ನಾಮ್ ಪೆನ್:
ಉದ್ಯೋಗ ಪಡೆಯುವ ಉತ್ಸಾಹದಲ್ಲಿ ಕಾಂಬೋಡಿಯಾದಲ್ಲಿ ಮೋಸದ ಜಾಲಕ್ಕೆ ಸಿಲುಕಿದ್ದ 60 ಮಂದಿ ಭಾರತೀಯರನ್ನ ಇಲ್ಲಿನ ಭಾರತೀಯ ರಾಯಭಾರ ಕಚೇರಿ ರಕ್ಷಣೆ ಮಾಡಿದೆ. 60 ಮಂದಿಯ ಮೊದಲ ಬ್ಯಾಚ್ ಭಾರತಕ್ಕೆ ಮರಳಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಕಾಂಬೋಡಿಯಾ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಸಿಹಾನೌಕ್ವಿಲ್ಲೆನಲ್ಲಿ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಜಿನ್‌ಬೆ-4 ಎಂಬ ಸ್ಥಳದಲ್ಲಿ ಭಾರತೀಯರನ್ನ ರಕ್ಷಣೆ ಮಾಡಿದ್ದಾರೆ. ಅಲ್ಲದೇ ಇನ್ಮುಂದೆ ಉದ್ಯೋಗಕ್ಕಾಗಿ ಕಾಂಬೋಡಿಯಾಕ್ಕೆ ಬರುವ ಭಾರತೀಯರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನುಮೋದಿಸಿದ ಅಧಿಕೃತ ಏಜೆಂಟರ ಮೂಲಕ ಮಾತ್ರವೇ ಉದ್ಯೋಗ ಪಡೆದುಕೊಳ್ಳಬೇಕು ಎಂದು ಸಲಹೆಯನ್ನೂ ನೀಡಿದೆ
ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು, ನಮ್ಮ ಅಧಿಕಾರಿಗಳ ತಂಡ ವಿದೇಶದಲ್ಲಿರುವ ಭಾರತೀಯರಿಗೆ ಯಾವಾಗಲು ಸಹಾಯಕ್ಕೆ ಬದ್ಧವಾಗಿದೆ. ಸದ್ಯ ಮೋಸದ ಉದ್ಯೋಗ ಜಾಲಕ್ಕೆ ಸಿಲುಕಿದ್ದ 60 ಮಂದಿಯನ್ನ ರಕ್ಷಿಸಿದ್ದೇವೆ. ಅವರಿಂದು ಸ್ವದೇಶಕ್ಕೆ ಮರಳಿದ್ದಾರೆ. ಅದಕ್ಕಾಗಿ ನಮ್ಮ ಇಡೀ ಅಧಿಕಾರಿಗಳ ತಂಡಕ್ಕೆ ಧನ್ಯವಾದ ಸಲ್ಲಿಸುತ್ತೇವೆ ಎಂದು ಹೇಳಿದೆ.
ಜೊತೆಗೆ ಅವರು ಕಾಂಬೋಡಿಯಾದ ಸಿಹಾನೌಕ್ವಿಲ್ಲೆಯಿಂದ ನೋಮ್ ಪೆನ್‌ಗೆ ಕಳುಹಿಸಲು ಅಗತ್ಯ ದಾಖಲೆಗಳು ಹಾಗೂ ಇತರೇ ವ್ಯವಸ್ಥೆಗಳ ಸಹಾಯವನ್ನೂ ಅಧಿಕಾರಿಗಳು ಮಾಡಿಕೊಟ್ಟಿದ್ದಾರೆ. ಉದ್ಯೋಗ ಪಡೆಯುವ ಆಸೆಯಲ್ಲಿ ಮೋಸದ ಜಾಲಕ್ಕೆ ಸಿಲುಕಿದ್ದವರನ್ನ ರಕ್ಷಿಸಿ ಸಿಹಾನೌಕ್ವಿಲ್ಲೆ ನಿಂದ ನೋಮ್‌ಪೆನ್‌ಗೆ ಕಳುಹಿಸಲಾಗಿತ್ತು.
ಬಳಿಕ ಪ್ರಯಾಣದ ದಾಖಲೆಗಳು ಸೇರಿದಂತೆ ಎಲ್ಲ ಸಹಾಯವನ್ನೂ ಒದಗಿಸಿಕೊಟ್ಟಿದೆ ಎಂದು ಕಚೇರಿ ತಿಳಿಸಿದೆ.ಇದೇ ವೇಳೆ ಕಾಂಬೋಡಿಯಾದಲ್ಲಿ ಉದ್ಯೋಗ ಹುಡುಕುತ್ತಿರುವ ಭಾರತೀಯರು ಅನಧಿಕೃತ ಏಜೆಂಟ್‌ಗಳಿಗೆ ಬಲಿಯಾಗದಂತೆ ರಾಯಬಾರಿ ಕಚೇರಿ ಎಚ್ಚರಿಕೆ ನೀಡಿದೆ.