ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸ ಸಿಎಂ ಮಾಡುತ್ತಿದ್ದಾರೆ: ವಿಜಯೇಂದ್ರ

ಬೆಂಗಳೂರು: 

   ರಾಜ್ಯ ಹೈಕೋರ್ಟಿನ ತೀರ್ಪಿನಿಂದ ಸರ್ಕಾರಕ್ಕೆ ಹಿನ್ನಡೆ ಆಗಿದೆ. ಅವರ ಕುತಂತ್ರ, ಷಡ್ಯಂತ್ರಕ್ಕೆ ತಡೆ ಕೊಟ್ಟಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ  ತಿಳಿಸಿದ್ದಾರೆ. ಮಾಧ್ಯಮಗಳ ಜತೆ ಮಂಗಳವಾರ ಮಾತನಾಡಿದ ಅವರು, ಮತ್ತೊಂದು ಕಡೆ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರವು  ರಾಜ್ಯದಲ್ಲಿ ರೈತರಿಗೆ ಪರಿಹಾರ ಕೊಟ್ಟಿಲ್ಲ. ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಪರಿಹಾರ ಕೊಡಿ ಎಂದರೆ ಕೇಂದ್ರ ಸರ್ಕಾರದ ಕಡೆ ಬೆಟ್ಟು ಮಾಡಿ ಕೂತಿದ್ದಾರೆಯೇ ವಿನಾಃ ರಾಜ್ಯ ಸರ್ಕಾರದಿಂದ ಈ ನಾಡಿನ ರೈತರಿಗೆ ಪರಿಹಾರ, ಅನುಕೂಲ ಸಿಗುತ್ತಿಲ್ಲ ಎಂದು ಟೀಕಿಸಿದರು.

    ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳಿಗೆ ರೈತರ ಸಂಕಷ್ಟಕ್ಕೆ ಸ್ಪಂದಿಸಲು ಸಾಧ್ಯವಾಗದೇ ಇದ್ದರೆ, ಈ ಸರ್ಕಾರ ರೈತರ ಪಾಲಿಗೆ ಬದುಕಿದ್ದೂ ಸತ್ತಂತೆ ಎಂದು ಆರೋಪಿಸಿದ ಅವರು, ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ; ಶಾಸಕರು ಪರದಾಡುತ್ತಿದ್ದಾರೆ. ಆಡಳಿತ ಪಕ್ಷದ ಶಾಸಕರು, ಸಚಿವರು ನವೆಂಬರ್ ಕ್ರಾಂತಿಯ ಹೇಳಿಕೆ ಕೊಡುತ್ತಿದ್ದಾರೆ ಎಂದು ದೂರಿದರು.

   ರೈತರ ಸಮಸ್ಯೆಗೆ ಪರಿಹಾರ ಕೊಡಿ ಎಂದರೆ ಇವತ್ತು ಸಿಎಂ ಬದಲಾವಣೆ ಚರ್ಚೆ ನಡೆದಿದೆ. ಕಾಂಗ್ರೆಸ್ ಸರ್ಕಾರದ ಕಚ್ಚಾಟದಿಂದ ರಾಜ್ಯದ ಜನತೆ ಸರ್ಕಾರದ ಮೇಲಿನ ವಿಶ್ವಾಸ ಕಳಕೊಂಡಿದ್ದಾರೆ. ನಾನೇ 5 ವರ್ಷ ಸಿಎಂ ಎಂದು ಮುಖ್ಯಮಂತ್ರಿಗಳು ಹೇಳುವ ಪರಿಸ್ಥಿತಿ ಬಂದು ತಲುಪಿದೆ ಎಂದರೆ, ಆಡಳಿತ ಪಕ್ಷದಲ್ಲಿ ಮುಖ್ಯಮಂತ್ರಿಗಳ ಬಗ್ಗೆ ವಿಶ್ವಾಸ ಹೊರಟುಹೋಗಿದೆ ಎಂದು ಹೇಳಿದರು.

   ರಾಜ್ಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ ಎಂದು ಟೀಕಿಸಿದರು. ಹೇಳಿಕೆಗಳನ್ನು ನಿಲ್ಲಿಸದೇ ಹೋದರೆ ಇದರ ಪರಿಣಾಮ ಆಡಳಿತದ ಮೇಲೆ ಬೀಳಲಿದೆ ಎಂದು ಗೃಹ ಸಚಿವ ಪರಮೇಶ್ವರ್ ಒಪ್ಪಿಕೊಂಡಿದ್ದಾರೆ. ರಾಜ್ಯದ ಜನರಿಗೆ ಸಿಎಂ ಯಾರಾಗುತ್ತಾರೆ? ಬದಲಾಗುತ್ತಾರಾ ಎಂಬ ಬಗ್ಗೆ ಆಸಕ್ತಿ ಇಲ್ಲ. ಜನರು ಈ ಸರ್ಕಾರದ ಬಗ್ಗೆ ಸಂಪೂರ್ಣ ವಿಶ್ವಾಸ ಕಳಕೊಂಡಿದ್ದಾರೆ ಎಂದು ತಿಳಿಸಿದರು. 

    ಇವರ ಒಳಜಗಳದಿಂದ ಕೆಪಿಸಿಸಿಗೆ ಬೀಗ ಹಾಕುವುದು ಇರಲಿ, ರಾಜ್ಯದ ಖಜಾನೆಗೆ ಬೀಗ ಹಾಕಿ ಕೂತಿದ್ದಾರೆ ಎಂದು ಹೇಳಿದ ಅವರು, ಸರ್ಕಾರಿ ನೌಕರರಿಗೆ ವೇತನ ಸಿಗುತ್ತಿಲ್ಲ. ರಾಜ್ಯವನ್ನು ಆರ್ಥಿಕ ಸಂಕಷ್ಟಕ್ಕೆ ನೂಕುವ ಕೆಲಸವನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಆರೋಪಿಸಿದರು.

Recent Articles

spot_img

Related Stories

Share via
Copy link