೃತ ಅರ್ಚನಾ ಹಿರೇಕೆರೂರು ತಾಲೂಕಿನ ದೂದಿಹಳ್ಲಿಯ ವಸತಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಆದರೆ ಮನೆಗೆ ಬಂದಿದ್ದ ವಿದ್ಯಾರ್ಥಿನಿ ಏಕಾಏಕಿ ಸಾವಿಗೆ ಶರಣಾಗಿದ್ದು, ಸಾವಿಗೆ ಕಾರಣ ಎಂದು ತಿಳಿದಿಲ್ಲ ಎಂದು ವಿದ್ಯಾರ್ಥಿನಿ ಕುಟುಂಬಸ್ಥರು ತಿಳಿಸಿದ್ದರು. ಪೊಲೀಸರಿಗೆ ಮಾಹಿತಿ ನೀಡದೆ ಕುಟುಂಬದವರು ಅಂತ್ಯಕ್ರಿಯೆ ನಡೆಸಿದ್ದಾರೆ.
ಆದರೆ ಇತ್ತೀಚೆಗೆ ಅರ್ಚನಾ ಬರೆದಿದ್ದಾಳೆ ಎನ್ನಲಾದ ಡೆತ್ ನೋಟ್ ಸಿಕ್ಕಿದ್ದು, ತನ್ನ ಸಹಪಾಠಿ ಜೋಯಾ ಮತ್ತು ಆಕೆಯ ತಾಯಿ ನೀಡಿದ ಚಿತ್ರಹಿಂಸೆ ಬಗ್ಗೆ ಡೆತ್ ನೋಟ್ ನಲ್ಲಿ ಉಲ್ಲೇಖಿಸಿದ್ದು, ಅವರಿಂದ ತಾನು ಪ್ರಾಣ ಕಳೆದುಕೊಳ್ಳುತ್ತಿರುವುದಾಗಿ ಬರೆದಿದ್ದಾಳೆ. ಜೋಯಾಳ ತಂದೆ ಆರಿಫುಲ್ಲಾ ವಸತಿ ಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ.
ಘಟನೆಯ ನಂತರ ಶಾಲೆಯ ಆಡಳಿತ ಮಂಡಳಿಯು ಅರ್ಚನಾ ಪೋಷಕರು ಆರಿಫುಲ್ಲಾ ಮತ್ತು ಗ್ರಾಮದ ಮುಖಂಡರ ಕುಟುಂಬದವರ ಸಭೆಗೆ ಕರೆದಿದೆ. ಅರ್ಚನಾ ಅವರ ಕುಟುಂಬಕ್ಕೆ ಪರಿಹಾರ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಕೆಲವು ಗ್ರಾಮಸ್ಥರು ವಿಷಯವನ್ನು ಮುಚ್ಚಿಡಲು ಒಪ್ಪಿಕೊಂಡರು. ಚರ್ಚೆಯ ಪ್ರಕಾರ ಕುಟುಂಬವು 10 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿತ್ತು. ಆದರೆ ನಂತರ ಪರಿಹಾರವಾಗಿ 1 ಲಕ್ಷ ರೂ ಹಣ ನೀಡಲಾಗಿದ. ಪರಿಹಾರ ಹಣದಲ್ಲಿ ಪಾಲು ಸಿಗದಿದ್ದ ಕಾರಣ ಕೆಲ ಗ್ರಾಮಸ್ಥರು ಸುದ್ದಿ ಹಬ್ಬಿಸಿದ್ದಾರೆ ಎನ್ನಲಾಗಿದೆ.
ಅರ್ಚನಾ ಸಾವಿನ ಹಿಂದೆ ಏನೋ ಪಿತೂರಿ ಇದೆ ಎಂದು ಆಲದಕಟ್ಟಿ ಗ್ರಾಮಸ್ಥರು ಆರೋಪಿಸಿದ್ದಾರೆ. “ಅರ್ಚನಾ ಪ್ರತಿಭಾವಂತ ವಿದ್ಯಾರ್ಥಿನಿ. ಡೆತ್ ನೋಟ್‌ನಲ್ಲಿ ಬರೆದಿರುವ ವಿಷಯದ ವಿರುದ್ಧ ಕೋಪಗೊಂಡ ಗ್ರಾಮದ ಕೆಲವು ಯುವಕರು ಡೆತ್ ನೋಟ್ ಫೋಟೋ ತ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಕಿಯ ಪೋಷಕರು ಮತ್ತು ಶಾಲಾ ಅಧಿಕಾರಿಗಳ ವಿರುದ್ಧವೂ ಸಾಕ್ಷಿಯಾಗಿದೆ. ವಿದ್ಯಾರ್ಥಿಯ ಆತ್ಮಹತ್ಯೆಯನ್ನು ಮರೆಮಾಚಿರುವ ಶಾಲೆಯ ಆಡಳಿತ ಮಂಡಳಿ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗುರುವಾರ ಹಾವೇರಿಯ ಪೊಲೀಸ್ ತಂಡ ಅರ್ಚನಾ ವಾಸವಿದ್ದ ಗ್ರಾಮಕ್ಕೆ ಹಾಗೂ ವಸತಿ ಶಾಲೆಗೆ ಭೇಟಿ ನೀಡಿತ್ತು. ಘಟನೆಯ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಗ್ರಾಮಸ್ಥರು, ಶಾಲಾ ಆಡಳಿತ ಮಂಡಳಿ ಮತ್ತು ಅರ್ಚನಾ ಅವರ ಕುಟುಂಬದ ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
