ರಾಷ್ಟ್ರಧ್ವಜ ತಯಾರಿಕೆಗೆ ಸೌರ ವಿದ್ಯುತ್ ಬಲ

ಧಾರವಾಡ: 

   ರಾಷ್ಟ್ರಧ್ವಜ ತಯಾರಿಸುವ ಸಮೀಪದ ಗರಗ ತಾಲೂಕು ಕ್ಷೇತ್ರಿಯ ಸೇವಾ ಸಂಘದ ಖಾದಿ ಕೇಂದ್ರದಲ್ಲಿ ಸೌರ ವಿದ್ಯುತ್ ಅಳವಡಿಸಲಾಗಿದ್ದು, ಶುದ್ಧ ಇಂಧನದಲ್ಲಿ ನಮ್ಮ ತಿರಂಗಾ ರೂಪುಗೊಳ್ಳುತ್ತಿದೆ.

    ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಧಾರವಾಡ ಶುದ್ಧ ಶಕ್ತಿ ಗ್ರಾಮ ಯೋಜನೆ ಅಡಿಯಲ್ಲಿ ಸೌರ ವಿದ್ಯುತ್ ಅಳವಡಿಸಿದ್ದು, ಇದರಿಂದ ಯಂತ್ರಗಳನ್ನು ನಡೆಸುವುದರಿಂದ ಲೋಡ್ ಶೆಡ್ಡಿಂಗ್ ಸಮಸ್ಯೆಯಿಲ್ಲದೇ ನಿರಾತಂಕವಾಗಿ ಧ್ವಜಗಳ ಉತ್ಪಾದನೆ ಸಾಧ್ಯವಾಗಿದೆ. ಧ್ವಜ ತಯಾರಿಕೆಯಲ್ಲಿ ರೀಲಿಂಗ್ ಪ್ರಮುಖ ಹಂತ. ಇಲ್ಲಿ 2 ರೀಲಿಂಗ್ ಯಂತ್ರಗಳು, ಮೂರು ಹೊಲಿಗೆ ಯಂತ್ರಗಳು, 5 ದೀಪಗಳು ಸೌರ ವಿದ್ಯುತ್‌ನಿಂದ ಕಾರ್ಯನಿರ್ವಹಿಸುತ್ತಿವೆ.

   7 ಕೆ.ವಿ ಸಾಮರ್ಥ್ಯದ ವಿದ್ಯುತ್ ಇಲ್ಲಿ ಉತ್ಪಾದನೆಯಾಗುತ್ತಿದೆ. ಚಾವಣಿಗೆ ಸೌರ ಫಲಕಗಳನ್ನು ಅಳವಡಿಸಲಾಗಿದ್ದು, 200 ಎಎಚ್ ಸಾಮರ್ಥ್ಯದ ಒಟ್ಟು 8 ಬ್ಯಾಟರಿಗಳನ್ನು ಅಳವಡಿಸಲಾಗಿದೆ. 2 ವರ್ಷಗಳವರೆಗೆ ಸೌರ ವಿದ್ಯುತ್ ಕಂಪನಿಯಾದ ಸೆಲ್ಕೊ ಯಂತ್ರಗಳ ನಿರ್ವಹಣೆ ಮಾಡಲಿದೆ. ನಂತರ ಖಾದಿ ಕೇಂದ್ರ ನಿರ್ವಹಣೆ ಮಾಡಬೇಕಿದೆ.

   ವಿದ್ಯುತ್ ಸಮಸ್ಯೆಯಿಂದ ರೀಲ್ ವೈಂಡಿಂಗ್ ಕಾರ್ಯ ಸ್ಥಗಿತಗೊಂಡರೆ ಮುಂದಿನ ಹಂತದ ನೇಯ್ಗೆ, ಕಟಿಂಗ್, ಡೈಯಿಂಗ್, ಹೊಲಿಗೆ, ಇಸ್ತ್ರಿ ಎಲ್ಲ ಹಂತದ ಕಾರ್ಯಗಳು ಸ್ಥಗಿತಗೊಳ್ಳುತ್ತಿದ್ದವು. ಕೆಲ ಬಾರಿ ರಾತ್ರಿಯಿಡೀ ರೀಲ್ ವೈಂಡಿಂಗ್ ಕೆಲಸ ಮಾಡಿದ್ದೂ ಇದೆ. ಅಲ್ಲದೇ ಕೆಲ ಬಾರಿ ಕೈಯಿಂದ ರೀಲ್ ಸುತ್ತುವ ಕಾರ್ಯವೂ ನಡೆದಿದೆ. ಇದರಿಂದ ಕೆಲಸಗಾರರಿಗೆ ತೊಂದರೆಯಾಗುತ್ತಿತ್ತು.

   ಐಐಟಿಯವರು ಇಲ್ಲಿನ ಸಮಸ್ಯೆ ಅರಿತು ಸೌರ ವಿದ್ಯುತ್ ಅಳವಡಿಸಿದ್ದಾರೆ. ಇದರಿಂದ ವಿದ್ಯುತ್ ಬಿಲ್‌ನಲ್ಲಿ ಪ್ರತಿ ತಿಂಗಳು ಸುಮಾರು 2500 ರೂ. ಕಡಿಮೆಯಾಗುತ್ತಿದೆ. ಅಲ್ಲದೇ ನಿರಂತರ ವಿದ್ಯುತ್ ಸಿಗುವುದರಿಂದ ಬೇಡಿಕೆಗೆ ಅನುಗುಣವಾಗಿ ಖಾದಿ ಬಟ್ಟೆ ತಯಾರಿಕೆ ಸುಲಭವಾಗಿದೆ. ಪ್ರಸ್ತುತ 2/3 ಅಡಿ ರಾಷ್ಟ್ರಧ್ವಜ ತಯಾರಿಕೆಗೆ ಬ್ಯೂರೋ ಆಫ್ ಇಂಡಿಯನ್ ಸ್ಟಾಂಡರ್ಡ್ಸ್‌ದಿಂದ (ಬಿಐಎಸ್) ಅನುಮತಿ ಪಡೆದಿರುವ ಗರಗ ಖಾದಿ ಕೇಂದ್ರದಲ್ಲಿ ವಿದ್ಯುತ್ ಬಳಕೆ ಮಾಡುವ ಎಲ್ಲ ಯಂತ್ರಗಳಿಗೆ ಸೌರ ವಿದ್ಯುತ್ ಬಳಕೆಯಾಗಬೇಕಿದೆ.

   ಈ ಕುರಿತು ಧಾರವಾಡ ಐಐಟಿ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ಮಾತನಾಡಿ, “ಶುದ್ಧ ಇಂಧನ ಒದಗಿಸುವ ಉದ್ದೇಶದಿಂದ ಶುದ್ಧ ಶಕ್ತಿ ಗ್ರಾಮ ಯೋಜನೆಯಡಿ ಸೌರ ವಿದ್ಯುತ್ ಅಳವಡಿಸಲಾಗಿದೆ. ಇದರಿಂದ ಕೇಂದ್ರಕ್ಕೆ ಅನುಕೂಲವಾಗಿದೆ. ನಿರಂತರ ಉತ್ಪಾದನೆ ಸಾಧ್ಯವಾಗಿದೆ. ಗರಗದ ಶಾಲಾ, ಸಂಘ, ಸಂಸ್ಥೆಗಳಿಗೆ ಸೌರ ವಿದ್ಯುತ್ ಅಳವಡಿಸುವುದು ನಮ್ಮ ಉದ್ದೇಶವಾಗಿದೆ” ಎಂದು ಹೇಳಿದರು.

   ಗರಗ ಕ್ಷೇತ್ರಿಯ ಸೇವಾ ಸಂಘದ ರಾಜೇಶ ಕಳಸಗಾರ ಮಾತನಾಡಿ, “ಸೌರ ವಿದ್ಯುತ್ ಅಳವಡಿಕೆಯಿಂದ ಖಾದಿ ಕೇಂದ್ರಕ್ಕೆ ಅನುಕೂಲವಾಗಿದೆ. ಲೋಡ್ ಶೆಡ್ಡಿಂಗ್‌ನಿಂದ ರೀಲ್ ಸುತ್ತುವ ಘಟಕ ಬಂದ್ ಆದರೆ ಮುಂದಿನ ಹಂತದ ಎಲ್ಲ ಕೆಲಸಗಾರರು ಖಾಲಿ ಕುಳಿತುಕೊಳ್ಳಬೇಕಾಗುತ್ತಿತ್ತು. ಆದರೆ, ಈಗ ಇಂಥ ಸಮಸ್ಯೆಯಿಲ್ಲ ಇಲ್ಲವಾಗಿದೆ” ಎಂದರು.

Recent Articles

spot_img

Related Stories

Share via
Copy link