ಮುಡಾ ಹಗರಣ :ಹೈಕೋರ್ಟ್‌ನಲ್ಲಿ ಇಂದು ವಿಚಾರಣೆ

ಬೆಂಗಳೂರು

    ಮುಡಾ ಹಗರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದ್ದಲ್ಲದೇ ಕಾಂಗ್ರೆಸ್ ಪಕ್ಷದಲ್ಲಿಯೂ ಅಂತರ್ಯುದ್ಧಕ್ಕೆ ವೇದಿಕೆ ಮಾಡಿಕೊಟ್ಟಿದೆ. ಮುಡಾ ಕೇಸ್ ವಿಚಾರಣೆ ನಡೆಸುತ್ತಿರುವ ಹೈಕೋರ್ಟ್‌ನಿಂದ ವ್ಯತಿರಿಕ್ತ ಆದೇಶ ಬಂದರೆ ಸಿಎಂ ಬದಲಾಗುತ್ತಾರೆಂಬ ಗುಸುಗುಸು ಚರ್ಚೆ ನಡಯುತ್ತಿದೆ. ಹೀಗಾಗಿ ಸಿಕ್ಕರೆ ಯಾಕೆ ಬಿಡಬೇಕು ಎಂದು ನಾಯಕರೆಲ್ಲಾ ಸರದಿಯಲ್ಲಿ ನಿಂತಿದ್ದಾರೆ. ಇದಕ್ಕಾಗಿ ನಾನೇ ಸೀನಿಯರ್ ಎಂಬ ಅಸ್ತ್ರ ಹೂಡುತ್ತಿದ್ದಾರೆ.

   ಹೀಗೆ ಪೈಪೋಟಿಗಿಳಿದಿರುವ ಸಚಿವರೇ ಮತ್ತೊಂದೆಡೆ ಸಿಎಂಗೆ ಗೆಲುವು ಸಿಕ್ಕೇ ಸಿಗುತ್ತದೆ. ಮುಡಾ ಕೇಸ್‌ನಲ್ಲಿ ಸಿಎಂ ಪಾತ್ರವೇ ಇಲ್ಲ ಎಂದೂ ಹೇಳುತ್ತಿದ್ದಾರೆ.

   ಮುಡಾ ಸಂಗ್ರಾಮ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ತನಿಖೆಗೆ ರಾಜ್ಯಪಾಲರು ನೀಡಿರುವ ಪ್ರಾಸಿಕ್ಯೂಷನ್ ಅನುಮತಿ ಪ್ರಶ್ನಿಸಿ ಸಿದ್ದರಾಮಯ್ಯ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ನಾಲ್ಕು ದಿನ ಈ ಅರ್ಜಿಯ ವಿಚಾರಣೆ ನಡೆದಿದ್ದು, ಬಹುತೇಕ ಅಂತ್ಯವಾಗಿದೆ. ಸಿಎಂ ಪರ ವಕೀಲರಾದ ಅಭಿಷೇಕ್ ಮನು ಸಿಂಘ್ವಿ, ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದ್ದಾರೆ. ದೂರುದಾರರ ಪರ ವಕೀಲರು ವಾದ ಅಂತ್ಯಗೊಳಿಸಿದ್ದಾರೆ. ಇದೀಗ ಇಂದು ಮತ್ತೆ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರುತ್ತಿದ್ದು, ಸಿಎಂ ಆತಂಕ ಹೆಚ್ಚಿಸಿದೆ.

   ಇಂದು ಮಧ್ಯಾಹ್ನ 3.30ಕ್ಕೆ ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ಮುಡಾ ಕೇಸ್ ಅರ್ಜಿ ವಿಚಾರಣೆ ನಡೆಯಲಿದೆ. ಸರ್ಕಾರದ ಪರ ಅಡ್ವೊಕೆಟ್ ಜನರಲ್ ಶಶಿಕಿರಣ್ ಶೆಟ್ಟಿ ವಾದ ಮಂಡಿಸಿಲಿದ್ದಾರೆ. ವಿಷಯ ಏನಂದರೆ, ರಾಜ್ಯಪಾಲರ ಶೋಕಾಸ್ ನೋಟಿಸ್ ಹಿಂಪಡೆಯುವಂತೆ ಸಚಿವ ಸಂಪುಟ ಅಡ್ವೊಕೆಟ್ ಜನರಲ್‌ ಅಭಿಪ್ರಾಯ ಆಧರಿಸಿ ಶಿಫಾರಸು ಮಾಡಿತ್ತು. ಅಡ್ವೊಕೆಟ್ ಜನರಲ್ ನೀಡಿದ್ದ ಅಭಿಪ್ರಾಯದಂತೆ 91 ಪುಟಗಳ ಪ್ರತಿಕ್ರಿಯೆ ನೀಡಿತ್ತು. ಆದರೆ, ಶಿಫಾರಸು ಮಾಡುವಾಗ ಸಚಿವ ಸಂಪುಟ ತನ್ನ ವಿವೇಚನೆ ಬಳಸಿಲ್ಲ. ಅಡ್ವೊಕೆಟ್ ಜನರಲ್ ಅಭಿಪ್ರಾಯವನ್ನೇ ಯಥಾವತ್ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ. ಕಾಮಾ, ಫುಲ್ ಸ್ಟಾಪ್ ಕೂಡಾ ಬದಲಿಸಿಲ್ಲ ಅಂತಾ ತುಷಾರ್ ಮೆಹ್ತಾ ವಾದಿಸಿದ್ದಾರೆ. ಈ ವಾದಕ್ಕೆ ಅಡ್ವೊಕೆಟ್ ಜನರಲ್ ನೀಡಿದ್ದ ಕಾನೂನು ಅಭಿಪ್ರಾಯದ ಕುರಿತು ಇಂದು ವಾದ ನಡೆಯಲಿದೆ. ಶಶಿಕಿರಣ್ ಶೆಟ್ಟಿ ಸರ್ಕಾರದ ಕ್ರಮ ಮತ್ತು ತಮ್ಮ ಲೀಗಲ್ ಒಪಿನಿಯನ್ ಸಮರ್ಥಿಸಿಕೊಳ್ಳಲಿದ್ದಾರೆ. 

   ಹೈಕೋರ್ಟ್‌ನಲ್ಲಿ ಮುಡಾ ಹಗರಣದ ವಿಚಾರಣೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿದೆ. ಇಂದು ಸಿಎಂ ವಿರುದ್ಧದ ಕೇಸ್ ಹೈಕೋರ್ಟ್‌ನಲ್ಲಿ ಏನಾಗಲಿದೆ ಎಂಬುದರ ಮೇಲೆ ರಾಜಕೀಯ ಭವಿಷ್ಯವೂ ಅಡಗಿದೆ. ಇದೇ ವಾರಾಂತ್ಯದಲ್ಲಿ ಆದೇಶವೂ ಹೊರಬೀಳಬಹುದು. ಹೀಗಾಗಿ ಸಿಎಂ ಕುರ್ಚಿ ಮೇಲೆ ನಾಯಕರು ಕಣ್ಣು ಹಾಕಿದ್ದಾರೆ.

Recent Articles

spot_img

Related Stories

Share via
Copy link