ಬೆಂಗಳೂರು:
ಬಸ್ ಪಾಸ್ ಇರುವ ವಿದ್ಯಾರ್ಥಿಗಳೊಂದಿಗೆ ಬಿಎಂಟಿಸಿಯ ಕೆಲವು ಕಂಡೆಕ್ಟರ್ಗಳು ಹಾಗೂ ಬಸ್ ಚಾಲಕರು ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಬಸ್ ಪಾಸ್ ಇರುವ / ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಯಾವುದಾದರೂ ಬಸ್ ನಿಲ್ದಾಣದಲ್ಲಿ ನಿಂತಿದ್ದರೆ. ಅಲ್ಲಿ ಬಸ್ ನಿಲ್ಲಿಸದೆ ವೇಗವಾಗಿ ಬಸ್ ಚಲಾಯಿಸಿಕೊಂಡು ಹೋಗುವುದು ಹಾಗೂ ಬಸ್ ಸ್ಟಾಪ್ ಕೊಡದೆ ಇರುವ ಬಗ್ಗೆ ಆಗಾಗ ಆರೋಪಗಳು ಕೇಳಿ ಬರುತ್ತಲ್ಲೇ ಇರುತ್ತವೆ. ಆದರೆ, ಇದೀಗ ಸರ್ಕಾರಿ ಶಾಲೆಯ ವಿದ್ಯಾರ್ಥಿಗೆ ಕಂಡೆಕ್ಟರ್ವೊಬ್ಬರು ಕಾಲಿನಿಂದ ಒದ್ದಿದ್ದಾರೆ ಎನ್ನುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದ್ದು, ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನಂತಹ ನಗರದಲ್ಲಿ ನಡೆದಿರುವ ಅಮಾನುಷ ಘಟನೆಗೆ ಭಾರೀ ವಿರೋಧ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ಗಳಲ್ಲಿ ಶಾಲಾ – ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳೊಂದಿಗೆ ಬಿಎಂಟಿಸಿಯ ಕಂಡೆಕ್ಟರ್ಗಳು ಗೌರವದಿಂದ ನಡೆದುಕೊಳ್ಳಲ್ಲ. ಈ ಮಕ್ಕಳು ಫ್ರೀಯಾಗಿ ಬಸ್ನಲ್ಲಿ ಓಡಾಡುತ್ತಾರೆ ಎನ್ನುವ ಮನೋಭಾವ ಹಲವು ಬಿಎಂಟಿಸಿ ಕಂಡೆಕ್ಟರ್ಗಳಲ್ಲಿ ಇದೆ. ಇದೀಗ ಬೆಂಗಳೂರಿನ ಬಿಎಂಟಿಸಿ ಕಂಡೆಕ್ಟರ್ ಸರ್ಕಾರಿ ಶಾಲೆಯ ಸಣ್ಣ ಮಗುವಿನ ಮೇಲೆ ತೋರಿಸಿರುವ ದರ್ಪ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನ ಸಂಚಾರಿ ಜೀವನಾಡಿಯಾಗಿರುವ ಬಿಎಂಟಿಸಿಯಲ್ಲಿ ನಿತ್ಯವೂ ಸಾವಿರಾರು ಜನ ಶಾಲಾ -ಕಾಲೇಜಿನ ವಿದ್ಯಾರ್ಥಿಗಳು ಪ್ರಯಾಣ ಮಾಡುತ್ತಾರೆ. ಸರ್ಕಾರವೇ ಶಾಲಾ – ಕಾಲೇಜು ವಿದ್ಯಾರ್ಥಿಗಳಿಗೆ ಕಡಿಮೆ ಬೆಲೆಗೆ ಬಸ್ ಪಾಸ್ ಕೊಡುತ್ತಿದೆ. ಆದರೆ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವಂತೆ ಬಿಎಂಟಿಸಿಯ ಕೆಲವು ಕಂಡೆಕ್ಟರ್ಗಳು ವರ್ತಿಸುತ್ತಿದ್ದಾರೆ. ಘಟನೆಯ ಹಿನ್ನೆಲೆ ಏನು ? ಬೆಂಗಳೂರಿನ ಬಿಎಂಟಿಸಿ ಬಸ್ನಲ್ಲಿ ಶಾಲಾ ಹುಡುಗನೊಬ್ಬನಿಗೆ ಬಸ್ ಕಂಡೆಕ್ಟರ್ ಕಾಲಿನಿಂದ ಒದ್ದಿದ್ದಾರೆ ಎನ್ನಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು ಭಾರೀ ಆಕ್ರೋಕ್ಕೆ ಕಾರಣವಾಗಿದೆ. ಗುರುವಾರ ಮಧ್ಯಾಹ್ನ 3.30 ಸುಮಾರಿಗೆ ನಗರದ ಚಿಕ್ಕಬಿದರುಕಲ್ಲು ಬಸ್ ನಿಲ್ದಾಣದಲ್ಲಿ ಬಸ್ ಹತ್ತಲು ಬಂದ ಹುಡುಗನ ಮೇಲೆ ದರ್ಪ ತೋರಲಾಗಿದೆ ಎಂದು ಸಾರ್ವಜನಿಕರು ಕೆಂಡಕಾರಿದ್ದಾರೆ. ಬಸ್ನಲ್ಲಿ ಪ್ರಯಾಣಿಸುತ್ತಿದ್ದವರು ಇದನ್ನು ವಿಡಿಯೋ ಮಾಡಿಕೊಂಡಿದ್ದಾರೆ. ಬಿಎಂಟಿಸಿ ಬಸ್ ಸಂಖ್ಯೆ KA57F3364 ಯಲ್ಲಿನ ಕಂಡೆಕ್ಟರ್ ಈ ರೀತಿ ದೌರ್ಜನ್ಯ ಮೆರೆದಿದ್ದಾನೆ ಎಂದು ಹೇಳಲಾಗಿದೆ.
ವೈರಲ್ ವಿಡಿಯೋದಲ್ಲಿ ಏನಿದೆ: ಬಿಎಂಟಿಸಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಸರ್ಕಾರಿ ಶಾಲೆಯ ವಿದ್ಯಾರ್ಥಿಯ ಬಳಿ ಕಂಡೆಕ್ಟರ್ ನಿನಗೆ ಕಾಲಿನಿಂದ ಒದ್ದರಾ ಅಂತ ಕೇಳಿದ್ದಾರೆ. ಇದಕ್ಕೆ ಸರ್ಕಾರಿ ಶಾಲೆಯ ವಿದ್ಯಾರ್ಥಿ ಹೌದು ಎಂದು ಅಸಹಾಯಕ ಹಾಗೂ ದುಃಖದಿಂದ ತಲೆ ಅಲ್ಲಾಡಿಸಿದ್ದಾನೆ. ಆಗ ವಿಡಿಯೋ ಮಾಡಿಕೊಂಡವರು ಬಸ್ನಲ್ಲಿದ್ದ ಇನ್ನುಳಿದ ಪ್ರಯಾಣಿಕರ ಬಳಿಯೂ ಕೇಳಿದ್ದು.
ಎಲ್ಲರೂ ಹೌದು ನಿಜ ಕಂಡೆಕ್ಟರ್ ಒದ್ದರು ಎಂದು ಹೇಳಿದ್ದಾರೆ. ಆಗ ಮಧ್ಯ ಪ್ರವೇಶ ಮಾಡಿರುವ ಕಂಡೆಕ್ಟರ್ ವಿಡಿಯೋ ತಾನೆ ಮಾಡಿಕೋ ಹೋಗು ಎಂದಿದ್ದಾನೆ. ಆ ಮೇಲೆ ಕಂಡೆಕ್ಟರ್ ವಿದ್ಯಾರ್ಥಿಯ ಬಳಿ ಬಂದು, ಕಾಲಿನಲ್ಲಿ ಒದ್ದೆನಾ ಇಲ್ಲ ತಾನೆ. ಮಂಡಿಯಲ್ಲಿ ಅಷ್ಟೇ ತಾನೆ ಒದ್ದಿದ್ದು ಅಂತ ಕೇಳಿದ್ದಾರೆ. ಈ ವಿಡಿಯೋ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ವಿದ್ಯಾರ್ಥಿ ಬಸ್ ಪಾಸ್ ತೆಗೆದುಕೊಂಡು ಪ್ರಯಾಣಿಸುತ್ತಿದ್ದರೋ ಇಲ್ಲ ಟಿಕೆಟ್ ತೆಗೆದುಕೊಂಡಿದ್ದರೋ ಎನ್ನುವುದು ವಿಡಿಯೋದಲ್ಲಿ ಇಲ್ಲ. ವಿಡಿಯೋ ವೈರಲ್: ಇನ್ನು ಶಾಲಾ ಮಗುವಿಗೆ ಬಿಎಂಟಿಸಿ ಕಂಡೆಕ್ಟರ್ ಕಾಲಿನಿಂದ ಒದ್ದಿರುವ ವಿಡಿಯೋ ಭಾರೀ ವೈರಲ್ ಆಗಿದ್ದು. ಕನ್ನಡಿಗರಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲೆಯ ಸಣ್ಣ ಮಗುವಿಗೆ ಒದ್ದಿರುವುದಕ್ಕೆ ಭಾರೀ ವಿರೋಧ ವ್ಯಕ್ತವಾಗಿದೆ.
