ದುಬೈ:
ಸತತ ಬ್ಯಾಟಿಂಗ್ ವೈಫಲ್ಯ ಎದುರಿಸುತ್ತಿರುವ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಚಾಂಪಿಯನ್ಸ್ ಟ್ರೋಫಿಯ ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿಯೂ ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ವಿಫಲರಾಗಿದ್ದರು. ಪಂದ್ಯದ ಬಳಿಕ ಕೊಹ್ಲಿ ಮೈದಾನದಲ್ಲಿ ಕಾಣಿಸಿಕೊಂಡ ವೇಳೆ ಕೆಲ ಪ್ರೇಕ್ಷಕರು ಕೊಹ್ಲಿಯನ್ನು ‘ಚೋಕ್ಲಿ’ ನಿಂದಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಕೊಹ್ಲಿ ಕಳೆದೊಂದು ವರ್ಷದಿಂದ ರನ್ ಬರ ಎದುರಿಸುತ್ತಿದ್ದಾರೆ. ಈಗಾಗಲೇ ಅವರ ಬ್ಯಾಟಿಂಗ್ ಬಗ್ಗೆ ಹಲವು ಮಾಜಿ ಆಟಗಾರರ ಭಾರೀ ಟೀಕೆಗಳನ್ನು ಕೂಡ ವ್ಯಕ್ತಪಡಿಸಿದ್ದಾರೆ. ಗುರುವಾರ ದುಬೈನಲ್ಲಿ ನಡೆದಿದ್ದ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಬ್ಯಾಟಿಂಗ್ ನಡೆಸಲು ಪರದಾಟ ನಡೆಸಿ ಕೇವಲ ಬೌಂಡರಿ ನೆರವಿವಿಂದ 22 ರನ್ ಗಳಿಸಿದ್ದರು.
ಪಂದ್ಯ ಮುಕ್ತಾಯದ ಬಳಿಕ ಎದುರಾಳಿ ತಂಡದ ಆಟಗಾರರಿಗೆ ಟೀಮ್ ಇಂಡಿಯಾ ಆಟಗಾರರು ಹಸ್ತಲಾಘವ ಮಾಡುವ ವೇಳೆ ಮೈದಾನಕ್ಕೆ ಬರುತ್ತಿದ್ದ ಕೊಹ್ಲಿಯನ್ನು ಕಂಡು ಗ್ಯಾಲರಿಯಲ್ಲಿದ್ದ ಕೆಲ ಅಭಿಮಾನಿಗಳು ‘ಚೋಕ್ಲಿ…ನಂ.1 ಟೆಸ್ಟ್ ಆಟಗಾರ’ ಎಂದು ಕರೆಯುವ ಮೂಲಕ ಲೇವಡಿ ಮಾಡಿದ್ದಾರೆ.
ಇನ್ನು ಕೆಲ ನೆಟ್ಟಿಗರು ಕೊಹ್ಲಿ ಬಗ್ಗೆ ಕಾಮೆಂಟ್ ಮಾಡಿದ್ದು, ನಿಮ್ಮ ಸ್ವಾರ್ಥಕ್ಕಾಗಿ ಎಷ್ಟೋ ಯುವ ಪ್ರತಿಭಾವಂತ ಆಟಗಾರರು ಅವಕಾಶ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ನೀವು ಅರ್ಥ ಮಾಡಿಕೊಂಡು ನಿವೃತ್ತಿ ಘೋಷಿಸಿ ಎಂದು ಹೇಳಿದ್ದಾರೆ.
‘ಇದು ನಿಜವಾಗಿಯೂ ಅತಿಯಾದ ವರ್ತನೆ. ಕೆಲವು ಅಸಂಬದ್ಧ ಅಭಿಮಾನಿಗಳು ವಿರಾಟ್ ಕೊಹ್ಲಿಯ ಹೆಸರನ್ನು ಗೇಲಿ ಮಾಡುತ್ತಾರೆ ಮತ್ತು ಅವರನ್ನು ನಂ.1 ಟೆಸ್ಟ್ ಆಟಗಾರ ಎಂದು ಲೇವಡಿ ಮಾಡುತ್ತಾರೆ. ಟೀಕೆ ಸರಿ, ಆದರೆ ನಿಂದನೆ ಎಲ್ಲೆ ಮೀರುತ್ತದೆ. ಕ್ರಿಕೆಟ್‌ನ ಉತ್ಸಾಹವನ್ನು ಎತ್ತಿಹಿಡಿಯುವುದು ಮತ್ತು ನಮ್ಮ ಆಟಗಾರರನ್ನು ಘನತೆಯಿಂದ ಬೆಂಬಲಿಸುವ ಗುಣ ಅಗತ್ಯ’ ಎಣದು ಜಸ್‌ಪ್ರೀತ್ ಬುಮ್ರಾ ಅವರ ಪತ್ನಿ ಸಂಜನಾ ಅವರು ಟ್ವೀಟ್ ಮೂಲಕ ಕೊಹ್ಲಿಯನ್ನು ನಿಂದಿಸಿದವರಿಗೆ ತಕ್ಕ ತಿರುಗೇಟು ನೀಡಿದ್ದಾರೆ.
ವಿರಾಟ್ ಕೊಹ್ಲಿ ಬಾಂಗ್ಲಾ ವಿರುದ್ಧ ಬ್ಯಾಟಿಂಗ್ ವೈಫಲ್ಯ ಕಂಡರೂ ಫೀಲ್ಡಿಂಗ್‌ನಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ದಾಖಲೆಯೊಂದನ್ನು ಬರೆದರು. ಪಂದ್ಯದಲ್ಲಿ ವಿರಾಟ್ ಕೊಹ್ಲಿ 2 ಕ್ಯಾಚ್‌ಗಳನ್ನು ಹಿಡಿಯುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಕ್ಯಾಚ್ ಪಡೆದ (ವಿಕೆಟ್ ಕೀಪರ್ ಹೊರತುಪಡಿಸಿ) ಆಟಗಾರರ ಪಟ್ಟಿಯಲ್ಲಿ ಮೊ.ಅಜರುದ್ದೀನ್ ದಾಖಲೆ ಸರಿಗಟ್ಟಿದರು. ಉಭಯ ಆಟಗಾರರು 156 ಕ್ಯಾಚ್ ಪಡೆದಿದ್ದಾರೆ. ಕೊಹ್ಲಿ ಪಾಕಿಸ್ತಾನ ವಿರುದ್ಧ ಭಾನುವಾರ ನಡೆಯುವ ಪಂದ್ಯದಲ್ಲಿ ಒಂದು ಕ್ಯಾಚ್ ಪಡೆದರೆ ಅಜರುದ್ದೀನ್ ಅವರನ್ನು ಹಿಂದಿಕ್ಕಲಿದ್ದಾರೆ. ಅತ್ಯಧಿಕ ಕ್ಯಾಚ್ ಪಡೆದ ದಾಖಲೆ ಶ್ರೀಲಂಕಾದ ಮಾಜಿ ನಾಯಕ ಮಹೇಲಾ ಜಯವರ್ಧನೆ (218) ಹೆಸರಿನಲ್ಲಿದೆ. ದ್ವಿತೀಯ ಸ್ಥಾನದಲ್ಲಿ ರಿಕಿ ಪಾಂಟಿಂಗ್ (160) ಕಾಣಿಸಿಕೊಂಡಿದ್ದಾರೆ.
