ಬೆಂಗಳೂರು
ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಕಾಂಗ್ರೆಸ್ ಒಳಗಿನ ಕಿತ್ತಾಟದಿಂದ ಸರಕಾರ ಬಿದ್ದರೂ ಅಚ್ಚರಿಯಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಯಾವ ಸಂದರ್ಭದಲ್ಲಿ ಬೇಕಾದರೂ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ.
ದಿನನಿತ್ಯ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಚ್ಚಾಟ ನಡೆದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಸರಕಾರದ ಆಡಳಿತ ಸಂಪೂರ್ಣವಾಗಿ ಕುಸಿದು ಬಿದ್ದಿದೆ ಎಂದು ಟೀಕಿಸಿದರು. ಸಿದ್ದರಾಮಯ್ಯನವರ ಸರಕಾರದಿಂದ ರೈತರು ಸೇರಿದಂತೆ ರಾಜ್ಯದ ಜನತೆಗೆ ನ್ಯಾಯ ಸಿಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಬಿಜೆಪಿ ಸದಸ್ಯತ್ವ ಅಭಿಯಾನ ರಾಜ್ಯಾದ್ಯಂತ ಯಶಸ್ವಿಯಾಗಿ ನಡೆದಿದೆ ಎಂದು ಅವರು ಹೇಳಿದರು. ಮಹಿಳೆಯರು, ಯುವಕರು, ರೈತರು, ಎಂಜಿನಿಯರ್‍ಗಳು, ವೈದ್ಯರು ಸೇರಿ ಎಲ್ಲ ವರ್ಗದ ಜನರ ಸದಸ್ಯತ್ವ ಮಾಡಿಸಿ ಎಂದು ಅವರು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ವಿಶೇಷವಾಗಿ ಪರಿಶಿಷ್ಟ ಜಾತಿ, ವರ್ಗ, ಹಿಂದುಳಿದ ಸಮುದಾಯದವರನ್ನು ಸದಸ್ಯರನ್ನಾಗಿ ಮಾಡುವಂತೆ ತಿಳಿಸಿದರು.
ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಮತಬ್ಯಾಂಕಿಗಾಗಿ ಓಲೈಕೆ, ವಿವಿಧ ವಿಷಯಗಳನ್ನು ಅಸ್ತ್ರವಾಗಿ ಬಳಕೆ ನಡೆದಿದೆ. ಇವೆಲ್ಲ ರಾಜಕಾರಣಿಗಳ ತಂತ್ರಗಾರಿಕೆ ಎಂದು ತಿಳಿಸಿದರು. ಭಾರತ ದೇಶದ ನೈಜ ಚರಿತ್ರೆಯನ್ನು ನಾವು ಜನರಿಗೆ ಮುಟ್ಟಿಸಬೇಕು ಎಂದು ಮನವಿ ಮಾಡಿದರು. ವಿದ್ಯೆ ಹೆಚ್ಚಿದಷ್ಟೂ ಜಾತಿ ಹೆಚ್ಚುತ್ತಿದೆ. ಪ್ರತಿಯೊಬ್ಬನ ಹೃದಯದಲ್ಲೂ ಜಾತಿ ಹೆಚ್ಚಾಗುತ್ತಿದೆ. ಅದನ್ನು ತೊಡೆದುಹಾಕಲು ಶಿಕ್ಷಕರಿಂದ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಮತ್ತು ಮಾಜಿ ಸಚಿವ ಎನ್. ಮಹೇಶ್ ಅವರು ಮಾತನಾಡಿ, ಶಿಕ್ಷಕರು ಮಾನವ ಸಂಪನ್ಮೂಲ ಸೃಷ್ಟಿಸುವ ಸೃಷ್ಟಿಕರ್ತರು. ಅವರ ಜವಾಬ್ದಾರಿ ಅತ್ಯಂತ ಹಿರಿದಾದುದು ಎಂದು ತಿಳಿಸಿದರು.ನಿರುದ್ಯೋಗ ಸಮಸ್ಯೆ ಅತ್ಯಂತ ದೊಡ್ಡದು ಎಂದು ರಾಹುಲ್ ಗಾಂಧಿಯವರು ವಿದೇಶದಲ್ಲಿ ಮಾತನಾಡುತ್ತಾರೆ. ನೀವೇ ಅಲ್ವೇನ್ರಿ 60 ವರ್ಷ ಆಳ್ವಿಕೆ ಮಾಡಿದವರು ಎಂದು ಪ್ರಶ್ನಿಸಿದರು. 70 ವರ್ಷಗಳ ಬಳಿಕ ಎನ್‍ಇಪಿಯನ್ನು ಮೋದಿಯವರು ಜಾರಿಗೊಳಿಸಿದ್ದು, ದೇಶದ ಟ್ಯಾಲೆಂಟ್ ಹೊರತರಲು ಮುಂದಾಗಿದ್ದಾರೆ ಎಂದು ತಿಳಿಸಿದರು. ಶಿಕ್ಷಕರು ಬೇವಿನ ಬೀಜ ಬಿತ್ತಿದರೆ ಅದೇ ಸಸಿ ಹುಟ್ಟುತ್ತದೆ. ಮಾವಿನ ಬೀಜ ಬಿತ್ತಿದರೆ ಅದೇ ಸಸಿಯಾಗಲು ಸಾಧ್ಯ. ಯಾವ ಬೀಜ ಹಾಕಬೇಕೋ ತೀರ್ಮಾನ ಮಾಡಿ ಎಂದು ಕಿವಿಮಾತು ಹೇಳಿದರು.
ಈ ವೇಳೆ ಸಿ ಟಿ ರವಿ ಅವರು ಮಾತನಾಡಿ, ಬಿಜೆಪಿಯವರು ಬಂದರೆ ಮನುವಿನ ಸಂವಿಧಾನ ಹೇರುವ ಆರೋಪ ನಮ್ಮ ಮೇಲಿತ್ತು ಎಂದ ಅವರು, ವಿಜಯನಗರ ಸಾಮ್ರಾಜ್ಯ, ಮೈಸೂರಿನ ಒಡೆಯರ್, ಹೊಯ್ಸಳರು ಮನುವಿನ ಪ್ರಕಾರ ಆಳ್ವಿಕೆ ನಡೆಸಿದರೇ ಎಂದು ಕೇಳಿದರು. ಅಶೋಕನ ಕಾಲದಲ್ಲಿ ಮನುವಿನ ಸಂವಿಧಾನ ಇತ್ತೇ ಎಂದು ಪ್ರಶ್ನೆಯನ್ನು ಮುಂದಿಟ್ಟರು. 2 ಸಾವಿರ ವರ್ಷಗಳ ಹಿಂದೆಯೂ ಮನುವಿನ ಸಂವಿಧಾನ ಜಾರಿಯಲ್ಲಿ ಇರಲಿಲ್ಲ ಎಂದು ತಿಳಿಸಿದರು. ಅವರೇ ಮನುವಿನ ಸಂವಿಧಾನವನ್ನು ಒಪ್ಪಿಕೊಳ್ಳಲಿಲ್ಲ. ಪ್ರಜಾಪ್ರಭುತ್ವದ ಭಾರತ ಮತ್ತು ಬಿಜೆಪಿ ಅದನ್ನು ಒಪ್ಪಿಕೊಳ್ಳಲು ಸಾಧ್ಯವೇ ಎಂದು ಕೇಳಿದರು.
ಬ್ರಿಟಿಷರು ಬರುವ ಮೊದಲು ದಲಿತರು, ಶೂದ್ರರು, ಹೆಣ್ಮಕ್ಕಳಿಗೆ ಶಿಕ್ಷಣ ಇರಲಿಲ್ಲ ಎಂದು ನಾವು ಓದುತ್ತೇವೆ. ಅವರು ಬಂದ ನಂತರ ಶಿಕ್ಷಣ ಲಭಿಸಿತೆಂಬ ನರೇಷನ್ ಕಟ್ಟಿಕೊಟ್ಟಿದ್ದಾರೆ. ಶಿಕ್ಷಣವಿಲ್ಲದೇ ಮಹರ್ಷಿ ವಾಲ್ಮೀಕಿ ರಾಮಾಯಣ ಬರೆಯಲು ಸಾಧ್ಯವಿತ್ತೇ? ಶಿಕ್ಷಣವಿಲ್ಲದೇ ವೇದವ್ಯಾಸರು ಮಹಾಭಾರತ ಬರೆಯಲು ಸಾಧ್ಯವಿತ್ತೇ? ಶಿಕ್ಷಣವಿಲ್ಲದೇ ಅಷ್ಟಮುನಿಗಳು ಋಷಿಮುನಿಗಳು ಹೇಗಾದರು ಎಂದು ಪ್ರಶ್ನೆಯನ್ನು ಮುಂದಿಟ್ಟರು.
ನಮ್ಮ ದೇಶದ ಮೇಲೆ ಆಕ್ರಮಣ ಮಾಡಿದ ಅಲೆಕ್ಸಾಂಡರನನ್ನು ದಿ ಗ್ರೇಟ್ ಎಂದು ಕಲಿಸಲಾಗುತ್ತದೆ. ಅಶೋಕ, ಚಾಣಕ್ಯ, ವಿಕ್ರಮಾದಿತ್ಯ ಗ್ರೇಟ್ ಎಂದು ನಾವು ಹೇಳಬೇಕಿತ್ತು. ಭಾರತೀಯ ಪರಂಪರೆಯ ಜ್ಞಾನವನ್ನು ದರ್ಶನ ಮಾಡಿಸುವ ಪರಿವರ್ತನೆ ಶಿಕ್ಷಣದಲ್ಲಿ ಆಗಬೇಕಿದೆ ಎಂದು ತಿಳಿಸಿದರು.