ಬೆಂಗಳೂರು:
ಲೋಕಸಭೆ ಚುನಾವಣೆ ಸಿದ್ಧತೆ ಆರಂಭಿಸಿರುವ ಬಿಜೆಪಿ, ಚುನಾವಣೆಗೆ ಪ್ರಣಾಳಿಕೆ ಸಿದ್ಧಪಡಿಸುವುದಕ್ಕೂ ಮುನ್ನ ಜನರ ಸಲಹೆ ಪಡೆಯಲು ನಿರ್ಧರಿಸಿದೆ. ಇದರಂತೆ “ವಿಕಸಿತ ಭಾರತ ಸಂಕಲ್ಪ ಪತ್ರ ಜನಾಭಿಪ್ರಾಯ ಸಂಗ್ರಹ ಅಭಿಯಾನ’ಕ್ಕೆ ಚಾಲನೆ ನೀಡಿದೆ.
ದೇಶಾದ್ಯಂತ 1 ಕೋಟಿ ಜನರ ಅಭಿಪ್ರಾಯ ಸಂಗ್ರಹಿಸುವ ಗುರಿಯನ್ನು ಬಿಜೆಪಿ ಹೊಂದಿದ್ದು, ರಾಜ್ಯದಲ್ಲಿ ಕನಿಷ್ಠ 3 ಲಕ್ಷ ಜನರ ಅಭಿಪ್ರಾಯ ಗಳನ್ನು ಸಂಗ್ರಹಿಸುವ ಸಂಕಲ್ಪ ಮಾಡಿದೆ.
ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಭಿಯಾನಕ್ಕೆ ಚಾಲನೆ ನೀಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು, ಮುಂದಿನ ಲೋಕಸಭಾ ಚುನಾವಣೆಯ ಕ್ಷಣಗಣನೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಚಿಂತನೆಯಂತೆ ಪ್ರಣಾಳಿಕೆ ಬದಲು ಜನಾಭಿಪ್ರಾಯ ಪಡೆದು ಸಂಕಲ್ಪ ಪತ್ರದ ಮೂಲಕ ಚುನಾವಣೆ ಎದುರಿಸಲಾಗುತ್ತಿದೆ ಎಂದು ಹೇಳಿದರು.
ಬಿಜೆಪಿಯ ಕೇಂದ್ರ ಸರಕಾರವು 2014 ಮತ್ತು 2019ರ ಚುನಾವಣೆ ಸಂದರ್ಭದಲ್ಲಿ ನೀಡಿದ ಬಹುತೇಕ ಎಲ್ಲ ಭರವಸೆಗಳನ್ನು ಈಡೇರಿಸಿದೆ. 10 ವರ್ಷಗಳ ಮೋದಿ ಆಡಳಿತಾವಧಿಯಲ್ಲಿ ಭರವಸೆ ಈಡೇರಿಸಿದ್ದಲ್ಲದೆ, ಯೋಜನೆ ಶಂಕುಸ್ಥಾಪನೆ ಜತೆಗೆ ಉದ್ಘಾಟನೆ ದಿನಾಂಕ ನಿಗದಿಪಡಿಸಿ ಸಕಾಲದಲ್ಲಿ ಪೂರ್ಣಗೊಳಿಸಿದ್ದನ್ನು ನೋಡಿದ್ದೇವೆ ಎಂದು ವಿವರಿಸಿದರು.
ಈ ಬಾರಿ ಘೋಷಣೆ ಪತ್ರ ಪ್ರಣಾಳಿಕೆ ಬದಲು ಸಂಕಲ್ಪ ಪತ್ರ ಮುಂದಿಡಲಾಗುವುದು. ಸ್ವಾತಂತ್ರೋತ್ಸವದ 100ನೇ ವರ್ಷಾಚರಣೆ ವೇಳೆ 2047ರಲ್ಲಿ ನಮ್ಮ ಭಾರತ ವಿಕಸಿತ ಭಾರತ ಎಂಬ ಸಂಕಲ್ಪವನ್ನು ಮೋದಿ ಅವರು ಮುಂದಿಟ್ಟಿದ್ದಾರೆ. ಅದನ್ನು ಸಾಕಾರ ಗೊಳಿಸಲು ಅಭಿಪ್ರಾಯ ಸಂಗ್ರಹದ ಅಭಿಯಾನ ಆರಂಭಿಸಿದೆ. ಸಮಾಜದ ರೈತರು, ಮಹಿಳೆಯರು, ಯುವಜನತೆ ಸಹಿತ ಎಲ್ಲ ವರ್ಗದ ಜನರಿಂದ ಅಭಿಮತ ಸಂಗ್ರಹಿಸಲಿದ್ದೇವೆ ಎಂದು ತಿಳಿಸಿದರು.