ಚೆನ್ನೈ:
ಕರೂರ್ ಯಾರ್ಲಿಯಲ್ಲಿ ನಡೆದ 41 ಮೃತರ ಕುಟುಂಬದವರೊಂದಿಗೆ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ನಟ ವಿಜಯ್ ವಿಡಿಯೊ ಕರೆ ಮಾಡಿ ಮಾತನಾಡಿದ್ದಾರೆ. ಮಾಜಿ ಐಆರ್‌ಎಸ್ ಅಧಿಕಾರಿ ಮತ್ತು ಟಿವಿಕೆಯ ಪ್ರಚಾರ ಮತ್ತು ನೀತಿ ವಿಭಾಗದ ಪ್ರಧಾನ ಕಾರ್ಯದರ್ಶಿ ಡಾ. ಕೆ.ಜಿ. ಅರುಣ್‌ರಾಜ್, ಚೆನ್ನೈನ ತಂಡದೊಂದಿಗೆ ಗಾಂಧಿಗ್ರಾಮ, ಪಶುಪತಿಪಾಳ್ಯಂ ಮತ್ತು ಹತ್ತಿರದ ಪ್ರದೇಶಗಳಲ್ಲಿ ದುಃಖತಪ್ತ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಸಂತ್ರಸ್ತನೊಬ್ಬ ಅವರು ನನ್ನ ಅಳಿಯನಿಗೆ ಕರೆ ಮಾಡಿ ತಮ್ಮ ಹೃತ್ಪೂರ್ವಕ ಸಂತಾಪ ಸೂಚಿಸಿದರು. ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು ಮತ್ತು ಇದು ಸಂಭವಿಸಬಾರದಿತ್ತು ಎಂದು ಹೇಳಿದರು. ಅಲ್ಲದೆ, ಅವರು ಕುಟುಂಬಕ್ಕೆ ತಮ್ಮ ಬೆಂಬಲದ ಭರವಸೆ ನೀಡಿದರು” ಎಂದು ಅವರು ಕರೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮತ್ತೊಂದು ಕುಟುಂಬದೊಂದಿಗೆ ಮಾತನಾಡಿದ ವಿಜಯ್, “ನಾನು ನಿಮ್ಮ ಮಗನಂತೆ” ಎಂದು ಹೇಳಿ ಆ ಮಹಿಳೆಯನ್ನು ಸಮಾಧಾನಪಡಿಸಿದರು.
ಕರೆಯ ಸಮಯದಲ್ಲಿ ಫೋಟೋಗಳನ್ನು ತೆಗೆಯಬೇಡಿ ಎಂದು ತಂಡವು ಕುಟುಂಬಗಳಿಗೆ ತಿಳಿಸಿದೆ. ವಿಜಯ್ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಯೋಜನೆಗಳ ಬಗ್ಗೆ ಅವರಿಗೆ ಭರವಸೆ ನೀಡಿದರು. ಪರಿಹಾರ ನೆರವು ನೀಡುವ ಬಗ್ಗೆ ಮಾತನಾಡಿದರು ಎಂದು ಮೂಲಗಳು ತಿಳಿಸಿವೆ. ಡಾ. ಅರುಣ್‌ರಾಜ್ ಅವರನ್ನು ಸಂಪರ್ಕಿಸಿದಾಗ, ಅವರು ಪ್ರತಿಕ್ರಿಯೆಗೆ ಲಭ್ಯವಿರಲಿಲ್ಲ. ಇಂದು ಕೂಡ ವಿಜಯ್ ಅವರ ತಂಡವು ಸಂತ್ರಸ್ತ ಕುಟುಂಬಗಳ ಭೇಟಿ ಮುಂದುವರಿಸಲಿದೆ.
ಕಾಲ್ತುಳಿತದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಕೋರಿ ಬಿಜೆಪಿ ನಾಯಕಿ ಉಮಾ ಆನಂದನ್ ಸಲ್ಲಿಸಿದ್ದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಪರಿಗಣಿಸಿದೆ. ಅಕ್ಟೋಬರ್ 3 ರಂದು, ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ ನಡೆದ ಕಾಲ್ತುಳಿತದ ತನಿಖೆಗಾಗಿ ಮದ್ರಾಸ್ ಹೈಕೋರ್ಟ್ ವಿಶೇಷ ತನಿಖಾ ತಂಡ (SIT) ಅನ್ನು ರಚಿಸಿತು. ಸದ್ಯ ಈ ಕುರಿತು ತನಿಖೆ ನಡೆಯುತ್ತಿದೆ.
