ಬೆಂಗಳೂರು
ಈ ನೆಲದಲ್ಲಿ ಉಳ್ಳವರಿಗೂ, ಬೀದಿಯಲ್ಲಿ ಕೂಲಿ ಕೆಲಸ ಮಾಡುವರಿಗು ಒಂದೇ ಕಾನೂನು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದರು.
ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆದ ರಾಷ್ಟ್ರಪತಿಗಳ ಹಾಗೂ ಮುಖ್ಯಮಂತ್ರಿಗಳ ಪದಕ ಪ್ರಧಾನ ಮತ್ತು ಸನ್ನಡತೆಯ ಶಿಕ್ಷಾ ಬಂದಿಗಳ ಅವಧಿಪೂರ್ವ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.ದುಡ್ಡಿದ್ದವರಿಗೆ, ವಿದ್ಯಾವಂತರಿಗೆ, ಬಡವರಿಗೆ ಬೇರೆಬೇರೆ ಕಾನೂನುಗಳನ್ನು ರೂಪಿಸಿಲ್ಲ. ಎಲ್ಲರಿಗೂ ಒಂದೇ ರೀತಿಯ ಮತದಾನದ ಹಕ್ಕನ್ನು ಕಲ್ಪಿಸಲಾಗಿದೆ. ನಾವೆಲ್ಲ ಕಾನೂನು ಪರಿಪಾಲನೆ ಮಾಡಬೇಕು. ಇಲ್ಲವಾದರೆ ಶಿಕ್ಷೆ ಅನುಭವಿಸುವುದು ಕಟ್ಟಿಟ್ಟ ಬುತ್ತಿ ಎಂದರು.
ಮನುಷ್ಯ ಪ್ರಕೃತಿಯ ನಿಯಮವನ್ನು ಅರ್ಥ ಮಾಡಿಕೊಳ್ಳಬೇಕು. ಉತ್ತಮವಾಗಿ ನಡೆದುಕೊಂಡರೆ ಸಮಾಜ ಗುರುತಿಸುತ್ತದೆ. ಕೆಲ ಸಂದರ್ಭಗಳಲ್ಲಿ ನಮಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಆ ಕ್ಷಣಾರ್ಧದಲ್ಲಿ ತೆಗೆದುಕೊಳ್ಳುವ ತೀರ್ಮಾನದಿಂದ ತಪ್ಪುಗಳನ್ನು ಮಾಡಿರುತ್ತೇವೆ. ತಪ್ಪುಗಳನ್ನು ತಿದ್ದಿಕೊಳ್ಳಬೇಕು. ಇದರ ಪಶ್ಚಾತಾಪದಿಂದ ಜೀವನದ ಹೊಸ ಹಾದಿಯತ್ತ ಸಾಗಬೇಕು ಎಂದು ಹೇಳಿದರು.
ಮಾಡಿದ ತಪ್ಪನ್ನು ತಿದ್ದಿಕೊಂಡವರಿಗೆ ಕಾನೂನಿನಲ್ಲಿ ಮತ್ತೊಂದು ಅವಕಾಶ ಕಲ್ಪಿಸಲಾಗಿದೆ. ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗುತ್ತಿದೆ. ಈ ಹಿಂದೆ ವರ್ಷಕ್ಕೆ ಎರಡು ಬಾರಿ ಬಿಡುಗಡೆ ಮಾಡಲಾಗುತ್ತಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ವರ್ಷಕ್ಕೆ ಮೂರು ಬಾರಿ ಬಿಡುಗಡೆ ಸನ್ನಡತೆ ಮೇಲೆ ಮಾಡಲಾಗುತ್ತಿದೆ. ನಿಮ್ಮಲ್ಲಿಯೇ ಪರಿವರ್ತನೆ ತಂದುಕೊಂಡರೆ, ಸಮಾಜದಲ್ಲಿ ಬದುಕಲು ಮತ್ತೊಂದು ಅವಕಾಶ ಸಿಗುತ್ತದೆ ಎಂದು ತಿಳಿಸಿದರು.
ಜೀವನ ತುಂಬ ವೇಗವಾಗಿ ಸಾಗುತ್ತಿದೆ. ಯಾವುದೇ ಕಾರಣಕ್ಕು ನೀವು ಮತ್ತೊಂದು ತಪ್ಪನ್ನು ಮಾಡಬೇಡಿ. ನಿಮ್ಮ ಕುಟುಂಬದ ಜೊತೆ ಉಳಿದ ಜೀವನವನ್ನು ಸಾಗಿಸಬೇಕು ಎಂದು ಕಿವಿಮಾತು ಹೇಳಿದರು.ರಾಜ್ಯದ 54 ಕಾರಾಗೃಹಗಳಲ್ಲಿ 15 ಸಾವಿರಕ್ಕು ಜನರಿದ್ದಾರೆ. ಎಲ್ಲರನ್ನು ಸುರಕ್ಷಿತವಾಗಿಡಬೇಕು, ವಿವಿಧ ಕೌಶಲ ತರಬೇತಿ, ಶಿಕ್ಷಣದ ಮೂಲಕ ಅವರನ್ನು ಸುಧಾರಿಸಿ ಪರಿವರ್ತನೆ ತರುವ ಜವಾಬ್ದಾರಿಯು ಇಲಾಖೆಯ ಮೇಲಿದೆ. ಈ ನಿಟ್ಟಿನಲ್ಲಿ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರು ಅನೇಕ ಬೇಡಿಕೆಗಳ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ. ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಮಹಾನಿರ್ದೇಶಕರಾದ ಮಾಲಿನಿ ಕೃಷ್ಣಮೂರ್ತಿ, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್, ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾ ನಿರೀಕ್ಷಕ ಆನಂದ್ ರೆಡ್ಡಿ, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು ಉಪಸ್ಥಿತರಿದ್ದರು.
ಕಳೆದ 15 ವರ್ಷಗಳಿಂದ ಜೈಲು ವಾಸ ಅನುಭವಿಸಿದ್ದೇನೆ. ಆಕಸ್ಮಿಕ ಘಟನೆಯಿಂದ ಜೈಲಿಗೆ ಬರಬೇಕಾಯಿತು. ನನ್ನ ಮಗಳ ಉನ್ನತ ವ್ಯಾಸಂಗದ ಗುರಿ ಸಾಧಿಸಲು ಆಗಲಿಲ್ಲ. ಜೈಲಿನಲ್ಲಿದ್ದುಕೊಂಡು ಬಿ.ಎ. ಪದವಿ ಪೂರರಣಗೊಳಿಸಿದ್ದೇನೆ. ಈ ದಿನ ನನಗೆ ಪುನರ್ ಜನ್ಮ. ಉತ್ತಮ ನಾಗರಿಕನಾಗಿ ಜೀವನ ಸಾಗಿಸುತ್ತೇನೆ ಎಂದು ಸನ್ನಡತೆ ಮೇಲೆ ಬಿಡುಗಡೆ ಹೊಂದಿದ ದಾನೇಶ್ ಎಂಬಾತ ಅಭಿಪ್ರಾಯ ಹಂಚಿಕೊಂಡರು.
ವಿವಿಧ ನಾಲ್ಕು ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಡಿಪ್ಲೋಮಾ ಕೋರ್ಸ್‌ಗಳನ್ನು ಪೂಋಣಗೊಳಿಸಿದ್ದು, ನನ್ನ ಮುಂದಿನ ಜೀವನ ನಡೆಸಲು ಸಹಕಾರಿಯಾಗಲಿವೆ. ಇಂದಿನಿಂದ ನನ್ನ ಜೀವನದ ಹೊಸ ಅಧ್ಯಾಯ ಆರಂಭವಾಗಿದೆ. ಆಹಾರ ಮತ್ತು ಸ್ವಾತಂತ್ರ್ಯದ ಮಹತ್ವ ಏನೆಂಬುದು ಜೈಲು ವಾಸದಲ್ಲಿ ಗೊತ್ತಾಗಿದೆ ಎಂದು ಸನ್ನಡತೆಯ ಮೇಲೆ ಬಿಡುಗಡೆಯಾದ ಸತೀಶ್ ಆಚಾರ್ಯ ಎಂಬಾತ ತನ್ನ ಅನಿಸಿಕೆಯನ್ನು ಹೇಳಿಕೊಂಡರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ
